‘ಸುವರ್ಣ ಸಂಪುಟ' (ಭಾಗ ೧೪) - ಮಧುರ ಚೆನ್ನ

‘ಸುವರ್ಣ ಸಂಪುಟ' (ಭಾಗ ೧೪) - ಮಧುರ ಚೆನ್ನ

ಕಳೆದ ವಾರ ಕವಿ ಎಲ್ ಗುಂಡಪ್ಪನವರ ‘ಚಟಾಕಿ' ಕವನವನ್ನು ಸಂಕ್ಷಿಪ್ತಗೊಳಿಸಿ ಪ್ರಕಟಿಸಿದ್ದಕ್ಕೆ ಬಹಳಷ್ಟು ಜನ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಆದರೆ ಕವನ ತುಂಬಾ ದೀರ್ಘವಾಗಿರುವುದರಿಂದ ನಮಗೂ ಅದನ್ನು ಸಂಕ್ಷಿಪ್ತಗೊಳಿಸುವುದು ಅನಿವಾರ್ಯವಾಯಿತು. ಮುಂದಿನ ದಿನಗಳಲ್ಲಿ ಎಲ್ಲಾ ಕವಿಗಳ ಕವನಗಳನ್ನು ಪೂರ್ತಿ ಪ್ರಕಟಿಸುವ ಇರಾದೆ ಇದೆ. ಇದರಿಂದ ಕವನವನ್ನು ಓದಿ ಆಸ್ವಾದಿಸಲು ಅನುಕೂಲವಾಗುತ್ತದೆ ಅಲ್ಲವೇ? ಈ ವಾರ ನಾವು ಆಯ್ದು ಕೊಂಡ ಕವಿ'ಮಧುರ ಚೆನ್ನ'

ಮಧುರ ಚೆನ್ನ: ಕನ್ನಡ ಸಾಹಿತ್ಯ ಲೋಕಕ್ಕೆ ‘ಮಧುರ ಚೆನ್ನ' ಎಂದೇ ಖ್ಯಾತಿ ಪಡೆದ ಚೆನ್ನಮಲ್ಲಪ್ಪ ಸಿದ್ದಲಿಂಗಪ್ಪ ಗಲಗಲಿಯವರು ಹುಟ್ಟಿದ್ದು ಜುಲೈ ೩೧, ೧೯೦೩ರಲ್ಲಿ. ಇವರು ವಿಜಯಪುರ (ಬಿಜಾಪುರ) ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಹುಟ್ಟಿದರು. ಇವರ ತಂದೆ ಸಿದ್ಧಲಿಂಗಪ್ಪ ಹಾಗೂ ತಾಯಿ ಅಂಬವ್ವ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಚೆನ್ನಮಲ್ಲಪ್ಪ ತಾಯಿಯ ಆಸರೆಯಲ್ಲೇ ಬೆಳೆದರು. ಇವರು ಮುಲ್ಕಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರು. ಕನ್ನಡ ನವೋದಯದ ಕಾಲದ ಪ್ರಮುಖ ಸಾಹಿತಿ ಇವರು. ಇವರು ಕಲಿಕೆಯಲ್ಲಿ ಮುಂದೆ ಇದ್ದರೂ ಮನೆಯ ಆರ್ಥಿಕ ಪರಿಸ್ಥಿತಿ ಇವರ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವಂತೆ ಮಾಡಿತು. 

ನಂತರದ ದಿನಗಳಲ್ಲಿ ಇವರು ಬಿಜಾಪುರಕ್ಕೆ ತೆರಳಿ ಕೊಣ್ಣೂರು ಹನುಮಂತರಾಯ ಎಂಬರಿಂದ ಸ್ವಲ್ಪ ಮಟ್ಟಿಗೆ ಇಂಗ್ಲೀಷ್, ಸಂಸ್ಕೃತ ಮತ್ತು ಹಳೆ ಕನ್ನಡವನ್ನು ಕಲಿತರು. ಇವರಿಗೆ ೧೬ನೆಯ ವಯಸ್ಸಿನಲ್ಲಿ ಬಸಮ್ಮ ಎಂಬ ೧೨ ವರ್ಷದ ಹುಡುಗಿಯ ಜೊತೆ ವಿವಾಹವಾಯಿತು. ಇವರಿಗೆ ೬ ಮಂದಿ ಹುಡುಗರು ಹಾಗೂ ೨ ಮಂದಿ ಹೆಣ್ಣು ಮಕ್ಕಳು. 

ಚೆನ್ನಮಲ್ಲಪ್ಪನವರು ಪ್ರಾರಂಭದಲ್ಲಿ ಶಿಲಾಶಾಸನಗಳು ಹಾಗೂ ಜಾನಪದ ಸಾಹಿತ್ಯದ ಕಡೆಗೆ ಅಧಿಕ ಒಲವು ತೋರಿಸಿದರು. ತಮ್ಮ ಊರಾದ ಹಲಸಂಗಿಯಲ್ಲಿ ಗೆಳೆಯರ ಬಳಗ ಕಟ್ಟಿದರು. ಈ ಬಳಗ ಮುಂದೆ ‘ಹಲಸಂಗಿ ಗೆಳೆಯರು' ಎಂದೇ ಖ್ಯಾತಿ ಪಡೆಯಿತು. ಇವರು ಸಂಗ್ರಹಿಸಿದ ಗರತಿಯ ಹಾಡು, ಲಾವಣಿಗಳು, ಮಲ್ಲಿಗೆ ದಂಡೆ ಮತ್ತು ಜೀವನ ಸಂಗೀತ (ಜಾನಪದ ಸಾಹಿತ್ಯ) ಇವುಗಳು ಇಂದಿಗೂ ಅನುಪಮ ಕೊಡುಗೆಗಳಾಗಿ ಉಳಿದುಕೊಂಡಿವೆ. ಇವರ ಗೆಳೆಯರ ಬಳಗದಲ್ಲಿ ಸಿಂಪಿ ಲಿಂಗಣ್ಣ, ಕಾಪಸೆ ರೇವಪ್ಪ, ಪಿ.ಧೂಲಾ ಮೊದಲಾದ ಖ್ಯಾತನಾಮರು ಇದ್ದರು. 

ಮಧುರ ಚೆನ್ನರು ನನ್ನ ನಲ್ಲ (ಕವನ ಸಂಕಲನ), ಪೂರ್ವ ರಂಗ (ಆಧ್ಯಾತ್ಮಿಕ ಆತ್ಮ ಕಥನ), ನನ್ನ ನಲ್ಲ, ಕಾಳರಾತ್ರಿ, ಬೆಳಗು, ಆತ್ಮ ಸಂಶೋಧನೆ ( ಸ್ವಾನುಭವ ಕಥನ), ಪೂರ್ಣ ಯೋಗದ ಪಥದಲ್ಲಿ (ಶ್ರೀ ಅರವಿಂದರ ಯೋಗ ವಿಚಾರಗಳು) ಹಾಗೂ ಕನ್ನಡಿಗರ ಕುಲಗುರು (ವಿದ್ಯಾರಣ್ಯರ ಜೀವನದ ಬಗ್ಗೆ ಸಿಂಪಿ ಲಿಂಗಣ್ಣರ ಜೊತೆ ಸೇರಿ ರಚನೆ) ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರು ಸುಮಾರು ೨೨ ಭಾಷೆಗಳನ್ನು ಬಲ್ಲವರಾಗಿದ್ದರು. ಈ ಕಾರಣದಿಂದಾಗಿ ಹಲವಾರು ಕೃತಿಗಳನ್ನು ವಿವಿಧ ಭಾಷೆಗಳಿಂದ ಅನುವಾದ ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾದುವು ವಿಸರ್ಜನ (ರವೀಂದ್ರನಾಥ ಠಾಗೋರರ ಬಂಗಾಲಿ ನಾಟಕ), ಬಾಳಿನಲ್ಲಿ ಬೆಳಕು (ಲಿಯೋ ಟಾಲ್ ಸ್ಟಾಯ್ ಅವರ ಕೃತಿ) ಹಾಗೂ ಮಾತೃವಾಣಿ ( ಶ್ರೀ ಮಾತೆಯವರ ‘ ವರ್ಡ್ಸ್ ಆಫ್ ದಿ ಮದರ್)

ಇವರು ಶ್ರೀ ಅರವಿಂದರನ್ನು ತಮ್ಮ ಗುರುಗಳನ್ನಾಗಿ ಮನಸ್ಸಿನಲ್ಲೇ ಭಾವಿಸಿದ್ದರು. ಮಧುರ ಚೆನ್ನರು ತಮ್ಮ ೫೦ನೆಯ ವಯಸ್ಸಿನಲ್ಲಿ ೧೯೫೩ರ ಆಗಸ್ಟ್ ೧೫ರಂದು ನಿಧನ ಹೊಂದಿದರು. ಜೀವನದ ಕೊನೆಯ ದಿನಗಳಲ್ಲಿ ಅವರು ಆಧ್ಯಾತ್ಮದತ್ತ ತಮ್ಮ ಮನಸ್ಸನ್ನು ಕೇಂದ್ರೀಕರಿಸಿದ್ದರು. 

ಮಧುರ ಚೆನ್ನರ ಎರಡು ಆಯ್ದ ಕವಿತೆಗಳು:

ಕವನ ೧ - ನೋಂಪಿ

ಹತ್ತೂ ನಿಟ್ಟಿಗೆ

ಹೊತ್ತಿಸಿ ಉರಿಯನು

ನಿತ್ತೆನು ನಾ ಕಿತ್ತಡಿಯಾಗಿ

ಹತ್ತು ನಿಟ್ಟಿಗೆ

ಹೊತ್ತಿಸಿ ಉರಿಯನು

ಕುತ್ತೆನು ನಾ ಮಾಸತಿಯಾಗಿ

 

ಪಡೆದರೆ ಸರಿಯೇ

ಮಡಿದರು ಸರಿಯೇ

ಮುಡಿಸುವೆ ಹರಣವನೆಡೆಯಾಗಿ

ಪಡೆದರು ಸರಿಯೇ

ಮಡಿದರು ಸರಿಯೇ

ಮುಡಿಸುವೆ ಮೈ ಮಲ್ಲಿಗೆಯಾಗಿ

 

ಮನಸಿನ ಮಾತಿದು

ಮನದಂತಾದರೆ 

ಮನುವಿನ ಮಗ ನಾನಾಗುವೆನು

ಮನಸಿನ ಮಾತಿದು

ಮನದಂತಾದರೆ

ಪ್ರನವ ಸುಮಂಗಲೆಯಾಗುವೆನು

 

ನೆನಸಿನ ಕೋರಿಕೆ

ಕನಸೇ ಆದರೆ 

ತನು ನಿಸಿದಿಗೆಗಲ್ಲಾಗುವದು

ನೆನಸಿನ ಕೋರಿಕೆ

ಕನಸೇ ಆದರೆ

ಮನ ಮಾಸ್ತಿಯ ಕಲ್ಲಾಗುವದು

 

ಕಲ್ಲಾದರು ಸರಿ

ಹುಲ್ಲಾದರು ಸರಿ

ಬಲ್ಲಂದದ ಬಳಲಿಕೆ ಸಾಕು

ಕಲ್ಲಾದರು ಸರಿ

ಹುಲ್ಲಾದರು ಸರಿ

ಎಲ್ಲಂದದ ಏಳಿಕೆ ಸಾಕು

***

ಕವನ ೨ - ಸಿಡಿಲು

ಹಣ್ಣು ಬಿತ್ತು ಹಣ್ಣು ಬಿತ್ತು,

ಇಂದ್ರವನದ ಹಣ್ಣು ಬಿತ್ತು.

ಅಲ್ಲಿ ಬಿತ್ತು ಇಲ್ಲಿ ಬಿತ್ತು,

ಎಲ್ಲಿ ಬಿತ್ತು? ಇಲ್ಲೆ ಬಿತ್ತು.

 

ಆಚೆಗಿಡದ ಕೆಳಗೆ ಕೆಲರು

ಈಚೆಗಿಡದ ಬುಡಕೆ ಕೆಲರು

ಅಲ್ಲಿ ಕೆಲರು ಇಲ್ಲಿ ಕೆಲರು,

ಅಲ್ಲಿಯಿಲ್ಲಿ ಎಲ್ಲೊ ಕೆಲರು.

 

ಗಾಳಿ ಉಕ್ಕಿ ಒದರಿತಾಗ

ಗಿಡದ ಸಾಲು ಅಧುರಿತಾಗ

ಅತ್ತ ಇತ್ತ ಅಂಧಕಾರ,

ನೋಡಿದತ್ತ ದುಂದುಕಾರ.

 

ಲೋಕವೆಲ್ಲ ಮೊಬ್ಬುವರಿದು

ಸರುವ ಜನದ ಮೊಬ್ಬು ಹರಿದು

ದೊಡ್ದದೊಂದು ಸಪ್ಪುಳಾಗಿ,

ಜಗದ ಮೋರೆ ಸಪ್ಪಗಾಗಿ.

 

ಗಗನ ಪೃಥ್ವಿ ಏಕವಾಗಿ 

ಲೋಕ ಕಕ್ಕವಿಕ್ಕಿಯಾಗಿ,

ಹಣ್ಣು ಬಿತ್ತು ಹಣ್ಣು ಬಿತ್ತು,

ಇಂದ್ರವನದ ಹಣ್ಣು ಬಿತ್ತು.

 

ಬಿತ್ತು ಬಿತ್ತು ಇಲ್ಲೆ ಬಿತ್ತು.

ಲೋಕಕೆಲ್ಲ ದಿಗಿಲು ಬಿತ್ತು.

“ಇಲ್ಲೆ ಬಿತ್ತು “ “ ಇಲ್ಲೆ ಬಿತ್ತು!”

ಎಲ್ಲರಂದ “ರಿಲ್ಲೆ ಬಿತ್ತು !!”

 

ಬೇಡದವರ ಮೇಲೆ ಬಿತ್ತು

ಬೇಡಿದವರಿಗೆ ಇಲ್ಲ ತುತ್ತು

ಹಸಿಯದವರು ಹಲವು ಮಂದಿ

ಹಸಿದ ಜನರು ಕೆಲವು ಮಂದಿ.

 

ಹಸಿಯದರಿಗೆ ಅಮೃತ ವಿಷವು

ಹಸಿಯ ವಿಷವೆ ಅಮೃತರಸವು

ಬಯಸಿದವಗೆ ಬೇವೆ ಬೆಲ್ಲ

ಬಯಸದವಗೆ ಮೊದಲೆ ಹೊಲ್ಲ.

 

ಬೇಡದಲವರ ಮಗ್ಗಿ ಲಲ್ಲೆ

ಬೇಡಿಬಯಸುವವರು ಅಲ್ಲೆ

ಬೇಡಿದಲ್ಲಿ ಬೀಳಲಿಲ್ಲ

ಬೇಡದಲ್ಲಿ ಬಿದ್ದಿತಲ್ಲ!

 

ಎಲ್ಲೊ ಬಿದ್ದು ಹೋಗಲಿಲ್ಲ

ಇಲ್ಲೆ ಬಿದ್ದು ತನಗೆ ಇಲ್ಲ !!!

ಹಣ್ಣು ಬಿತ್ತು ಹಣ್ಣು ಬಿತ್ತು

ಇಂದ್ರವನದ ಹಣ್ಣು ಬಿತ್ತು !

***

(‘ಸುವರ್ಣ ಸಂಪುಟ' ಪುಸ್ತಕದಿಂದ ಸಂಗ್ರಹಿತ)