‘ಸುವರ್ಣ ಸಂಪುಟ' (ಭಾಗ ೧೦೫) - ಚಂದ್ರಶೇಖರ ಪಾಟೀಲ

‘ಸುವರ್ಣ ಸಂಪುಟ' (ಭಾಗ ೧೦೫) - ಚಂದ್ರಶೇಖರ ಪಾಟೀಲ

ಕನ್ನಡದ ಖ್ಯಾತ ಕವಿ, ಸಂಘಟಕ, ನಾಟಕಕಾರ ಹಾಗೂ ಕನ್ನಡ ಹೋರಾಟಗಾರರಾದ ಚಂದ್ರಶೇಖರ ಪಾಟೀಲ ಇವರು ಜನಿಸಿದ್ದು ಜೂನ್ ೧೮, ೧೯೩೯ರಲ್ಲಿ. ಇವರು ‘ಚಂಪಾ’ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರು. ಇವರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತೀಮತ್ತೂರಿನಲ್ಲಿ. ಇವರ ತಂದೆ ಬಸವರಾಜ ಹಿರೇಗೌಡರು ಹಾಗೂ ತಾಯಿ ಮರಿಗೆವ್ವ. ಚಂಪಾ ಅವರ ಪ್ರಾಥಮಿಕ ಶಿಕ್ಷಣ ಹಾವೇರಿಯಲ್ಲೂ, ಪ್ರೌಢ ಶಿಕ್ಷಣ ಧಾರವಾಡದಲ್ಲೂ ನೆರವೇರಿತು.

ಚಂಪಾ ಅವರ ತಂದೆಯವರಿಗೆ ಇಂಗ್ಲೀಷ್ ಭಾಷೆಯ ಬಗ್ಗೆ ವಿಪರೀತ ಒಲವಿದ್ದ ಕಾರಣ ಇವರು ತಮ್ಮ ಸ್ನಾತಕೋತ್ತರ ಪದವಿಯನ್ನು ಆಂಗ್ಲ ಭಾಷೆಯಲ್ಲಿ ಪಡೆದುಕೊಂಡರು. ಇದೇ ಅಲ್ಲದೇ ಬ್ರಿಟಿಷ್ ಕೌನ್ಸಿಲ್ ನ ವಿದ್ಯಾರ್ಥಿ ವೇತನವನ್ನು ಪಡೆದು ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾನಿಲಯದಲ್ಲಿ ಭಾಷಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡರು.

ತಮ್ಮ ವಿದ್ಯಾಭ್ಯಾಸದ ಬಳಿಕ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಚಂಪಾ ಅವರು ಪ್ರೌಢ ಶಾಲಾ ವಿದ್ಯಾರ್ಥಿಯಾಗಿರುವಾಗಲೇ ಕವನಗಳನ್ನು ರಚಿಸುವ ಮೂಲಕ ತಮ್ಮ ಸಾಹಿತ್ಯಕ ಚಟುವಟಿಕೆಗಳನ್ನು ಪ್ರಾರಂಭಿಸಿದ್ದರು. ಇವರು ಬರೆದ ಹಲವಾರು ಕವನಗಳು ‘ಪ್ರಪಂಚ' ಪತ್ರಿಕೆಯಲ್ಲಿ ಪ್ರಕಟವಾದುವು. ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದ ತಮ್ಮಂತಹ ಸಮಾನ ಆಸಕ್ತರನ್ನು ಜೊತೆಗೂಡಿಸಿ ‘ಕಮಲ ಮಂಡಲ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. 

ಚಂಪಾ ಅವರು ಉತ್ತಮ ನಾಟಕಕಾರರಾಗಿಯೂ ಖ್ಯಾತಿಯನ್ನು ಪಡೆದಿದ್ದಾರೆ. ಇವರು ಬರೆದ ತೊಡೆಗಳು, ಅಪ್ಪ, ಕುಂಟ ಕುಂಟ ಕುರುವತ್ತಿ, ಗುರ್ತಿನವರು, ಕತ್ತಲರಾತ್ರಿ, ಗೋಕರ್ಣದ ಗೌಡಸಾನಿ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ನಳ ಕವಿಯ ಮಸ್ತಾಭಿಷೇಕ ಮೊದಲಾದ ನಾಟಕಗಳು ಪ್ರಸಿದ್ಧಿಯನ್ನು ಪಡೆದಿವೆ. ಇವರು ಸಂಪಾದನೆ ಮಾಡಿದ ಕೃತಿಗಳು- ಸಂಕ್ರಮಣ ಕಾವ್ಯ, ಗಾಂಧಿ ಗಾಂಧಿ, ಬಂಡಾಯ ಮತ್ತು ಸಾಹಿತ್ಯ, ನೆಲ್ಸನ್ ಮಂಡೇಲಾ, ಕನ್ನಡನಾಡಿಗೊಂದು ಪ್ರಾದೇಶಿಕ ಪಕ್ಷ. ಸಂಕ್ರಮಣ ಸಾಹಿತ್ಯ ಇತ್ಯಾದಿ.

ಚಂಪಾ ಅವರಿಗೆ ಹೆಸರು ತಂದುಕೊಟ್ಟದ್ದು ‘ಸಂಕ್ರಮಣ' ಎನ್ನುವ ಪತ್ರಿಕೆ. ಪೂರ್ಣ ಪ್ರಮಾಣದ ಸಾಹಿತ್ಯ ಪತ್ರಿಕೆಯೊಂದರ ಅಗತ್ಯವನ್ನು ಮನಗಂಡ ಚಂಪಾ ಅವರು ಗಿರಡ್ಡಿ ಗೋವಿಂದ ರಾಜ ಹಾಗೂ ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಜೊತೆ ಸೇರಿ ೧೯೬೪ರಲ್ಲಿ ಪ್ರಾರಂಭಿಸಿದ ಪತ್ರಿಕೆಯೇ ‘ಸಂಕ್ರಮಣ'. ಹಲವಾರು ಯುವ ಬರಹಗಾರರಿಗೆ ಬರೆಯಲು, ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ವೇದಿಕೆ ನೀಡಿದ ಪತ್ರಿಕೆಯಿದು. ಚಂಪಾ ಕನ್ನಡ ಹೋರಾಟಗಾರರಾಗಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಗೋಕಾಕ ಚಳುವಳಿಯ ಸಮಯದಲ್ಲಿ ಹಾಗೂ ತುರ್ತು ಪರಿಸ್ಥಿತಿಯ ಸಮಯದಲ್ಲಿ ಇವರ ಕಾರ್ಯ ಶ್ಲಾಘನೀಯವಾಗಿತ್ತು. 

ಚಂಪಾ ಇವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ೨೦೦೪-೦೮ರ ಅವಧಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪುಸ್ತಕ ಮಾರಾಟವನ್ನು ಉತ್ತೇಜಿಸಲು ಪ್ರತೀ ಶನಿವಾರ ‘ಪುಸ್ತಕ ಸಂತೆ'ಯನ್ನು ಪ್ರಾರಂಭಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ಹಲವಾರು ಬಾರಿ ಹೋರಾಟಗಳನ್ನು ಆಯೋಜನೆ ಮಾಡಿದ್ದರು. ಚಂಪಾ ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಟಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಮಾಧ್ಯಮ ಪ್ರಶಸ್ತಿ, ಕರುನಾಡ ಭೂಷಣ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಪಂಪ ಪ್ರಶಸ್ತಿಗಳ ಗೌರವ ಲಭಿಸಿದೆ. ೨೦೧೭ರಲ್ಲಿ ಮೈಸೂರಿನಲ್ಲೊ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರು ಜನವರಿ ೧೦, ೨೦೨೨ರಂದು ನಿಧನಹೊಂದಿದರು.

ಚಂಪಾ ಅವರ ಎರಡು ಕವನಗಳು ‘ಸುವರ್ಣ ಸಂಪುಟ' ದಲ್ಲಿ ಪ್ರಕಟಗೊಂಡಿವೆ. ಬುದ್ಧನೂ ನಾನೂ ಮತ್ತು ಶುಭವಾಗುತೈತಿ. ಈ ಕವನಗಳಿಂದ ಒಂದು ಕವನವನ್ನು ಆರಿಸಿ ಪ್ರಕಟಿಸಿದ್ದೇವೆ. ಓದುವಂತಾಗಲಿ…

ಶುಭವಾಗುತೈತಿ

ಇರುಳ-ಕ್ಲೋರೋಫಾರ್ಮು ನೆತ್ತಿಗೇರಿರುವಾಗ

ಒಳಗು ಹೊರಗೂ ಬರೀ ನಸುಗತ್ತಲೆ.

ಮೂಲೆಯಲ್ಲುರಿಯುತಿಹ ಮುದಿಬಲ್ಬಿನಾ ಜೋಲು-

ಮುಖದಲ್ಲಿ ಸುರಿಯುತಿದೆ ರೋಗಿಕಳೆ.

 

ಕ್ಷಿತಿಜಂಚಿನ ಮೇಲೆ ಒಂದು ಕೊಳ್ಳಿಯ ದೆವ್ವ

ತೋರುತಿದೆ ಯಾರಿಗೋ ಕೆಂಬಾವುಟ.

ಮುಖವು ಬಿಳುಚಿದ ಚಿಕ್ಕ ವಿಕಟನೆಗೆ ನಕ್ಕಿವೆ

ಕಣ್ಣುಗಳ ಬೆಳ್ಳಗೇ ಮಾಡಿಕೊಂಡು.

 

ಮಾಡದಲಿ ಗುಬ್ಬಿಗಳು ಮುದುಡಿ ಕುಳಿತಿವೆ. ಹೊರಗೆ

ಗೂಗೆ ಜೋಗುಳ ಹಾಡಿ ನಲಿಯುತ್ತಿದೆ.

ತುಟಿಯ ಬಿಮ್ಮನೆ ಬಿಗಿದು ಮೌನದಾ ನೆಲಗುಮ್ಮ

ಸುಮ್ಮನೇ ಸೋಬಾನ ಹಾಡುತ್ತಿದೆ.

 

ಹಗಲಿನಲಿ ತಲೆಕೆಳಗು ಮಾಡಿ ಜೋತಾಡಿರುವ

ಬಾವಲಿಯು ಹಾರಿವೆ ರೆಕ್ಕೆ ಬಡಿದು.

ಮನದ ಗೊಂಡಾರಣ್ಯದಲಿ ಕನಸು-ತುಡುಗುದನ

ಸಿಕ್ಕಲ್ಲಿ ಸಿಕ್ಕದ್ದು ಮೇಯುತ್ತಿದೆ.

 

ಕರದ ಬಿರುಕೊಳಗಿಂದ ಇರುಳಗಾಳಿಯ ಬಾಣ

ಸೊಂಯೆಂದು ನುಗ್ಗಿದೆ ಮನೆಯ ಒಳಗೆ.

ಆಚೆ ಗೋಡೆಯ ಬದಿಗೆ ಹೆಣ್ಣೊಂದು ನರಳುತಿದೆ,

ಯುಗ ಯುಗದ ವೇದನೆಯ ಸಹಿಸಿಕೊಂಡು.

 

ಮೂಡುತಿದೆ, ಅಂತ್ಯವೇ ಗೊತ್ತಿರದ ಸಿನೆಮಾ,

ಗಳಿಗೆ ಗಳಿಗೆಗೆ ಸೀನು ಬದಲಾಯಿಸಿ,

ಕಂಗಳಲಿ ರೇಡಿಯಂ -ನಗೆ ಬೀರಿ ಟೈಂಪೀಸು 

ಕಾಲಹೊಳೆಯಲಿ ಮಾರು ಹಾಕುತ್ತಿರೆ.

 

ಹೆರಿಗೆಯಾಯಿತು ಅಲ್ಲಿ, ಮೂಡಣದ ಮನೆಯಲ್ಲಿ.

ನೆಲದ ಮೈ ತುಂಬೆಲ್ಲ ರಕ್ತ ಸಿಡಿದು.

ಗೋಣು ಪಟಪಟ ಕೊಡವಿ ನಾಯಿ ಬಾರಿಸಿತದೋ

ಬುಡು ಬುಡಿಕೆ, ‘ಶುಭವಾಗುತೈತಿ' ಎಂದು.

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)