‘ಸುವರ್ಣ ಸಂಪುಟ' (ಭಾಗ ೧೧೬) - ಶಿವೇಶ್ವರ ದೊಡ್ಡಮನಿ

‘ಸುವರ್ಣ ಸಂಪುಟ' (ಭಾಗ ೧೧೬) - ಶಿವೇಶ್ವರ ದೊಡ್ಡಮನಿ

ಶಿವೇಶ್ವರ ದೊಡ್ದಮನಿ ಇವರು ಎಳೆಯ ವಯಸ್ಸಿನಲ್ಲಿಯೇ ಭಾವಗೀತೆ, ತ್ರಿಪದಿಗಳು, ಜಾನಪದ ಗೀತೆಗಳು ಮೊದಲಾದುವುಗಳನ್ನು ರಚಿಸುತ್ತಿದ್ದರು. ಶಿವೇಶ್ವರರು ಹುಟ್ಟಿದ್ದು ಮೇ ೭, ೧೯೧೫ರಂದು ಧಾರವಾಡ ಜಿಲ್ಲೆಯ ನವಲೂರಿನಲ್ಲಿ. ಇವರ ತಂದೆ ಈಶ್ವರಪ್ಪ ಹಾಗೂ ತಾಯಿ ಚೆನ್ನವೀರಮ್ಮ. ನೇಕಾರ ವೃತ್ತಿಯನ್ನು ಮಾಡುತ್ತಿದ್ದ ಕುಟುಂಬ ಇವರದ್ದು. ಶಿವೇಶ್ವರರ ಹುಟ್ಟು ಹೆಸರು ಶಿವಬಸಪ್ಪ. ನಂತರದ ದಿನಗಳಲ್ಲಿ ಅವರು ಶಿವ ಎಂಬ ಹೆಸರಿಗೆ ತಮ್ಮ ತಂದೆಯ ಹೆಸರಾದ ಈಶ್ವರ ಸೇರಿಸಿ ಶಿವೇಶ್ವರ ಎಂದು ಹೆಸರುವಾಸಿಯಾದರು. 

ಮನೆಯಲ್ಲಿನ ಕಡು ಬಡತನ ಇವರನ್ನು ಹೆಚ್ಚಿಗೆ ಓದಲು ಬಿಡಲಿಲ್ಲ. ಧಾರವಾಡದ ಕರ್ನಾಟಕ ಹೈಸ್ಕೂಲಿನಲ್ಲಿ ಪ್ರೌಢ ಶಾಲೆಯವರೆಗೆ ಓದಿ ನಂತರ ಮನೆಯ ಅರ್ಥಿಕ ಪರಿಸ್ಥಿತಿಯನ್ನು ಕಂಡು ಉದ್ಯೋಗಕ್ಕೆ ಸೇರಿದರು. ಇವರು ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದು ಧಾರವಾಡ ಮುನ್ಸಿಪಲ್ ಬೋರ್ಡ್ ಶಾಲೆಯಲ್ಲಿ ಗುಮಾಸ್ತನಾಗಿ. ನಂತರ ಹುಬ್ಬಳ್ಳಿಯ ಆಂಗ್ಲೋ - ಉರ್ದು ಶಾಲೆಯಲ್ಲಿ ಗುಮಾಸ್ತರಾದರು. ಇವರಿಗೆ ಬಾಲ್ಯದಿಂದಲೇ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದವು. ಈ ಸಮಸ್ಯೆಯು ಉಲ್ಭಣಗೊಂಡು ಕಣ್ಣಿನ ತೊಂದರೆಯೂ ಜಾಸ್ತಿಯಾಯಿತು. 

ಆದರೆ ಎಳೆಯ ವಯಸ್ಸಿನಲ್ಲಿಯೇ ತಮ್ಮ ತಾಯಿ ಹಾಡುತ್ತಿದ್ದ ಜಾನಪದ ಪದಗಳನ್ನು ಕೇಳಿ, ಆಸಕ್ತಿ ಬೆಳೆಸಿ, ತಾವೂ ಬರೆದು ಪತ್ರಿಕೆಗಳಿಗೆ ಕಳಿಸತೊಡಗಿದರು. ಅಂದು ದೇಶದಾದ್ಯಂತ ಹಬ್ಬಿದ್ದ ಕೋಮುದ್ವೇಷ, ಬತ್ತಿ ಹೋದ ಮಾನವೀಯತೆ ಈ ಕುರಿತಾದ ಹಲವಾರು ಕವನಗಳನ್ನು ಶಿವೇಶ್ವರ ಇವರು ಬರೆದಿದ್ದಾರೆ. ನಿರಂಜನ ಇವರು ಪ್ರಾರಂಭಿಸಿದ್ದ ‘ಜನಶಕ್ತಿ' ಪತ್ರಿಕೆಯ ಉಪಸಂಪಾದಕರಾಗಿಯೂ ಇವರು ಕೆಲಸ ಮಾಡಿದ್ದಾರೆ. ಇವರು ಹಲವಾರು ತ್ರಿಪದಿಗಳನ್ನು ರಚನೆ ಮಾಡಿದ್ದಾರೆ.

ಶಿವೇಶ್ವರರು ಕೆಲವು ಕಥೆಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ ‘ರಾಜಮಾ’ (ಸಣ್ಣ ಕಥೆ) ಮತ್ತು ‘ನಮ್ಮ ನಡುವಿನ ಗೋಡೆ’ ಎಂಬ ಅನುವಾದಿತ ಕಥೆಗಳೂ ಸೇರಿವೆ. ಅನಾರೋಗ್ಯದ ಕಾರಣದಿಂದ ಇವರಿಗೆ ತಮ್ಮ ಸಾಹಿತ್ಯ ಕೃಷಿಯನ್ನು ಹೆಚ್ಚು ಸಮಯ ಮುಂದುವರೆಸಲಾಗಲಿಲ್ಲ. ಶಿವೇಶ್ವರರು ತಮ್ಮ ೩೫ನೇ ವಯಸ್ಸಿನಲ್ಲಿಯೇ ಮಾರ್ಚ್ ೨೬, ೧೯೫೦ರಲ್ಲಿ ನಿಧನ ಹೊಂದಿದರು.

ಇವರು ಬರೆದ ಎರಡು ಪುಟ್ಟ ಕವಿತೆಗಳು ಸುವರ್ಣ ಸಂಪುಟ ಕೃತಿಯಲ್ಲಿವೆ. ಅವುಗಳನ್ನು ಓದುಗರಿಗಾಗಿ ಆಯ್ದು ಪ್ರಕಟಿಸಿದ್ದೇವೆ. ಓದಿ ಎಂದಿನಂತೆ ಅಭಿಪ್ರಾಯಗಳನ್ನು ತಿಳಿಸಿ.

ಕುರುಡು ಬೆಳಕಿಗೆ - ೧

೧. 

ಏಟು ಏಟು ಎದೆಬೆನ್ನಿಗೇಟು, ವಿಧಿಮಾಟಗೈಯ ಏಟು

ಕುರುಡು ಪೆಟ್ಟು ತಲೆಯೊಡೆದು ಹೋಳು ಸೀಳಾಗಲೆಂದು ಕೆಟ್ಟು ;

ತಲೆಮಾರ ಪಯಣ ಗುಣದಂಥತನದ ಋಣ ಡೊಂಬರಾಟ ಹೊಡಿ-

ಮನದಟ್ಟ ಮುರಿಯಿತೋ ಬಗೆಬೆಟ್ಟ ಅದುರಿತೊ ಹಾಳು ಹೃದಯ ಮೋಡಿ, ಏನೇನೋ ಭಿಕ್ಷಬೇಡಿ.

೨.

ಇಳಿಯೆದೆಯ ಮೇಲೆ ತಿಳಿಜೊನ್ನಲೀಲೆ ಕಣ್ಣಿಲ್ಲ ಕಾಣಲೊಲ್ಲೆ

ಬಹುಸನಿಹ ತೀರ ಸೌಂದರ್ಯಸಾರ ನಾನೆಂತು ನೋಡಬಲ್ಲೆ?

ಇದು ಯಾವ ದೀಕ್ಷೆ, ಇದು ಎಂಥ ಶಿಕ್ಷೆ, ಇದು ಯಾವ ಪೀಡೆ ಪಿಡುಗು

ಅಲ್ಲೊಂದು ಶಕ್ತಿ- ಇದು ಅದರ ಸೂಕ್ತಿ, ನಿನಗಿಲ್ಲ ಬಾಳು ಬೆಡಗು ಕಡೆಗು ಕಡೆಗು ಕಡೆಗೂ

೩. 

ಕಿರುಗಾಳಿಯೊಡನೆ ಬರಿಧೂಳಿಯೊಡನೆ ಹಿರಿ ಕಾಳು ಬಾಳಿನೊಡನೆ

ಮಿಡುಮಿಡುಕಿ ದುಡುಕಿ ಹುರುಳಿಲ್ಲದಂಥ ಹಿರಿಬೆಳಕನೊಂದ ಹುಡುಕಿ ಬಾಯಿ ಬಿಡುವ ಬವಣೆ ;

ಈ ನೋವನುರಿಯ ನಾಲಿಗೆಗೆ ಸಿಲುಕಿ ಕರಿಕಾಗಲೆಲ್ಲ ಕೊರತೆ

ಬಚ್ಚಬಯಲ ಸೆಣಸಿನಲಿ ತುಂಬಿ ಹರಿಸಿತ್ತು ತಮದ ಒರತೆ ಅದಕನಂತ ಚರಿತೆ.

***

ವಾತ್ಸಲ್ಯ ವಾರಿಧಿಯ ನಗೆಮಗಳು ನರ್ಸು !

ರೋಗ ರುಜಿನದ ಹುಟ್ಟು ಹುಣ್ಣು ಘಾಯದ ಪೆಟ್ಟು

ತನುಮನದ ಘಾಸಿಸಲು ಗೋಗರೆದು ತಲೆಕೆಟ್ಟು

ಆಸ್ಪತ್ರೆಯಾಸರಕೆ- ಉಲ್ಬಣದ ಉರಿಸೋಂಕೆ

ತರ್ಪಣವ ಕೊಡುವಾಸೆ ಚಿಂತೆ ಚಿತೆ ಬೇಸರಕೆ.

ಕೇಣಕೇಕೆಯ ನಿಡಲು ಬವಣೆ ಗರ್ಜನೆ ಸಿಡಿಲು

ಬೆಂದೆದೆಯ ಹೋಳುಗೈದಂದಗೆಡುತಿರೆ ಬಾಳು-

ತಂಗುವವು ಜೀವಿಗಳು ಬಳಗ - ಮನೆ- ನೆಲೆಬಿಟ್ಟು

ಅಂಗಾಂಗ ಬಲಬಯಕೆ ಬೆಂಬಳಿಸೆ ಬಾಯ್ ಬಿಟ್ಟು.

 

ಸರ್ಜನನೆ, ಡಾಕ್ಟರರೆ? - ಹಿರಿಯ ಸಂಚಾಲಕರು ;

ತಾಯ್ತನದ ಕರುಣೆಯುಪಚಾರದಾ ಸವಿನುಡಿಯ

ಪಡೆದ ಕಲೆ ದುಡಿತದೊಳೆ ಸಂತೃಪ್ತಿಯೆಂದಿಡಿಯ

ಬದುಕುಗೆಲ್ಲುವ ಹವಣ, ಹೃದಯ ಹಂಬಲ ತೇರು

ಎಳೆವ ಗುಣ ಸಮ್ಮಿಳನ ಸಂಭಾವ ಸಂದರ್ಶ-

ನಿಧಿ ವಾತ್ಸಲ್ಯ ವಾರಿಧಿಯ ನಗೆಮಗಳು ನರ್ಸು.

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನಗಳು)