‘ಸುವರ್ಣ ಸಂಪುಟ' (ಭಾಗ ೧೨೦) - ಸಿದ್ದಯ್ಯ ಪುರಾಣಿಕ
“ಕಾವ್ಯಾನಂದ” ಕಾವ್ಯನಾಮಾಂಕಿತ ಸಿದ್ಧಯ್ಯ ಪುರಾಣಿಕ ಅವರು ಜನಿಸಿದ್ದು ೧೯೧೮ ಜೂನ್ ೧೮ರಂದು. ಹುಟ್ಟೂರು ರಾಯಚೂರು ಜಿಲ್ಲೆಯ ಯಲಬುರಗಿ ತಾಲ್ಲೂಕಿನ ದ್ಯಾಂಪುರ. ಕಲಬುರ್ಗಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಮೆಟ್ರಿಕ್ ಹಾಗೂ ಪದವಿ ಶಿಕ್ಷಣ ಪಡೆದಿದ್ದರು. ತಹಸೀಲ್ದಾರರಾಗಿ ವೃತ್ತಿ ಆರಂಭಿಸಿದ್ದ ಇವರು ಸರ್ಕಾರದ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡಿ ಲೇಬರ್ ಕಮೀಷನರಾಗಿ ಕೆಲಸ ಮಾಡಿ ನಿವೃತ್ತರಾದರು.
ಇವರಿಗೆ ಭಾರತೀಯ ಭಾಷಾ ಪರಿಷತ್ತಿನಿಂದ ಪ್ರಥಮ ಬಿಲ್ವಾರ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ. ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಕಲಬುರ್ಗಿಯಲ್ಲಿ ನಡೆದ ಐವತ್ತೆಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕಾಗಿ ಅವಿರತವಾಗಿ ಶ್ರಮಿಸಿದ್ದ ಸಿದ್ದಯ್ಯ ಪುರಾಣಿಕ ಅವರು ೧೯೯೪ರ ಸೆಪ್ಟಂಬರ್ ೫ ರಂದು ನಿಧನರಾದರು.
ಇವರು ಬರೆದ ಕೃತಿಗಳೆಂದರೆ ರಜತ ರೇಖೆ (ಪ್ರಸಾರ ನಾಟಕಗಳು) ಶರಣ ಚರಿತಾಮೃತ (ಜೀವನ ಚರಿತ್ರೆ), ಭಾರತವೀರ (ಮೂರು ಅಂಕಗಳ ನಾಟಕ) ತ್ರಿಭುವನಮಲ್ಲ (ಐತಿಹಾಸಿಕ ಕಾದಂಬರಿ), ಸಿದ್ದರಾಮ, ಹರ್ಡೇಕರ್ ಮಂಜಪ್ಪ, ಮಿರ್ಜಾಗಾಲಿಬ್ (ಜೀವನ ಚರಿತ್ರೆಗಳು) 'ಸುಬೋಧಸಾರ' (ಸಂಪಾದಿತ ಕೃತಿ) ಆತ್ಮಾರ್ಪಣ (ರಂಗನಾಟಕ), ತುಪ್ಪಾ ರೊಟ್ಟಿಗೆ ಗೇ ಗೇ, ಗಿಲ್ ಗಿಲ್ ಗಿಲಗಚ್ಚಿ, ತಿರುಗಿ ತಿರುಗಲೆ ತಿರುಗುಯ್ಯಾಲೆ (ಶಿಶು ಸಾಹಿತ್ಯ), ಕಾವ್ಯಾನಂದ, ಮಾನಸ ಸರೋವರ, ವಚನೋಧ್ಯಾನ, ಕರುಣಾ ಶ್ರವಣ, ಮೊದಲು ಮಾನವನಾಗು, ಜಲಪಾತ ಮುಂತಾದವು.
‘ಸುವರ್ಣ ಸಂಪುಟ' ಕೃತಿಯಲ್ಲಿ ಇವರ ನಾಲ್ಕು ಕವನಗಳು (ಮೋಡ, ಕವನ ಜನನ, ಬಯಲಾಟ, ಬಾ ದುಃಖವೇ) ಪ್ರಕಟವಾಗಿವೆ. ಅವುಗಳಿಂದ ೨ ಕವನಗಳನ್ನು ಆಯ್ದು ಪ್ರಕಟ ಮಾಡುತ್ತಿದ್ದೇವೆ. ಓದಿ ಎಂದಿನಂತೆ ಅಭಿಪ್ರಾಯವನ್ನು ತಿಳಿಸಬೇಕಾಗಿ ಕೋರಿಕೆ.
ಮೋಡ
ಹುಬ್ಬು ಹಾರಿಸುತಿಹುದು ಮಿಂಚಿನಲಿ ಮೋಡ-
ಶೃಂಗಾರ ಚೇಷ್ಟೆಯಿದು ಯಾರ ಕೂಡ?
ಬಿಳುಪಾಯ್ತು, ಕಪ್ಪಾಯ್ತು, ಕೆಂಪಾಯ್ತು ಮೋಡ !
ಕ್ಷಣಕೊಂದು ರೂಪಾಯ್ತು-ಯಾರ ಕೈವಾಡ?
ಮುಳುಗುತಿವೆ, ಮೂಡುತಿವೆ, ಓಡುತಿವೆ ಮೋಡ !
ಸೇರಲಿಕೆ ಹೊರಟಿಹವು ಯಾವ ನಾಡ?
ಗುಡುಗುತಿದೆ, ಗದರುತಿದೆ, ಕಂಪಿಸುತ ಮೋಡ-
ಈ ಸಿಂಹ ಕೆರಳಿಸಿದನದಾವ ಬೇಡ?
ಬಯಲ ಕಡಲಿನ ಹಡಗೊ ಮೀನವೋ ಮೋಡ?
ಕಟ್ಟಿಹವೊ ತಾರೆಗಳು ಗೊಂಬೆಯಾಟಕೆ ಗೂಡ?
ಶಶಿ ತಾರೆಯರ ಕಣ್ಣುಮುಚ್ಚಾಲೆ ನೋಡ-
ಆಗಿಹುದು ಅಡಗಲಿಕೆ ಕರುಮಾಡ ಮೋಡ !
ಕರಗಿತದೊ, ಕರಗಿತದೊ, ಸುರಿಯುತಿದೆ ಮೋಡ !
ಕಂಡು ಕನಿಕರ ಬಂತೆ ಈ ಜಗದ ಪಾಡ?
***
ಕವನ ಜನನ
ಬಗೆಯ ಬಾನಲಿ ಬಣ್ಣವೇಳರ
ಬಿಲ್ಲ ದಿಬ್ಬಣ ಸಾಗಿದೆ
ಎಲ್ಲೊ ಒಂದೆಡೆ ಭಾವ ಬುದ್ಧಿಯು
ಹಸೆಗೆ ನಿಲ್ಲುವ ಹಾಗಿದೆ
ನೀಲಮೇಘದ ಮೇಣೆ ನೂರಿವೆ
ಹೊತ್ತು ಮಿಂಚಿನ ಹೆಂಗಳ
ಎನಿತೊ ದಿನಗಳು ಕಳೆದ ಮೇಲಿದೊ
ಮತ್ತೆ ಮಸಗಿದೆ ಮಂಗಳ
ಹಿಂದೆ ಮುಂದೆಡಬಲದಿ ನಡೆದಿದೆ
ರಜತ ರಶ್ಮಿಯ ಲಾಸ್ಯವು
ಮೇಣೆ ಮೇಣೆಗೆ ಇಣುಕಿ ನೋಡುವ
ಮಿಂಚಿನಂಗನೆಯಾಸ್ಯವು
ಬಣ್ಣಬಣ್ಣದ ಹಕ್ಕಿಗಳ ಬಾ-
ವುಟಗಳೇಸೋ ನಭದಲಿ
ಚೆಂದವೆಲ್ಲೆಡೆ ಚಲ್ಲವರಿದಿದೆ
ಶೋಭೆ ಸೇರಿದೆ ಶುಭದಲಿ
ಹೊಳೆವ ತುಂತುರ್ವನಿಯೆ ಅಕ್ಷತೆ
ಸಾಂಧ್ಯಸ್ವರ್ಣಿಮೆ ಅರಶಿನ
ಹೊಂಗದಿರ ಮಾಂಗಲ್ಯ, ಸಂಜೆಯ
ಕೆಂಪು ಕುಂಕುಮ ಚಂದನ
ಬಗೆಯ ಬಾನಲಿ ಬಣ್ಣವೇಳರ
ಬಿಲ್ಲ ದಿಬ್ಬಣ ಸಾಗಿದೆ
ಎಲ್ಲೊ ಒಂದೆಡೆ ಭಾವ ಬುದ್ಧಿಯು
ಹಸೆಗೆ ನಿಲ್ಲುವ ಹಾಗಿದೆ
***
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನಗಳು)