‘ಸುವರ್ಣ ಸಂಪುಟ' (ಭಾಗ ೧೨) - ಅನಂತಪದ್ಮನಾಭ ರಾವ್
‘ಸುವರ್ಣ ಸಂಪುಟ' ಪುಸ್ತಕದಿಂದ ಕಳೆದ ವಾರ ಆಯ್ದ ಕವಿ ಬೆಟಗೇರಿ ಕೃಷ್ಣ ಶರ್ಮ ಅವರ ಕವನಗಳ ಬಗ್ಗೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಯೊಬ್ಬ ಕವಿಯ ಬರವಣಿಗೆಯ ಧಾಟಿ ಬೇರೆ ಬೇರೆ ಬಗೆಯದ್ದಾಗಿರುತ್ತದೆ. ಆದುದರಿಂದ ಯಾವ ಕವಿಯ ಕವಿತೆಗಳನ್ನು ಓದಿದರೂ ಹೊಸದಾದ ಅನುಭವ ನೀಡುತ್ತದೆ. ಈ ವಾರ ನಾವು ಆಯ್ಕೆ ಮಾಡಿದ ಕವಿ ಅನಂತಪದ್ಮನಾಭ ರಾವ್. ಇವರ ಬಗ್ಗೆ ತಿಳಿದವರು ಕಡಿಮೆ. ಬಹಳ ಹುಡುಕಾಟದ ಬಳಿಕ ಅನಂತಪದ್ಮನಾಭ ರಾವ್ ಬಗ್ಗೆ ಸ್ವಲ್ಪ ಮಾಹಿತಿ ದೊರೆತಿದೆ.
ಅನಂತಪದ್ಮನಾಭ ರಾವ್: ಮೈ.ಶೇ. ಅನಂತಪದ್ಮನಾಭ ರಾವ್ ಅಥವಾ ಮೈಶೇಅ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಕೊಡಗಿನ ಅನಂತಪದ್ಮನಾಭ ರಾವ್ ಅವರು ‘ಕಲ್ಕಿ' ಎಂಬ ಹೆಸರಿನಿಂದಲೂ ಕವನ ಹಾಗೂ ಬರಹಗಳನ್ನು ಬರೆಯುತ್ತಿದ್ದರು. ೬ ಸೆಪ್ಟೆಂಬರ್ ೧೯೦೩ರಲ್ಲಿ ಮೈಸೂರಿನಲ್ಲಿ ಹುಟ್ಟಿದರು. ಇವರ ಕುಟುಂಬ ಕೊಡಗಿಗೆ ವಲಸೆ ಬಂದ ಕಾರಣದಿಂದ ಇವರ ವಿದ್ಯಾಭ್ಯಾಸವೆಲ್ಲಾ ಮಡಿಕೇರಿಯಲ್ಲೇ ಆಯಿತು. ಮಡಿಕೇರಿಯ ಸೆಂಟ್ರಲ್ ಹೈಸ್ಕೂಲ್ ನಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುವಾಗ ಇವರಿಗೆ ಗುರುವಾಗಿ ಬಂದವರು ಖ್ಯಾತ ಸಾಹಿತಿ ಪಂಜೆ ಮಂಗೇಶರಾಯರು. ಪಂಜೆಯವರಿಗೆ ಅನಂತಪದ್ಮನಾಭ ರಾವ್ ಅವರೇ ಮೊದಲ ವಿದ್ಯಾರ್ಥಿ. ಇವರಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಹೊರತೆಗೆಯುವಲ್ಲಿ ಪಂಜೆಯವರ ಕಾರ್ಯ ದೊಡ್ಡದು.
ಅನಂತಪದ್ಮನಾಭ ಇವರು ಗಮಕ ಕಲೆಯಲ್ಲೂ ಪ್ರವೀಣರು. ೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ಅನಂತಪದ್ಮನಾಭ ರಾವ್ ಅವರು ಬಹಳ ಮುತುವರ್ಜಿಯಿಂದ ಕನ್ನಡಮ್ಮನ ಸೇವೆ ಮಾಡಿದ್ದರು. ಇದು ಆ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಿ.ವಿ.ಜಿ.ಯವರ ಗಮನಕ್ಕೂ ಬಂತು. ಅದೇ ಕಾರಣದಿಂದ ಅವರು ಸಮ್ಮೇಳನದ ನಂತರ ಮಡಿಕೇರಿಯಲ್ಲಿ ಕೊಡಗು ಕರ್ನಾಟಕ ಸಂಘ ಸ್ಥಾಪಿಸಿ ಅನಂತಪದ್ಮನಾಭರನ್ನೇ ಸಂಚಾಲಕರನ್ನಾಗಿ ಮಾಡಿದರು. ಆ ಸಮಯದಲ್ಲಿ ಕೊಡಗಿನಲ್ಲಿ ಯಾವುದೇ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೂ ಅದು ಅನಂತಪದ್ಮನಾಭ ರಾಯರ ಉಸ್ತುವಾರಿಯಲ್ಲೇ ನಡೆಯುವುದು ಸಾಮಾನ್ಯ ಸಂಗತಿಯಾಗಿತ್ತು.
ಅನಂತಪದ್ಮನಾಭರು ಪ್ರಾರಂಭದಲ್ಲಿ ಸಣ್ಣ ಕಥೆಗಳನ್ನು ಬರೆದರೂ, ನಂತರ ಕವನ, ಮಹಾ ಕಾವ್ಯದತ್ತ ಗಮನವನ್ನು ಕೇಂದ್ರೀಕರಿಸಿದರು. ಗಮಕ ಸಾಹಿತ್ಯಕ್ಕೆ ಇವರು ಸಲ್ಲಿಸಿದ ಸೇವೆಯನ್ನು ಗಮನಿಸಿ ಕರ್ನಾಟಕ ಗಮಕ ಕಲಾ ಪರಿಷತ್ತು ಇವರನ್ನು ರಾಜ್ಯ ಮಟ್ಟದ ಪ್ರಥಮ ಗಮಕ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರನ್ನಾಗಿ ನೇಮಿಸಿತು. ಅದೇ ಸಂದರ್ಭದಲ್ಲಿ ಇವರಿಗೆ ‘ಗಮಕ ರತ್ನಾಕರ' ಎಂಬ ಬಿರುದನ್ನೂ ನೀಡಿ ಗೌರವಿಸಲಾಯಿತು.
ಶ್ರೀ ಕಾವೇರಿ ಕಥಾಮೃತಮ್, ಮೀರಾಬಾಯಿ, ಕಬೀರ್ ದಾಸ್, ಕರ್ಣ, ಕನ್ನಡ ತುಲಸೀ ರಾಮಾಯಣ, ವಿಶ್ವಾಮಿತ್ರ, ಕರ್ನಾಟಕ ಭಾರತ ಕಥಾ ಮಂಜರಿ, ಶ್ರೀಕೃಷ್ಣ ಚರಿತಾಮೃತಂ ಇತ್ಯಾದಿ ಅನಂತಪದ್ಮನಾಭ ರಾಯರ ಆಯ್ದ ಕೃತಿಗಳು. ಇವರು ೨೯ ನವೆಂಬರ್ ೧೯೮೭ರಲ್ಲಿ ನಿಧನ ಹೊಂದಿದರು.
ಅನಂತಪದ್ಮನಾಭ ರಾವ್ ಅವರ ಆಯ್ದ ಕವನ:
ಕೃಷ್ಣಗಿರಿ ಕೃಷ್ಣರಾಯಗೆ
ಕುಮಾರವ್ಯಾಸನ ವಾಣಿಯ ನುಡಿಯುವ
ವೀಣೆಯು -ಗಮಕದ ಶಾಸ್ತ್ರಜ್ಞಾನ
ಆ ಕವಿಕಾವ್ಯದ ದಿವ್ಯ ಧ್ವನಿಯಾ
ಕೃಷ್ಣನ ಹೃದಯದ ಗಾನದ ತಾನ-
ಕುಮಾರವ್ಯಾಸನ ದೇಗುಲ ಕೃಷ್ಣನ
ಹಾಡುವ ಸೊಬಗಿನ ಹೃದಯ ನವೀನ
ಆ ಕವಿಯಗ್ಗಳಿಕೆಗಳಂ ಸಾಧಿಸಿ
ಶೋಧಿಸುತುಣಿಸುವ ಮಧುರಸ ಪಾನ.
ಎಲ್ಲಿದೆ ಜೀವ ಎಲ್ಲಿದೆ ಭಾವ
ಮೌನದ ಮಾತನು ಕುಣಿಸುವನಾವ-
ಸಂಗೀತದ ದನಿಯಿಂದಲಿ ಕೂಡಿಸಿ
ರಸಕಳೆ ತುಂಬುವ ಶಬ್ದದ ಜೀವ.
ಆ ಕವಿಯಿತ್ತನು ಮಾತಿನ ಮುತ್ತು
ಕೃಷ್ಣನ ಕೊರಳಿನ ಗಾನದ ಬಿತ್ತು.
ಕೇಳುವ ಹೃದಯವ ಮಿಡಿಯುವ ಗತ್ತು
ಪ್ರಾಣವನಾಡಿಪ ಪರಿಣತಿಯಿತ್ತು.
ಎಲ್ಲರನೊಂದೇ ಹೃದಯದಿ ತೋರುವ
ಸರ್ವರ ದೃಷ್ಟಿಗೆ ನೈಜವ ತರುವ
ಕೃಷ್ಣನ ಲೀಲೆಗಳೆಲ್ಲವ ತುಂಬುವ
ಭಾರತ ಚರಿತೆಯ ಹಾಡುವನಾವ.
(ಸುವರ್ಣ ಸಂಪುಟದಿಂದ ಸಂಗ್ರಹಿತ)