‘ಸುವರ್ಣ ಸಂಪುಟ' (ಭಾಗ ೧೭) - ಪು.ತಿ.ನರಸಿಂಹಾಚಾರ್

‘ಸುವರ್ಣ ಸಂಪುಟ' (ಭಾಗ ೧೭) - ಪು.ತಿ.ನರಸಿಂಹಾಚಾರ್

ಕುವೆಂಪು ಬಗ್ಗೆ ಹಾಗೂ ಅವರ ಅಪರೂಪದ ಎರಡು ಕವನಗಳನ್ನು ಸಂಗ್ರಹಿಸಿ ಕಳೆದ ವಾರ ನೀಡಿದ್ದು ಬಹಳಷ್ಟು ಓದುಗರಿಗೆ ಖುಷಿಯಾಗಿದೆ. ಸುವರ್ಣ ಸಂಪುಟದಲ್ಲಿ ಕುವೆಂಪು ಅವರ ೧೫ಕ್ಕೂ ಮಿಕ್ಕ ಕವನಗಳಿವೆ. ಅದರ ಶೀರ್ಷಿಕೆಗಳು ಈ ರೀತಿ ಇವೆ. ಘೋರಾಂಧಕಾರದೊಳು, ಜಯ ಹೇ ಕರ್ಣಾಟಕ ಮಾತೆ, ನನ್ನ ಮನೆ, ಸುಗ್ಗಿ ಬರುತಿದೆ, ಹುಣ್ಣಿಮೆ, ಕಲ್ಕಿ, ಕುಮಾರವ್ಯಾಸ, ಕುಕ್ಕನಳ್ಳಿ ಕೆರೆಯ ಮೇಲೆ, ತೇನೆ ಹಕ್ಕಿ, ದೋಣಿ ಹಾಡು, ಮರದ ನೆಳಲು, ಭರತ ಭೂಮಿ ನನ್ನ ತಾಯಿ, ಮೆಟ್ಟುವ ನೆಲ ಕರ್ಣಾಟಕ, ಅಂತರತಮ ನೀ ಗುರು, ಶ್ರವಣಬೆಳ್ಗೊಳದ ಗೋಮಟೇಶ್ವರನ ಸಾನ್ನಿಧ್ಯದಲ್ಲಿ, ಶ್ರೀ ಗುರು ಚರಣಕೆ, ಸದಾ, ಹಾರೈಸು, ಕಂಸಶಿಲೆ, ಯಶೋಲಕ್ಷ್ಮಿ, ಇಂತಹ ಸುಂದರ ಪ್ರಾತಃಕಾಲದಿ, ದೇವರು ರುಜು ಮಾಡಿದನು, ಬಾ ಫಾಲ್ಗುಣ ರವಿ ದರ್ಶನಕೆ, ಮುಂಗಾರು, ಹಸುರು, ವೀಣಾಗಾನ, ಷೋಡಶಿಗೆ, ಭಗವಂತನೆ ಕವಿ, ಸಹೃದಯ ನಾಂ. 

ಈ ವಾರ ನಾವು ಆಯ್ದು ಕೊಂಡ ಕವನಗಳನ್ನು ರಚಿಸಿದವರು ಖ್ಯಾತ ಕವಿ, ಈ ‘ಸುವರ್ಣ ಸಂಪುಟ’ದ ಸಂಪಾದಕರಲ್ಲಿ ಓರ್ವರಾದ ಪು.ತಿ.ನರಸಿಂಹಾಚಾರ್ ಇವರು.

ಪು.ತಿ.ನರಸಿಂಹಾಚಾರ್: ‘ಪುತಿನ’ ಎಂದೇ ಕನ್ನಡ ಸಾಹಿತ್ಯ ಲೋಕದಲ್ಲಿ ಖ್ಯಾತರಾಗಿದ್ದ ಪುರೋಹಿತ ತಿರುನಾರಣಯ್ಯಂಗಾರ್ ನರಸಿಂಹಾಚಾರ್ ಹುಟ್ಟಿದ್ದು ಮೇಲುಕೋಟೆಯಲ್ಲಿ. ೧೯೦೫ರ ಮಾರ್ಚ್ ೧೭ರಂದು ವೈದಿಕ ಕುಟುಂಬದಲ್ಲಿ ಹುಟ್ಟಿದರು. ಬಾಲ್ಯದಿಂದಲೂ ಕಂಡ ಆಧ್ಯಾತ್ಮಿಕ ಪರಿಸರ ಇವರನ್ನು ಸಾಹಿತಿಯನ್ನಾಗಿ ರೂಪಿಸಿತು. ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎ.ಪದವಿಯನ್ನು ಪಡೆದಿದ್ದರು. ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆಯಲ್ಲೂ ಉತ್ತಮ ಪಾಂಡಿತ್ಯವನ್ನು ಹೊಂದಿದ್ದರು. ೨೫ ವರ್ಷಗಳ ಕಾಲ ಬ್ರಿಟೀಷ್ ಸೈನ್ಯದಲ್ಲಿ ಸೇವೆ ಸಲ್ಲಿಸಿದರು. ಸೈನ್ಯದ ಸೇವೆಯಿಂದ ನಿವೃತ್ತರಾದ ಬಳಿಕ ಇವರು ಮೂರು ವರ್ಷಗಳ ಕಾಲ ಕನ್ನಡ ವಿಶ್ವಕೋಶ ವಿಭಾಗದಲ್ಲಿ ಸೇವೆ ಸಲ್ಲಿಸಿದರು. ಐದು ವರ್ಷಗಳ ಕಾಲ ಇಂಗ್ಲಿಷ್-ಕನ್ನಡ ನಿಘಂಟು ಪರಿಷ್ಕರಣದ ಸಂಪಾದಕರಾಗಿಯೂ ಸೇವೆ ಸಲ್ಲಿದರು. 

ಪುತಿನ ಅವರ ಕೃತಿಗಳ ವಿವರ: ಹಣತೆ, ಮಾಂದಳಿರು, ಗಣೇಶ ದರ್ಶನ, ರಸ ಸರಸ್ವತಿ, ರಥ ಸಪ್ತಮಿ, ನಿರೀಕ್ಷೆ ಮುಂತಾದ ೧೧ ಕವನ ಸಂಕಲಗಳು, ಶ್ರೀಹರಿ ಚರಿತೆ ಎಂಬ ಮಹಾಕಾವ್ಯ, ಜಾಹ್ನವಿಗೆ ಜೋಡಿ ದೀವಿಗೆ ಮತ್ತು ಇತರ ನಾಟಕಗಳು ಎಂಬ ನಾಟಕ, ಗೋಕುಲ ನಿರ್ಗಮನ, ಕವಿ, ಅಹಲ್ಯೆ, ಶಬರಿ, ವಿಕಟಕವಿ ವಿಜಯ, ಹಂಸದಮಯಂತಿ, ಕುಚೇಲ ಕೃಷ್ಣ ಮೊದಲಾದ ಗೀತಾ ನಾಟಕಗಳು, ಧ್ವಜರಕ್ಷಣೆ ಮತ್ತು ಇತರ ಕಥೆಗಳು ಹಾಗೂ ರಥಸಪ್ತಮಿ ಮತ್ತು ಇತರ ಕಥೆಗಳು ಇವು ಕಥಾ ಸಂಕಲನಗಳು, ರಾಮಾಚಾರಿಯ ನೆನಪು, ಈಚಲು ಮರದ ಕೆಳಗೆ, ಮಸಾಲೆ ದೋಸೆ, ಗೋಕುಲಾಷ್ಟಮಿ ಮೊದಲಾದ ಗದ್ಯ ಚಿತ್ರಗಳು, ಬದಲಿಸಿದ ತಲೆಗಳು, ಕನ್ನಡ ಭಗವದ್ಗೀತೆ, ಸಮಕಾಲೀನ ಭಾರತೀಯ ಸಾಹಿತ್ಯ ಮೊದಲಾದ ಅನುವಾದ ಬರಹಗಳು, ಕಾವ್ಯ ಕುತೂಹಲ, ದೀಪರೇಖೆ ಮೊದಲಾದ ಕಾವ್ಯ ಮೀಮಾಂಸೆಗಳು, ಅತಿಥಿ, ನವಿಲುಗರಿ, ಲಹರಿ ಮೊದಲಾದ ಆಯ್ದ ಸಂಗ್ರಹಗಳು ಹಾಗೂ ಸುವರ್ಣ ಸಂಪುಟ ಎಂಬ ಅದ್ಭುತ ಕವಿ-ಕಾವ್ಯ ಸಂಗ್ರಹ (ವಿವಿಧ ಸಂಪಾದಕರ ಜೊತೆ ಸೇರಿ) 

ಪುತಿನ ಅವರು ೨೩ ಅಕ್ಟೋಬರ್ ೧೯೯೮ರಲ್ಲಿ ಬೆಂಗಳೂರಿನಲ್ಲಿ ನಿಧನ ಹೊಂದಿದರು. ಈ ಸಂಪುಟದಲ್ಲಿ ಪುತಿನ ಅವರ ೧೫ಕ್ಕೂ ಮಿಕ್ಕಿದ ಕವನಗಳಿವೆ.  ನಾವು ಅವರ ಎರಡು ಕವನಗಳನ್ನು ಪ್ರಕಟಣೆಗೆ ಆಯ್ದುಕೊಂಡಿದ್ದೇವೆ.  

ಕವನ ೧ - ಪಯಣಿಗರ ಹಾಡು

ಗುಡಿಯಾಚೆ ಗಡಿಯಾಚೆ ಗಿಡದಾಚೆಗೆ

ಹೋಗೋಣ ಬನ್ನಿರೋ ಹೊಸನಾಡಿಗೆ.

ಹೊಚ್ಚ ಹೊಸ ನೋಟಕ್ಕೆ

ಅಚ್ಚ ಬಾಳಾಟಕ್ಕೆ

ನೆಚ್ಚುಗೆಯ ಕೆಳೆಯರೇ ಹೊಸ ನಾಡಿಗೆ.

 

ನೆರೆಗೊಂಡ ಹೊನಲಂತೆ ಭೋರಿಡಲಿ ರಸ್ತೆ,

ಸಾಲು ಮರ ಬಿದ್ದೆದ್ದು ದೌಡಿಡಲಿ ಮತ್ತೆ,

ರೈಲ್ ಬಂಡಿ ಮೋಟಾರು ಬಸ್ಸು ಹರಿಗೋಲು,

ನಾಡಾಗಲೆಮಗೊಂದು ತೂಗುವುಯ್ಯಾಲು.

 

ಹುರುಡುಗಟ್ಟುತ ನಮ್ಮ ಜತೆಗೂಡಿ ಬರುವ

ಗುಡ್ಡಗಳ ಹಿಂದಿಟ್ಟು ನಾವೆಲ್ಲ ನಗುವ,

ನಮ್ಮ ವೇಗದಿ ಸಾಗಿ ಮುಗಿಲು ರವಿ ಎಲ್ಲಾ

ಒಕ್ಕೂಟಕ್ಕೆ ತರಲಿ ದಿಕ್ಕುದೆಸೆ ಎಲ್ಲಾ.

 

ಹಚ್ಚಹೊಲ ಹುಚ್ಚೆಳ್ಳು ತೆನೆ ಜೋಳ ನೆಲ್ಲು

ಒಂಟಿ ಮರಗಳ ಸುತ್ತ ರಾಸವೆಲ್ಲೆಲ್ಲೂ ;

ಬಾಳೆ ಕೈ ಬೀಸುತ್ತ ಕರೆವ ಕಣ್ ಸೈಪು

ಗರಿಯಗಲ ಝಳಪಿಸುವ ಈಚಲಿನ ಕಾಪು.

 

ಬೆರಗುನೋಟದ ಹಳ್ಳಿ ಮಂದಿಗಳ ಕೂಟ,

ಬೆಡಗಿನುಡುಪಿನ ಹೊಳಲ ಹೆಣ್ಣುಗಳ ನೋಟ

ಹೊಳೆ-ಹಳುವು-ಗುಡಿ ಎಂದು ಹರಿವ ಕಣ್ಣೋಟ,

ಅಡಿಗಡಿಗು ಅಹ ಎಂದು ಅಚ್ಚರಿಸುವಾಟ !

 

ಇಂದು ಯಾದವಗಿರಿ ನಾಳೆ ಹಳೆಬೀಡು,

ಮುಂದೆ ಜಗದಚ್ಚರಿ ಗೊಮ್ಮಟನ ಮೇಡು ;

ಕಡಲು ಕರೆಯಲು ಹಿರಿಯ ಕಮರಿಯನೆ ನೆಗೆವ

ಪ್ರಣಯ ರುದ್ರೆಯ ಕಂಡು ಸೋಜಿಗವ ಪಡುವ

 

ಕಿವಿ ತಣಿಯೆ ಮೊರೆಯುವ, ಕಣ್ತಣಿಯೆ ಕುಣಿವ

ಮುಪ್ಪಿಲ್ಲವೆನೆ ಹರಳು - ನೀರೊಳು ಹೊಳೆವ,

ಮರ್ತ್ಯಂಗನಂತದ ಆಸೆ ಮಿಗಲೆಂದೋ

ಕರುಣಿಸಿ ಬಾನ್ ಕವಿಯ ಕಡಲ ತಡಿ ಮುಂದು,

 

ಗಿರಿಯಾಚೆ ಗಡಿಯಾಚೆ ಗಿಡದಾಚೆಗೆ

ಹೋಗೋಣ ಬನ್ನಿರೋ ಹೊಸ ಸೀಮೆಗೆ

ಹೊಚ್ಚ ಹೊಸ ನೋಟಕ್ಕೆ 

ಅಚ್ಚ ಬಾಳಾಟಕ್ಕೆ

ನೆಚ್ಚಿನಾ ನೇಹಿಗರೆ ಹೊಸ ಸೀಮೆಗೆ!

***

ಕವನ ೨ - ದಾಳಿಂಬೆ

ಇದು ಮೀಸಲೇ ನನಗೆ, ಈ ಬೆಳ್ಳಿಬಟ್ಟಲೊಳು

ರತ್ನಕಾಂತಿಯ ಚೆಲ್ಲಿ ಕಳಕಳಿಪ ದಾಳಿಂಬೆ?

ನೂತ್ನ ಋದ್ಧಿಯ ಪಡೆದ ಮೋದದೊಳಗೀ ಜಿಹ್ವೆ

ಇದುವರೆಗು ಕಾರ್ಪಣ್ಯದೊಳಗಿದ್ದೆನೆನುತಿಹುದು

 

ಬಿತ್ತ ಬಿತ್ತದ ರಸವ ಸವಿದು ಸವಿದಾಕ್ಷಣದಿ 

ಆಯುಷ್ಯ ಸಾರವನು ಬಟ್ಟಿಯಿಳಿಸುವ ತೆರದಿ.

ದೇಯವಿದನಾ ರೂಕ್ಷ ವೃಕ್ಷವೀ ಪೃಥ್ವಿಯಿಂ

ದೆತ್ತಿ ಈ ಮುದವೆರೆವವೊಲಾವರ್ತಿ ಚೋದಿಸಿತು?

 

ಋತು ಋತುಗಳಾದರವ, ಗಾಳಿಯಪ್ಪುಗೆ ಸೊಬಗ,

ಬೆಂಗದಿರ ರಕ್ತಿಯನು ತಂಗದಿರ ಸಕ್ತಿಯನು

ತಂಗಿಸಿತೊ ಮಳೆಮಂಜಿನೊಲವ ಮಧುರಾಮ್ಲದೊಳು

ಇತರೇಂದ್ರಿಯ ದ್ಯುತಿಯ ರಸನೆಗನುವದಿಸುವೊಲು?

 

ರಸವಿದೇನಿದ ಸವಿವರಾರ್ ಏನಿದಚ್ಚರಿಯ ಭೋಗ

ರಸನೆಹನೆಯೊಳಗಿಂತು ಪ್ರಕೃತಿ ಪುರುಷರ ದಿವ್ಯಯೋಗ!

***

(ಸುವರ್ಣ ಸಂಪುಟ ಕೃತಿಯಿಂದ ಸಂಗ್ರಹಿತ)