‘ಸುವರ್ಣ ಸಂಪುಟ' (ಭಾಗ ೨೨) - ರಂ.ಶ್ರೀ. ಮುಗಳಿ

‘ಸುವರ್ಣ ಸಂಪುಟ' (ಭಾಗ ೨೨) - ರಂ.ಶ್ರೀ. ಮುಗಳಿ

ನಾವು ಈ ವಾರ 'ಸುವರ್ಣ ಸಂಪುಟ' ಕೃತಿಯಿಂದ ಆರಿಸಿದ ಕವಿ ರಂ.ಶ್ರೀ. ಮುಗಳಿ. ರಂಗನಾಥ ಶ್ರೀನಿವಾಸ ಮುಗಳಿ ಎಂಬ ಹೆಸರಿನ ಇವರು ‘ರಸಿಕ ರಂಗ' ಎಂಬ ಕಾವ್ಯನಾಮದಿಂದಲೂ ತಮ್ಮ ಬರಹಗಳನ್ನು ರಚಿಸಿದ್ದಾರೆ. ಇವರು ಜುಲೈ ೧೫, ೧೯೦೬ರಲ್ಲಿ ರೋಣ ತಾಲೂಕಿನ ಹೊಳೆಆಲೂರಿನಲ್ಲಿ ಜನಿಸಿದರು. ಇವರ ತಂದೆಯವರು ಆ ಸಮಯದಲ್ಲಿ ಖ್ಯಾತ ವಕೀಲರಾಗಿದ್ದರು. ಮರಾಠಿ ನಂಟು ಇರುವ ಊರಾದರೂ ಇವರ ತಂದೆಯವರಿಗೆ ಕನ್ನಡ ನಾಟಕಗಳನ್ನು ಆಡಿಸುವ ಆಸೆ. ಹೀಗೆ ತಂದೆಯವರ ಸಾಹಿತ್ಯಾಸಕ್ತಿ ಮಗನಿಗೆ ಬಳುವಳಿಯಾಗಿ ಬಂತು.

ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಮುಗಳಿಯವರು ೧೯೩೩ರಲ್ಲಿ ಸಾಂಗ್ಲಿಯ ವಿಲಿಂಗ್ಟನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿದರು. ನಂತರ ೧೯೬೧ರಲ್ಲಿ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ೧೯೬೬ರಲ್ಲಿ ನಿವೃತ್ತಿ ಹೊಂದಿದರು. ನಂತರ ಮೂರು ವರ್ಷಗಳ ಕಾಲ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಮ್ಮ ಹೆಸರಿನ ಮೊದಲ ಭಾಗವಾದ ರಂಗನನ್ನು ತೆಗೆದುಕೊಂಡು ಅದಕ್ಕೆ ರಸಿಕವನ್ನು ಸೇರಿಸಿ ‘ರಸಿಕ ರಂಗ’ ಎಂಬ ಹೆಸರಿನಿಂದ ಬರಹಗಳನ್ನು ಬರೆದರು.

ಇವರು ಬರೆದ ‘ಕನ್ನಡ ಸಾಹಿತ್ಯ ಚರಿತ್ರೆ ಎಂಬ ಗ್ರಂಥ ಬಹಳ ಅಧ್ಯಯನಶೀಲ ಕೃತಿಯಾಗಿದೆ. ಇವರು ಕಾದಂಬರಿ, ಕವನ, ನಾಟಕ, ಕಥೆ, ಪ್ರಬಂಧ ಮೊದಲಾದ ಪ್ರಕಾರಗಳಲ್ಲಿ ತಮ್ಮ ಸಾಹಿತ್ಯವನ್ನು ರಚನೆ ಮಾಡಿದ್ದಾರೆ. ಇವರ ಪ್ರಮುಖ ವಿಮರ್ಶಾ ಕೃತಿಗಳೆಂದರೆ ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡ ಸಾಹಿತ್ಯ ಇತಿಹಾಸ, ಸಾಹಿತ್ಯೋಪಾಸನೆ, ರನ್ನನ ಕೃತಿರತ್ನ, ತವನಿಧಿ ಇತ್ಯಾದಿ. ಬಾಸಿಗ, ಅಪಾರ ಕರುಣೆ, ಓಂ ಅಶಾಂತಿ, ನವಮಾನವ ಇವರ ಕವನ ಸಂಕಲನಗಳು, ಅನ್ನ, ಬಾಳುರಿ, ಕಾರಣ ಪುರುಷ ಇವರ ಕಾದಂಬರಿಗಳು, ಕನಸಿನ ಕೆಳದಿ ಇವರ ಸಣ್ಣ ಕಥಾ ಸಂಕಲನ, ಎತ್ತಿದ ಕೈ, ಸೇನಾ ಪ್ರದೀಪ, ನಾಮಧಾರಿ, ಮನೋರಾಜ್ಯ, ಧನಂಜಯ ಇವರ ನಾಟಕಗಳು, ಕನ್ನಡದ ಕರೆ, ಕನ್ನಡವೆಂಬ ಮಂತ್ರ ಮೊದಲಾದ ಪ್ರಬಂಧಗಳನ್ನು ಬರೆದಿದ್ದಾರೆ. ಜೀವನ ರಸಿಕ ಇವರ ಆತ್ಮಕಥೆ. 

ಮುಗಳಿಯವರ ‘ಕನ್ನಡ ಸಾಹಿತ್ಯ ಚರಿತ್ರೆ' ಕೃತಿಗೆ ೧೯೫೬ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ೧೯೬೩ರಲ್ಲಿ ತುಮಕೂರು ಜಿಲ್ಲೆಯ ಸಿದ್ಧಗಂಗಾದಲ್ಲಿ ಜರುಗಿದ ೪೪ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರು ಫೆಬ್ರವರಿ ೨೦, ೧೯೯೨ರಲ್ಲಿ ನಿಧನ ಹೊಂದಿದರು. 

ರಂ.ಶ್ರೀ. ಮುಗಳಿಯವರ ಆಯ್ದ ಕವನ:

ಆತ್ಮತಪಸಿ

ಮನಹಿಮಾಲಯವಾಸಿ ಆತ್ಮತಪಸಿ !

ಘನಕೆ ಕೈಚಾಚಿರುವ ಮಾಸಾಹಸಿ!

 

ಸೊಲ್ಲಿಲ್ಲ ತಡೆಯಿಲ್ಲ ಮುಂಬರಿವಿಗೆ

ಗುರಿಯತ್ತ ಮಾಗಿ ಸಾಗಿರುವ ನಿನಗೆ

ಸೋಲಿಹುದು ಗೆಲ್ಲಲಿಕೆ ಹುರಿದುಂಬಿಸೆ

ತಡೆಯಿಹುದು ಪಡೆಯಲಿಕೆ ಕಿಡಿಯೂದಿಸೆ.

 

ಕುಳಿರ ಸೋಂಕಿನಲಿ ಕಾವಾರಲೆಂದು

ಕಡೆಗಣಿಸಿ ಹಿರಿಯಣಕವಾಡಲೆಂದು

ನಗೆಯ ಹಿಮವಾದಂತೆ ಸುತ್ತರಿದಿವೆ

ಸಾಲುಸಾಲಿನ ಬೆಟ್ಟ ತಲೆಯೆತ್ತಿವೆ.

 

ಆ ಹಿಮದ ಆ ನಗೆಯ ನೀನಿದಿರಿಸಿ

ಒಳನಗೆಯ ಬೆಳಗಿಂದ ಅದ ಬೆಳಗಿಸಿ

ಸತ್ವದಲಿ ತಲೆದೋರೆ ಅಚಲ ಶಾಂತಿ

ನೀ ಪಡೆವೆ ದಿವ್ಯಜೀವನದ ಕಾಂತಿ.

 

ಮಧುಮಾಸ ಮೊಗವಡವ ಹಾಕಿಕೊಳುತ

ಗಿಡಬಳ್ಳಿ ಹೂವುಗಳು ರೂವಾಗುತ

ತರತರದ ಮೈಮಣಿಸಿ ಕೈಹೊರಳಿಸಿ 

ಹಾಡಿನಲಿ ಕುಣಿತದಲಿ ಮರುಳುಗೊಳಿಸಿ.

 

ಬಂದಿರಲು ಕಾಮಗಳ ಕಾಮಿನಿಯರು

ತಪವ ಭಂಗಿಸಬಂದ ಅಪ್ಸರೆಯರು

ಕದಡಿ ಕರಗಿದ ಚಿತ್ತ ಬೆರೆಯ ಸವಿದು

ತಿಳಿವನುಣ್ಣಿಸುವೆ ನೀ ತಪದಿ ಬಲಿದು.

 

ಕೊನೆಯ ಮೊನೆಯಲಿ ನಿಂತು ಜಾನಿಸುತಿರೆ

ಜನುಮಜನುಮದಿ ಬೀಸಿ ಬಂದಂತಿರೆ

ಅಳಿಯಾಸೆ ಕೊಳೆನೆನಹು ಇಣುಕುತಿಹವು

ಬೆಳೆಯೆ ನಿನ್ನಯ ಬೆಳಕು, ಮಿಣುಕುತಿಹವು.

 

ಗೆಲ್ಲಬಾರದ ಬಲವೆ ತುಂಬಿದೊಲವೆ

ನಿಲ್ಲದೆಯೆ ನಡೆದಿರುವ ತಪದ ಚಲವೆ

ಕಳೆ ಹೊಳೆಯ ಪತನಗಳು ಏಸಾದರು

ಪೂರ್ಣತೆಯ ಸಾಗರದ ಬಳಿತರುವವು.

 

ಬದುಕು ಎತ್ತಿದ ಹೆಜ್ಜೆ ತಪದ ಪಥದಿ 

ಮರಣ ಇರಿಸಿದ ಪದವು ದಣಿದ ಚಣದಿ

ನೋವು ಕಾವುಗಳೆಲ್ಲ ಮುಳ್ಳುಮುರಿತ

ನಲಿವುತಣಿವುಗಳೆಲ್ಲ ಹಿಗ್ಗು ಕುಣಿತ.

 

ಮನಹಿಮಾಲಯದಲ್ಲಿ ನೆಲೆ ನಿಲ್ಲುತ

ಘನ ನಾನು ಎಂದರಿತು ನೆರೆಸೊಲ್ಲುತ

ತಪವಿಹುದೆ ಸಿದ್ಧಿಗೇ ಹಿರಿಯ ಗುರುತು

ಘನವಾಗಿ ಘನದಲ್ಲಿ ಬೆರೆವೆ ಅರಿತು.

***

(ಸುವರ್ಣ ಸಂಪುಟ ಕೃತಿಯಿಂದ ಸಂಗ್ರಹಿತ)