‘ಸುವರ್ಣ ಸಂಪುಟ' (ಭಾಗ ೨೭) - ಜಿ.ಪಿ.ರಾಜರತ್ನಂ

‘ಸುವರ್ಣ ಸಂಪುಟ' (ಭಾಗ ೨೭) - ಜಿ.ಪಿ.ರಾಜರತ್ನಂ

‘ಮಕ್ಕಳ ಸಾಹಿತಿ’ ಎಂದೇ ಖ್ಯಾತರಾದ ಜಿ.ಪಿ.ರಾಜರತ್ನಂ ನಾವು ಈ ವಾರ ಆಯ್ದ ಕವಿ. ನಾವೆಲ್ಲಾ ಸಣ್ಣವರಿದ್ದಾಗ ಹಾಡುತ್ತಿದ್ದ ‘ನಾಯಿಮರಿ ನಾಯಿಮರಿ ತಿಂಡಿ ಬೇಕೇ..., ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ… ಮೊದಲಾದ ಪ್ರಾಸಬದ್ಧ ಕವನಗಳನ್ನು ಎಂದಾದರೂ ಮರೆಯಲು ಸಾಧ್ಯವೇ? ಇಂತಹ ಹಲವಾರು ಕವನಗಳನ್ನು ಮಕ್ಕಳಿಗಾಗಿಯೇ ಬರೆದ ಕವಿ ಜಿ.ಪಿ.ರಾಜರತ್ನಂ.

ಗುಂಡ್ಲು ಪಂಡಿತ ರಾಜರತ್ನಂ ಎಂಬ ನಾಮಾಂಕಿತರಾದ ಇವರು ಮೂಲತಃ ಚಾಮರಾಜನಗರ ಜಿಲ್ಲೆಯ (ಆಗಿನ ಮೈಸೂರು) ಗುಂಡ್ಲುಪೇಟೆಯವರು. ಇವರು ೧೯೦೯ರ ಡಿಸೆಂಬರ್ ೫ರಂದು ಹುಟ್ಟಿದರು. ಇವರ ತಂದೆ ಜಿ.ಪಿ.ಗೋಪಾಲಕೃಷ್ಣ ಅಯ್ಯಂಗಾರ್. ಬಾಲ್ಯದಲ್ಲೇ ತಾಯಿಯವರನ್ನು ಕಳೆದುಕೊಂಡ ರಾಜರತ್ನಂ ತಂದೆಯವರ ಮಮಕಾರದಲ್ಲೇ ಬೆಳೆದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ವಿಜ್ಞಾನದಲ್ಲಿ ಬಿ.ಎ.ಪದವಿಯನ್ನು ಪಡೆದರು. ಆಮೇಲೆ ೧೯೩೧ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನಿಂದ ಕನ್ನಡ ಎಂ.ಎ.ಪದವಿಯನ್ನು ಗಳಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 

ಇವರ ಸುಮಾರು ೨೫೦ಕ್ಕೂ ಅಧಿಕ ಪುಸ್ತಕಗಳು ಪ್ರಕಟಗೊಂಡಿವೆ. ಮೈಸೂರು, ಬೆಂಗಳೂರು, ತುಮಕೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ‘ಕನ್ನಡ ಪಂಡಿತ’ ಹುದ್ದೆಯಲ್ಲಿ ಉಪಾಧ್ಯಾಯರಾಗಿ ಕೆಲಸ ಮಾಡಿದ್ದಾರೆ. ಇವರ ಮಕ್ಕಳ ಕವನ ಸಂಕಲನಗಳು ಬಹಳ ಖ್ಯಾತಿಯನ್ನು ಪಡೆದಿವೆ. ಇವರು ಓರ್ವ ಶ್ರೇಷ್ಟ ವಾಗ್ಮಿ, ಕವಿ ಮತ್ತು ವಿಮರ್ಶಕರಾಗಿದ್ದರು. 'ಭ್ರಮರ' ಇವರ ಕಾವ್ಯನಾಮ.

ಇವರು ತುತ್ತೂರಿ, ರತ್ನನ ಪದಗಳು, ನಾಗನ ಪದಗಳು, ಬುದ್ಧನ ಜಾತಕಗಳು, ಧರ್ಮದಾನಿ ಬುದ್ಧ, ಭಗವಾನ್ ಮಹಾವೀರ, ಕಡಲೆ ಪುರಿ, ಗುಲಗುಂಜಿ, ಕಂದನ ಕಾವ್ಯ ಮಾಲೆ ಇವರ ಕೆಲವು ಪ್ರಕಟಿತ ಕವನ ಸಂಕಲನಗಳು. ಇವರ ಹಲವಾರು ಹಾಡುಗಳನ್ನು ಚಲನ ಚಿತ್ರಗಳಲ್ಲಿ ಬಳಸಿಕೊಂಡಿದ್ದಾರೆ.

೧೯೭೮ರಲ್ಲಿ ದೆಹಲಿಯಲ್ಲಿ ನಡೆದ ೫೦ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೭೦ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ೧೯೬೯ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಇವರಿಗೆ ದೊರೆತಿದೆ. ೧೯೭೭ರಲ್ಲಿ ಇವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ. ಇವರು ೧೯೭೯ರ ಮಾರ್ಚ್ ೧೩ರಂದು ನಿಧನ ಹೊಂದಿದರು.

ಜಿ.ಪಿ.ರಾಜರತ್ನಂ ಅವರ ಆಯ್ದ ಕವನಗಳು:

ಮಡಿಕೇರೀಲಿ ಮಂಜು

ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ

ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ

ಸಾಫಾಗ್ ಅಳ್ಳ ತಿಟ್ಟಿಲ್ದಂಗೆ

ಮಡಿಕೇರೀಲಿ ಮಂಜು!

ಮಡಗಿದ್ ಅಲ್ಲೇ ಮಡಗಿದ್ದಂಗೆ

ಲಂಗರ್ ಬಿದ್ದಿದ್ ಅಡಗಿದ್ದಂಗೆ 

ಸೀತಕ್ ಸಕ್ತಿ ಉಡಗೋದಂಗೆ 

ಅಳ್ಳಾಡಾಲ್ದು ಮಂಜು!

 

ತಾಯಿ ಮೊಗೀನ್ ಎತ್ಕೊಂಡಂಗೆ

ಒಂದಕ್ಕೊಂದು ಅತ್ಕೊಂಡಂಗೆ

ಮಡಿಕೇರೀನ ಎದೆಗೊತ್ಕೊಂಡಿ

ಜೂಗೀಡ್ಸ್ತಿತ್ತು ಮಂಜು !

ಮಲಗಾಕ್ ಸೊಳ್ಳೆ ಪರದೆ ಕಟ್ಟಿ

ಒದಿಯಾಕ್ ಒಗದಿದ್, ದುಪಟಿ ಕೊಟ್ಟಿ

ಪಕ್ದಾಗ್ ಗಂದದ್ ದೂಪ ಆಕ್ದಂಗ್

ಮಡಿಕೇರೀ ಮೇಲ್ ಮಂಜು !

ಮಂಜಿನ ಮಸಕಿನ್ ಕಾವಲ್ನಲ್ಲಿ

ಒಣಗಿದ್ ಉದ್ದಾನೆ ವುಲ್ನಲ್ಲಿ

ಒಳಗೇ ಏನೋ ಸರದೋದಂಗೆ

ಅಲುಗಾಡ್ತಿತ್ತು ಮಂಜು !

ನಡಿಯೋ ದೊಡ್ದೋಡ್ ದೇವಲ್ನಂಗೆ

ಪಟ್ಣದ್ ಸುತ್ತಿನ್ ಕಾವಲ್ನಂಗೆ

ಅಲ್ಲಲ್ಲೇನೆ ಅಂಗಂಗೇನೆ

ಗಸ್ತಾಕ್ತಿತ್ತು ಮಂಜು !

ಸೂರ್ಯನ್ ಕರೆಯೋಕ್ ಬಂದ್ ನಿಂತೋರು

ಕೊಡಗೀನ್ ಎಲ್ಲಾ ಪೂವಮ್ನೋರು

ತೆಳ್ನೆ ಬೆಳ್ನೆ ಬಟ್ಟೀನಾಕಿ

ಬಂದಂಗಿತ್ತು ಮಂಜು !

ಚಿಮ್ತಾನಿದ್ರ್ ಎಳಬಿಸಿಲಿನ್ ಕೆಂಪು

ಮಂಜಿನ್ ಬಣ್ಣ ಕಣ್ಗೆ ತಂಪು !

ಕೊಡಗಿನ್ ಲಸ್ಮೀರ್ ಪೂವಮ್ನೋರ್ಗೆ

ಆಲಿನ್ ಸೌಂದ್ರೀ ಮಂಜು !

ಅಗಲೇ ಬರಲಿ ರಾತ್ರೇ ಬರಲಿ

ಬಿಸಲು ನೆಳ್ಳು ಏನೇ ಇರಲಿ

ಕಣ್ಮರೆಯಾಗಕ್ ತಾವ್ ಕೊಡಾಲ್ದು

ಮಡಿಕೇರೀಗೆ ಮಂಜು !

ತೈಲ ನೀರಿನ್ ಮೇಗಿದ್ದಂಗೆ

ಪೂವಮ್ಮ ನನ್ ತಂಗೀದ್ದಂಗೆ

ಬಿಟ್ಟೂ ಬಿಡದಂಗ್ ಇಡಕೋಂತಿತ್ತು

ಮಡಿಕೇರಿಗೆ ಮಂಜು!

***

ನನ್ನ ಯೆಂಡತಿ

ಮೋಯೀನಿ ಯವತಾರಾನೆತ್ತಿ -ಮಂಕು

ರಾಕ್ಸಸರಿಗೆ ಸೊನ್ನೆಸುತ್ತಿ -ದೇವ-

ತೆಗಳಿಗೆ ಅಮ್ರುತದ ಬುತ್ತಿ -ತಂದ

ಮಾದರಿ ಯಾರೇ -ಸೌಟ ಯಿಡಿದೆತ್ತಿ ?

ನೀನಲ್ಲವೇ ನನ್ನ ಯೆಂಡತ್ತಿ !

 

ಕಲ್ ತುಂಬ ರೇಸನ್ ಆಕ್ಯಾಗ -ಅಸೀ

ಸೌದೇದು ವೂಗೆ ಮುತ್ತಿ ಮೂಗ -ಬ್ಯಾಳೆ

ಬೇಯದೆ ಬಾವಿನೀರಾಗ -ಅಡಿಗೆ-

ಮನೆಯೊಳಗ್ಯಾರೇ -ದಿನಕೆರಡು ಸತ್ತಿ?

ನೀನಲ್ಲವೇ ನನ್ನ ಯೆಂಡತ್ತಿ !

 

ಮನೆ ತುಂಬೊ ಮೂರ್ ಮಕ್ಕಳ್ ಕೊಟ್ಟು - ತಿದ್ದಿ

ನೇರಮಾಡುತ ಅವರ ಸುಟ್ಟು -ಬಿಡತ

ಆಗಾಗ ನಂಗೂ ಒಂದು ಮೊಟ್ಟು -ನೋಡಿ

ಬೀಸುವರ್ ಯಾರೇ ಮಾತೀನ ಕತ್ತಿ !

ನೀನಲ್ಲವೇ ನನ್ನ ಯೆಂಡತ್ತಿ !

 

ನಗತಿದ್ರೆ ನೀ ರಾಮನ್ ಯೆಣ್ಣು -ಕೆಳ್ಳಿ

ಬುಟ್ಟೇಂದ್ರೆ ಬಲಬೀಮನ್ ಕಣ್ಣು -ಸಡ್ಡೆ

ಮಾಡ್ದಿದ್ರೆ ನಾ ನಿಂಗೆ ಮಣ್ಣು -ಯಿಂಗೆ

ಮೀಟೋರ್ ಯಾರೇ ನಮ್ಮ ಪ್ರೀತಿಯ ಬತ್ತಿ?

ನೀನಲ್ಲವೇ ನನ್ನ ಯೆಂಡತ್ತಿ !

 

ನೆಗ್ತಿರ್ತಿ ಮಲ್ಗೆವೂನಂಗೆ -ಗದರಿ

ನಿಡಿಗುಡ್ತಿ ಮಿಂಚು ಗುಡುಗಂಗೆ - ಅಂಗೇ

ತತ್ತೀಯ ಕಣ್ಣಾಗ ಗಂಗೆ -ಇಂಗ್ನನ್ನ

ಆಡ್ಸೋರ್ ಯಾರೇ ಇಲೀನ್ ಆಡ್ಸೋವಂಗ್ ಕೊತ್ತಿ?

ನೀನಲ್ಲವೇ ನನ್ನ ಯೆಂಡತ್ತಿ !

 

ಮಾತಾಯಿ ! ಮನೆಲಚ್ಮಿ ಮಲ್ಲಿ ! -ನೀನೆ

ಕೆಂಪ್ರೊಜ ! ನಿನ್ನ ಪಕ್ಕದಲ್ಲಿ -ಬ್ಯಾರೆ

ಯೆಣ್ಣಿಲ್ಲ ನಡರಸ್ತೆ ಜಲ್ಲಿ -ಅನಿಸೀ

ಯಿಡಿದೊರ್ಯಾರೇ ನನ್ನನ್ ಇಂಗೆ ಮೇಗೆತ್ತಿ ?

ನೀನಲ್ಲವೇ ನನ್ನ ಯೆಂಡತ್ತಿ !

***

(‘ಸುವರ್ಣ ಸಂಪುಟ’ ಕೃತಿಯಿಂದ ಸಂಗ್ರಹಿತ)