‘ಸುವರ್ಣ ಸಂಪುಟ' (ಭಾಗ ೨೪) - ಈಶ್ವರ ಸಣಕಲ್ಲ

‘ಸುವರ್ಣ ಸಂಪುಟ' (ಭಾಗ ೨೪) - ಈಶ್ವರ ಸಣಕಲ್ಲ

'ಸುವರ್ಣ ಸಂಪುಟ' ಕೃತಿಯಿಂದ ನಾವು ಸಂಗ್ರಹಿಸಿ ಪ್ರಕಟಿಸುತ್ತಿರುವ ಕವನಗಳು ಅಪರೂಪ ಹಾಗೂ ಸುಂದರ ಎನ್ನುತ್ತಾರೆ ಓದುಗರು. ನಮ್ಮ ಆಶಯವೂ ಅದೇ ಆಗಿದೆ. ಹಳೆಯ, ಬಹುತೇಕರಿಗೆ ಅಪರಿಚಿತವಾಗಿರುವ ಕವಿಗಳು ಹಾಗೂ ಅವರ ಕವನಗಳನ್ನು ಪರಿಚಯ ಮಾಡುವುದೇ ಈ ಮಾಲಿಕೆಯ ಉದ್ದೇಶ. ಈ ವಾರ ನಾವು ಆಯ್ದು ಕೊಂಡು ಕವಿ ಈಶ್ವರ ಸಣಕಲ್ಲ.

ಕವಿ ಈಶ್ವರ ಸಣಕಲ್ಲ ಇವರ ಪರಿಚಯ: ‘ಜಗವೆಲ್ಲಾ ನಗುತಿರಲಿ, ಜಗದಳವು ನನಗಿರಲಿ' ಎಂದು ಬರೆದು, ಹಾಡಿ ಹಾಗೆಯೇ ಬದುಕಿದ ಸಂಭಾವಿತ ಕವಿ, ಲೇಖಕರು ಎಂದೇ ಹೆಸರಾದವರು ಈಶ್ವರ ಸಣಕಲ್ಲ ಇವರು. ೧೯೦೬ರ ಡಿಸೆಂಬರ್ ೨೦ ರಂದು ಯಾದವಾಡದಲ್ಲಿ ಜನನ. ಇವರ ತಂದೆ ಮಹಾರುದ್ರಪ್ಪ ಹಾಗೂ ತಾಯಿ ನೀಲಮ್ಮ. ಬಾಲ್ಯದಿಂದಲೇ ಈಶ್ವರರಿಗೆ ಓದಿನಲ್ಲಿ ಆಸಕ್ತಿ. ಬೆಳಗಾವಿಯ ಜಿ.ಎ.ಪ್ರೌಢಶಾಲೆಯಲ್ಲಿ ಶಿಕ್ಷಣ ಪೂರೈಸಿ, ಕೊಲ್ಲಾಪುರದ ರಾಜಾರಾಮ ಕಾಲೇಜಿಗೆ ಸೇರಿದರೂ, ಆರ್ಥಿಕ ಸಮಸ್ಯೆಯ ಕಾರಣದಿಂದ ಶಿಕ್ಷಣವನ್ನು ಮೊಟಕುಗೊಳಿಸಬೇಕಾಗುತ್ತದೆ. ರಬಕವಿಯಲ್ಲಿ ಉದ್ಯೋಗಕ್ಕೆ ಸೇರುತ್ತಾರೆ.

ಪ್ರೌಢಶಾಲೆಯಲ್ಲಿರುವಾಗಲೇ ಕವನಗಳನ್ನು ರಚಿಸಲು ಪ್ರಾರಂಭ. ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಶಿವಾನಂದ ಸ್ವಾಮಿಗಳವರ ‘ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮೃತ್ಯು' ಎಂಬ ಗ್ರಂಥವನ್ನು ಕನ್ನಡಾನುವಾದ ಮಾಡಿದರು. ಶರಣ ಸಂದೇಶ, ಖಾದಿ ಗ್ರಾಮೋದ್ಯೋಗ ಪತ್ರಿಕೆಗಳ ಸಂಪಾದಕತ್ವ ವಹಿಸಿಕೊಂಡಿದ್ದರು. ಸಣ್ಣ ಪ್ರಾಯದಲ್ಲೇ ಮದುವೆಯಾದ ಇವರ ಮೊದಲ ಹೆಂಡತಿ ಹೆಣ್ಣು ಮಗುವಿಗೆ ಜನ್ಮನೀಡಿ ಮರಣ ಹೊಂದಿದಾಗ ಮತ್ತೊರ್ವ ಯುವತಿಯನ್ನು ವರಿಸುತ್ತಾರೆ. ಅವಳಿಗೆ ಹತ್ತು ಮಕ್ಕಳು. ಒಟ್ಟಿಗೆ ೧೧ ಮಂದಿಯ ಮಹಾ ಸಂಸಾರವನ್ನು ಪೊರೆಯಲು ಬಹಳ ಶ್ರಮ ಪಡುತ್ತಾರೆ ಈಶ್ವರ ಸಣಕಲ್ಲ ಇವರು. 

೧೯೩೪ರಲ್ಲಿ ಈಶ್ವರ ಸಣಕಲ್ಲರ ಮೊದಲ ಕವನ ಸಂಕಲನ ‘ಕೋರಿಕೆ' ಪ್ರಕಟವಾಗುತ್ತದೆ. ಇವರು ಸುಮಾರು ೨೦ ಕೃತಿಗಳನ್ನು ರಚಿಸಿದ್ದಾರೆ. ಮುಂಬಯಿಯಿಂದ ಪ್ರಕಟವಾಗುತ್ತಿದ್ದ ‘ಸಹಕಾರ' ಪತ್ರಿಕೆಯ ಸಂಪಾದಕರಾಗಿದ್ದರು. ಇವರು ಕೋರಿಕೆ, ಹುಲ್ಕಲ್ಗೆಕಿಡಿ (ಕವನ ಸಂಕಲನ), ಬಟ್ಟೆ (ಕಥಾ ಸಂಕಲನ), ಸಂಸಾರ ಸಮರ (ಕಾದಂಬರಿ), ಗ್ರಾಮೋದ್ಧಾರ (ಅನುವಾದಿತ ಕೃತಿ) ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. 

ಇವರ ‘ಬಟ್ಟೆ’ ಕಥಾ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ೧೯೬೦ರಲ್ಲಿ ಬೆಳಗಾವಿಯಲ್ಲಿ ನಡೆದ ೫೨ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರು ೧೯೮೪ರ ಡಿಸೆಂಬರ್ ೩ರಂದು ನಿಧನಹೊಂದಿದರು.

ಈಶ್ವರ ಸಣಕಲ್ಲ ಅವರ ಆಯ್ದ ಕವನಗಳು:

ಕೋರಿಕೆ

ಜಗವೆಲ್ಲ ನಗುತಿರಲಿ,

ಜಗದಳುವು ನನಗಿರಲಿ !

ನಾನಳಲು ಜಗವೆನ್ನನೆತ್ತಿಕೊಳದೇ ?

ನಾ ನಕ್ಕು, ಜಗವಳಲು, ನೋಡಬಹುದೇ ?

ತೆರವಾಗಿ ನನ್ನೆದೆಯು,

ಧರೆಯೆದೆಯು ಉಕ್ಕಿರಲಿ !

ಧರೆಯೊಳಗೆ ತೇಲಿಸುವೆನೆನ್ನೆದೆಯನು!

ಧರೆ ಬತ್ತಿ, ಎನ್ನೆದೆಯು ಉಕ್ಕಲೇನು?

ಪೊಡವಿಯೈಸಿರಿ ವಡೆದು,

ಬಡತನವು ನನಗಿರಲಿ !

ಕೈಯೊಡ್ಡೆ, ಪೊಡವಿಯೆನಗಿಕ್ಕದೇನು?

ಪೊಡವಿಯೇ ಮೈಯಳಿಯೆ, ಮಾಡಲೇನು?

ವಿಶ್ವವನು ತುಂಬಿರುವ

ಈಶ್ವರನೆ ಅಳತೊಡಗೆ,

ಸೈತಿಡಲು, ಸೈಪಿಡಲು, ಬರುವನಾವಂ?

‘ಹೇ, ತಂದೆ,’ ಎನಲೆನ್ನನವನೆ ಕಾವಂ?

***

ತುಂಬಿಗೆ

ಸುಮನೋ-ವಿಹಾರಿಯೇ,

ಸುರಸ-ಝೇಂಕಾರಿಯೇ,

ನಿನ್ನ ಸ್ವಾಗತಕೆ ಬನ ನಳನಳಿಸಿವೆ !

ಅಲರಲರ ಎಸಳುಗಳು

ನರುಗಂಪ ಪಸುಳೆಗಳು

ನಿನ್ನ ದರ್ಶನಕಹಾ ! ಕಳಕಳಿಸಿವೆ.

 

ಆನಂದ-ಮಧು-ಪಾನ

ತೃಪ್ತಿ-ಸಂಭ್ರಮ-ಗಾನ

ಮೈಗೊಂಡು ಗಂಧವಹನನು ಏರಿಹೆ !

ಅಮೃತ-ರಸ-ಸಂಚಯಕೆ

ಹೊರಹೊಮ್ಮಲೊಳಬಯಕೆ

ಸುಮ-ಸುಧಾ-ಸುರಲೋಕವನು ಸಾರಿಹೆ!

 

ಓ ಪರಾಗಿತ -ಪದವೆ

ಪರಿಮಳಿತ ಶ್ರೀಯೊದವೆ

ಅರಳಿ ನಿಂತಿದೆ ಪುಷ್ಪ-ಲೋಕ ! ಗೆಳೆಯಾ!

ಅಲ್ಲಿ ಪದವಿಡು ತುಂಬಿ

ಮುತ್ತನಿಡು ಎದೆದುಂಬಿ

ತುಂಬದರ ಗರ್ಭಕವಿನಾಶಿ - ಕಳೆಯ.    

 

ತುಂತು ತುಂಬೆಲೆ ತುಂಬಿ

ದಿಗ್ದೇಶಗಳ ತುಂಬಿ,

ತುಂಬಿ ಮೀರೆಲೆ ನೀನು ನಾಕ - ಲೋಕ

ಒಂದೊಂದೇ ಪದಸ್ಪರ್ಶ

ಒಂದೆ ಚುಂಬನ-ಹರ್ಷ

ಬಗೆಯಿಸಲಿ ನವ -ಸರಸ- ಸೃಷ್ಟಿಪಾಕ.

***

(‘ಸುವರ್ಣ ಸಂಪುಟ’ ಕೃತಿಯಿಂದ ಸಂಗ್ರಹಿತ)

ಚಿತ್ರ ಕೃಪೆ: ಅಂತರ್ಜಾಲ ತಾಣ