‘ಸುವರ್ಣ ಸಂಪುಟ' (ಭಾಗ ೨೬) - ಪ್ರಹ್ಲಾದ ನರೇಗಲ್ಲ

‘ಸುವರ್ಣ ಸಂಪುಟ' (ಭಾಗ ೨೬) - ಪ್ರಹ್ಲಾದ ನರೇಗಲ್ಲ

‘ಹಚ್ಚೇವು ಕನ್ನಡದ ದೀಪ' ಕವಿತೆಯ ಮೂಲಕ ಖ್ಯಾತರಾದ ಕವಿ, ವಿದ್ವಾಂಸ ಡಾ. ಡಿ.ಎಸ್.ಕರ್ಕಿ ಅವರ ಬಗ್ಗೆ ಕಳೆದ ವಾರ ಪ್ರಕಟಿಸಿದ ಲೇಖನ ಹಾಗೂ ಕವನ ಬಹುಜನರ ಮನಗೆದ್ದಿದೆ. ಹಳೆಯ ಕವನಗಳ ಸ್ವಾದವೇ ಬೇರೆ, ಈಗಿನ ಫಾಸ್ಟ್ ಯುಗದ ಕವನಗಳ ವಿಷಯವೇ ಬೇರೆ ಎಂದಿದ್ದಾರೆ ಬಹಳಷ್ಟು ಆತ್ಮೀಯ ಗೆಳೆಯರು. ಈ ವಾರ ನಿಮಗಾಗಿ ಮತ್ತೊಬ್ಬ ಅಪರೂಪದ ಕವಿ ಪ್ರಹ್ಲಾದ ನರೇಗಲ್ಲರ ಕವನವನ್ನು ಆರಿಸಿ ತಂದಿದ್ದೇವೆ. ಎಂದಿನಂತೆ ಓದಿ, ಅಭಿಪ್ರಾಯ ತಿಳಿಸಬೇಕಾಗಿ ಕೋರಿಕೆ.

ಪ್ರಹ್ಲಾದ ನರೇಗಲ್ಲ: ಇವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಜಾವೂರು ಎಂಬ ಊರಿನಲ್ಲಿ ೧೯೦೭, ಮೇ ೩೦ರಂದು. ರವೀಂದ್ರನಾಥ ಟ್ಯಾಗೋರರ ಶಿಷ್ಯರಾಗಿ ಶಾಂತಿನಿಕೇತನದಲ್ಲಿ ವಾಸಾಂಗ ಮಾಡಿದ ಇವರು ಎಂ.ಎ.ಪದವೀಧರರು. ರವೀಂದ್ರನಾಥ ಟ್ಯಾಗೋರರ ನೋಬೆಲ್ ಪುರಸ್ಕೃತ ಕೃತಿ ‘ಗೀತಾಂಜಲಿ'ಯನ್ನು ಓದಿ ಪ್ರಭಾವಿತರಾಗಿ ನೇರವಾಗಿ ಬಂಗಾಳಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ರವೀಂದ್ರರ ಹಲವಾರು ಕೃತಿಗಳು ಕನ್ನಡಕ್ಕೆ ಅನುವಾದವಾಗಿದ್ದರೂ ಅವೆಲ್ಲವೂ ಆಂಗ್ಲ ಮೂಲದಿಂದ ಅನುವಾದವಾಗಿದ್ದವು. ಈ ಹಿನ್ನಲೆಯಲ್ಲಿ ಕನ್ನಡಿಗನೊಬ್ಬ ಬಂಗಾಳಿ ಭಾಷೆಯನ್ನು ಕಲಿತು, ಕೃತಿಯೊಂದನ್ನು ಅನುವಾದ ಮಾಡಿರುವುದು ಬಹಳ ಅಪರೂಪದ ಸಾಧನೆ ಎನ್ನಬಹುದು. ಟ್ಯಾಗೋರ್ ಅವರ ಭಾವನೆಗಳನ್ನು ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಪ್ರಹ್ಲಾದ ನರೇಗಲ್ಲ ಇವರು ಕೇವಲ ಕವಿ, ಉಪನ್ಯಾಸಕ ಮಾತ್ರವಲ್ಲದೇ ಸ್ವಾತಂತ್ರ್ಯ ಹೋರಾಟಗಾರರೂ, ಪತ್ರಕರ್ತರೂ, ಗಾಯಕರೂ, ವಿಮರ್ಶಕರೂ ಆಗಿದ್ದರು. ಇವರನ್ನು ಎಲ್ಲರೂ ಪ್ರೀತಿಯಿಂದ ‘ಪ್ರಹ್ಲಾದ ಕಾಕಾ’(ಚಿಕ್ಕಪ್ಪ) ಎಂದು ಕರೆಯುತ್ತಿದ್ದರು. ಇವರ ಪ್ರಕಟಿತ ಕೃತಿಗಳ ಬಗ್ಗೆ ಅಧಿಕ ಮಾಹಿತಿ ಸಿಗುತ್ತಿಲ್ಲ. ಆದರೂ ಪುಷ್ಪಾಂಜಲಿ, ನಸುಕು, ಸಾವಿತ್ರಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ ಎಂಬ ಪುಟ್ಟ ಮಾಹಿತಿ ಇದೆ. ‘ಸುವರ್ಣ ಸಂಪುಟ' ದಲ್ಲಿ ಇವರ ಒಂದೇ ಒಂದು ಕವನ ಪ್ರಕಟ ಮಾಡಿದ್ದಾರೆ. ಇವರು ಸುಮಾರು ೧೬ ಕೃತಿಗಳನ್ನು ರಚಿಸಿದ್ದಾರೆ. ಇವರ ಬದುಕು-ಬರಹದ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ದಯಮಾಡಿ ಪ್ರತಿಕ್ರಿಯೆಯಲ್ಲಿ ಹಂಚಿಕೊಳ್ಳಬೇಕಾಗಿ ವಿನಂತಿ.

ಪ್ರಹ್ಲಾದ ನರೇಗಲ್ಲ ಅವರ ಕವನ:

ನಸುಕು

ಜಗಕ್ಕೆಲ್ಲ ಬಿದ್ದಿತ್ತೊ ಇಷ್ಟು ಹೊತ್ತಿರುಳೆಂಬ

ಕಂಪಾದುದೊಂದು ಕನಸು !

ಹಗಲಿನ್ನು ಬಂದು ಬೆಳಕಿನ ಸೊಬಗು ಬೆಳಗುವುದು -

ಕನಸು ಆಗುವದು ನನಸು !

ಕನಸು ಕನಸೆಂದು ಕಂಗಳರು ಕನಕರಿಸುವರು

ಕನಸು ಕನಸಾಗಬಹುದೇ?

ಜನಿಸಿದರೆ ಕನಸಿನೊಳು ನನಸು, ನನಸಿನ ಜಗವು

ಕನಸಾಗಿ ಸಾಗಬಹುದೇ?

ಕನಸು ನನಸಿನ ಕನಸು, ನನಸು ಕನಸಿನ ನಸುಕು

ಎಂಬ ಸವಿಗವನವನ್ನು

ಇನಿದಾಗಿ ಕಟ್ಟುತಿಹ ಕವಿಯಾಗಿ ಒಪ್ಪುವದು

ಬೆಳಗು ಮುಂಜಾವು ಮುನ್ನು !

ಚಿಕ್ಕಿಯಾಗಿರುಳೆಲ್ಲ ಮುಗಿಲಲ್ಲಿ ನಗೆಮೊಗದಿ

ಆಟವನ್ನಾಡಿ ದಣಿದು

ಹಕ್ಕಿಯಾಗೀಗ ಸಲೆ ಹಾಡುವನು ಇಂಪಾಗಿ

ದೇವತಾ ಮನದಿ ತಣಿದು !

ಅಂದಲರ ಕಂಪಿನಲಿ ಕಣ್ಣೆಲರ ತಂಪಿನಲಿ

ಪಾಡುಗಳ ಪೆಂಪಿನಲ್ಲಿ

ಕೆಂದಳಿರ ಕೆಂಪಿನಲಿ ಸೊಬಗೊಗೆವ ಸೊಂಪಿನಲಿ

ಮೈದೋರ್ವಲಂಪಿನಲ್ಲಿ !

ಒಪ್ಪಾಗಿ ಚಿಗುರುತಿಹ ಮೂಡಲದ ಬೆಳಕಿನೊಳು

ಸೊಗಸುಳ್ಳ ಮನದಲಿಂದು

ಒಪ್ಪುತಿರುವದು ಬೆಳಗು ಮುಂಜಾವು ನುಣ್ಪುಳ್ಳ

ಬೆಳಕನೀರಿಂದ ಮಿಂದು !

ಚೊಕ್ಕಟವದೆಂತಹದೊ ಈ ಬಗೆಯ ಬೆಳಗು ಮುಂ-

ಜಾವಿನಾ ಸೊಬಗು-ಸೊಗಸು !

ಅಕ್ಕ ನಸುಕೇ ! ಅಕ್ಕರದಿ ನಕ್ಕು ನನ್ನ ಯೀ

ಅಂತರಂಗವನು ನಗಿಸು !  

***

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)