‘ಸುವರ್ಣ ಸಂಪುಟ' (ಭಾಗ-೧೦) - ವಿ.ಸೀತಾರಾಮಯ್ಯ

‘ಸುವರ್ಣ ಸಂಪುಟ' (ಭಾಗ-೧೦) - ವಿ.ಸೀತಾರಾಮಯ್ಯ

ಕಳೆದ ವಾರದ ನಾ.ಕಸ್ತೂರಿಯವರ ‘ನಗೆಗಾರರು' ಕವನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ಬಹಳಷ್ಟು ಓದುಗರು. ಈ ಸಂಪುಟದಲ್ಲಿ ಅವರ ಇದೊಂದೇ ಕವನ ಮುದ್ರಿತವಾಗಿರುವುದು. ಅವರು ತಮ್ಮ ಕವನದಲ್ಲಿ ಕೆಲವೆಡೆ ಆಂಗ್ಲ ಪದಗಳನ್ನು ‘ಪಂಚ್' ಗೋಸ್ಕರ ಸೇರಿಸಿದ್ದಾರೆ. ಈ ವಾರ ನಾವು ಆಯ್ದು ಕೊಂಡಿರುವ ಕವಿ. ವಿ.ಸೀತಾರಾಮಯ್ಯ. ಅವರ ಆರು ಕವನಗಳು ಈ ಸಂಪುಟದಲ್ಲಿವೆ. ಅಭೀಃ, ಮನೆ ತುಂಬಿಸುವುದು, ವಿಶ್ವಾಸ, ವರುಷ ಹೋಯಿತು, ಶಬರಿ ಹಾಗೂ ವಿರಹಿ. ಈ ಕವನಗಳಿಂದ ನಾವು ‘ವರುಷ ಹೋಯಿತು’ ಮತ್ತು ಜನಪ್ರಿಯ ಕವನ ‘ಶಬರಿ' ಯನ್ನು ಪ್ರಕಟಣೆಗೆ ಆಯ್ದುಕೊಂಡಿರುತ್ತೇವೆ. ಮೊದಲಿಗೆ ಕವಿ ಪರಿಚಯ.

ವಿ.ಸೀತಾರಾಮಯ್ಯ: ವೆಂಕಟರಾಮಯ್ಯ ಸೀತಾರಾಮಯ್ಯ ಸಾಹಿತ್ಯ ಲೋಕದಲ್ಲಿ ‘ವಿ.ಸೀ’ ಎಂದೇ ಖ್ಯಾತಿ ಪಡೆದಿದ್ದಾರೆ. ಇವರು ಹುಟ್ಟಿದ್ದು ೧೮೯೯ರ ಅಕ್ಟೋಬರ್ ೨ರಂದು ಬೆಂಗಳೂರು ಜಿಲ್ಲೆಯ ಬೂದಿಗೆರೆ ಗ್ರಾಮದಲ್ಲಿ. ಇವರ ತಂದೆ ವೆಂಕಟರಾಮಯ್ಯ ಹಾಗೂ ತಾಯಿ ದೊಡ್ಡ ವೆಂಕಟಮ್ಮ. ಮೈಸೂರು ಮಹಾರಾಜಾ ಕಾಲೇಜಿನಿಂದ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ. ೧೮೨೩ ರಿಂದ ೧೯೨೮ರವರೆಗೆ ಮೈಸೂರಿನ ಶಾರದ ವಿಲಾಸ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ. ನಂತರ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಕೆ. ಹೊನ್ನಾವರದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಂತರ ನಿವೃತ್ತಿ. ಆಕಾಶವಾಣಿಯ ಕಾರ್ಯಕ್ರಮಗಳ ನಿಯೋಜಕರೂ ಆಗಿದ್ದರು. ವಿ.ಸೀ. ಅವರು ಸೆಪ್ಟೆಂಬರ್ ೪, ೧೯೮೩ರಲ್ಲಿ ನಿಧನ ಹೊಂದಿದರು.

ಇವರ ಕವನ ಸಂಕಲನಗಳು ದೀಪಗಳು, ಗೀತಗಳು, ನೆಳಲು-ಬೆಳಕು, ದ್ರಾಕ್ಷಿ-ದಾಳಿಂಬೆ, ಹೆಜ್ಜೆ ಪಾಡು, ಅರಲು-ಬರಲು. ಬೆಳದಿಂಗಳು ಹಾಗೂ ಸೀಕರಣೆ ಇವರ ಲಲಿತ ಪ್ರಬಂಧಗಳು. ಕೆಲವು ನಾಟಕಗಳನ್ನು ಇವರು ರಚಿಸಿದ್ದಾರೆ,ಅವುಗಳಲ್ಲಿ ಆಗ್ರಹ, ಸೊಹ್ರಾಬ್ ರುಸ್ತುಮ್, ಶ್ರೀಶೈಲ ಶಿಖರ. ಇವರ ಶ್ರೀಶೈಲ ಶಿಖರ ನಾಟಕವು ‘ಪಾಪ ಪುಣ್ಯ' ಎಂಬ ಹೆಸರಿನಲ್ಲಿ ಚಲನ ಚಿತ್ರವಾಗಿದೆ. ಇವರ ಇನ್ನಷ್ಟು ಪ್ರಕಾಶಿತ ಬರಹಗಳು ಎಂದರೆ ಮಹನೀಯರು, ಕಾಲೇಜು ದಿನಗಳು, ಅಶ್ವತ್ಥಾಮನ್, ಹಣ ಪ್ರಪಂಚ ಇತ್ಯಾದಿ. ಪಿಗ್ಮ್ಯಾಲಿಯರ್, ಮೇಜರ್ ಬಾರ್ಬರ್, ಬಂಗಾಳಿ ಸಾಹಿತ್ಯ ಚರಿತ್ರೆ ಇವರ ಅನುವಾದ ಬರಹಗಳು. ಕವಿರಾಜ ಮಾರ್ಗ, ವಡ್ಡಾರಾಧನೆ, ವ್ಯಾಕರಣ, ಯಕ್ಷಗಾನ ಹಾಗೂ ಜನಪದ ಸಾಹಿತ್ಯ ಇವರು ಸಂಗ್ರಹಿಸಿದ ಕೃತಿಗಳು. ಇವರ ಅರಲು-ಬರಲು ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ವಿ.ಸೀ. ಅವರ ಎರಡು ಕವನಗಳು

ಕವನ ೧- ವರುಷ ಹೋಯಿತು

ವರುಷ ಹೋಯಿತು ವರುಷ ಬಂದಿತು

ಹರುಷ ಬಾರದು ಬಾರದು ;

ಬಯಕೆ, ಆಸೆಯೇ? ಒಂದು ಫಲಿಸದು

ಎದೆಯ ವೇದನೆ ತೀರದು.

 

ಇರುಳು ಬಂದಿತು ಇರುಳು ಹೋಯಿತು

ಮನದ ಇರುಳೇ ಕಳೆಯದು ;

ಇರುಳ ಕತ್ತಲೆಗಿಂತ ನಿಬಿಡವು

ಬೆಳಕು ಅರಿವಿಗೆ ಹಾಯದು.

 

ಶಿಶಿರ ಕಳೆಯಿತು ಚೈತ್ರ ಸುಳಿಯಿತು

ಮನದ ಶಿಶಿರವು ಕಳೆಯದು ;

ವನವು ಹೊಸ ಹೂ ತಳಿರನಿಟ್ಟರು

ಬಾಳ್ಗೆ ಬಾರದು ಚೈತ್ರವು.

 

ಹಳೆಯ ಚರ್ಮವು ಸುಲಿದು ಮರಗಳು

ಹೊಸತು ಚರ್ಮವನುಟ್ಟವು ;

ಹೊರಗಿನೆಲ್ಲಕು ಹೊಸತು ಬಂದರು

ನಮ್ಮ ಹಳತನ ಹೋಗದು.

 

ಕೊಳಗಳಲ್ಲಿಯ ಕದಡು ತಿಳಿಯಿತು

ಚೆಲುವು ನೈದಿಲೆ ಅರಳ್ವುವು ;

ಮನದ ಕೊಳಚೆಯ ಕದಡು ಮುರಿಯದು

ತಿಳಿಯು ಹೂಗಳು ಬಾರವು.

***

ಕವನ ೨ - ಶಬರಿ

ಕಾದಿರುವಳು ಶಬರಿ,

ರಾಮ ಬರುವನೆಂದು,

ತನ್ನ ಪೂಜೆಗೊಳುವನೆಂದು.

 

ವನವನವ ಸುತ್ತಿ ಸುಳಿದು

ತರು ತರುವನಲೆದು ತಿರಿದು

ಬಿರಿವೂಗಳಾಯ್ತು ತಂದು

ತನಿವಣ್ಗಳಾಯ್ದು ತಂದು

 

ಕೊಳದಲ್ಲಿ ಮುಳುಗಿ ಮಿಂದು

ಬಿಳಿ ನಾರುಮುಡಿಯನುಟ್ಟು

ತಲೆವಾಗಿಲಿಂಗೆ ಬಂದು 

ಹೊಸತಿಲಲಿ ಕಾದು ನಿಂದು.

 

ಎಳಗಾಳಿ ತೀಡುತಿರಲು

ಕಿವಿಯೆತ್ತಿ ಆಲಿಸುವಳು

ಎಲೆಯಲುಗೆ ಗಾಳಿಯಲ್ಲಿ

ಸಡೆ ಸಪ್ಪುಳೆಂದು ಬಗೆದು.

 

ದೂರಕ್ಕೆ ನೋಳ್ಬೆನೆಂದು 

ಮರವೇರಿ ದಿಟ್ಟಿಸುವಳು

ಗಿರಿ ಮೇಲಕೈದಿ ಕೈಯ

ಮರೆಮಾಡಿ ನೋಡುತಿಹಳು

 

ಬಾ ರಾಮ, ರಾಮ ಎಂದು

ಬರುತಿಹನು, ಇಹನು ಎಂದು

ಹಗಲಿರುಳು ತವಕಿಸಿಹಳು

ಕಳೆದಿಹವು ವರುಷ ಹಲವು

  •   

ಶಬರಿವೊಲು ಜನವು, ದಿನವೂ

ಯುಗಯುಗವು ಕರೆಯುತಿಹುದು

ಕರೆ ಇಳೆಗಳೇಳಲರಸಿ

ತವಕದಲಿ ತಪಿಸುತಿಹುದು.

 

ಭರವಸೆಗಳಳಿಯವಾಗಿ 

ಮನವೆಲ್ಲ ಬಯಕೆಯಾಗಿ

ಹಗಲೆಲ್ಲ ಕಾದು ಕೂಗಿ

ಇರುಳೆಲ್ಲ ಜಾಗರಾಗಿ ;

 

ಬಂದಾನೊ ಬಾರನೋ ಓ

ಕಂಡಾನೊ ಕಾಣನೋ ಓ

ಎಂದೆಂದು ಜಪಿಸಿ ತಪಿಸಿ

ಶಂಕಾತುರಂಗಳೂರಿ

 

ರಾ ರಾಮ, ಬಾರ, ಬಾರಾ

ಬಡವರನು ಕಾಯು ಬಾರಾ

ಕಂಗಾಣದಿವರ ಪ್ರೇಮ

ನುಡಿ ಸೋತ ಮೂಕ ಪ್ರೇಮ.

-ಕಾದಿರುವುದು ಜನವು

ರಾಮ ಬರುವನೆಂದು

ತಮ್ಮ ಪೂಜೆಗೊಳುವನೆಂದು

***

(‘ಸುವರ್ಣ ಸಂಪುಟ' ದಿಂದ ಸಂಗ್ರಹಿತ)