‘ಸುವರ್ಣ ಸಂಪುಟ' (ಭಾಗ ೧೧೯) - ಪ್ರಭುಶಂಕರ
'ಸುವರ್ಣ ಸಂಪುಟ' ಕೃತಿಯ ಸಂಪಾದಕರಲ್ಲಿ ಓರ್ವರಾದ ಡಾ. ಪ್ರಭುಶಂಕರ ಅವರ ಕವನವನ್ನು ಈ ವಾರ ನಾವು ಪ್ರಕಟಣೆಗೆ ಆಯ್ದುಕೊಂಡಿದ್ದೇವೆ. ಕವನವನ್ನು ಓದುವುದಕ್ಕೂ ಮೊದಲು ಪ್ರಭುಶಂಕರ ಅವರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಇವರು ಹುಟ್ಟಿದ್ದು ಫೆಬ್ರವರಿ ೧೫, ೧೯೨೯ರಲ್ಲಿ ಚಾಮರಾಜನಗರದಲ್ಲಿ. ಇವರ ತಂದೆ ಕರಿಬಸಪ್ಪ ಹಾಗೂ ತಾಯಿ ರುದ್ರಮ್ಮ. ಅವಿದ್ಯಾವಂತರೇ ತುಂಬಿದ್ದ ಆ ಗ್ರಾಮದಲ್ಲಿ ಅದೃಷ್ಟವಶಾತ್ ಪ್ರಭುಶಂಕರ ಅವರ ಹೆತ್ತವರು ಸ್ವಲ್ಪ ಮಟ್ಟಿಗೆ ವಿದ್ಯಾವಂತರಾಗಿದ್ದರು. ಈ ಕಾರಣದಿಂದ ಪ್ರಭುಶಂಕರರಿಗೆ ಉತ್ತಮ ವಿದ್ಯೆ ದೊರಕಿತು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚಾಮರಾಜನಗರ ಹಾಗೂ ಯಳಂದೂರಿನಲ್ಲಿ ಪೂರೈಸಿದ ನಂತರ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮೈಸೂರು ಹಾಗೂ ಬೆಂಗಳೂರಿನಲ್ಲಿ ಮುಗಿಸಿದರು. ರಾಮಕೃಷ್ಣ ಮಿಶನ್ ಅವರ ಸಂಪರ್ಕ ಲಭಿಸಿದ ಕಾರಣ ಪ್ರಭುಶಂಕರ ಇವರು ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಜೀವನ ಸಾಧನೆಗಳಿಂದ ಪ್ರಭಾವಿತರಾದರು. ಬೆಂಗಳೂರಿನಲ್ಲಿ ಕಾಲೇಜು ಕಲಿಯುವ ಸಮಯದಲ್ಲಿ ಖ್ಯಾತ ಸಾಹಿತಿಗಳಾದ ತೀನಂಶ್ರೀ, ಜಿ ಪಿ ರಾಜರತ್ನಂ, ಎಂ. ವಿ. ಸೀತಾರಾಮಯ್ಯ ಮೊದಲಾದವರ ಸಾಂಗತ್ಯ ದೊರೆಯಿತು. ಆರ್ ಗುರುರಾಜ ರಾವ್, ಎಂ ರಾಮರಾವ್, ಎಸ್ ಅನಂತನಾರಾಯಣರಿಂದ ಉತ್ತಮ ಇಂಗ್ಲಿಷ್ ಪಾಂಡಿತ್ಯವನ್ನು ಪಡೆದುಕೊಂಡರು.
ಪ್ರಭುಶಂಕರ ಅವರ ಗಮನ ಸಾಹಿತ್ಯದತ್ತ ಹೊರಳಿದ್ದು ನಾ ಕಸ್ತೂರಿಯವರಿಂದ. ಆ ಸಮಯದಲ್ಲಿ ಖ್ಯಾತ ಹಾಸ್ಯ ಸಾಹಿತಿ ರಾಶಿ ಇವರು ‘ಕೊರವಂಜಿ' ಎಂಬ ಮಾಸ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಈ ಪತ್ರಿಕೆಗೆ ಹಲವಾರು ಬರಹಗಳನ್ನು ಬರೆಯುವ ಮೂಲಕ ತಮ್ಮ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ಕುವೆಂಪು ಅವರ ಭೇಟಿಯಾಗಿ ಅವರ ಪರಮಾಪ್ತರಲ್ಲಿ ಒಬ್ಬರಾದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ ಎ ಪದವಿಯನ್ನು ಪಡೆದ ಪ್ರಭುಶಂಕರರು ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದರು. ನಂತರ ಕೋಲಾರ ಮತ್ತು ಮೈಸೂರು ಕಾಲೇಜಿನಲ್ಲಿ ಹಾಗೂ ಮೈಸೂರಿನ ‘ಪ್ರಸಾರಾಂಗ' ದಲ್ಲಿ ಸೇವೆ ಸಲ್ಲಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ನಂತರ ನಿವೃತ್ತಿ ಹೊಂದಿದರು.
ಪ್ರಭುಶಂಕರ ಇವರು ಕುವೆಂಪು ಅವರ ವ್ಯಕ್ತಿತ್ವ, ಬೆರಳ್ ಗೆ ಕೊರಳ್, ಸ್ಮಶಾನ ಕುರುಕ್ಷೇತ್ರ, ಶೂದ್ರ ತಪಸ್ವಿ ಮೊದಲಾದ ಕೃತಿಗಳನ್ನು ಆಂಗ್ಲಭಾಷೆಗೆ ಅನುವಾದ ಮಾಡಿದರು. ಜನಮನ (ವ್ಯಕ್ತಿ ಚಿತ್ರ), ಎತ್ತಿಗೆ ಜ್ವರ ಎಮ್ಮೆಗೆ ಬರೆ (ಹಾಸ್ಯ ಪ್ರಬಂಧ), ಪ್ರೇಮ ಭಿಕ್ಷು, ಜೀವ ಜೀವದ ನಂಟು (ಕಾದಂಬರಿ), ಅಂಗುಲಿಮಾಲಾ, ಆಮ್ರಪಾಲಿ, ಗೋರಿಗೊಂದು ಹದ್ದು (ನಾಟಕ) ಮುಂತಾದ ಕೃತಿಗಳನ್ನು ರಚನೆ ಮಾಡಿದ್ದಾರೆ. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ಕನ್ನಡದಲ್ಲಿ ಲಭಿಸುವಂತೆ ಮಾಡುವಲ್ಲಿ ಪ್ರಭುಶಂಕರ ಅವರ ಪಾತ್ರ ಹಿರಿದು. ಪ್ರಭುಶಂಕರ ಅವರದ್ದು ವಿದ್ವತ್ ಪೂರ್ಣ ಉಪನ್ಯಾಸ ಕಾರ್ಯಕ್ರಮಗಳಿಗೆ ಬಹಳಷ್ಟು ಜನರು ಸೇರುತ್ತಿದ್ದರು.
ಪ್ರಭುಶಂಕರರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ವಿಶ್ವಮಾನವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿಗಳು ಲಭಿಸಿವೆ. ಇವರು ಎಪ್ರಿಲ್ ೧೮, ೨೦೧೮ರಲ್ಲಿ ನಿಧನ ಹೊಂದಿದರು. ‘ಸುವರ್ಣ ಸಂಪುಟ' ದಲ್ಲಿ ಇವರ ಎರಡು ಕವನಗಳು (ಅಮೃತ ಶಿಲ್ಪ ಮತ್ತು ತೇರು ಬಂತು ತೌರಿಗೆ) ಪ್ರಕಟವಾಗಿದೆ. ಎರಡೂ ಕವನಗಳು ಸುದೀರ್ಘವಾಗಿವೆ. ಆದರೂ ಒಂದು ಕವನವನ್ನು ಆಯ್ದು ಪ್ರಕಟಿಸಿದ್ದೇವೆ. ಓದುವ ಖುಷಿ ನಿಮ್ಮದಾಗಲಿ…
ಅಮೃತಶಿಲ್ಪ
೧.
ಮಂಗಲ ಗಂಗೆ ತರಂಗ ಪುನೀತ
ಸುಕೋಮಲ ಶ್ಯಾಮಲ ವೇಲೆಯಲಿ ;
ಅಮಂಗಲ ಹಾರಣಿ
ಶ್ರೀ ಭವತಾರಿಣಿ
ನೆರಪಿದ ಓಲಗ ಸಾಲೆಯಲಿ,
ಕುಳಿತವನೆದ್ದನೊ
ಚಾಣವ ಹಿಡಿದನೊ
ದಿವ್ಯೋನ್ಮಾದದಲಿ !
ಟಕ್ಕ ಟಕ್ಕ ಟಕ ಟಕ್ಕ ಟಕ್ಕ ಟಕ
ಕೊರೆದ ಹಾಲುಗಲ್ಲ.
ಉಷೆಯು ಬಂದಳೊ ನಿಶೆಯು ಸಂದಳೋ
ಅವನಿಗರಿವೆ ಇಲ್ಲ!
ಭಾರತ ವರ್ಷದ ಅನಂತ ಹರ್ಷದ
ಚೇತನವನೆ ಕಡೆದ,
ಅರಿವಿನುನ್ಮತ್ತ ಕಲೆಯ ಮೂಡಿಸುತ
ಸುತ್ತ ಸುತ್ತಿ ನಡೆದ !
ಪದ ವಿನ್ಯಾಸಕೆ ವಿಶ್ವಭೇರಿಯದೊ
ಧಿಂ ಧಿಮಿ ಧಿಮಿ ಧಿಮಿ ಧಿಂ,
ಹೊಮ್ಮಿಸಿ ನಾದವ ಪುಳಕಗೊಂಡಿತೋ
ಧೋಂ ಧೋಂ ಧೋಂ ಧೋಂ ಧೋಂ!
ಕಂಡು ನಲಿದ ರವಿ, ಕಂಡು ನಲಿದ ಶಶಿ
ಕಂಡು ನಲಿಯೆ ತಾರೆ,
ಕಂಡು ಲಾಸ್ಯದಲಿ ಬೆರೆದು ನಿಂದಳೋ
ಹರಿವ ಗಂಗೆ ನೀರೆ!
ಸನಿಯದ ಸಾಗರ ದೂರದ ಹಿಮಗಿರಿ
ಹಾಡಿದವೋ ಹಿಮ್ಮೇಳವನು,
ಪೂರ್ವ ಪಶ್ಚಿಮದ ಎರಡು ಗೋಳಗಳು
ಬಾಜಿಸಿದವೊ ಜಯತಾಳವನು !
ರಾಮ ಬಂದನೋ
ಬುದ್ಧ ಬಂದನೋ
ಬಂದನೇ ಸುಕ್ರಿಸ್ತ,
ಬಾನ ಭಿತ್ತಿಯೊಲು
ಹರಹಿ ನಿಂದಿತ್ತು
ತಾಯ ಅಭಯ ಹಸ್ತ !
೨.
ವಿಶ್ವ ಮಹಾಮೌನದಲ್ಲಿ
ಚಾಣದೊಂದೆ ಬಾಜನ !
ದೇವ ಮಹಾ ಮನವು ಸಲಿಸು-
ತಿತ್ತು ದಿವ್ಯ ಪೂಜನ !
ಹೃದಯದಗ್ನಿ ಜಲಧಿಯಿಂದ
ಸೆಳೆಯುತ್ತಿದ್ದ ಸ್ಪೂರ್ತಿಯ !
ಎದೆಯ ಅಮೃತ ಕಳಶದಿಂದ
ಎದೆಯುತ್ತಿದ್ದ ನರ್ತಿಯ !
ಯುಗವುರುಳಿತು, ಯುಗಮೂಡಿತು
ನಡೆಯುತ್ತಿತ್ತು ಸೃಷ್ಟಿಯು !
ಗಳಿಗೆ ಗಳಿಗೆ ರಕ್ಷಿಸಿತ್ತು
ಜಗದಂಬೆಯ ದೃಷ್ಟಿಯು !
ದೇವಶಿಲ್ಪಿ ಭಾವ ಶಿಲ್ಪಿ
ಕುಣಿದೆ ಕುಣಿದೆ ಕುಣಿದೆನೋ,
ಕಲ್ಪ ಕಲ್ಪ ಕಲ್ಪವುರುಳೆ
ದಣಿಯದೆಯೋ ದಣಿದನೋ !
ವರ್ತಮಾನ ನೃತ್ಯರಚಿಸೆ
ಭವಿಷತ್ತಿನ ಮಹಲನು,
ಕಡೆಯುತ್ತಿತ್ತು ಕೋಟಿಹಸ್ತ
ಆತ್ಮ ತೇಜ ಮಹಲನು !
ಮೂಡಿ ಮೂಡಿ ಬೆಳೆಯುತ್ತಿತ್ತು
ದಿವ್ಯ ಭವನವು,
ಅಲ್ಪ ಅಲ್ಪವಾಗುತಿರಲು
ಅದನು ಕಂಡು ಭುವನವು !
ಕಾಲ ದೇಶ ಕೋಶಗಳನು
ಪುಡಿಗೈಯುತ ನಡೆಯಿತೋ,
ಕಾಣದೆನಿತೊ ವಿಶ್ವಗಳನು
ಅಡಿಪಾಯಕೆ ಪಡೆಯಿತೋ !
ಹಿಮಾಚಲವೆ ಹೊಸ್ತಿಲಾಯ್ತು
ಜಲಧಿ ಕೇಳಿ ಬುಗ್ಗೆಯು,
ಎನಿತೊ ಮುಗಿಲ ಮಾಲೆಯಾಯ್ತು
ತೋರಣ ಸಿರಿಮೊಗ್ಗೆಯು !
೩.
ಮುಗಿಯಿತದೋ ಭವ್ಯ ಭವನ
ಧ್ಯಾನದಕ್ಷಿ ಗೋಚರ !
ಪರಮಹಂಸ ಪರಮ ಧವಳ
ಮನದವಿರತ ಸಹಚರ !
ಕಣ್ಣು ಮುಚ್ಚು ಕಣ್ಣ ತೆರೆ
ಕಾಣು ಕ್ಷೀರ ಮಂದಿರ,
ಬಾಗಿಲಿಲ್ಲ, ಬಾಗಿಲೆಲ್ಲ
ಅದುವೆ ದೇವ ಸುಂದರ !
ರಾಮ ಕೃಷ್ಣ ಬುದ್ಧ ಕ್ರಿಸ್ತ
ಬಸವ ಚೈತನ್ಯರು,
ರಾಮಾನುಜ ಶ್ರೀ ಶಂಕರ
ಮಧ್ವಗೋಮಟೇಶರು
ತಾವಾದರೊ ದಶದಿಕ್ಕಿನ
ಒಂದೊಂದೂ ದ್ವಾರವು ;
ಪುಣ್ಯತೀರ್ಥ ಸ್ನಾತನಾಗಿ
ನಡೆಯೆ ಕಾಂಬೆ ಪಾರವು !
ಏನಿದೇನು ಏನಿದೇನು
ಒಳಗೇನೂ ಇಲ್ಲವೋ !
ಇಲ್ಲ ನಡೆ ಕಾಂಬೆ ನೀನು
ಇರುವುದಲ್ಲಿ ಎಲ್ಲವೂ !
ಅತ್ತ ಇತ್ತ ಸುತ್ತಲೆತ್ತ
ಅದೋ ಅಗ್ನಿಜ್ವಾಲೆಯು
ಮೂಡಿ ಬಂದು ತುಂಬುತಿಹುದು
ಕೇಳು ನಾದ ಮಾಲೆಯು !
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)