‘ಸುವರ್ಣ ಸಂಪುಟ' (ಭಾಗ ೧೩) - ಎಲ್. ಗುಂಡಪ್ಪ

‘ಸುವರ್ಣ ಸಂಪುಟ' (ಭಾಗ ೧೩) - ಎಲ್. ಗುಂಡಪ್ಪ

ಕಳೆದ ವಾರ ಪ್ರಕಟ ಮಾಡಿದ ಕವಿ ಹಾಗೂ ಗಮಕಿ ಅನಂತಪದ್ಮನಾಭ ರಾವ್ ಅವರ ‘ಕೃಷ್ಣಗಿರಿ ಕೃಷ್ಣರಾಯಗೆ' ಕವನ ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿದೆ. ಈ ವಾರ ನಾವು ಆಯ್ದು ಕೊಂಡ ಕವಿ ಎಲ್. ಗುಂಡಪ್ಪ. ಇವರು ಓರ್ವ ಖ್ಯಾತ ಸಾಹಿತಿ ಹಾಗೂ ಕವಿ. ಇವರ ಪುಟ್ಟ ಪರಿಚಯ ಹಾಗೂ ಇವರು ರಚಿತ ಕವನವನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಓದುವ ಸುಖ ನಿಮ್ಮದಾಗಲಿ…

ಎಲ್. ಗುಂಡಪ್ಪ: ೮ ಜನವರಿ ೧೯೦೩ರಲ್ಲಿ ಲಿಂಗಣ್ಣಯ್ಯ ಹಾಗೂ ಚೆನ್ನಮ್ಮ ದಂಪತಿಗಳ ಮಗನಾಗಿ ಹುಟ್ಟಿದರು. ಇವರ ಪ್ರಾಥಮಿಕ ವಿದ್ಯಾಭ್ಯಾಸವು ಬೇಲೂರಿನಲ್ಲಿ ನಡೆಯಿತು. ವೇದಗಳು ಹಾಗೂ ಸಂಸ್ಕೃತ ಪಾಠದ ಅಭ್ಯಾಸವನ್ನೂ ಮಾಡಿದರು. ಮುಂದಿನ ಅಭ್ಯಾಸಕ್ಕಾಗಿ ಇವರು ಚಿಕ್ಕಮಗಳೂರಿಗೆ ತೆರಳಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತಮ್ಮ ಉನ್ನತ ವ್ಯಾಸಂಗ ಮಾಡಿದರು. ಇವರು ಕನ್ನಡದ ಹಿರಿಯ ಸಾಹಿತಿ ಬಿ.ಎಂ.ಶ್ರೀಕಂಠಯ್ಯನವರಿಂದ ಬಹಳ ಪ್ರಭಾವಿತರಾಗಿದ್ದರು. ಇವರ ಮಾರ್ಗದರ್ಶನದಲ್ಲಿ ತಮ್ಮ ಬದುಕನ್ನು ರೂಪಿಸಿಕೊಂಡರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದ ಉಪನ್ಯಾಸಕರಾಗಿ ವೃತ್ತಿ ಜೀವನ ನಡೆಸಿದರು. 

ಶಾರದಾ ಎಂಬವರನ್ನು ಧರ್ಮ ಪತ್ನಿಯಾಗಿ ಸ್ವೀಕರಿಸಿದ ಇವರಿಗೆ ಏಳು ಮಂದಿ ಮಕ್ಕಳು. ಇವರಿಗೆ ತಮಿಳು ಭಾಷೆಯಲ್ಲಿ ಪಾರಮ್ಯತೆ ಇದ್ದ ಕಾರಣ ಹಲವಾರು ತಮಿಳು ಕಾವ್ಯಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಿದ್ದಾರೆ. ಸುಮಾರು ೫೧ ಕೃತಿಗಳನ್ನು ರಚಿಸಿದ್ದಾರೆ. ಚಟಾಕಿ ಮತ್ತು ಇತರ ಕವನಗಳು ಇವರ ಖ್ಯಾತ ಕವನ ಸಂಕಲನ. ಕನ್ನಡಿ ಸೇವೆ, ತಮಿಳು ಪುರಾತನ ಕಥೆಗಳು ಮತ್ತು ಹರಿಹರನ ರಗಳೆಗಳು (ಪ್ರಬಂಧ), ಸರ್ವಜ್ಞ ಮತ್ತು ತಿರುವಳ್ಳುವರ್, ಯುದ್ಧ ಸಿದ್ಧತೆ ಹಾಗೂ ವ್ಯೂಹ ರಚನೆ (ಪ್ರಬಂಧ), ಕವಿ ವಾಣಿ, ಪಂಪ ಪರಿಚಯ, ಪಂಪ ಹಿತವಚನಗಳು, ಅರುಂಧತಿ (ಹಳೆ ಕಾವ್ಯ), ಕುಂಭ ರಾಮಾಯಣ (ಪ್ರಬಂಧ), ನಾಡ ಪದಗಳು (ಸಂಪಾದನೆ), ನಳ ಚರಿತ್ರೆ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. 

ಇವರಿಗೆ ೧೯೩೦ರಲ್ಲಿ ಬಿ.ಎಂ.ಶ್ರೀ. ಸ್ಮಾರಕ ಸ್ವರ್ಣ ಪದಕ, ೧೯೩೫ರಲ್ಲಿ ದೇವರಾಜ ಬಹಾದ್ದೂರ್ ಪ್ರಶಸ್ತಿ, ತಮಿಳು ಬರಹಗಾರರ ಸಂಘದ ಪ್ರಶಸ್ತಿ (೧೯೫೬), ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೫) ಮೊದಲಾದ ಗೌರವಗಳು ಲಭಿಸಿವೆ. ೧೯೮೬ರಲ್ಲಿ ಗುಂಡಪ್ಪನವರು ನಿಧನ ಹೊಂದಿದರು. 

ಎಲ್. ಗುಂಡಪ್ಪ ಅವರ ಆಯ್ದ ಕವನ:

ಚಟಾಕಿ

ಅಪ್ಪನ ಜೇಬಿನ ದುಡ್ಡುಗಳೆಲ್ಲ

ಚಟಪಟಗುಟ್ಟುತ ಸಿಡಿಯುವುವು.

ಒಪ್ಪದ ನೀತಿಯ ಮಾತುಗಳೆಲ್ಲ

ತಟ್ಟನೆ ದಾರಿಯ ಹಿಡಿಯುವುವು.

 

ಬಗೆಬಗೆ ಬಣ್ಣದ ಹೂಗಳ ರೂಪದಿ 

ಹಾರುತ ಬುಸುಬುಸುಗುಟ್ಟುವುವು

 

ಉರಿಯನು ಸುರಿಸುತ, ಮೊರೆಯುತ, ತಿರುಗುತ,

ಸರಸರನೆಲ್ಲೆಡೆ ಹರಿಯುವುವು,

ಸರುವರ ಕಿವಿಗಳ ಕೊರೆಯುವುವು :

ಮೂಗಿನ ಸೆಲೆಗಳನೊಡೆಯುವುವು;

 

ಸಾರವ ತೊರೆಯುತ ಕಡೆಯಲಿ ಕಪ್ಪಗೆ

ನೆಲದಲಿ ಧೊಪ್ಪನೆ ಕೆಡೆಯುವುವು,

ಅಜ್ಜನ ಮಡಿಯನು ತೊಡೆಯುವುವು

ಅಪ್ಪನ ಜೇಬುಗಳೊಡೆಯುವುವು

ಸಿಡಿಯುವುವು.

 

ಕರ್ಬೊಗೆಯ ಮೈವೊಗರ ಹಬ್ಬಿಸುತ ಜಗಕೆ

ಮಬ್ಬ ಕವಿಸುತ ಬರುವ ದೇವಿ ಯಾರಿವಳು?

ಕೆಂಜಡೆಯನಡಿಗಡಿಗೆ ಕೊಡಹುತ್ತಲಿಹಳು ;

ಕಿಡಿಗಣ್ಣ ಬಿರುಬಿರನೆ ತಿರುಗಿಸುತಲಿಹಳು

ಉರಿಯ ನಾಲಗೆಗಳನು ಮುಂದೆ ಚಾಚಿಹಳು,

ತನಿಗೆಂಡದುಂಡೆಗಳ ತಾನುಗುಳುತಿಹಳು

ಸಿಡಿಲ ನಡುಗಿಸುವಂತೆ ಬೊಬ್ಬಿರಿಯುತಿಹಳು

ಕುಲಗಿರಿಗಳೊಡೆವಂತೆ ಅಡಿಯಿಡುತಲಿಹಳು

ಯುದ್ಧ ನರ್ತನದಿಂದ ಮತ್ತಳಾಗಿಹಳು-

ಘೋರರೂಪದ ಕಾಳಿದೇವಿಯಿವಳು

 

ಈ ಕರಾಳಿಯ ಕಂಡು ನಡುಗಿದನೊಡನೆ ನೆಲದಲಿ ಕೆಡೆದೆನು,

ಧೈರ್ಯವುಡುಗಲು ಸಣ್ಣದನಿಯೊಳಗಿನಿತು ಬೇಡುತ ನುಡಿದೆನು-

“ತಾಯಿ ಕೃಪೆಯಲಿ ಕಾಯಿ ನಮ್ಮನು. ನಿನ್ನ ರೂಪವ ನೋಡಲು

ನಡುಗಿ ನಮ್ಮದೆ ತಡೆಯದೊಡೆವುದು ; ಸೌಮ್ಯರೂಪವ ತೋರಿಸು.

 

(ದೀರ್ಘವಾದ ಕವನವನ್ನು ಸಂಕ್ಷಿಪ್ತಗೊಳಿಸಲಾಗಿದೆ)

-ಸುವರ್ಣ ಸಂಪುಟದ ಕೃಪೆಯಿಂದ ಸಂಗ್ರಹಿತ