‘ಸುವರ್ಣ ಸಂಪುಟ' (ಭಾಗ ೧೧೪) - ಪಿ. ಧೂಲಾ

‘ಸುವರ್ಣ ಸಂಪುಟ' (ಭಾಗ ೧೧೪) - ಪಿ. ಧೂಲಾ

ಪಿ. ಧೂಲಾ ಎಂದೇ ಹೆಸರಾದ ಧೂಲಾ ಪಾಟೀಲ ಸಾಹೇಬ ಅಥವಾ ಕಾಸೀಮ ಸಾಹೇಬರು ಹುಟ್ಟಿದ್ದು ೧೯೦೧ರಲ್ಲಿ. ಇವರ ತಂದೆ ಹುಸೇನ ಖಾನ. ತಾಯಿ ಚಾಂದ ಬೀಬಿ. ಪಾರ್ಸಿ ಭಾಷೆಯಲ್ಲಿ “ಧೂಲ್ಹಾ” ಎಂದರೆ ಮದುಮಗ. ಆದರೆ ಧೂಲಾ ಸಾಹೇಬರು ಜೀವನ ಪರ್ಯಂತ ಬ್ರಹ್ಮಚಾರಿಯಾಗಿಯೇ ಉಳಿದರು. ಇವರನ್ನು ಎಲ್ಲರೂ ಪ್ರೀತಿಯಿಂದ ‘ಧೂಲಾ’ ಎಂದೇ ಕರೆದರು. ಇದೇ ಅವರ ಅನ್ವರ್ಥ ನಾಮವೂ ಆಗಿ ಹೋಯಿತು.

ಧೂಲಾ ಸಾಹೇಬರು ಓದಿದ್ದು ಮೂರನೇಯ ತರಗತಿಯವರೆಗೆ ಮಾತ್ರ. ಆದರೆ ಖ್ಯಾತ ಸಾಹಿತಿ ಮಧುರ ಚೆನ್ನ ಅವರ ಬಾಂಧವ್ಯಕ್ಕೆ ಕಟ್ಟುಬಿದ್ದು ಮೂಲಕೀ (ಮೂಲ್ಕಿ) ಪರೀಕ್ಷೆಯನ್ನು ಬರೆದು ಉತ್ತೀರ್ಣರಾದರು. ಮಧುರ ಚೆನ್ನರ ಸಾಂಗತ್ಯದಿಂದ ಇವರು ಸಾಹಿತ್ಯ ಕ್ಷೇತ್ರವನ್ನೂ ಪ್ರವೇಶಿಸಿದರು. ಹಲಸಂಗಿ ಗೆಳೆಯರು ಪ್ರಾರಂಭಿಸಿದ ‘ಮೊಗ್ಗು' ಮತ್ತು ವಿಶ್ವಾಮಿತ್ರ' ಎಂಬ ಕೈಬರಹದ ಪತ್ರಿಕೆಗಳಿಗೆ ನಿಯಮಿತವಾಗಿ ಬರೆಯುತ್ತಿದ್ದರು. ‘ಕವಿ ಕರ್ಣ' ಎಂಬ ಕಾವ್ಯನಾಮದಿಂದ ಹಲವಾರು ಲಾವಣಿಗಳನ್ನೂ ಬರೆದರು. ನಂತರದ ದಿನಗಳಲ್ಲಿ ‘ಜಯ ಕರ್ನಾಟಕ’ ಪತ್ರಿಕೆಯಲ್ಲಿ ಬರಹಗಳು ಪ್ರಕಟವಾಗತೊಡಗಿದವು. ಇವರು ‘ಆನಂದ ಕಂದ. ಕವಿಕರ್ಣ, ಕಾಡಹಕ್ಕಿ' ಎಂಬ ಹಲವಾರು ಹೆಸರುಗಳಲ್ಲಿ ತಮ್ಮ ಬರಹವನ್ನು ರಚಿಸಿದ್ದಾರೆ. ಲಾವಣಿಗಳು ಇವರ ಅಚ್ಚುಮೆಚ್ಚಿನ ಪ್ರಕಾರವಾಗಿತ್ತು. 

ಧೂಲಾ ಸಾಹೇಬರು ಬರೆದ ಏಕೈಕ ಗ್ರಂಥ ‘ವೀರ ಪಥಿಕ' ಈ ಗ್ರಂಥ ಗಾತ್ರದಲ್ಲಿ ಚಿಕ್ಕದಾದರೂ ಬಹಳ ಅಮೂಲ್ಯವಾದದ್ದು. ಧೂಲಾ ಸಾಹೇಬರು ಹುಟ್ಟಿನಿಂದ ಮುಸ್ಲಿಮರಾದರೂ ಬೆಳೆದದ್ದು ಹಿಂದೂ ಪರಿಸರದಲ್ಲಿ. ಈ ಕಾರಣದಿಂದ ಅವರ ಬರಹಗಳಲ್ಲಿ ಹಿಂದೂ ಧರ್ಮದ ಛಾಯೆ ಕಾಣಸಿಗುತ್ತದೆ. ‘ಅರೇಬಿಯಾದ ಅಭಿಮನ್ಯು' ಇವರ ಖಂಡ ಕಾವ್ಯ. ಇದು ವೀರ ಕಾಸೀಮನ (ಅರೇಬಿಯಾದ ಐತಿಹಾಸಿಕ ಪಾತ್ರ) ಶೌರ್ಯವನ್ನು ಚಿತ್ರಿಸುವ ಕವನ. ಇದರಲ್ಲಿ ಎರಡೂ ಭಾಗಗಳಿವೆ. ಒಂದು ‘ಭಾವದಲ್ಲಿ' ಮತ್ತೊಂದು ‘ರಣದಲ್ಲಿ’.

೧೯೩೩ರಲ್ಲಿ ಧೂಲಾ ಸಾಹೇಬರು ಹಾಗೂ ಸಾಹಿತಿ ಸಿಂಪಿ ಲಿಂಗಣ್ಣನವರು ಸೇರಿ ‘ಜೀವನ ಸಂಗೀತ' ಎಂಬ ಲಾವಣಿಗಳ ಸಂಗ್ರಹವನ್ನು ಕನ್ನಡ ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಧೂಲಾ ಸಾಹೇಬರು ೧೯೪೦ರಲ್ಲಿ ಪ್ಲೇಗ್ ಕಾಯಿಲೆಗೆ ತುತ್ತಾದರು. ಜನವರಿ ೨೫, ೧೯೪೦ರಲ್ಲಿ ಅವರು ನಿಧನರಾದರು. ಅಲ್ಪಾಯುಷ್ಯದಲ್ಲೇ ಓರ್ವ ಪ್ರತಿಭಾವಂತ ಸಾಹಿತಿಯ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ಆದ ದೊಡ್ದ ನಷ್ಟವೆಂದೇ ಹೇಳಬಹುದು.

‘ಸುವರ್ಣ ಸಂಪುಟ’ ಕೃತಿಯಲ್ಲಿ ಧೂಲಾ ಸಾಹೇಬರ ಒಂದು ಕವನ ಮುದ್ರಿತವಾಗಿದೆ. ಅದನ್ನು ಸಂಗ್ರಹಿಸಿ ನೀಡಲಾಗಿದೆ. ಓದಿ. ಅಭಿಪ್ರಾಯಗಳನ್ನು ತಿಳಿಸಿ.

ಅನಂತರಾಮ

ಹೃದಯದಾಕಾಶವಿದು ಅದುರಿಗಡಗದ್ದ ರಿಸಿ

ಪ್ರೇಮವಂಕುರಿಸಿ ಸೌರಭವು ಹಾರಿ

ಭೇದಿಸುತ ಸಪ್ತತಲ ಇಂದ್ರ ಚಂದ್ರರ ಲೋಕ-

ಪಾರ ಅಪರಂಪಾರ ದೂರ ಸೇರಿ.

 

ಅವಲೋಕದ ಕಾಣೆ - ದಿವ್ಯಜ್ಯೋತಿಯ ಕಂಡೆ

ಕಣ್ಣರಳಿ ನಿಂತಾಗ ಭವ್ಯದೃಷ್ಟಿ

ಆವ ಆಶೆಯ ಪಾಶವೆನಗಿಲ್ಲ ಬಿರುಗಾಳಿ

ಬೀಸಿ ಸೂಸಿತು ಈ ಪ್ರಕಾಶ ವೃಷ್ಟಿ

 

ನಲ್ಲನಲ್ಲೆಯ ಪ್ರೇಮ ಒಲ್ಲೆನೆಂಬುವ ಬಿರುದು

ಹದಿನಾಲ್ಕು ಲೋಕಕ್ಕೆ ತಟ್ಟಿ ಮುಟ್ಟಿ

ಎಲ್ಲೆಡೆಗೆ ವ್ಯಾಪಿಸಿತು ಬೆಳ್ಳಬೆಳು ಬೆಳಕಾಗಿ

ತನ್ನಲ್ಲೆ ಆ ಕಳೆಯ ಮೊಳಕೆ ಹುಟ್ಟಿ.

 

ಉರಿದುರಿದು ಉರಿದೆದ್ದ ಆ ಊರ್ಮೆಯುರಿಯಲ್ಲಿ

ಒಂದಾಗಿ ಸತ್ಯದಾ ಸವಿಯನುಂಡೆ

ಸುರರು ಸುರಗುರು ಸೂರ್ಯಚಂದ್ರರೂ ಕಾಣದಾ

ಬೆಳಕಿನುನ್ಮಾದದಾ ಕಾಂತಿ ಕಂಡೆ.

 

ಪ್ರೇಮದಾಚೆಯ ಊರ್ಮೆ ಪ್ರೇಮಕ್ಕೆ ಬೀಜವದು

ಪ್ರೇಮದಾ ಫಲವಾಗಿ ಫಲಿಸಿನಿಂದು 

ಉಮ್ಮಳಿಸಿ ತಮನ್ಮಯತೆ ಪಾವಿತ್ರ್ಯ ಪರವಶತೆ

ಪರದೆಗಳ ಹರಿಹರಿದು ಸುಳಿದು ಬಂದು.

 

ವೇದಶಾಸ್ತ್ರಪುರಾಣ ವರಕುರಾನಗಳೆಲ್ಲ

ಕುಣಿಕುಣಿದು ನನ್ನ ಊರ್ಮೆಯೊಳೆಹುಟ್ಟಿ

ಅಡಗಿಹವು ಇಡಗಿಹವು ಎಲ್ಲೆಡೆಗೆ ನುಡಿಯುವವು

ಊರ್ಮೆಕೂರ್ಮೆಯ ಭವ್ಯದಿವ್ಯ ಸೃಷ್ಟಿ.

 

ಮರವು ಮತ್ನರಕರಗಿ ಕಷ್ಟನಷ್ಟವು ಸುಟ್ಟು

ಭರದಿ ಭಸ್ಮೀಭೂತವಾಗಿ ಹಾರಿ

ಅರವು ಅಗಲಾಗಿ ಅದ್ಭುತವ ಅಘಟಿತ ಶಕ್ತಿ

ಹೂಡಕರಿಸಿ ಹೊಳೆದು ಕುಡಿಮಿಂಚಿದೋರಿ

 

ಘನಸಿರಿಯ ಚಿನ್ಮಯ ಚಿದಾನಂದವನು ಕಂಡೆ

ಹೊರಮರೆದು ಒಳ ಊರ್ಮೆ ಕುದುರೆ ಏರಿ 

ನೆನಪುದೋರಿತು ಇತ್ತ ಕನಸು ಹರಿಯಿತು ಅತ್ತ

ಹತ್ತು ತಾಸಿನ ಹಿಗ್ಗು ಹಾಡನೇರಿ.

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)