‘ಸುವರ್ಣ ಸಂಪುಟ' (ಭಾಗ ೧೧೨) - ಶಾಮಸುಂದರ ಬಿದರಕುಂದಿ

ಶಾಮಸುಂದರ ಬಿದರಕುಂದಿ ಇವರು ಮೇ ೧೮, ೧೯೪೭ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದರು. ಇವರ ತಂದೆ ಗುರುರಾವ ಹಾಗೂ ತಾಯಿ ತುಂಗಾಬಾಯಿ. ಶಾಮಸುಂದರ ಬಿದರಕುಂದಿಯವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ೧೯೭೦ರಲ್ಲಿ ಕನ್ನಡ ವಿಷಯದಲ್ಲಿ ಎಂ ಎ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಇವರು ಬರೆದ ಮಹಾ ಪ್ರಬಂಧ “ನವ್ಯ ಕಾದಂಬರಿ ಮಾರ್ಗ ೧೯೬೦-೧೯೮೦” ಕ್ಕೆ ಕರ್ನಾಟಕ ವಿಶ್ವವಿದ್ಯಾನಿಲಯವು ಪಿ ಎಚ್ ಡಿ ಪದವಿಯನ್ನು ನೀಡಿ ಗೌರವಿಸಿದೆ.
ಬಿದರಕುಂದಿಯವರು ಹುಬ್ಬಳ್ಳಿಯ ನೆಹರೂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಗದಗದಲ್ಲಿರುವ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ನಿವೃತ್ತಿಯ ಬಳಿಕವೂ ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು 'ಬೇಂದ್ರೆ ರಾಷ್ಟ್ರೀಯ ಟ್ರಸ್ಟ್' ಇದರ ಸಕ್ರಿಯ ಸದಸ್ಯರಾಗಿದ್ದರು.
ಇವರು ಸೃಜನಶೀಲ ಸಾಹಿತಿಯ ಜೊತೆಗೆ ಉತ್ತಮ ವಿಮರ್ಶಕರೂ ಹೌದು. ಇವರು ಬರೆದ ಕಾವ್ಯ ಸಂಕಲನ - ಅಜ್ಜಗಾವಲು, ಅಲ್ಲಮ ಪ್ರಭುವಾದ, ಬರುವದೇನುಂಟೊಮ್ಮೆ. ವಿಮರ್ಶಾ ಗ್ರಂಥ - ಕೃತಿನೋಟ, ಅಚ್ಚುಕಟ್ಟು, ಪ್ರಸಂಗೋಚಿತ. ಸಂಪಾದನೆ- ಸ್ವಾತಂತ್ರ್ಯದ ಸವಿನೀರು, ಗದುಗಿನ ಭಾರತ : ಕುಮಾರವ್ಯಾಸ, ಗಂಧಕೊರಡು, ಪ್ರಬಂಧ ಪ್ರಪಂಚ, ದೀಪದಡಿಯ ಗದ್ದುಗೆ ಇತ್ಯಾದಿ. ಇದರ ಜೊತೆಗೆ ಗರುಡ ಶ್ರೀಪಾದರಾವ ಅವರ ಪರಿಚಯ ಗ್ರಂಥ ಹಾಗೂ ಸ್ವಾತಂತ್ರ್ಯ ಚಳುವಳಿ ಮತ್ತು ಕನ್ನಡ ರಂಗಭೂಮಿ ಎಂಬ ಕೃತಿಗಳನ್ನೂ ರಚಿಸಿದ್ದಾರೆ.
ಬಿದರಕುಂದಿಯವರು “ಸರ್ವಜಿತ" ಎಂಬ ಕಾವ್ಯನಾಮದಲ್ಲಿ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. “ಜ್ವಲಂತ” ಹಾಗೂ “ಪ್ರಿಯಂವದ" ಎಂಬ ಹೆಸರಿನಿಂದಲೂ ಅನೇಕ ಲೇಖನಗಳನ್ನು ಬರೆದು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಇವರು ಕೇವಲ ಸಾಹಿತ್ಯ ಮಾತ್ರವಲ್ಲ ಕಾಲೇಜು ಪ್ರಾಧ್ಯಾಪಕರಾಗಿದ್ದ ಸಮಯದಲ್ಲಿ ಎನ್ ಎಸ್ ಎಸ್ (ರಾಷ್ಟೀಯ ಸೇವಾ ಯೋಜನೆ) ಇದರ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಲವಾರು ಸಾಹಿತ್ಯ ವೇದಿಕೆಗಳ ಸಂಚಾಲಕರೂ ಆಗಿದ್ದರು.
ಶೋಭಾ ಇವರು ಬಿದಿರಕುಂದಿಯವರ ಧರ್ಮಪತ್ನಿ ಮತ್ತು ಇವರಿಗೆ ಮೂವರು ಮಕ್ಕಳು. ಶಾಮಸುಂದರ ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯು “ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ೨೦೦೩ರಲ್ಲಿ ನೀಡಿ ಗೌರವಿಸಲಾಗಿದೆ. ‘ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಒಂದು ಕವನ ಪ್ರಕಟವಾಗಿದೆ. ಅದನ್ನು ಆಯ್ದು ಪ್ರಕಟಿಸಲಾಗಿದೆ.
ಹುಟ್ಟು
ಬೆಳಕು ಹರಿಯುವ ಮುಂಚೆ,
ಕಣ್ಣುಕಿರಿದು ಮಾಡಿ, ನಿದ್ದೆ ಗುಹೆಯಿಂದೀಚೆ
ಸುತ್ತಲ್ಲ ನಿಟ್ಟಿಸಿದಾಗ ಕಂಡದ್ದು :
ಬರಿ ಬಾವಿ-ಕೆರೆ ;
ಅನತಿ ದೂರದಲ್ಲೇ :
ಕೈಮಾಡಿ ಕರೆವ ಜೋಡುಪರ್ವತ ಸಾಲು
ಹಬ್ಬಿತ್ತು :
ಪ್ರಕೃತಿ ಕನ್ಯೆಯ ಹಚ್ಚ ಹಳೆಯ ರೂಪು.
ನಿದ್ದೆ ಬಿಟ್ಟದ್ದವಗೆ ಗಂಟಲಲ್ಲಿರಿವ ದಾಹ :
ಮೈಕೊರೆವ ಚಳಿ.
ಪೇಟಿಸಾಲಲ್ಲಿದ್ದರೆ ‘ರೆಸ್ಟುರಾ’ ಹೊಕ್ಕು ಈಂಟ ಬಹು-
ದಿತ್ತು ಚಹಾ.
ದಟ್ಟಡವಿ ಕ್ರೂರ ಮೃಗಜಂತುಗಳರಮನೆಯಲ್ಲಿ,
ರಾಜಾತಿಥ್ಯಕ್ಕಾಗಮಿಸಿ ಬಂದಿವಾಸವನ್ನನುಭವಿಸುವಗೆ,
ಗಂಟಲಾರಿ, ಎದೆಬತ್ತಿ, ನಾಲಗೆ ಮಂಕಾಗಿ,
ದನಿ ಇಲ್ಲವಾಗಿದೆ ಕೂಗಿ ಕರೆಯಲಿಕ್ಕೆ,
ಗಟ್ಟಿತನ-ಗಡಸುತನ ಎದೆಬಿಟ್ಟೋಡಿವೆ, ಎಲ್ಲಿಗೋ.
ದೀನನಾಗಿ ಆರ್ತಸ್ವರವನ್ನುಚ್ಚರಿಸುತ್ತ ನಿಂತೆ
ಮೂಡಣದ ಕಿರುಸಂದಿಯಲ್ಲಿ
ಅರುಣಕಾಂತಿಯ ನಿತ್ಯ ಸೂರ್ಯೋದಯ.
ಕಣ್ಣಗಲಿಸಿದೆ ;
ಬಾವಿ-ಕೆರೆ ಸುತ್ತಲೂ ಹಸುರುಕೆಂಪಿನ ಹೂ ಹಣ್ಣು ತೋಟ.
ವರ್ಣರಂಜಿತ ನೀರು ಚುಮುಕಿಸುವ ಕಾರಂಜಿ.
ಜೋಡು ಪರ್ವತ ಸಾಲು ಹಿಮವಂತೆಯಾಗಿ,
ಶ್ವೇತವಸ್ತ್ರವನುಟ್ಟು ಮೌನತಪಗೈಯುತಿದೆ
ಕ್ಷಿತಿಜದಂಚಿಂದ ತೂರಿ ಬಂದ ಬೆಳಕು
ಅಪ್ಪಿಕೊಂಡಿತು ಮೈ ಬೆಚ್ಚಗೇ
ಮೆಲ್ಲಮೆಲ್ಲನೆ ಬಲಿತು ಕಾದಕಾಂಡವಾಗುತಲಿದ್ದೆ
ಕ್ಷಣಿಕ ಬದುಕನು ದಾಟಿ, ಸಾವಿನಂಚಿಗೆ ಸಾಗಿ,
ಉಗಿಯುಗುತಲಿತ್ತು ಮಂಜು-
ಹನಿಗಳ ನಿತ್ಯಮುತ್ತಿನ ಮಾಲೆ.
ಅಂಥಗಳಿಗೆಯಲ್ಲಿ,
ಕುರುಡ, ಅರಸುತಲಿದ್ದೆ ಕಳೆದು ಹೋಗಿದ್ದ
ಗಂಟು ಮೂಟೆಗಳನ್ನು,
ಸಿಕ್ಕುದ್ದು : ಅಲ್ಲೊಂದು - ಇಲ್ಲೊಂದು ದಿನಮಣಿ ಎಸೆದ
ಹೊನ್ನ ಬಣ್ಣದ ಹಲವು ಹರಳ ರಾಶಿ.
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)