‘ಸುವರ್ಣ ಸಂಪುಟ' (ಭಾಗ ೧೬) - ಕುವೆಂಪು

‘ಸುವರ್ಣ ಸಂಪುಟ' (ಭಾಗ ೧೬) - ಕುವೆಂಪು

ಕಡೆಂಗೋಡ್ಲು ಶಂಕರ ಭಟ್ಟರ ಬಗ್ಗೆ ಹಾಗೂ ಅವರ ಕವನದ ಬಗ್ಗೆ ಕಳೆದ ವಾರದ ಸಂಚಿಕೆಯಲ್ಲಿ ಮಾಹಿತಿ ನೀಡಿದ್ದೆವು. ಈ ‘ಸುವರ್ಣ ಸಂಪುಟ' ಕೃತಿಯಲ್ಲಿ ಶಂಕರ ಭಟ್ಟರ ಇನ್ನೂ ಎರಡು ಕವನಗಳು ಇವೆ. ಅವುಗಳ ಹೆಸರು ‘ಅದೊಂದು ತೆರ ಇದೊಂದು ತರ' ಹಾಗೂ ಮಿಂಚುಹುಳು. ಈ ವಾರ ನಮಗೆಲ್ಲಾ ಚಿರಪರಿಚಿತರಾಗಿರುವ ಖ್ಯಾತ ಕವಿ, ಸಾಹಿತಿ, ಕಾದಂಬರಿಕಾರರಾದ ‘ರಾಷ್ಟ್ರಕವಿ' ಕುವೆಂಪು ಅವರ ಕವನಗಳೆರಡನ್ನು ಆಯ್ದು ನೀಡುತ್ತಿದ್ದೇವೆ. ಈ ಕೃತಿಯಲ್ಲಿ ಕುವೆಂಪು ಅವರ ೧೫ಕ್ಕೂ ಮಿಕ್ಕಿದ ಕವನಗಳಿವೆ.

ಕುವೆಂಪು: ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಎಂಬ ಹೆಸರಿನ ಸಂಕ್ಷಿಪ್ತ ರೂಪವೇ ‘ಕುವೆಂಪು'. ಈ ಕಾವ್ಯ ನಾಮ ಎಷ್ಟು ಪ್ರಸಿದ್ಧಿಯಾಗಿದೆಯೆಂದರೆ ಬಹಳಷ್ಟು ಮಂದಿ ಕುವೆಂಪು ಎಂಬುವುದೇ ಪುಟ್ಟಪ್ಪನವರ ನಿಜವಾದ ನಾಮಧೇಯವೆಂದು ತಿಳಿದುಕೊಂಡಿದ್ದಾರೆ. ಕುವೆಂಪು ಇವರು ಡಿಸೆಂಬರ್ ೨೯, ೧೯೦೪ರಲ್ಲಿ ತಮ್ಮ ತಾಯಿಯ ಊರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕುಡಿಗೆ ಎಂಬ ಊರಿನಲ್ಲಿ ಜನಿಸಿದರು. ಇವರ ತಂದೆ ವೆಂಕಟಪ್ಪ ಹಾಗೂ ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೂಲಿ ಮಠದಲ್ಲಿ ಮುಗಿಸಿ, ಮಧ್ಯಮ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಮುಂದುವರೆಸಿದರು. ಮೈಸೂರಿನ ಮಹಾರಾಜಾ ಕಾಲೇಜಿನಿಂದ ಬಿ.ಎ. ಪದವಿ ನಂತರ ಕನ್ನಡದಲ್ಲಿ ಎಂ. ಎ. ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. 

ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಇವರು, ನಂತರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ಮೈಸೂರು ವಿಶ್ವ ವಿದ್ಯಾನಿಲಯದ ಉಪಕುಲಪತಿಗಳಾಗಿ ನಿವೃತ್ತರಾದರು. ಮೈಸೂರು ವಿಶ್ವ ವಿದ್ಯಾನಿಲಯ ‘ಮಾನಸ ಗಂಗೋತ್ರಿ' ಇವರ ಕನಸಿನ ಕೂಸು. ಹೇಮಾವತಿ ಇವರ ಧರ್ಮ ಪತ್ನಿ. ಇವರಿಗೆ ಸಾಹಿತಿ ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಎಂಬ ಮಕ್ಕಳು.

ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪು ಅವರದ್ದು ಬಹಳ ದೊಡ್ದ ಹೆಸರು. ‘ಶ್ರೀ ರಾಮಾಯಣ ದರ್ಶನಂ’ ಇವರ ಮೇರು ಕೃತಿ. ‘ಮಲೆಗಳಲ್ಲಿ ಮದುಮಗಳು’ಹಾಗೂ ‘ಕಾನೂರು ಹೆಗ್ಗಡತಿ' ಬೃಹತ್ ಕಾದಂಬರಿಗಳು. ಇವರ ಕೆಲವು ಕೃತಿಗಳ ವಿವರ ಇಲ್ಲಿದೆ. ಚಿತ್ರಾಂಗದಾ- ಖಂಡಕಾವ್ಯ, ಕೊಳಲು, ಪಾಂಚಜನ್ಯ, ನವಿಲು, ಅಗ್ನಿಹಂಸ, ಪಕ್ಷಿಕಾಶಿ, ಅನಿಕೇತನ, ಮಂತ್ರಾಕ್ಷತೆ ಮುಂತಾದ ಸುಮಾರು ೨೩ ಕವನ ಸಂಕಲನಗಳು, ಸನ್ಯಾಸಿ ಮತ್ತು ಇತರ ಕಥೆಗಳು ಹಾಗೂ ನನ್ನ ದೇವರು ಮತ್ತು ಇತರ ಕಥೆಗಳು - ಕಥಾ ಸಂಕಲನ, ಯಮನ ಸೋಲು, ಜಲಗಾರ, ಬೆರಳ್ ಗೆ ಕೊರಳ್,  ಶೂದ್ರ ತಪಸ್ವಿ ಮೊದಲಾದ ೧೨ ನಾಟಕಗಳು, ಮಲೆನಾಡಿನ ಚಿತ್ರಗಳು ಎಂಬ ಪ್ರಬಂಧ, ಕಾವ್ಯ ವಿಹಾರ, ತಪೋನಂದನ ಮೊದಲಾದ ವಿಮರ್ಶಾ ಕೃತಿಗಳು, ನೆನಪಿನ ದೋಣಿಯಲ್ಲಿ- ಕುವೆಂಪು ಅವರ ಆತ್ಮಕಥೆ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ - ಜೀವನ ಚರಿತ್ರೆಗಳು, ಕೊಲಂಬೋದಿಂದ ಅಲ್ಮೋರಕೆ -ಅನುವಾದ ಬರಹ, ಅಮಲನ ಕಥೆ, ಮೋಡಣ್ಣನ ತಮ್ಮ(ಮಕ್ಕಳ ನಾಟಕ), ಬೊಮ್ಮನ ಹಳ್ಳಿಯ ಕಿಂದರಿಜೋಗಿ, ನನ್ನ ಮನೆ, ಮರಿ ವಿಜ್ಞಾನಿ, ನರಿಗಳಿಗೇಕೆ ಕೋಡಿಲ್ಲ? ಇತ್ಯಾದಿ. ಮಕ್ಕಳ ಸಾಹಿತ್ಯ ಕೃತಿಗಳು.

ಇವರ ‘ಶ್ರೀ ರಾಮಾಯಣ ದರ್ಶನಂ’ ಮಹಾ ಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರತ್ನ, ಪಂಪ ಪ್ರಶಸ್ತಿಗಳೂ ಲಭಿಸಿವೆ. ಇವರಿಗೆ ‘ರಾಷ್ಟ್ರಕವಿ’ ಎಂಬ ಬಿರುದೂ ದೊರೆತಿದೆ. 

ಕುವೆಂಪು ಅವರು ನವೆಂಬರ್ ೧೧, ೧೯೯೪ರಂದು ಮೈಸೂರಿನಲ್ಲಿ ನಿಧನ ಹೊಂದಿದರು. ‘ಜಯ ಹೇ ಕರ್ಣಾಟಕ ಮಾತೆ' ಹಾಗೂ ‘ಮೆಟ್ಟುವ ನೆಲ ಕರ್ಣಾಟಕ' ಬಹಳ ಸೊಗಸಾದ ಬಹುಮಂದಿಗೆ ಚಿರಪರಿಚಿತ ಕುವೆಂಪು ಅವರ ಕವನಗಳು. ಆ ಕಾರಣದಿಂದ ನಾವು ಅವರ ‘ತಾವರೆಯ ತೇರು' ಹಾಗೂ ‘ಕವಿಶೈಲದಲ್ಲಿ ಸಂಧ್ಯೆ' ಎಂಬ ಎರಡು ಅಪರೂಪದ ಕವನಗಳನ್ನು ಆರಿಸಿದ್ದೇವೆ. ಓದುವ ಆನಂದ ನಿಮ್ಮದಾಗಲಿ.

ಕವನ ೧- ತಾವರೆಯ ತೇರು

ಭಾವನೆಯ ಬಾನಿನಲಿ ಇಂದ್ರಧನುರ್ಯಾನದಲಿ

ನಿನ್ನೊಡನೆ ಕುಳಿತು ನಾ ತೇಲುತಿರುವೆ ;

ಮೋಹನದ ಮುಗುಳುನಗೆಯನು ಬೀರಿ, ಸುಂದರಿಯೆ,

ನೀನಗ್ನಿ ಮೇಘವನೆ ಹೋಲುತಿರುವೆ!

ನಾನೇರಿದೆತ್ತರವ ನೋಡಿ

ಚಿತ್ತ ಹಿಗ್ಗುತಿದೆ ;

ಬೀಳುವೆನೊ ಎಂಬಳುಕು ಮೂಡಿ

ಮತ್ತೆ ಕುಗ್ಗುತಿದೆ.

ನಿನ್ನ ಮೊಗದಲಿ ಮಾಸದಿಹ ಮುಗುಳುನಗೆಯೊಂದು

ಸರ್ವದಾ ನವಿಲಂತೆ ನಲಿಯುತಿಹುದು.

ನಿನ್ನ ಮೌನದೆ ಅರ್ಥವೇನಿಹುದೊ ಅದನರಿಯೆ.

ನಮ್ಮ ತಾವರೆ ತೇರು ತೇಲುತಿಹುದು!

 

ನೀನಂದು ಕನಕ ರಥವನು ತಂದು ಬಾ ಎಂದು

ಕರೆದಂದು ನಾನು ದೂಳಾಡುತಿದ್ದೆ.

ಹೊಂಬಿಸಿಲು ಹೊಮ್ಮಿತ್ತು, ಖಗ ಗಾನ ಚಿಮ್ಮಿತ್ತು,

ಕಣ್ದೆರೆದುಕೊಂಡಿತ್ತು ಜಗದ ನಿದ್ದೆ !

ತೇರಿನಾ ಬಣ್ಣವನು ಕಂಡೆ

ಮೊದಲು ಮರುಳಾದೆ ;

ಹುಡುಗಾಟ ಎಂದಂದುಕೊಂಡೆ

ಅದನೇರಿಹೋದೆ !

ಎಲ್ಲಿಗೊಯ್ಯುವೆ ಎಂದು ನಾ ಕೇಳಲಿಲ್ಲಂದು,

ಕೇಳಿದರೆ ನೀನು ನುಡಿಯದಿಹೆ ಇಂದು.

ಬರಿದೆ ಬೆರಳೆತ್ತಿ ತೋರುವೆ ; ಮುಂದೆ ನೋಡಿದರೆ

ಹಬ್ಬಿಹುದು ನೀಲಿಮೆಯ ಶೂನ್ಯ ಸಿಂಧು !

 

ಶಶಿ ಸೂರ್ಯ ಗ್ರಹ ನಿಚಯ ತಾರಾಖಚಿತ ನಭದಿ

ಹಾರುತಿದೆ ನಮ್ಮೀ ಕಲಾವಿಮಾನ ;

ಮುಂದೆನಿತು ದೂರಕೋ? ಎಂದಾವ ತೀರಕೋ ?

ತೇಲುತಿಹುದೀ ನಿನ್ನ ಕಮಲಯಾನ !

ಸಂಶಯದಿ ಕಂಪಿಸುವುದೊಮ್ಮೆ

ನನ್ನಾತ್ಮ ಪಕ್ಷಿ ;

ನಿನ್ನಯ ಮುಗುಳ್ನಗೆಯ ನೆಮ್ಮೆ

ನನಗೆ ಗುರುಸಾಕ್ಷಿ !

ಹಗಳಿರುಳು ಬೆಳಗು ಬೈಗುಗಳುರುಳಿ ಸಾಗುತಿವೆ

ಗಗನದಲಿ ರಂಗೆರಚಿ ಬಂದು ನಿಂದು !

ನಿನ್ನ ಸದ್ದಿಲಿ ಸನ್ನೆಯಲಿ ಮುಂದೆ ನೋಡಿದರೆ

ಹಬ್ಬಿಹುದು ನೀಲಿಮೆಯ ಶೂನ್ಯ ಸಿಂಧು !

***

ಕವನ ೨ - ಕವಿಶೈಲದಲ್ಲಿ ಸಂಧ್ಯೆ

ದೃಷ್ಟಿ ದಿಗಂತದ ಮೇರೆಯ ದಾಟಿ

ಗಗನದ ಮೇಘವಿತಾನವ ಮೀಟಿ

ದೂರಕೆ ದೂರಕೆ ಸುದೂರ ದೂರಕೆ

ಹಬ್ಬಿದೆ ಪರ್ವತ ದಿಗಂತ ಶೈಲಿ,

ಮೈಲಿ ಮೈಲಿ !

 

ಪಶ್ಚಿಮ ಗಿರಿಶಿರದಲಿ ಸಂಧ್ಯೆಯ ರವಿ ;

ನಿರ್ಜನ ಕವಿಶೈಲದೊಳೊಬ್ಬನೆ ಕವಿ ;

ಮಲೆನಾಡಿನ ಬುವಿ ಮೇಲರುಣಚ್ಚವಿ ;

ವಸಂತ ಸಂಧ್ಯಾ ಸುವರ್ಣ ಶಾಂತಿ !

ಅನಂತ ಶಾಂತಿ !

 

ಸೊಂಡಿಲ ಮೇಗಡೆ ಸೊಂಡಿಲ ಚಾಚಿ

ವಿಶಾಲ ವ್ಯೋಮದ ಕರೆಯನೆ ಬಾಚಿ

ಸ್ಪರ್ಧಿಸುತಿರುವುವೊ ಎನೆ ದಿಗ್ದಂತಿ

ಹಬ್ಬಿದೆ ಸುತ್ತಲು ದಿಗಂತ ಪಂಕ್ತಿ,

ಗಂತಿ ಗಂತಿ !

 

ತೆರೆ ತೆರೆ ತೆರೆಯೆದ್ದರಣ್ಯ ಶ್ರೇಣಿ,

ಬಿದ್ದಿದೆ ನಿದ್ದೆಯೊಳೊ ಎನೆ ಪ್ರಾಣಿ,

ಅಸಂಖ್ಯ ವರ್ಣದಿ ಅಪಾರ ಪರ್ಣದಿ

ತಬ್ಬಿದೆ ಭೂಮಿಯನೆರಂಕೆ ಚಾಚಿ,

ವೀಚಿ, ವೀಚಿ !

 

ಎಲ್ಲಿಯು ಎಲ್ಲವು ಮಹತ್ತೆ ಇಲ್ಲಿ

ಈ ಸಹ್ಯ ಮಹಾ ಬೃಹತ್ತಿನಲ್ಲಿ !

ಕ್ಷುದ್ರಸ್ಪಷ್ಟತೆಗೆಡೆಯಿಲ್ಲೆಲ್ಲಿ?

ಭವ್ಯಾಸ್ಫುಟವಿದು - ಶರೀರ ಸೀಮಾ

ವಿಹೀನಧಾಮ !

 

ಆಲಿಸು ! ಕೇಳುತಲಿದೆ ಓಂಕಾರ ;

ನಿತ್ಯನಿರಂತರ ಆಳಿ ಝೇಂಕಾರ !

ಮನವೇ, ಧ್ಯಾನದಿ ಮುಳುಗು ನಿಧಾನದಿ ;

ನುಂಗಲಿ ನಿನ್ನಂ ತಪಃ ಸುಷುಪ್ತಿ,

ಅನಂತ ತೃಪ್ತಿ !

***

(‘ಸುವರ್ಣ ಸಂಪುಟ’ ಕೃತಿಯಿಂದ ಸಂಗ್ರಹಿತ)