‘ಸುವರ್ಣ ಸಂಪುಟ' (ಭಾಗ ೨೧) - ಬೆಳಗೆರೆ ಕೃಷ್ಣಶಾಸ್ತ್ರಿ

‘ಸುವರ್ಣ ಸಂಪುಟ' (ಭಾಗ ೨೧) - ಬೆಳಗೆರೆ ಕೃಷ್ಣಶಾಸ್ತ್ರಿ

ಸಿಂಪಿ ಲಿಂಗಣ್ಣ ಬಗ್ಗೆ ಕಳೆದ ವಾರ ಬರೆದ ಮಾಹಿತಿ ಹಾಗೂ ಅವರ ಕವನವನ್ನು ಬಹಳಷ್ಟು ಜನ ಮೆಚ್ಚಿಕೊಂಡಿದ್ದಾರೆ. ಅವರ ಬಗ್ಗೆ ಒಂದು ವಿವರವಾದ ಲೇಖನವನ್ನು ಬರೆದರೆ ಉತ್ತಮ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಖಂಡಿತಾ ಗಮನವಹಿಸುತ್ತೇವೆ. ಈ ವಾರ ನಾವು ‘ಅಕ್ಷರ ಸಂತ' ಎಂದೇ ಖ್ಯಾತರಾಗಿದ್ದ ಬೆಳಗೆರೆ ಕೃಷ್ಣಶಾಸ್ತ್ರಿ ಇವರು ಬರೆದ ಕವನವೊಂದನ್ನು ಸಂಗ್ರಹಿಸಿ ಪ್ರಕಟಿಸಲಿದ್ದೇವೆ.

ಬೆಳಗೆರೆ ಕೃಷ್ಣಶಾಸ್ತ್ರಿ: ಇವರು ಚಿತ್ರದುರ್ಗದ ಬೆಳಗೆರೆ ಊರಿನಲ್ಲಿ ಮೇ ೨೯, ೧೯೧೬ರಲ್ಲಿ ಜನಿಸಿದರು. ಇವರ ತಂದೆ ಚಂದ್ರಶೇಖರ ಶಾಸ್ತ್ರಿಯವರು ಖ್ಯಾತ ಆಶು ಕವಿಗಳು. ತಾಯಿ ಮೋಕ್ಷಗುಂಡಂ ಅನ್ನಪೂರ್ಣಮ್ಮನವರು. ಇವರು ಮೊದಲಿಗೆ ಬೆಂಗಳೂರಿನ ವಿಮಾನ ಕಾರ್ಖಾನೆಯಲ್ಲಿ ನೌಕರಿಗಿದ್ದರು. ನಂತರ ಅಧ್ಯಾಪನಾ ವೃತ್ತಿಗೆ ಹೊರಳಿದರು. ಇವರ ಪತ್ನಿ ಹಾಗೂ ಇಬ್ಬರು ಮಕ್ಕಳು ಅಕಾಲ ಮೃತ್ಯುವಿಗೆ ಗುರಿಯಾದಾಗ ಜೀವನದಲ್ಲಿ ಭ್ರಮನಿರಸನಗೊಂಡು ಹಿಮಾಲಯ ಯಾತ್ರೆಗೆ ತೆರಳುತ್ತಾರೆ. ಹೀಗೆ ಸುತ್ತಾಟದಲ್ಲಿ ಇರುವಾಗ ಒಮ್ಮೆ ಮಹಾತ್ಮಾ ಗಾಂಧಿಯವರ ಭೇಟಿಯಾಗುತ್ತದೆ. ‘ನೀನು ಮರಳಿ ಊರಿಗೆ ಹೋಗಿ ಮಕ್ಕಳಿಗೆ ವಿದ್ಯೆಯನ್ನು ಕಲಿಸು, ಅವರನ್ನು ಉತ್ತಮ ಪ್ರಜೆಯನ್ನಾಗಿ ಮಾಡು’ ಎನ್ನುವ ಗಾಂಧಿಯವರ ನುಡಿಯಿಂದ ಪ್ರಭಾವಿತರಾಗಿ ಮರಳಿ ಬೆಳಗೆರೆಗೆ ಬರುತ್ತಾರೆ. ಬೆಳಗೆರೆಯಲ್ಲಿ ಶಾಲೆಯನ್ನು ತೆರೆದು ಮಕ್ಕಳಿಗೆ ಕಲಿಸಲು ಶುರು ಮಾಡುತ್ತಾರೆ. ಸಂತನ ರೀತಿ ಬದುಕುತ್ತಾರೆ. ಶ್ವೇತ ವರ್ಣದ ವಸ್ತ್ರಗಳನ್ನು ಮಾತ್ರ ಧರಿಸುತ್ತಾರೆ.  

ಹಲವಾರು ಕವನ, ಲೇಖನ, ನಾಟಕಗಳನ್ನು ಬರೆಯುತ್ತಾರೆ. ಮುಕುಂದೂರು ಸ್ವಾಮಿಗಳ ಬಗ್ಗೆ ಇವರು ಬರೆದ ‘ಯೇಗ್ದಾಗೆಲ್ಲಾ ಐತೆ' ಪುಸ್ತಕವು ಹಲವಾರು ಮುದ್ರಣ ಕಂಡಿದೆ ಹಾಗೂ ನಾಲ್ಕು ಭಾಷೆಗೆ ಅನುವಾದಗೊಂಡಿದೆ. ವರಕವಿ ಬೇಂದ್ರೆ, ಡಿವಿಜಿ ಮೊದಲಾದವರ ಜೊತೆ ಇವರ ಒಡನಾಟವಿತ್ತು. ಇವರ ಸಹೋದರಿಯರಾದ ಪಾರ್ವತಮ್ಮ ಹಾಗೂ ಜಾನಕಮ್ಮನವರೂ ಕವಿ, ಸಾಹಿತಿಗಳಾಗಿದ್ದರು. ಇವರು ಬರೆದ ಬರಹಗಳು ಕಮ್ಮಿಯೇ ಆದರೂ ತುಂಬಾ ಮೌಲ್ಯಯುತವಾದವುಗಳು. ತುಂಬಿ ಎನ್ನುವುದು ಇವರ ಕವನ ಸಂಕಲನ, ಮರೆಯಲಾದೀತೇ? ಎನ್ನುವುದು ಇವರ ಸಾಹಿತ್ಯಲೋಕದ ದಿಗ್ಗಜರ ಒಡನಾಟದ ನೆನಪುಗಳ ಪುಸ್ತಕ. ಹಳ್ಳಿಚಿತ್ರ, ಹಳ್ಳಿ ಮೇಷ್ಟ್ರು, ಆಕಸ್ಮಿಕ ಮೊದಲಾದ ನಾಟಕಗಳನ್ನೂ ಬರೆದಿದ್ದಾರೆ. ಬಡ, ನಿರ್ಗತಿಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಇವರು ಬಹಳ ಶ್ರಮವಹಿಸಿದ್ದಾರೆ. ಆ ಕಾರಣಕ್ಕೆ ಇವರಿಗೆ ‘ಅಕ್ಷರ ಸಂತ' ಎಂದೂ ಕರೆಯುತ್ತಾರೆ. 

ಇವರ ಸಾಧನೆಯನ್ನು ಗಮನಿಸಿ ಕರ್ನಾಟಕ ಸರಕಾರವು ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ರಾಜ್ಯ ಮತ್ತು ಕೇಂದ್ರದಿಂದ ಉತ್ತಮ ಅಧ್ಯಾಪಕರು ಎಂಬ ಗೌರವವೂ ಇವರಿಗೆ ದೊರೆತಿದೆ. ಹಳ್ಳಿಚಿತ್ರ ನಾಟಕಕ್ಕೆ ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ, ಆಕಾಶವಾಣಿ ಪುರಸ್ಕಾರ, ಅಳಸಿಂಗಾಚಾರ್ ಪ್ರಶಸ್ತಿ ದೊರೆತಿದೆ. ಇವರು ಮಾರ್ಚ್ ೨೨, ೨೦೧೩ರಲ್ಲಿ ನಿಧನ ಹೊಂದಿದರು.

ಬೆಳಗೆರೆ ಕೃಷ್ಣಶಾಸ್ತ್ರಿಗಳ ಆಯ್ದ ಕವನ:

ಏಕನಾಗಿ ನಲಿವೆ

ಕಣ್ಣ ಹೊಳಹಿನಲಿ ಬಣ್ಣ ಬಣ್ಣಗಳ ಕವಿಸಿ ಕಾಣಿಸಿರುವೆ

ಬಿನ್ನಾಣವ ಬೀರಿರುವೆ

ಎನ್ನ ಒಳಹೊರಗೆ ನೀನೆ ನೆಲಸಿರುವೆ ಚಿನ್ಮಯನಾಗಿರುವೆ.

 

ರಂಗುರಂಗುಗಳ ಭಂಗಿಯೊಡನೆ ಭವರಂಗವ ತೋರಿರುವೆ

ಬಲು ಡಂಗುಗೊಳಿಸುತಿರುವೆ

ಭಂಗಗೊಳದ ಶೃಂಗಾರವಿರಿಸಿರುವೆ ಮಂಗಳನಾಗಿರುವೆ

 

ಉದಯಗಿರಿಯ ತುದಿರವಿಯ ತೋರಿ ಅದರತ್ತ ಸೆಳೆಯುತಿರುವೆ

ಹೃದಯದ ಪದುಮವ ತೆರೆವೆ

ಮಧುರದುಲುಹ ಪೊದೆಯಿಂದಲುಗಿಸಿ ಮುದವೆರಸಿ ನಗಿಸುತಿರುವೆ.

 

ಭೃಂಗದೊಳಗೆ ಗುನುಗುನುಗನಿರಿಸಿ ಸಂಗೀತವಗೈಸಿರುವೆ

ಎನ್ನ ಮಂಗನ ಮಾಡಿರುವೆ

ಹಿಂಗದೆಲ್ಲೆಡೆಯು ತುಂಬಿ ತುರುಗಿ ನಿಸ್ಸಂಗಮವಾಗಿರುವೆ.

 

ಕುಸುಮದೊಳಗೆ ಪೊಸಗಂಧವಿರಿಸಿ ದೆಸೆದೆಸೆಗೆ ಪಸರಿಸಿರುವೆ

ನಸುನಗೆಯ ಸೂಸುತಿರುವೆ

ನಿಶೆಯ ಮುಸುಕಿನೊಳು ಮಿಸುನಿಗಣ್ಣ ಮಿಳಮಿಳನೆ ಮಿಣುಕಿಸಿರುವೆ.

 

ಹರಕುಮೋಡಗಳ ಬಿರುಕಿನೊಳಗೆ ಚಂದ್ರಮನನಿಣಿಕಿಸಿರುವೆ

ಮಂದಾನಿಲವೆರೆಸಿರುವೆ

ಗಿರಿಯ ಝರಿಯ ತರುಲತೆಯ ತೋರಿ ಸಿರಿಸೊಬಗ ಸುರಿಸುತಿರುವೆ.

 

ಪಾಕಗೊಳಿಸೆ ಈ ಹೃದಯಲೋಕವನನೇಕವನಿರಿಸಿರುವೆ

ಎನ್ನ ಮೂಕನ ಮಾಡಿರುವೆ

ಏಕಭಾವದಿಂದೇಕರೂಪದಿಂದೇಕನಾಗಿ ನಲಿವೆ.

***

(‘ಸುವರ್ಣ ಸಂಪುಟ' ಪುಸ್ತಕದಿಂದ ಸಂಗ್ರಹಿತ)