‘ಸುವರ್ಣ ಸಂಪುಟ' (ಭಾಗ ೧೦೯) - ರಾಮೇಗೌಡ
ರಾಮೇಗೌಡ ಇವರು ಹುಟ್ಟಿದ್ದು ಎಪ್ರಿಲ್ ೩, ೧೯೪೨ರಲ್ಲಿ. “ರಾಗೌ” ಎಂಬ ಹೆಸರಿನಿಂದ ಖ್ಯಾತಿಯನ್ನು ಪಡೆದ ಇವರು ಎಂ ಎ ಪದವೀಧರರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿದ್ದಾರೆ.
ಜಾನಪದ ವಿದ್ವಾಂಸರಾದ ಡಾ. ರಾಮೇಗೌಡ ಅವರು ಕವಿ, ನಾಟಕಕಾರ, ವಿಮರ್ಶಕ, ಸಂಶೋಧಕರು ಕೂಡ. ಯಾತ್ರೆ, ತೆಪ್ಪ, ಮೋಡ ಮುಸುಕಿದ ಆಕಾಶ, ನೆಲದ ಮರೆಯ ನಿಧಾನ, ಮಾತು ಮೌನಗಳ ನಡುವೆ, ಆರದಿರಲಿ ಈ ಬೆಳಕು, ಮಾತು ಮಾರ್ಗ, ನಿನ್ನೆ ನಾಳೆಗಳ ನಡುವೆ (ಸಮಗ್ರ) ಅವರ ಪ್ರಕಟಿತ ಕವನ ಸಂಕಲನಗಳು. ದೊರೆ ದುರ್ಯೋಧನ (ನಾಟಕ) ಮತ್ತು ಕುಮಾರ ರಾಮ, ಕಂದನ ಕವನಗಳು, ಆರು ಪ್ರಾಣಿಕಥೆಗಳು (ಮಕ್ಕಳ ಸಾಹಿತ್ಯ) ಕೃತಿಗಳನ್ನು ಪ್ರಕಟಿಸಿದ್ದಾರೆ.
ರಾಘವಾಂಕ, ಕಾವ್ಯಾನುಶೀಲನ, ಅವಗಾಹನ, ಕುವೆಂಪು ಸಾಹಿತ್ಯ ವಿಮರ್ಶನ, ದುರ್ಗಸಿಂಹ, ಪ್ರಾಸ್ತಾವಿಕ(ವಿಮರ್ಶೆ) , ಲಕ್ಷೀಶನ ಕಾವ್ಯ ಪ್ರವೇಶ, ರನ್ನನ ಕಾವ್ಯಾಧ್ಯಯನ (ಸಂಶೋಧನ ಕೃತಿಗಳು) ಕೆ.ಎಸ್.ನರಸಿಂಹಸ್ವಾಮಿ (ಜೀವನ ಚರಿತ್ರೆ), ಸಾಹಸ , ಭೀಮವಿಜಯ, ಅಜಿತತೀರ್ಥಂಕರ ಪುರಾಣ, ಲಕ್ಷ್ಮೀಶನ ಜೈಮಿನಿ ಭಾರತ (ಗ್ರಂಥಸಂಪಾದನೆ) ಮತ್ತು ನಮ್ಮ ಗಾದೆಗಳು, ಕಿಟ್ಟೆಲ್ ಕೋಶದ ಗಾದೆಗಳು, ಕರ್ಣಾಟಕದ ಜನಪದ ಕಥೆಗಳು, ನಮ್ಮ ಒಗಟುಗಳು, ಜನಪದ ನಂಬಿಕೆಗಳು, ಕನ್ನಡ ಶಿಶು ಪ್ರಾಸಗಳು, ಜನಪದ ರಾಮಾಯಣ, ಜಾನಪದ ಸಂಕೀರ್ಣ, ಜನಪದ ಸಾಹಿತ್ಯ ರೂಪಗಳು, ಚಾಮಾಯಿ, ಜಾನಪದ ಸಂಶೋಧನ, ಜನಪದ ಆಟಗಳು (ಜಾನಪದ ಸಾಹಿತ್ಯ) ಹಾಗೂ ಬಿ.ಎಮ್.ಶ್ರೀ: ನೂರರ ನೆನಪು, ಕೈಲಾಸಂ: ಬದುಕು ಬರಹ, ಮಾಸ್ತಿಯವರು ಮತ್ತು ಚಿಕವೀರರಾಜೇಂದ್ರ, ವಿನಯೋನ್ನತಿ, ಕನ್ನಡ ಕವಿಗಳು ಕಂಡ ಮೈಸೂರು, ಬೇಂದ್ರೆ ಮತ್ತು ಸಾಹಿತ್ಯ ಸಮಾಲೋಚನೆ (ಸಂಪಾದನೆ) ಅವರ ಪ್ರಕಟಿತ ಕೃತಿಗಳು.
‘ಸುವರ್ಣ ಸಂಪುಟ' ಕೃತಿಯಲ್ಲಿ ರಾಮೇಗೌಡ ಇವರ ಒಂದು ಕವನ ಪ್ರಕಟವಾಗಿದೆ. ಆ ಕವನವನ್ನು ಆಯ್ದು ಪ್ರಕಟಿಸಲಾಗಿದೆ. ಓದುವ ಸುಖ ನಿಮ್ಮದಾಗಲಿ…
ಆಹ್ವಾನ
ಯಾರವರು? ಏಕೆ ಬಂದವರು?
ವಿಚಾರವೇನು ಹೇಳಿ,
ಬಿರುಗಾಳಿಯಂತೆ ನುಗ್ಗಿ ಬರುವ ನೀವು,
ಸದ್ದು ಮಾಡಬೇಡಿ ತಾಳಿ;
ತಮದೆದೆಯ ಇರುಳ ತೆಗೆವವರೊ, ನೀವು-
ಕದತೆರೆವೆ ಬಂದು ಬಾಳಿ !
ಬಾಳಿನಲ್ಲಿ ಮಂದಾರ ಬೆಳೆವ
ದೇವತನಯರೇನೊ !
ಆಕಾಶದಿಂದ ಹಾಲ್ಜೇನ ತಂದು
ಪೋಷಿಸುವರೇನೊ!
ಎದೆಯೊಲವ ಹಿಡಿದು ಇಳಿದು ಬರುವ -
ನಾಕದರ್ಶಿಗಳೇನೊ!
ಒಂದೊಂದ ಹನಿಯ ತಂದೆನ್ನ ಮನದಿ
ಹೊಸ ಚೈತ್ರಋತುವ ನಡುವರೇನೊ!
ಹೊಸ ಬಾಳಿಗಿವರು ಮುಂಗೋಳಿಯಾಗಿ
ಸುರ ಸುಗ್ಗಿಯನ್ನೆ ಕರೆವರೇನೊ !
ಬಂಗಾರ ಬದುಕ ಹರಿಕಾರರಾಗಿ
ಬೆಳ್ಳಿ ಬೆಳೆಸನ್ನೆ ಬೆಳೆವರೇನೊ !
ಆಹ್ವಾನ ಬನ್ನಿ, ಒಲವನ್ನೆ ತನ್ನಿ-
ಮೂಕರಾಗಬೇಡಿ.
ಹೊತ್ತಾರೆಯಲ್ಲಿ ಐತರುವ ನೀವು-
ಕಯ್ಯಲ್ಲಿ ಕಿರಣಗಿಂಡಿ !
ಎದೆ ಹೊಲದ ಮೇಲೆ ಬರುತಿರುವ ನೀವು-
ಬದುಕನ್ನೆ, ಬನ್ನಿ ಬಂಗಾರ ಮಾಡಿ !
ತಿರೆ ಮುಗಿಲ ಬೆಳೆವವರೊ, ನೀವು-
ಇರಬೇಕು ಬಾಂದಳದ ಭಕುತರು !
ಎದೆ ಎದೆಯ ಮಿಡಿವ ಜಾಗೃತವ ಕೊಡುವ
ನಿತಾಂತ ಅನಂತ ಯಾತ್ರಿಕರು !
ತೆರೆದಿದೆ ಬಾಗಿಲು ನಿಮಗೆ ನಿತ್ಯ
ನಿಮ್ಮಿಂದೆ ಹೃದಯ ಸತ್ಯಸ್ಯಸತ್ಯ !
ನೀವು ಬೆಳಗಲು ಎದೆಯು - ಗುಡಿಯು
ಆಗದಿರಲಿ ಇದು ತಮದ ಗವಿಯು !
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)