‘ಸುವರ್ಣ ಸಂಪುಟ' (ಭಾಗ ೧೧೮) - ಜಿ.ವಿ.ಕುಲಕರ್ಣಿ

‘ಸುವರ್ಣ ಸಂಪುಟ' (ಭಾಗ ೧೧೮) - ಜಿ.ವಿ.ಕುಲಕರ್ಣಿ

ಮೂಲತಃ ವಿಜಯಪುರ ಜಿಲ್ಲೆಯ ಡೊಮನಾಳ ಗ್ರಾಮದವರಾದ ಡಾ. ಜಿ.ವಿ.ಕುಲಕರ್ಣಿ ಕವಿ, ನಾಟಕಕಾರ, ವಿಮರ್ಶಕ. ’ಜೀವಿ’ ಎಂಬ ಕಾವ್ಯ ನಾಮದಿಂದ ಬರೆಯುವ ಅವರು ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಪಡೆಯುತ್ತಿದ್ದ ವಿದ್ಯಾರ್ಥಿ. 'ಫೆಲೋಶಿಪ್' ಪಡೆದೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಕನ್ನಡ ಹಾಗೂ ಸಂಸ್ಕೃತ ಬಿ.ಎ. ಪದವಿಗಳನ್ನು ಗಳಿಸಿದರು. ನಂತರ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪೂರ್ಣಗೊಳಿಸಿ ಮುಂಬೈಗೆ ತೆರಳಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂ.ಎ, ಪಿಎಚ್.ಡಿ ಪಡೆದರು. ಬೊಂಬಾಯಿ ನಗರದ ಖಾಲ್ಸಾ ಮತ್ತು ಡಹಣೂಕರ್ ಚೀನಾಯ್ ಕಾಲೇಜುಗಳಲ್ಲಿ ಕನ್ನಡ-ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅವರು 1997ರಲ್ಲಿ ನಿವೃತ್ತರಾದರು. ಮುಂಬಯಿನಿಂದ ಪ್ರಕಟವಾಗುವ ಕರ್ನಾಟಕ ಮಲ್ಲ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಅವರು 'ಜೀವನ ಮತ್ತು ಸಾಹಿತ್ಯ ಅಂಕಣ'ದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗಳ ಬಗ್ಗೆ ಬರೆಯುತ್ತಾರೆ.

ಮಧುಸಂಚಯ, ಹುಚ್ಚ-ಹುಚ್ಚಿ, ನಾಲ್ಕು ಧ್ವನಿ, ಸಂಜೀವಿನಿ, ದಶಪದಿ, ಮ್ಯೂಸಿಂಗ್ (ಆಂಗ್ಲಭಾಷಾ ಕವನ ಸಂಗ್ರಹ), ವಚನಗಳು, ಏಳುಕವನ ಸಂಕಲನ ಕೃತಿಗಳು, ಇಂಟರ್ವ್ಯೂ, ಕನ್ನಡಿಯೊಳಗಿನ ಗಂಟು, ಸರಸ-ವಿರಸ (ಕವಿತೆ), ಧೃತರಾಷ್ಟ್ರ ಸಂತಾನ (ಕಥಾ ಸಂಕಲನ), ಶಬರಿ ಮುಂತಾದ ಹನ್ನೆರಡು ಏಕಾಂಕ ನಾಟಕಗಳು, ಪ್ರಜಾಪ್ರಭುತ್ವ, ಗುಂಡನ ಮದುವೆ, ಕಾದಿರುವಳು ಶಬರಿ, ವಿವೇಕ ಚೂಡಾಮಣಿ, ಸಂಭವಾಮಿ ಯುಗೇ ಯುಗೇ, ನರಕ (ನಾಟಕ), ವ್ಯಥೆಯಾದಳು ಹುಡುಗಿ (ಕಾದಂಬರಿ), ಶಾಂತಾರಾಮ ಪಿಕಳೆ (ಜೀವನ ಚರಿತ್ರೆ ), ನಾ ಕಂಡ ಬೇಂದ್ರೆ, ಸಮನ್ವಯಾಚಾರ್ಯ ಡಾ| ವಿ.ಕೃ.ಗೋಕಾಕ, ಜೀವನ ಮತ್ತು ಸಾಹಿತ್ಯ, ಬೇಂದ್ರೆ ಒಳನೋಟ, ಬೇಂದ್ರೆ ಸಮಗ್ರ ಕಾವ್ಯ ದರ್ಶನ (ವಿಮರ್ಶೆ) ಅವರ ಪ್ರಕಟಿತ ಕೃತಿಗಳು.

‘ಸುವರ್ಣ ಸಂಪುಟ' ದಲ್ಲಿ ಜಿ ವಿ ಕುಲಕರ್ಣಿ ಅವರ ಒಂದು ಕವನ ಪ್ರಕಟವಾಗಿದೆ. ಅದನ್ನು ಆರಿಸಿ ನಿಮ್ಮ ಓದಿಗಾಗಿ ಪ್ರಕಟಿಸಿದ್ದೇವೆ.

ಮಗು ಕಂಡ ಝೂ

೧. 

ಮುಂಬೈ ನಗರದಿ ಅಪ್ಪನ ಜೊತೆಯಲಿ

ನಾನೂ ‘ಝೂ’ ಕಂಡ್ ಬಂದೆ-

ಚಿತ್ರ ವಿಚಿತ್ರದ ಪ್ರಾಣಿಯ ಬಳಗಾ

ನೋಡುತ ನಾ ಬೆರಗಾದೆ.

೨.

ನೆರೆಮನೆ ರಂಗನ ತರದಲಿ ಮಂಗವು

ಅಣಕಿಸಿ ನನ್ನೆಡೆ ನೋಡಿತ್ತು -

ಹಣಿಕಿ ಹಾಕಿರಲು ಸಂಗನ ತೆರದಲಿ 

ಟೊಪ್ಪಿಗೆಯನ್ನೆ ಕಸಿದಿತ್ತು.

೩.

ಚಿಕ್ಕಮ್ಮನ ಗುಡುಗಿನ ಸಪ್ಪಳ

ಹುಲಿ ಪಂಜರದಲಿ ತೋರಿತ್ತು -

ಪುಟ್ಟ ಕಿಸೆಗಳನು ಅಜ್ಜಿಯ ತೆರದಲಿ

ಕರಡಿಯು ‘ಮುಸುಮುಸು' ಮೂಸಿತ್ತು.

೪.

ಬಿಳಿಯ ಕುದುರೆಗೋ ಪಟ್ಟಿಯ ಬರೆದು -

‘ಮೊಹರು ಹುಲಿಯನು' ಮಾಡಿಹರು

ಸುಳ್ಳೇಪಳ್ಳೇ ಅದಕ್ಕೆ ‘ಝೀಬ್ರಾ’-

ಎಬ ಹೆಸರನು ಕೊಟ್ಟಿಹರು.

೫.

ಉದ್ದ ಮೋರೆಯಾ ‘ಜಿರಾಫು' ನೋಡಿದೆ

ಒಂಟೆಗಿಂತಲೂ ಉದ್ದವಿದೆ -

ಊರಿಗೆ ತರುರಲಿ ಏರಿದೆನಾದರೆ

ಅಗಸಮಲ್ಲಿಗೆ ಕೈಯೊಳಿದೆ.

೬. 

ಕೂದಲು ಕೆದರಿದ ನೆರೆಮನೆಯ ಹೆಣ್ಣೋ

ದುರುದುರು ನನ್ನನ್ನು ನೋಡಿದೊಲು -

ಸಿಂಹವೆಂಬುದೋನೋಡಿತು ನನ್ನೆಡೆ

ಅದರ ಗಂಟನೇ ಕಸಿದವೊಲು.

೭.

ಒಬ್ಬನೆ ಮಗನೊಂದೊಂದಕೆ ನನಗೋ

ಅಪ್ಪನು ಸಮ್ಮತಿ ಕೊಡಲಿಲ್ಲ-

ಅತ್ತೂ-ಕರಿದೊ ಕೊನೆಯಲಿ ನಾನು

ಆನೆ-ಸವಾರಿಯ ಬಿಡಲಿಲ್ಲ.

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)