‘ಸುವರ್ಣ ಸಂಪುಟ' (ಭಾಗ ೧೫) - ಕಡೆಂಗೋಡ್ಲು ಶಂಕರ ಭಟ್ಟ

ಖ್ಯಾತ ಕವಿ ‘ಮಧುರ ಚೆನ್ನ' ಇವರ ಕವನಗಳನ್ನು ಕಳೆದ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆರಿಸಿ ನೀಡಲಾಗಿತ್ತು. ಸಂಪದದ ಹಿತೈಶಿಯಾಗಿರುವ ಹಿರಿಯರೋರ್ವರು ಇದಕ್ಕೆ ಪ್ರತಿಕ್ರಿಯೆ ನೀಡಿ ಕವನಗಳನ್ನು ಪ್ರಕಟಿಸುವುದರ ಜೊತೆಗೆ ಅದರ ಬಗ್ಗೆಯೂ ಎರಡು ಮಾತು ಬರೆದರೆ ಉತ್ತಮ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಅವರ ಭಾವನೆ ಸರಿಯಾಗಿದೆ. ಕವಿಯೋರ್ವರ ಕವನದ ಹಿಂದೆ ಅವರು ಅದನ್ನು ಬರೆದ ಸಂದರ್ಭ, ಬರೆಯಲು ಪ್ರೇರಣೆ ಹೀಗೆ ಹತ್ತು ಹಲವಾರು ವಿಷಯಗಳು ಅಡಗಿರುತ್ತವೆ. ಕವನಗಳನ್ನು ಓದುವುದೇ ಒಂದು ಸೊಗಸಾದರೆ, ಅದರ ಬಗ್ಗೆ ತಿಳಿದುಕೊಂಡು ಆಳವಾಗಿ ಅರ್ಥೈಸಿ ಓದುವುದು ಇನ್ನಷ್ಟು ಸೊಗಸು. ಆ ಹಿರಿಯರ ಮಾತುಗಳನ್ನು ನಾವು ನೆನಪಿನಲ್ಲಿ ಇರಿಸಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಯೋಚಿಸುತ್ತೇವೆ. ಬಲ್ಲವರಿಂದ ಕವನದ ಬಗ್ಗೆ ವಿಮರ್ಶೆ ಹಾಗೂ ಸೂಕ್ತವಾದ ಅರ್ಥವನ್ನು ಹುಡುಕುವ ಬಗ್ಗೆ ಪರಿಶೀಲಿಸುತ್ತೇವೆ.
ಈ ವಾರ ನಾವು ಆಯ್ದು ಕೊಂಡ ಕವಿ- ಕಡೆಂಗೋಡ್ಲು ಶಂಕರ ಭಟ್ಟ ಇವರು. ಶಂಕರ ಭಟ್ಟ ಇವರು ಆಗಸ್ಟ್ ೯, ೧೯೦೪ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಬಳಿ ಇರುವ ಪೆರುವಾಯಿ ಗ್ರಾಮದ ಕಡೆಂಗೋಡ್ಲುವಿನಲ್ಲಿ ಹುಟ್ಟಿದರು. ತಂದೆ ಈಶ್ವರ ಭಟ್ಟ ಹಾಗೂ ತಾಯಿ ಗೌರಮ್ಮ. ಶಂಕರ ಭಟ್ಟರ ಸಂಬಂಧಿಕರಾದ ಕನ್ನಡದ ಹಿರಿಯ ಸಾಹಿತಿ ಮುಳಿಯ ತಿಮ್ಮಪ್ಪಯ್ಯನವರು ಶಂಕರ ಭಟ್ಟರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದರು. ಅವರು ಮಂಗಳೂರಿಗೆ ಕರೆದುಕೊಂಡು ಬಂದು ತಮ್ಮ ಮನೆಯಲ್ಲೇ ಇದ್ದು ಕಲಿಯುವಂತೆ ವ್ಯವಸ್ಥೆ ಮಾಡಿದರು. ಕೆನರಾ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ ಶಂಕರ್ ಭಟ್ಟ ಇವರು, ಸ್ವಾತಂತ್ರ್ಯದ ಹೋರಾಟದ ಕರೆಗೆ ಓಗೊಟ್ಟು ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಾರೆ. ನಂತರ ವಿದ್ಯಾಭ್ಯಾಸದ ಮಹತ್ವವನ್ನು ಮನಗಂಡು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಪಾಸು ಮಾಡಿಕೊಳ್ಳುತ್ತಾರೆ. ನಂತರ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಳ್ಳುತ್ತಾರೆ.
ಕಾರ್ನಾಡು ಸದಾಶಿವ ರಾಯರ ತಿಲಕ ವಿದ್ಯಾಲಯದಲ್ಲಿ ಅಧ್ಯಾಪನಾ ವೃತ್ತಿಯನ್ನು ಪ್ರಾರಂಭಿಸಿದ ಶಂಕರ ಭಟ್ಟರು ನಂತರದ ದಿನಗಳಲ್ಲಿ ಪಂಜೆಯವರ ಸಲಹೆ ಮೇರೆಗೆ ಸೈಂಟ್ ಆಗ್ನೆಸ್ ಕಾಲೇಜನ್ನು ೧೯೨೯ರಲ್ಲಿ ಸೇರಿಕೊಳ್ಳುತ್ತಾರೆ. ಸುಮಾರು ೩೫ ವರ್ಷಗಳ ಕಾಲ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಾರೆ. ಶಂಕರ್ ಭಟ್ಟರು ಸಾಹಿತಿ, ಕವಿಯ ಜೊತೆಗೆ ಉತ್ತಮ ಪತ್ರಕರ್ತರೂ ಆಗಿದ್ದರು. ಇವರು ರಾಷ್ಟ್ರ ಬಂಧು ಹಾಗೂ ರಾಷ್ಟ್ರ ಮತ ಪತ್ರಿಕೆಗಳ ಸಂಪಾದಕರಾಗಿದ್ದರು.
ಇವರ ಪ್ರಮುಖ ಕವನ ಸಂಕಲನಗಳೆಂದರೆ ಘೋಷಯಾತ್ರೆ, ಗಾಂಧಿ ಸಂದೇಶ, ವಸ್ತ್ರಾಪಹರಣ, ಕಾಣಿಕೆ, ನಲ್ಮೆ, ಹಣ್ಣುಕಾಯಿ, ಪತ್ರಪುಷ್ಪ ಇತ್ಯಾದಿ. ಉಷೆ, ಹಿಡಂಬೆ, ವಿರಾಮ, ಯಜ್ಞಕುಂಡ, ಅಜಾತ ಶತ್ರು, ಗುರುದಕ್ಷಿಣೆ ಇವರ ಪ್ರಕಟಿತ ನಾಟಕಗಳು. ಇವುಗಳಲ್ಲದೇ ಸಾಹಿತ್ಯ ವಿಮರ್ಶೆ, ಅನುವಾದ, ಉಪನ್ಯಾಸಗಳ ಸಂಗ್ರಹ, ಲಲಿತ ಪ್ರಬಂಧಗಳು ಇವನ್ನೆಲ್ಲಾ ಬರೆದಿದ್ದಾರೆ. ಇವರು ಧೂಮಕೇತು, ದೇವತಾ ಮನುಷ್ಯ, ಲೋಕದ ಕಣ್ಣು ಎಂಬ ಮೂರು ಸಾಮಾಜಿಕ ಕಾದಂಬರಿಗಳನ್ನೂ, ಗಾಜಿನ ಬಳೆ, ಹಿಂದಿನ ಕಥೆಗಳು ಮುಂತಾದ ಸಣ್ಣ ಕಥೆಗಳನ್ನೂ ಬರೆದಿದ್ದಾರೆ.
ಶಂಕರ ಭಟ್ಟರು ೧೯೬೫ರಲ್ಲಿ ನಡೆದ ೪೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ತಮ್ಮ ೬೪ನೆಯ ಪ್ರಾಯದಲ್ಲಿ ೧೯೬೮ರ ಮೇ ೧೭ರಂದು ಇವರು ನಿಧನಹೊಂದಿದರು. ಇವರ ಗೌರವಾರ್ಥ ಉಡುಪಿಯ ಎಂಜಿಎಂ ಕಾಲೇಜಿನಲ್ಲಿರುವ ಗೋವಿಂದ ಪೈ ಸಂಶೋಧನಾ ಕೇಂದ್ರವು ಪ್ರತೀ ವರ್ಷ ಹಸ್ತಪ್ರತಿಯ ಕಾವ್ಯಕ್ಕೆ ‘ಕಡೆಂಗೋಡ್ಲು ಶಂಕರ ಭಟ್ಟ’ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದೆ.
ಕಡೆಂಗೋಡ್ಲು ಶಂಕರ ಭಟ್ಟರ ಆಯ್ದ ಕವನ:
ಮಂಗಲ ಗೀತ
ತನು ತುಂಬಿ ಮನ ತುಂಬಿ ಚಿತ್ತ ಚೇತನ ತುಂಬಿ
ಕನ್ನಡದ ಜೀವಕಳೆ ಹೊಮ್ಮುತಿದೆ ನೋಡು.
ಭಾವ ಕಳೆ -ಪೌರುಷದ ತುಂಬು ಹೊಳೆ ಹರಿಯುತಿರೆ
ಭಿನ್ನತೆಯ ನೋವ ಕಳೆ- ಮಂಗಲವ ಹಾಡು.
ಕೈಗೂಡಿ ಬಂದುವೋ ಮೈ ಮೂಡಿ ನಿಂದುವೋ
ಹಗಲುಗನಸಾಗಿದ್ದ ಹಳೆಯ ಬಯಕೆಗಳು
ಬಾದಾಮಿ ಬನವಾಸಿ ಹಂಪೆ ಹಳೆಬೀಡುಗಳ
ಮೂಕವಾಣಿಗಳ ಸುಸ್ವಾಗತವ ಕೇಳು
ಮೂಡು ಪಡು ತೆಂಕುಬಡಗೊಂದಾಗಿ ಕೂಡುತಿದೆ
ತಾಯ ಮೈಗಾಯಗಳು ಮಾಯುತಿವೆ ನೋಡು
ನಿನ್ನ ಮೊಗವರಳದೇ? ಮತಿ ಹಿಗ್ಗಿ ನಲಿಯದೇ?
ಕಲ್ಲ ಕೆತ್ತನೆಯೇನೋ ನಿನ್ನೆದೆಯ ಗೂಡು ?
ಅಳಿದ ಸಾಮ್ರಾಜ್ಯಗಳ ಬಾಳದಿಹ ವೈಭವದ
ಕತೆ ಹೇಳಿ ಕಣ್ಣೊರೆಸಿ ಸವೆದುದಾಯುಷ್ಯ
ದಾರಿ ಕಂಡುದು ಬುದ್ಧಿ ; ಕೂಗಿ ಕರೆಯುವುದು ಸಿದ್ಧಿ ;
ಒಸಗೆ ತೋರಣ ಕಟ್ಟಿ ತೆರೆದಿದೆ ಭವಿಷ್ಯ.
ಸಹ್ಮಗಿರಿಯುತ್ತುಂಗ ಹೃದಯ ಪೀಯೂಷರಸ
ವಾಹಿನಿಗಳೀ ಧರೆಯ ಜೀವನಾಳಗಳು
ಮಣ್ಣೆ ಹೊನ್ನಾಗಿರಲು ಕಲ್ಲೆ ಕಬ್ಬಿಣವಿರಲು
ವಜ್ರಕೆ ಸಮಾನಬಲ ಮಜ್ಜೆ ಮೂಳೆಗಳು.
ಎತ್ತರದ ಮಲೆಯ ಭುಜ, ಬಿತ್ತರದ ಬಯಲಿನೆದೆ
ಆರೋಗ್ಯ ಭಾಗ್ಯ ಧನಧಾನ್ಯ ಸಂಪತ್ತು,
ಏನಿಲ್ಲ? ಏನಿರದು? ಹೊಂಬಯಕೆ ಬಟ್ಟಲಿದು
ನಮ್ಮ ಪುಣ್ಯವ ತೂಗಿ ತೊನೆವ ತೊಟ್ಟಿಲಿದು.
ಕನ್ನಡದ ಕುಲವಿಲ್ಲಿ ಕುಲದ ದೇಗುಲವಿಲ್ಲಿ
ಪ್ರಾಣದೇವನ ಭವ್ಯ ಮೂರ್ತಿ ಪ್ರತಿಷ್ಟೆ
ಭಾರತವೆ ಸಾವಿತ್ರಿ ಕನ್ನಡವೆ ಗಾಯತ್ರಿ
ಇಲ್ಲಿಯೇ ಪೂಜಾಪುರಶ್ಚರಣ ನಿಷ್ಟೆ.
ದಿಕ್ಕುದೆಸೆ ಪುಳಕಿಸಲು ಧರ್ಮ ಘಂಟಾ ಧ್ವನಿಗೆ
ಎತ್ತು ಸೇವಾರತಿಯ ಮಂಗಲಾರತಿಯ.
ಕರ್ತವ್ಯ ಸಫಲತೆಯ ಪಾದಕಾಣಿಕೆಯಿಟ್ಟು
ಓಲೈಸು ರಾಷ್ಟ್ರ ಪೌರುಷದ ಮೂರುತಿಯ.
ಸ್ವಾತಂತ್ರ್ಯ ಸಮತೆ ಜೀವಜನದ ಘನತೆಯಲಿ
ಭಾರತ ಮನೋರಥವ ಬೀದಿವರಿಯಿಸಲು
ಹೂಡಿ ಹೆಣೆದಿವೆ ನೊಗಕೆ ಎರಡು ಕೋಟಿಯ ಹೆಗಲು
ಕೂಡಿ ಘೋಷಿಪುದೆರಡು ಕೋಟಿಗಳ ಕೊರಳು
ಹಾರದೇ ಹಾರೈಕೆ ನಕ್ಷತ್ರಗಳ ನಡುವೆ ?
ಏರದೇ ನಮ್ಮ ಗುಡಿ ಗಗನದೆತ್ತರಕೆ ?
ಪುರುಷಾರ್ಥ - ಪರಮಾರ್ಥ ಸಹಯಾತ್ರೆ ಜರಗುತಿರೆ
ಆವುದಿನ್ನಾರೈಕೆ ಬೇರೇನೊ ಹರಕೆ ?
ಮಾನವರ ನಲವೆ ದೇವರಿಗೆ ಬಲವಾಗಿರಲು
ಕೊಡರೆ ಅಭಯವ ನಮ್ಮ ದೇವದೇವಿಯರು ?
ಭವನ ಭುವನೇಶ್ವರಿಯ ಭಿನ್ನೆ ಚಾಮುಂಡಿ ಪಡು-
ಗಡಲ ಪಾದೋದಕದ ಶೌರಿ ಪರಶಿವರು ?
ಕನ್ನಡದ ಜೀವವೇ ! ಧನ್ಯತೆಯ ಕೊಂಡಾಡು !
ಈ ನೆಲದಿ ಹುಟ್ಟಿರುವೆ ! ಈ ದಿನವ ಕಂಡೆ !
ಭರತಮಾತೆಯ ಮುದ್ದುಗುವರಿ ಕನ್ನಡತಾಯ
ಕಿಂಕರನ - ಶಂಕರನ ಹಾಡನೆದೆಗೊಂಡೆ !
***
(ಸುವರ್ಣ ಸಂಪುಟ ಪುಸ್ತಕದಿಂದ ಆರಿಸಿದ್ದು)