‘ಸುವರ್ಣ ಸಂಪುಟ' (ಭಾಗ ೧೦೮) - ಜಾನಕೀತನಯ
“ಜಾನಕೀತನಯ" ಎಂಬ ಕಾವ್ಯನಾಮದಿಂದ ತಮ್ಮ ಬರಹಗಳನ್ನು ರಚಿಸಿರುವ ಲ.ನ.ಶಾಸ್ತ್ರಿ ಇವರ ಬಗ್ಗೆ ‘ಸುವರ್ಣ ಸಂಪುಟ' ಕೃತಿಯಲ್ಲಿ ಇರುವ ಮಾಹಿತಿಗಳು ಅತ್ಯಲ್ಪ. ಇವರ ಬಗ್ಗೆ, ಹುಟ್ಟು, ವಿದ್ಯಾಭ್ಯಾಸ, ಊರು, ಹೆತ್ತವರು ಈ ಬಗ್ಗೆ ಯಾವ ಮಾಹಿತಿಯೂ ದೊರಕುತ್ತಿಲ್ಲ. ದೊರೆತ ಮಾಹಿತಿಗಳ ಪ್ರಕಾರ ಇವರು ಕಲಿತದ್ದು ಇಂಟರ್ ಮೀಡಿಯೇಟ್ ವರೆಗೆ. ಮೈಸೂರಿನಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇವರ ‘ಅಳಸಿಂಗ ಪೆರುಮಾಳ್' ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಜಾನಕೀತನಯ ಅವರ ಪ್ರಮುಖ ಕೃತಿಗಳು: ಪೂರ್ವರಾಗ, ತುಂಗೆಯ ಮಡಿಲ ತಪಸ್ವಿ, ಸಂತ ಶ್ರೀ ರಾಮಾನುಜ, ಸಂಭಾಷಣ ತರಂಗಿಣಿ, ಶ್ರೀಜಗದ್ಗುರು ಮೊದಲಾದ ೨೫ ಕೃತಿಗಳನ್ನು ರಚಿಸಿದ್ದಾರೆ. ಇವರ ಒಂದೂ ಭಾವಚಿತ್ರ ಅಂತರ್ಜಾಲ ತಾಣಗಳಲ್ಲೂ ದೊರೆಯುತ್ತಿಲ್ಲ. ಓದುಗರಿಗೆ ಲ ನ ಶಾಸ್ತ್ರಿಗಳ ಬಗ್ಗೆ ಮಾಹಿತಿ ಇದ್ದಲ್ಲಿ ಪ್ರತಿಕ್ರಿಯೆ ವಿಭಾಗಕ್ಕೆ ಬರೆಯಿರಿ. ‘ಸುವರ್ಣ ಸಂಪುಟ' ದಲ್ಲಿ ಇವರ ಮೂರು ಕವನಗಳು ಪ್ರಕಟವಾಗಿವೆ. ಕವಿ ಚಾತಕ, ನನ್ನೆಡೆಗೆ ಬರುವಾಗ ಮತ್ತು ಪ್ರೇಮ ಪ್ರಣತಿ. ಈ ಕವನಗಳಿಂದ ಎರಡು ಕವನಗಳನ್ನು ಆರಿಸಿ ಪ್ರಕಟಿಸಲಾಗಿದೆ.
ಕವಿ ಚಾತಕ
೧
ಎಲ್ಲಿರುವೆ ಎಲ್ಲಿರುವೆ ಎಲ್ಲಿರುವೆ ಚಾತಕವೆ?
ಯಾವ ಮರದಲ್ಲಡಗಿ ಕುಳಿತು ಕಾಯುತ್ತಿರುವೆ?
ಶ್ರಾವಣದ ಮಳೆಗಾಗಿ ಬಾಯಾರಿ ಕುಳಿತಿಹೆಯ,
ಮಧುಮಾಸದಾಗಮಕೆ ಕಾದಿರುವೆಯ?
೨
ಇಲ್ಲಿರುವೆ ಇಲ್ಲಿರುವೆ ಇಲ್ಲಿರುವೆನೋ ಕವಿಯೆ
ನಿನ್ನೆದೆಯ ಗೂಡಿನಲಿ ಕುಳಿತು ಕಾಯುತ್ತಿರುವೆ
ಬಾಳಸವಿಯಮೃತಕ್ಕೆ ಬಾಯ್ದೆರೆದು ಕುಳಿತಿರುವೆ !
ಹೊಂಗನಸು ಹನಿಗೆಂದು ಅರಸುತಿರುವೆ.
***
ಪ್ರೇಮ ಪ್ರಣತಿ
ನಿನ್ನ ನನ್ನ ಬಾಳಿಗೊಂದು
ಆದಿಯುಂಟೆ ಚೆನ್ನೆ
ಆದಿಯುಂಟೆ ಅಂತ್ಯವುಂಟೆ
ಹೇಳು ಮುಗುದ ಕನ್ನೆ.
ಐದು ಸುತ್ತ ಕೋಟೆಯಲ್ಲಿ
ಮಧ್ಯೆ ಮಹಾಸ್ತೂಪ
ಸತತ ಬೆಳಕ ಚೆಲ್ಲುತಿಹುದು
ಅಲ್ಲಿ ರತ್ನದೀಪ.
ಸುಟ್ಟುಹೋದನಲ್ಲಿ ಕಾಮ
ತಟ್ಟಿ ಶಿವನ ಶಾಪ
ಬೆಂದ ಕಾಮನನ್ನು ಕುರಿತು
ಕೇಳು ರತಿವಿಲಾಪ.
ಮರುಕದಿಂದ ಮಮತೆಯಿಂದ
ಆರುತಿರಲು ಕೋಪ
ಸುತ್ತ ಕಂಪ ಹರಡುತಿರಲು
ಅಮರಪ್ರೇಮ ಧೂಪ.
ಅಗ್ನಿಯಿಂದ ಶುದ್ಧನಾಗಿ
ಎದ್ದುಬಂದ ಕಾಮ
ಗಿರಿಜೆ ಶಿವರು ಒಂದಾಗಲು
ಪೂತವಾಯ್ತು ಪ್ರೇಮ.
ಅಮೃತರಸವ ನೊಸರುವಂಥ
ನಿನ್ನ ಚೆಲುವು ಬೇಟ
ಬೆಳದಿಂಗಳ ಚೆಲ್ಲುವಂಥ
ಚಿಗರಿ ಕಣ್ಣನೋಟ.
ಅರಳುತಿರಲು ಅಲ್ಲಿ ಎದೆಯು
ತೆರೆಯುತಿರಲು ಚಕ್ಷು
ನಿನ್ನೊಡನೆಯೆ ನಾನಿರುವೆನು
ಸತತ ಪ್ರೇಮಭಿಕ್ಷು.
ನೂರು ನೂರು ಜನುಮದಿಂದ
ನೀನೆ ನನ್ನ ಗೆಳತಿ
ಇಂದು ಮುಂದು ಎಂದೆಂದಿಗು
ನನ್ನ ಎದೆಯ ಪ್ರಣತಿ.
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನಗಳು)