‘ಸುವರ್ಣ ಸಂಪುಟ' (ಭಾಗ ೧೦೬) - ಸಿದ್ಧಲಿಂಗ ಪಟ್ಟಣಶೆಟ್ಟಿ

‘ಸುವರ್ಣ ಸಂಪುಟ' (ಭಾಗ ೧೦೬) - ಸಿದ್ಧಲಿಂಗ ಪಟ್ಟಣಶೆಟ್ಟಿ

ಕವಿ, ಅನುವಾದಕ ಹಾಗೂ ಅಂಕಣಕಾರರಾಗಿ ಖ್ಯಾತಿಯನ್ನು ಪಡೆದ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಕವನವನ್ನು ಈ ವಾರ ನಾವು ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದು ಕೊಂಡಿದ್ದೇವೆ. ಸಿದ್ಧಲಿಂಗ ಇವರು ಜನಿಸಿದ್ದು ನವೆಂಬರ್ ೩, ೧೯೩೯ರಲ್ಲಿ. ಧಾರವಾಡ ಸಮೀಪದ ಯಾದವಾಡ ಎಂಬ ಗ್ರಾಮ ಇವರ ಹುಟ್ಟೂರು. ಇವರು ಪುಟ್ಟ ಮಗುವಾಗಿದ್ದಾಗಲೇ ತಂದೆಯವರನ್ನು ಕಳೆದುಕೊಳ್ಳುತ್ತಾರೆ. ಬಡತನದ ಕಾರಣ ಇವರ ತಾಯಿ ತವರು ಮನೆಗೆ ಹೋಗುತ್ತಾರೆ. ವಿದ್ಯಾರ್ಜನೆಗೆ ಹಣ ಇಲ್ಲದಿರುವಾಗ ಅಂಗಡಿಯಲ್ಲಿ ಕೆಲಸ ಮಾಡಿ ತಮ್ಮ ಶಿಕ್ಷಣ ಮುಂದುವರೆಸುತ್ತಾರೆ. ಓದಿ ಏನನ್ನಾದರೂ ಸಾಧಿಸಬೇಕೆಂದು ಮತ್ತೆ ಧಾರವಾಡಕ್ಕೆ ಹಿಂದಿರುಗಿ ಹಿಂದಿ ಭಾಷೆಯಲ್ಲಿ ಎಂ ಎ ಪದವಿಯನ್ನು ಪಡೆದು ನಂತರ ಪಿ ಹೆಚ್ ಡಿ ಪದವಿಯನ್ನೂ ಗಳಿಸುತ್ತಾರೆ. ನಂತರ ಪ್ರೌಢ ಶಾಲಾ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಸಿದ್ಧಲಿಂಗರು ಒಂದು ವರ್ಷದ ಬಳಿಕ ಸಿರಸಿಯ ಕಾಲೇಜಿನಲ್ಲಿ ಉಪನ್ಯಾಸಕರಾಗುತ್ತಾರೆ. ಒಂದು ವರ್ಷದ ಬಳಿಕ ಅಂದರೆ ೧೯೬೬ರಿಂದ ೧೯೯೯ರ ತನಕ ಕರ್ನಾಟಕ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಾರೆ. 

ಸಿದ್ಧಲಿಂಗ ಇವರಿಗೆ ತಾವು ಬಾಲ್ಯದಲ್ಲಿ ಗಮನಿಸಿದ ರಂಗಪ್ರದರ್ಶನದ ಸಣ್ಣಾಟ, ದೊಡ್ಡಾಟಗಳು ಬಹಳ ಪ್ರಭಾವ ಬೀರಿದ್ದವು. ಇವರ ಕೆಲವು ಸಾಹಿತ್ಯ ಕೃತಿಗಳ ವಿವರ ಹೀಗಿವೆ.

ಕಾವ್ಯ ಸಂಕಲನಗಳು : ನೀನಾ, ಔರಂಗಜೇಬ ಮತ್ತು ಇತರ ಕವನಗಳು, ಪರದೇಸಿ ಹಾಡುಗಳು, ನೂರಾರು ಪದ್ಯಗಳು, ಮತ್ತೆ ಬಂದಿದ್ದಾಳೆ, ಆಯಸ್ಕಾಂತ, ಇಂದು ರಾತ್ರಿಯ ಹಾಗೆ, ಇಷ್ಟು ಹೇಳಿದ ಮೇಲೆ ಇತ್ಯಾದಿ. ಮಾವ ಮತ್ತು ಇತರ ಕತೆಗಳು ಇವರ ಕಥಾ ಸಂಕಲನ, ವಿಮರ್ಶೆಗಳಲ್ಲಿ ಆಧುನಿಕ ಕನ್ನಡ ಹಿಂದಿ ಕಾವ್ಯ, ಅನುಶೀಲನ, ರಂಗಾಯಣ, ಪರಿಭಾವನ ಪ್ರಮುಖವಾದವುಗಳು. ಋಣಾನುಬಂಧ ಎಂಬ ವ್ಯಕ್ತಿಚಿತ್ರ ಸಂದರ್ಶನವನ್ನೂ ಬರೆದಿದ್ದಾರೆ.

ಹಳ್ಳಿಕೇರಿ ಗುದ್ಲೆಪ್ಪನವರು ಹಾಗೂ ಧರ್ಮಸ್ಥಳ ಎಂಬ ಜೀವನ ಚರಿತ್ರೆಯನ್ನು ರಚಿಸಿದ್ದಾರೆ. ಚಹಾದ ಜೋಡಿ (ಭಾಗ ೧,೨,೩) ಇವರ ಅಂಕಣಗಳ ಸಂಗ್ರಹ, ಇವರ ಕೆಲವು ಸಂಪಾದಿತ ಕೃತಿಗಳು : ನಾನು ಕಾಕಾ -ಎಂಕೆ ಬದುಕು - ಸ್ಮರಣ-ಅಭಿನಂದನೆ, ಕೈಲಾಸಂ, ಕಲ್ಯಾಣದ ಹಾದಿ, ಸಂಕ್ರಮಣ ಕಾವ್ಯ ಇತ್ಯಾದಿ. ಹಿಂದಿ ಭಾಷೆಯಿಂದ ಅನುವಾದಗಳು: ಆಷಾಢದ ಒಂದು ದಿನ, ಅಲೆಗಳಲ್ಲಿ ರಾಜಹಂಸಗಳು, ಆಧೇ ಅಧೂರೆ, ಅಂಧಯುಗ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ, ಮೂರು ನಾಟಕಗಳು, ಕೋರ್ಟ್ ಮಾರ್ಷಲ್ ಇತ್ಯಾದಿ. ಶೇಷ ಪ್ರಶ್ನೆ, ಭಾರತಿ (ಮೂಲ : ಶರಶ್ಚಂದ್ರ) ಶಿಕ್ಷೆ (ಒಡಿಸಿ ಮೂಲ), ಜೀವನ ಚರಿತ್ರೆಗಳು: ಮೀರಾಬಾಯಿ, ಜಯಶಂಕರ ಪ್ರಸಾದ, ಸವಾಯಿ ಜಯಸಿಂಹ. ಹೆಣ್ಣಿನ ಸ್ಥಾನಮಾನ ಇವರು ಅನುವಾದಿಸಿದ ಪ್ರಬಂಧ ಬರಹ.

ಸಿದ್ಧಲಿಂಗ ಇವರು ಹಿಂದಿ ಭಾಷೆಯಲ್ಲೂ ಹಲವಾರು ಕೃತಿಗಳನ್ನು ರಚನೆ ಮಾಡಿದ್ದಾರೆ. ಅವುಗಳಲ್ಲಿ ಕೆಲವು- ಶೈಲ ಔರ್ ಸಾಗರ, ಹಿಂದಿ ಗದ್ಯ ಮಾಧುರಿ, ರಾಷ್ಟ್ರಕವಿ ಗೋವಿಂದ ಪೈ, ಹಿಂದಿ ಮಂಜರಿ, ಮೋಹನ ರಾಕೇಶ್ ಔರ್ ಉಂಕೆ ನಾಟಕ್, ಸಾಹಿತ್ಯ ಮಾನಸ ಇತ್ಯಾದಿ. ಚಂಪಾ ಅವರು 'ಸಂಕ್ರಮಣ' ಪತ್ರಿಕೆಯನ್ನು ಪ್ರಾರಂಭಿಸಲು ಒತ್ತಾಸೆಯಾಗಿದ್ದವರಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರೂ ಒಬ್ಬರು. ಹಲವಾರು ವರ್ಷಗಳ ಕಾಲ ಈ ಪತ್ರಿಕೆಯಲ್ಲಿ ತಮ್ಮ ಬರಹಗಳನ್ನು ಮೂಡಿಸುತ್ತಿದ್ದರು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ದೊರೆತಿದೆ.

‘ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಆರು ಕವನಗಳು ಪ್ರಕಟವಾಗಿವೆ. ಅವುಗಳೆಂದರೆ ಚಿತ್ರಕಾರ, ಭಾರ, ಸಂಜೆ, ಒಂಟಿ, ಔರಂಗಜೇಬ, ನಿರ್ಗಮನ. ಈ ಕವನಗಳಿಂದ ಒಂದು ಕವನವನ್ನು ಆಯ್ದು ಪ್ರಕಟ ಮಾಡಿದ್ದೇವೆ.

ಚಿತ್ರಕಾರ

ನಿನ್ನ ಎದೆಯೂರಲ್ಲಿ ಬರಗಾಲ ಬಿದ್ದಾಗ

ಗುಳೆ ಹೊರಟ ದರಿದ್ರ ಚಿತ್ರಕಾರನು ನಾನು !

 

ನನ್ನ ಭಾವ ಕುಂಚವನು

ನಿನ್ನ ಕಣ್ಣ-ಬಟ್ಟಲದಿ. ದಿಟ್ಟಿ-ಬಣ್ಣದಲದ್ದಿ

ನಾ ತೆಗೆದ ಚಿತ್ರಗಳನಲ್ಲಿಯೇ ಬಿಟ್ಟಿರುವೆ,

ಚಿತ್ರಗಳ ಛಾಯೆಯನು ಹೊತ್ತು ತಂದಿರುವೆ

ಛಾಯೆಗಳ ಆಭಾಸ ನುಂಗಿ ನಿಂದಿರುವೆ !

 

ಬೆಳದಿಂಗಳಿನ ಬಿಳಿಯ ಕ್ಯಾನವಾಸಿನ ಮೇಲೆ

ಚಂದ್ರನಲಿ ನಮ್ಮೆರಡು ಬಿಂಬಗಳ ಜೋಡಿ

ಅಂದು ನಾ ಚಿತ್ರಿಸಿದ ಆ ಎರಡು ಬೊಂಬೆಗಳು

ನಿಮ್ಮ ಪಡಸಾಲೆಯಲಿ

ನಿನ್ನ ಏಕಾಂತದಲಿ

ಇಂದಿಗೂ ಗುನುಗುನಿಸುತಿರಬಹುದು ನೋಡು,

ಈ ವಿಜನ ಅಡವಿಯಲೂ

ಅದರ ದನಿಯೇ ದನಿಯು ನನ್ನ ಕಿವಿ ತುಂಬ !

 

ದೀವಳಿಗೆಯಮವಾಸ್ಯೆ,

ಅಶ್ರು-ಅಭ್ಯಂಜನವ ಮುಗಿಸಿಕೊಂಡು

ನಿನ್ನ ಸ್ಮರಣೆಯ ಮಧುವ ಮನವಾರೆ ಕುಡಿದು

ಶಬ್ದಗಳ ಸ್ಟ್ಯಾಂಡು, ಟೇಬಲ್ಲು ಹೊಂದಿಸಿ,

ಮೈಯೆಲ್ಲ ಹಣ್ಣಾಗಿ, ಸಣ್ಣಾಗಿ ಹೋದರೂ

ನೀನಿತ್ತ ಯಾವುದೋ ಆಸರೆಯ ಹೊಂದಿ

ನಾ ತೆಗೆದ ತೈಲ ಚಿತ್ರಗಳು

ಈ ಕೊಳದಿ ನಾನು ಕಾಲನಿಳಿಬಿಟ್ಟು ಕುಳಿತಾಗ

ಏಕೆ ತಿರುತಿರುಗಿ ನೆನಪ ಕೆತ್ತುತಲಿಹವು?

 

ಈಗೀಗ ಇತ್ತೀಚೆ ಮತ್ತೆ ಕೆಲದಿನದಿಂದ

ನಿಮ್ಮೂರ ಬರಗಾಲ ಬೆಂಕಿ-ಬಿಸಿಲುಗಳಾಗಿ

ನಿನ್ನ ಕಣ್ಣಲಿ ಧೂಳು-ಬೂದಿಗಳ ಹರವಿ

ನಿನ್ನ ನೆತ್ತಿಯ ಕುಕ್ಕಿ ಹೆದರಿಸುತಲಿರಬಹುದೆ

ಎಂದು ಯೋಚಿಸುತಿಲ್ಲಿ ಕೊಳದ ನಿರ್ಮಲ ಜಲದಿ

ಕಾಂತಿ-ಕುಂಚವ ಹಿಡಿದು ನಿನ್ನ ಚಿತ್ರವ ಬರೆವ

ಹುಚ್ಚು ಹಂಬಲದಲ್ಲಿ ಮೆಲುಕು ಹಾಕುತಲಿರುವ

ಗುಳೆ ಹೊರಟ ದರಿದ್ರ ಚಿತ್ರಕಾರನು ನಾನು !

(‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವನ)