‘ಸುವರ್ಣ ಸಂಪುಟ' (ಭಾಗ ೨೩) - ತೀ.ನಂ.ಶ್ರೀಕಂಠಯ್ಯ
ಕಳೆದ ವಾರ ನಾವು ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ರಂ.ಶ್ರೀ. ಮುಗಳಿ ಇವರ ಕವನ ಬಹುತೇಕರಿಗೆ ಮೆಚ್ಚುಗೆಯಾಗಿದೆ. ಅವರ ಇತರ ಕವನಗಳ ಬಗ್ಗೆಯೂ ತಿಳಿಸಿರಿ ಎಂದು ಹೇಳಿದ್ದಾರೆ. ಈ ಕೃತಿಯಲ್ಲಿ ಪ್ರಕಟವಾಗಿರುವ ಅವರ ಇತರ ಕವನಗಳೆಂದರೆ ಉಗಾರದ ಹೊಳೆಯ ಬಳಿ, ಮಳೆ ತಂದಲು ಹಾಗೂ ಸುಖ ಸಂಚಾರಿಗಳು. ಈ ವಾರ ನಾವು ಆಯ್ದ ಕವಿ ತೀ.ನಂ.ಶ್ರೀಕಂಠಯ್ಯ
ಕವಿ ತೀ.ನಂ.ಶ್ರೀ.ಪರಿಚಯ: ಕನ್ನಡ ಸಾಹಿತ್ಯ ಲೋಕದಲ್ಲಿ ತೀ.ನಂ.ಶ್ರೀ. ಎಂದೇ ಖ್ಯಾತರಾದ ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ ಇವರು ೧೯೦೬ರ ನವೆಂಬರ್ ೨೬ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ತೀರ್ಥಪುರ ಎಂಬ ಊರಿನಲ್ಲಿ ಜನಿಸಿದರು. ಇವರ ತಂದೆ ನಂಜುಂಡಯ್ಯ, ತಾಯಿ ಭಾಗೀರಥಮ್ಮ. ಶ್ರೀಕಂಠಯ್ಯನವರು ತಮ್ಮ ೯ನೇಯ ವಯಸ್ಸಿನಲ್ಲಿ ತಮ್ಮ ತಾಯಿಯನ್ನು ಕಳೆದುಕೊಂಡರು. ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಚಿಕ್ಕನಾಯಕನಹಳ್ಳಿ ಹಾಗೂ ತುಮಕೂರಿನಲ್ಲಿ ಪೂರೈಸಿದರು. ಬಿ.ಎ.ಪದವಿಯಲ್ಲಿ ಮೈಸೂರು ಮಹಾರಾಜರ ಕೈಗಳಿಂದ ೬ ಚಿನ್ನದ ಪದಕ ಪಡೆಯ ಸೌಭಾಗ್ಯ ಇವರದ್ದಾಗಿತ್ತು. ಇವರಿಗೆ ಮುಂದಕ್ಕೆ ಕಲಿಯುವ ಆಸೆ ತುಂಬಾನೇ ಇದ್ದರೂ, ಮನೆಯ ಆರ್ಥಿಕ ಪರಿಸ್ಥಿತಿ ಇವರನ್ನು ಕೆಲಸಕ್ಕೆ ಸೇರುವಂತೆ ಮಾಡಿತು.
ಶ್ರೀರಂಗಪಟ್ಟಣದಲ್ಲಿ ಕಂದಾಯ ಇಲಾಖೆಯಲ್ಲಿ ಇವರು ಕೆಲಸಕ್ಕೆ ಸೇರಿದರು. ಆದರೆ ಅವರಿಗೆ ಈ ಕೆಲಸ ತೃಪ್ತಿ ತಂದುಕೊಡಲಿಲ್ಲ. ಹಠ ಹಿಡಿದು ಮೈಸೂರಿನ ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಇಂಗ್ಲೀಷ್ ಎಂ.ಎ. ಪೂರೈಸಿದರು. ಇದರಿಂದಾಗಿ ಅವರಿಗೆ ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ದೊರೆಯಿತು. ನಂತರದ ದಿನಗಳಲ್ಲಿ ಕನ್ನಡ ಎಂ ಎ ಪದವಿಯನ್ನೂ ಮುಗಿಸಿದರು. ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೬೨ರಲ್ಲಿ ನಿವೃತ್ತರಾದರು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಮಿತಿಯ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದಾರೆ.
‘ಒಲುಮೆ' ಕವನ ಸಂಕಲನ ಇವರ ಪ್ರಥಮ ಕೃತಿ. ಇವರು ರಚಿಸಿದ ‘ಭಾರತೀಯ ಕಾವ್ಯ ಮೀಮಾಂಸೆ' ಕೃತಿ ಬಹಳ ಖ್ಯಾತಿ ಪಡೆದ ಪುಸ್ತಕ. ಇವರ ಕೆಲವು ಕೃತಿಗಳು ಹೀಗಿವೆ. ಒಲುಮೆ, ಬಿಡಿ ಮುತ್ತು (ಕವನ ಸಂಕಲನ), ನಂಟರು (ಪ್ರಬಂಧ ಸಂಕಲನ), ಕನ್ನಡ ಮಧ್ಯಮ ವ್ಯಾಕರಣ, ನಂಬಿಯಣ್ಣನ ರಗಳೆ, ಗಧಾಯುದ್ಧ (ಸಂಪಾದನೆ), ರಾಕ್ಷಸನ ಮುದ್ರಿಕೆ ಇತ್ಯಾದಿ. ಇವರು ೧೯೬೬ರ ಸೆಪ್ಟೆಂಬರ್ ೭ರಂದು ಕಲ್ಕತ್ತಾದಲ್ಲಿ ನಿಧನ ಹೊಂದಿದರು.
ತೀ.ನಂ.ಶ್ರೀ. ಅವರ ಆಯ್ದ ಕವನಗಳು:
ಒಲವೋ ಹಗೆಯೋ
ಮಿಕ್ಕವರಲಿ ನಗೆಗೂಡುತ ಬೆರೆವೆ
ನನ್ನೊಂದಿಗೆ ಬರಿಗೋಳನೆ ಕರೆವೆ ;
ಒಲವೋ ಹಗೆಯೋ -ಯಾವುದಿದು?
ಹೆರರೇನೆನ್ನಲಿ, ಕೇಳುತ ನಲಿವೆ,
ಸರಸವನಾಡಲು ನನ್ನಲಿ ಮುನಿವೆ ;
ಒಲವೋ ಹಗೆಯೋ -ಯಾವುದಿದು?
ಕುಳಿತರೆ ನಿಂತರೆ ಹುಳಕನೆ ಬಗೆವೆ,
ತುಸ ತಪ್ಪಾದರು ಕಲಹವ ತೆಗೆವೆ;
ಒಲವೋ ಹಗೆಯೋ -ಯಾವುದಿದು?
ಪ್ರಣಯವ ಬೀರಲು, ಕಪಟವಿದೆನುವೆ,
ಸುಮ್ಮನೆ ಸಾರಲು, ಒಲವಿಲ್ಲೆನುವೆ ;
ಒಲವೋ ಹಗೆಯೋ -ಯಾವುದಿದು?
-ದೂರಿದೆನಲ್ಲವೆ ನಿನ್ನನು ಹೆಚ್ಚು ?
ನನಗಾದರೊ, ಈ “ಹಗೆ"ಯೂ ಮೆಚ್ಚು !
ಒಲವೋ ಹಗೆಯೋ -ಯಾವುದಿದು?
***
ಅಗಲಿಕೆ
ಬೇಗ ಕೊಡುವೆವೆಂಬ ನೆಚ್ಚಿಕೆಯೂರೆಗೋಲನು ನೆಮ್ಮಿ ನಿಲ್ಲುತ
ಸಾಗಿಹೋದೀ ವರುಷವೊಂದನು ನಾವದೆಂತೋ ಕಳೆದೆವು.
ಕೊಚ್ಚಿ ಹೋಯಿತು ಕುಲದ ಕಟ್ಟಳೆಯೆಂಬ ಹೊನಲಿನ ಸೆಳವಿನೊಳಗೆ
ನೆಚ್ಚಿಕೆಯ ಹುಸಿಯೂರೆಗೋಲದು ; ಬೆಳೆದುಹೋದುವು ದಿನಗಳು.
ಕೊಡುವಾ ಮಾತೇಕೆ? ನೋಡುವ ಭಾಗ್ಯವೇ ನಮಗಿಲ್ಲ ! -ಬಿರುಹೊಳೆ
ಕಾಡುತಿರುವುದು ನಮ್ಮ ಇಬ್ಬರ ನಡುವೆ ಮೊರೆಯುತ ಸರಿಯುತ.
ಬೇಯುವನು ನಾನೊಬ್ಬನಾದರೆ ಮೆಟ್ಟುವೆನು ಬಿಗಿಹಿಡಿದು ಗೋಳನು.
ಹಾಯುವೆನು ಗಂಡೆದೆಯಲೆದುರಿಸಿ ದೀರ್ಘವಿರಹದ ಕಿಚ್ಚನು
ಅಯ್ಯೋ, ತಾಳುವಳೆಂತು ಕೋಮಲೆ ಹಿಂಗದಾ ಹಂಬಲಿನ ನೋವನು?
ಕೊಯ್ಯದೇ ನಾಚಿಕೆಯು ಕೊರಳನು, ಹೆರರಿಗುಸಿರುವೆನೆನ್ನಲು !
ಪಾಪಿ ನನ್ನೊಳದೇಕೆ ಲೋಕಕೆ ಮೀರಿದೊಲುಮೆಯನಿತ್ತೆ. ನಲ್ಲೆ?
ತಾಪದಲಿ ಕಂಗೆಡುವುದೊಂದೇ ಫಲವೆ ನಿನ್ನಾ ಪ್ರೇಮಕೆ !
***
(ಸುವರ್ಣ ಸಂಪುಟ ಕೃತಿಯಿಂದ ಸಂಗ್ರಹಿತ)