‘ಸುವರ್ಣ ಸಂಪುಟ' (ಭಾಗ ೧೮) - ರಾಮಚಂದ್ರ

‘ಸುವರ್ಣ ಸಂಪುಟ' (ಭಾಗ ೧೮) - ರಾಮಚಂದ್ರ

ಕಳೆದ ವಾರ ನಾವು ಆರಿಸಿದ ಕವಿ ಪು.ತಿ.ನರಸಿಂಹಾಚಾರ್. ಅವರ ಎರಡು ಅಪರೂಪದ ಕವನಗಳಿಗೆ ಬಹಳ ಪ್ರಶಂಸೆಗಳು ಬಂದಿವೆ. ‘ಸುವರ್ಣ ಸಂಪುಟ’ ಕೃತಿಯಲ್ಲಿ ಪುತಿನ ಅವರ ಇನ್ನೂ ಹಲವಾರು ಕವನಗಳಿವೆ. ಅವುಗಳ ಶೀರ್ಷಿಕೆಗಳು ಹೀಗಿವೆ- ಬಾನ್ ತಿಳಿದಿತ್ತು, ಮಳೆ ನಾಡ ತೊಯ್ಯುತಿರೆ, ಯದುಗಿರಿಯ ಮೌನ ವಿಕಾಸ, ಕೊಳದೆಡೆಯ ಇರುಳು, ನಂದಿಯ ಬೆಟ್ಟದ ಮೇಲುಗಡೆ, ಹೊನಲ ಹಾಡು, ಅಂತರ್ಯಾಮಿಯ ಒಂದು ಸೋಗಿನ ದರ್ಶನ, ಶಾರದಯಾಮಿನಿ, ಕಡಲಿದಿರು, ಚಿಕುಹೂ, ಪ್ರತೀಕ್ಷೆ, ಸಂಜೆ ಗಾಳಿಗೆ ಜಳಕ ಮಾಡಿಸೆ, ಕೊಳದ ಹೇಳಿಕೆ, ನೆರಳು, ವಿಶ್ವಕುಟುಂಬಿಯ ಕಷ್ಟ, ಜ್ಞಾನ-ಮೌನ, ನೇರಿಳೆ. 

ಈ ವಾರ ನಾವು ಆರಿಸಿದ ಕವಿ ರಾಮಚಂದ್ರ. ಬೇಸರದ ವಿಷಯವೆಂದರೆ ಈ ರಾಮಚಂದ್ರ ಕವಿಯ ಬಗ್ಗೆ ಈ ಕೃತಿಯಲ್ಲಿ ಯಾವುದೇ ಮಾಹಿತಿ ಇಲ್ಲದೇ ಇರುವುದು. ಅಂತರ್ಜಾಲದಲ್ಲೂ ಹುಡುಕಾಡಿದರೂ ಯಾವ ಕಾಲದ ರಾಮಚಂದ್ರ ಎಂದು ತಿಳಿಯುವುದೇ ಇಲ್ಲ. ಅವರ ಕವನ ಸಂಕಲನ ‘ಬಿದ್ದ ಗರಿ’ ಎಂದು ಒಂದು ಗೆರೆಯ ಮಾಹಿತಿ ಮಾತ್ರ ಸಿಗುತ್ತದೆ. ಓದುಗರಿಗೆ ಯಾರಿಗಾದರೂ ಈ ಕವನವನ್ನು ಓದಿದ ಬಳಿಕ ಕವಿಯ ಬಗ್ಗೆ ಅಧಿಕ ಮಾಹಿತಿ ಇದ್ದರೆ ಪ್ರತಿಕ್ರಿಯೆಯಲ್ಲಿ ದಯವಿಟ್ಟು ಹಂಚಿಕೊಳ್ಳಬೇಕಾಗಿ ವಿನಂತಿ. ರಾಮಚಂದ್ರ ಅವರ ಲಭ್ಯವಿರುವ ಒಂದು ಕವನ ಇಲ್ಲಿ ನೀಡಿದ್ದೇವೆ. 

ಬಿದ್ದಗರಿಯ ಕಂಡು

ಯಾವ ಲೋಕ ವರ್ಣವಿದಕೆ !

ಏನು ಮೃದುಲ ರೇಖೆಯು !

ತಿಳಿಯ ಬಾನನೀಲಿ, ಪಚ್ಚೆ,

ಬಿಳಿದು, ಕರಿದು, ಹಳದಿಯು !

ಹಸುರು ಹುಲ್ಲ ಸಂದಿನಲ್ಲಿ

ಅವಿತುಕೊಂಡ ಪುಟ್ಟ ಗರಿಯೆ !

ಸಂಜೆ ‘ವಾಕಿ'ನಲ್ಲಿ ಕಂಡೆ

ನಿನ್ನ ಮುದ್ದು ಮಾಟವಾ.

 

ಕೆಳಗೆ ತಿಳಿಯ ಬಾನಬಣ್ಣ

ತಾಗಿ ಹಳದಿ ಗೆರೆಯಿದೆ, -

ಕಂಡು ಕಾಣದಿರುವ ರೇಖೆ

ಯಾವ ಕುಂಚವೆಳೆದುದೊ-

ಒತ್ತಗಿಹುದು ಮಿರುಗು ಕರಿಯು,

ಅಲ್ಲಿಗಲ್ಲಿ ಪಚ್ಚೆ ಬಣ್ಣ,

ಹರಿದು ಬಳೆದುಕೊಂಡಿದೆ,

ಬಿಳಿಯ ಚುಕ್ಕೆ ತುದಿಗಿದೆ.

 

ಎಲ್ಲಕ್ಕಿಂತ ಮಿಗಿಲು ಕಾಣೊ

ಸ್ವರ್ಣಕಣದೆ ಸಿಂಚನ !

ಮುಟ್ಟಿನೋಡೆ ಬೆರಳ ತುದಿಗೆ

ಅಂಟುತಿರುವ ಕಾಂಚನ !

ಏನು ಚೆಲುವು ! ಏನು ಮುದ್ದು !

ಎಂಥ ಕಾಂತಿಯಡಗಿದೆ.

ಯಾವ ಮಾಯೆಯವಿತುಕೊಂಡು

ಪುಟ್ಟಗರಿಯ ತುಂಬಿದೆ?

 

ಯಾವ ಚೆಲ್ವ ಹಕ್ಕಿ ಪುಕ್ಕ -

ವನ್ನು ಬೆಳಗಿ ಬಾಳಿತೊ !

ಯಾವ ಹೆಣ್ಣನೊಲಿಸಿ ತಂದು

ಹಾಡಿ ಗೂಡ ನಲಿಸಿತೊ !

ಯಾವ ನೋಟವನ್ನು ಬೆಳಗಿ

ಯಾರ ಕಣ್ಣ ಸೆಳೆಯಿತೊ !

ಯಾವ ಬಣ್ಣಗಾರನಿಂಗೆ

ಮುದವನಿತ್ತು ಹರಸಿತೊ !

 

ಗರಿಯೆ ! ಎಂತು ಬಿದ್ದು ಹಸುರು

ಹುಲ್ಲ ಸಂದಿನಲ್ಲಿಹೆ ?

ಯಾವ ಯಾನಗೊಂಡವೇಳೆ

ಭರಕೆ ಜಗುಳಿ ಬಿದ್ದಿಹೆ?

ಹಕ್ಕಿ ಕೊಕ್ಕಿನಿಂದ ಕೆದರೆ

ಕೆರಳಿ ಬೇರೆಯಾದೆಯೊ?

ಕಾಲಮಾಗೆ, ಕಾರ್ಯವಾಗೆ

ಭಾರವಾಗಿ ಸಿಡಿದೆಯೊ ?

 

ದೇವಲೋಕದಲ್ಲಿ ಶಾಪ -

ಗ್ರಸ್ತೆಯಾದ ಅಪ್ಸರಿ

ಬುವಿಯ ಪುಣ್ಯಪುರುಷನೊಂದು

ಸ್ಪರ್ಶಕಾಗಿ ಕಾದಳೊ ?

ಭೂಮಿರಾಣಿ ಪಸದನಕ್ಕೆ

ಹಸುರು ಹುಲ್ಲ ಹಸೆಯಲಿ

ಮಡಗಿವೋದ ಒಡವೆಯೊಂದೊ

ತಿಳಿಯಲಾರೆನಾರೆನು.

***

(‘ಸುವರ್ಣ ಸಂಪುಟ' ಕೃತಿಯಿಂದ ಸಂಗ್ರಹಿತ)