‘ಸುವರ್ಣ ಸಂಪುಟ' (ಭಾಗ ೧೧೫) - ಎಂ. ಆರ್. ಶಾಸ್ತ್ರಿ

‘ಸುವರ್ಣ ಸಂಪುಟ' (ಭಾಗ ೧೧೫) - ಎಂ. ಆರ್. ಶಾಸ್ತ್ರಿ

‘ಸುವರ್ಣ ಸಂಪುಟ’ ಕೃತಿಯಿಂದ ನಾವು ಈ ವಾರ ಆಯ್ದುಕೊಂಡ ಸಾಹಿತಿ ಎಂ ಆರ್ ಶಾಸ್ತ್ರಿ ಇವರು. ಇವರು ಮದರಾಸು ವಿಶ್ವವಿದ್ಯಾನಿಲಯದಿಂದ ಎಂ ಎ, ಬಿ ಟಿ. ಮತ್ತು ಕನ್ನಡ ಹಾಗೂ ಸಂಸ್ಕೃತ ವಿದ್ವಾನ್ ಪದವಿಗಳನ್ನು ಪಡೆದಿದ್ದರು. ಇವರು ಮದರಾಸಿನ ಪ್ರಸಿಡೆನ್ಸಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೧೯೫೧ ರಿಂದ ೧೯೫೭ರವರೆಗೆ ಸೇವೆಯನ್ನು ಸಲ್ಲಿಸಿದ್ದಾರೆ. ನಂತರ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜು ಸೇರಿ, ಕಾಲಾನುಕ್ರಮೇಣ ಭಡ್ತಿಯನ್ನು ಪಡೆದು ಪ್ರಾಂಶುಪಾಲರಾಗಿ ನಿವೃತ್ತಿಯನ್ನು ಹೊಂದಿದ್ದಾರೆ. 

ಇವರ ಪ್ರಮುಖ ಕೃತಿಗಳು : ಭಾರತ ಗೀತೆ, ಮಿಲನ ಇತ್ಯಾದಿ. ಉಳಿದಂತೆ ಎಂ ಆರ್ ಶಾಸ್ತ್ರಿಗಳ ಕುರಿತಾದ ಯಾವ ಮಾಹಿತಿಗಳೂ ಲಭ್ಯವಾಗುತ್ತಿಲ್ಲ. ಓದುಗರಿಗೆ ಈ ಬಗ್ಗೆ ಮಾಹಿತಿ ಹಾಗೂ ಶಾಸ್ತ್ರಿಯವರ ಭಾವ ಚಿತ್ರವಿದ್ದಲ್ಲಿ ದಯವಿಟ್ಟು ಪ್ರತಿಕ್ರಿಯಿಸಿ. ‘ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಒಂದು ಕವನ ಪ್ರಕಟವಾಗಿದೆ.

ಮಲೆನಾಡಿನ ಹಳ್ಳಿ 

ಪಡುವಣ ಗಟ್ಟದ

ಹಸುರಿನ ಸೀರೆಯ

ನಿರಿಯಲಿ ನಿಂತಿದೆ ನಾವೂರು,

ಮಂಜಿನ ಕಂಬಳಿ

ಮಲೆಗಳ ಉಂಬಳಿ

ಪಡೆದಿಹ ಶಿಶಿರನು ನೆಲೆಯೂರು.

 

ಕಂಗಿನ ತೋಟದ

ಕಳವೆಯ ಪೈರಿನ

ಹಸುರನು ಹೊದ್ದಿಹ ಮಲೆನಾಡು ;

ಬಿಸಿಲಿನ ಮೋರೆಯ

ಚಂದ್ರನ ಚಲನೆಯ

ಕಾಣದ ಕತ್ತಲ ಕಗ್ಗಾಡು.

 

ಕಿರಿಕಿರಿಗುಟ್ಟುತ

ಕಿವಿ ಕಿವುಡಾಗಿಸಿ

ದಿನವಿಡಿ ಕೂಗುವ ಕೀಟಗಳು;

ನಾಡನು ಆಳುವ

ನಿರ್ಭರ ನೀರವ

ದೊಡೆನಾಡುವ ಸೆಣಸಾಟಗಳು.

 

ಮಾನವನೆದೆಯು

ತ್ಸಾಹದ ತನಿರಸ

ಸೋರುವ ತೆರದಲಿ ಕಿರುಸೋನೆ

ತೆಂಗಿನ ಕಂಗಿನ

ಮಡಲಿನ ಎಡೆಯಲಿ

ಜಿರ್ ಜಿರ್ರೆನುತಲಿ ಸುರಿಯುತಿದೆ.

 

ನೀರಿನ ಒರತೆಯು,

ಕಲ್ಲಿನ ಕೊರೆತವು

ಜಲಪಾತವು ಚೆಲ್ಲಿದ ಚೆಲುವು !

ಏನಿದು ಮಲೆಯೇ?

ಜಲದೇವಿಯು ಹಿಮ

ರಾಜನ ವರಿಸಿದ ಹಂದರವೆ?

 

ತರುಗಳ ಮರೆಯಲಿ

ಹವಿನ ನಡೆಯಲಿ

ಕೊಂಕಿಸಿ ಜಂಕಿಸಿ ನುಸುಳುತಿಹ

ಬೆಳ್ಳಿಯ ಬಣ್ಣದ

ಬೆಡಗಿನ ತೊರೆಯಿದು-

ಸೌಂದರ್ಯದ ರಸವಾಹಿನಿಯು!

 

ಶಂಖರ ಸರವೇ?

ಬಿಂಕದ ಅಬ್ಬಿಯೆ?

ಬೋರಿಡುವಬ್ಧಿಯು ಬಂದಿಹುದೆ!

ಗಾನವಿನೋದನ

ಮಂಗಳ ಗೀತಕೆ

ಸೃಷ್ಟಿಯು ಮೇಳಯಿಪಾ ಶ್ರುತಿಯೆ?

 

ಬೆಲುವಿನ ಗಟ್ಟವೊ!

ಬೆಳ್ಳಿಯ ಬೆಟ್ಟವೊ!

ಮೂಡಣ ದೆಸೆಯನು ನೋಡಲ್ಲಿ-ತಿಂಗಳ ಬೆಳಕನು 

ಮಂಜಿನ ಮುಸುಕನು

ಹೊದ್ದಿಹ ಗಿರಿಗಳ ಸಾಲಲ್ಲಿ !

 

ಪಡುವಣ ಗಟ್ಟದ

ಹಸುರಿನ ಸೀರೆಯ

ನಿರಿಯಲಿ ನಿಂತಿದೆ ನಾವೂರು,

ಮಂಜಿನ ಕಂಬಳಿ

ಮಲೆಗಳ ಉಂಬಳಿ

ಪಡೆದಿಹ ಶಿಶಿರನು ನೆಲೆಯೂರು.

(‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವನ)