‘ಸುವರ್ಣ ಸಂಪುಟ' (ಭಾಗ ೨೮) - ಶೇ. ಗೋ. ಕುಲಕರ್ಣಿ
ಕಳೆದ ವಾರ ‘ಮಕ್ಕಳ ಕವಿ' ಎಂದೇ ಹೆಸರಾದ ಜಿ.ಪಿ.ರಾಜರತ್ನಂ ಅವರ ಕವನಗಳೆರಡನ್ನು ಪ್ರಕಟಿಸಿದ್ದೆವು. ಈ ಸಂಪುಟದಲ್ಲಿ ಅವರದ್ದು ಇನ್ನೊಂದು ಕವನ ‘ಕನ್ನಡ್ ಪದಗೊಳು' ಇದೆ. ಈ ವಾರ ನಾವು ಹಿರಿಯ ಕವಿ, ಕಾದಂಬರಿಕಾರರಾದ ಶೇ. ಗೋ.ಕುಲಕರ್ಣಿ ಅವರ ಕವನಗಳೆರಡನ್ನು ಸಂಗ್ರಹಿಸಿ ಪ್ರಕಟಿಸಿದ್ದೇವೆ. ಅವರ ಕಿರು ಪರಿಚಯ ಇಲ್ಲಿದೆ.
ಶೇ. ಗೋ. ಕುಲಕರ್ಣಿ: ೧೩ ಜೂನ್ ೧೯೦೮ರಲ್ಲಿ ಧಾರವಾಡದಲ್ಲಿ ಹುಟ್ಟಿದ ಶೇಷಗಿರಿರಾವ್ ಗೋವಿಂದರಾವ್ ಕುಲಕರ್ಣಿಯವರು ಸಾಹಿತ್ಯ ರಂಗದಲ್ಲಿ ಶೇ. ಗೋ. ಕುಲಕರ್ಣಿ ಎಂದೇ ಖ್ಯಾತನಾಮರು. ಇವರು ಗದಗ ಜಿಲ್ಲೆಯ ಮುಂಡರಗಿ ಎಂಬ ಊರಿನಲ್ಲಿ ಜನಿಸಿದರು. ಕುಲಕರ್ಣಿಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸವಣೂರಿನಲ್ಲಿ ನಡೆಸಿದರು. ಧಾರವಾಡದ ಮಿಷನ್ ಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿದ ಇವರು ಉನ್ನತ ಶಿಕ್ಷಣಕ್ಕಾಗಿ ಕಲ್ಕತ್ತಾದ ಶಾಂತಿನಿಕೇತನಕ್ಕೆ ತೆರಳಿದರು. ೧೯೨೪ ರಿಂದ ೧೯೨೮ರವರೆಗೆ ಶಾಂತಿನಿಕೇತನದಲ್ಲಿ ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ನೊಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಟ್ಯಾಗೋರ್ ಇವರು ಕುಲಕರ್ಣಿಯವರ ಗುರುಗಳಾಗಿದ್ದರು. ಆ ಸಮಯದಲ್ಲಿ ಬಂಗಾಳಿ ಭಾಷೆಯನ್ನೂ ಕಲಿತರು. ‘ಗೀತಾಪ್ರಿಯ' ಇವರ ಕಾವ್ಯನಾಮ.
೧೯೨೮ರಲ್ಲಿ ಧಾರವಾಡದ ‘ಗೆಳೆಯರ ಗುಂಪು' ಇದರ ಸದಸ್ಯರಾಗಿ ಹಲವಾರು ಸಾಹಿತ್ಯಕ ಚಟುವಟಿಕೆಗಳನ್ನು ನಡೆಸಿದರು. ‘ಜಯ ಕರ್ನಾಟಕ’ ಪತ್ರಿಕೆಯ ವ್ಯವಸ್ಥಾಪಕರಾಗಿ, ಪ್ರಚಾರಕರಾಗಿ ನಾಡಿನಾದ್ಯಂತ ಸಂಚರಿಸಿದರು. ೧೯೩೬ರಲ್ಲಿ ಸಾಧನಾ ಎಂಬ ಮುದ್ರಣಾಲಯವನ್ನು ಸ್ಥಾಪಿಸಿ, ‘ಜೀವನ' ಎಂಬ ಮಾಸ ಪತ್ರಿಕೆಯನ್ನು ಪ್ರಕಾಶಿಸಿದರು. ಕರ್ನಾಟಕ ಸಾಹಿತ್ಯ ಮಂದಿರವನ್ನು ಸ್ಥಾಪಿಸಿ, ಕನ್ನಡ ಪುಸ್ತಕಗಳನ್ನು ಮಾರಲು ಹಾಗೂ ಪ್ರಚಾರ ಪಡಿಸಲು ವೇದಿಕೆಯನ್ನು ಒದಗಿಸಿಕೊಟ್ಟರು.
೧೯೪೧ರಲ್ಲಿ ಮಂಗಳೂರಿನ ಕೆ.ಟಿ.ಆಳ್ವಾ ಅವರ ಮಗಳಾದ ಅಹಲ್ಯಾರನ್ನು ಮದುವೆಯಾದರು. ಅಹಲ್ಯಾ ಅವರೂ ಸಾಹಿತ್ಯಾಸಕ್ತ ಮಹಿಳೆ. ಮದುವೆಯ ಬಳಿಕ ಗೀತಾ ಕುಲಕರ್ಣಿ ಎಂಬ ಹೆಸರಿನಿಂದ ಪ್ರಸಿದ್ಧರಾದ ಇವರು ಹಲವಾರು ಕಾದಂಬರಿಗಳನ್ನು ಬರೆದಿದ್ದಾರೆ. ಖ್ಯಾತ ಸಾಹಿತಿ ಬೆಟಗೇರಿ ಕೃಷ್ಣ ಶರ್ಮ ಅವರ ಜೊತೆ ಶೇಷಗಿರಿರಾವ್ ಕುಲಕರ್ಣಿಯವರಿಗೆ ತುಂಬಾ ಒಡನಾಟವಿತ್ತು.
ನಾ ಕಂಡ ಗೆಳೆಯರ ಗುಂಪು ಇವರ ಆತ್ಮ ಕಥೆ. ಮಹಾಪೂರ, ಬೆಳವಲದ ಭಾಗ್ಯಲಕ್ಷ್ಮಿ ಇವರ ಕಾದಂಬರಿಗಳು. ನನ್ನ ಗೀತಗಳು ಎಂಬ ಕವನ ಸಂಕಲನವನ್ನು ಪ್ರಕಟ ಮಾಡಿದ್ದಾರೆ. ಬಂಗಾಳಿ ಭಾಷೆಯಿಂದ ರವೀಂದ್ರರ ಹಲವಾರು ಬರಹಗಳನ್ನು ಅನುವಾದ ಮಾಡಿದ್ದಾರೆ. ಅವುಗಳಲ್ಲಿ ರವೀಂದ್ರರ ಬಾಲ ಸಾಹಿತ್ಯ, ಗೀತಾಂಜಲಿ ಇತ್ಯಾದಿ ಪ್ರಮುಖವಾದುವುಗಳು. ೧೯೪೬ರಲ್ಲಿ ಇವರು ‘ಅಂಬಿಕಾತನಯದತ್ತ' ಎಂಬ ಕೃತಿಯನ್ನು ಸಂಪಾದಿಸಿದ್ದಾರೆ. ೧೯೮೩ರಲ್ಲಿ ಇವರು ನಿಧನರಾದರು.
ಇವರ ಎರಡು ಕವನಗಳನ್ನು ಇಲ್ಲಿ ನೀಡಲಾಗಿದೆ ಓದಿ:
ಬೆಳಕ ಹೊಳೆ
ಬೆಳಕಹೊಳೆಯಲೀಸುತ್ತಿದ್ದೆ
ತೀರ ದೂರ ಪಾರದಲ್ಲಿ
ಮೇರೆ ಮೀರಿ ಹರಿವ ಹೊಳೆಯ
ನೀರಿನೊಳಗೆ ಧುಮುಕಿಕೊಂಡು,
ಮುಳುಗಿ ಒಳಗೆ, ಹಾರಿ ಮೇಲೆ
ಸಾರಿ ತೆರೆಯನೇರಿ ನಿಂತೆ
ಮುಗಿಲನಗಲವಾಗಿ ಬೆಳೆದು
ಇಳೆಯನೊಮ್ಮೆ ಅಪ್ಪಿಕೊಂಡೆ.
ಹಾಲ ನೊರೆಯು ಸುರುಳಿಯಾಗಿ
ಬಿಳಿಯ ಆನೆ ಓಳಿಗೊಂಡು
ಕೇಳಿಗಾಗಿ ಧುಮುಕಿ ಎನ್ನ
ಏಳು ಸೊಂಡಿಲಿಂದ ಎತ್ತಿ
ಚಂದ್ರಲೋಕಕೊಯ್ದಿತು
ಇಂದ್ರ ಪಟ್ಟಗಟ್ಟಿತು.
***
ಮನಸು ಮತ್ತು ಮಾತು
ಮನಸು ಮಾತುಗಳೆರಡು ಒಂದೆ ಲೋಕದ ವಸ್ತು
ಮನವನರಳಿಸುವ ಕಲೆ ಮಾತಿಗುಂಟು
ಮನ ಸೋತು ಬಿದ್ದಾಗ ಗದ್ದರಿಸಿ ಎಬ್ಬಿಸುವ
ಘನ ಒಲವು ಮಾತಿನೊಳು ಅಡಗಿ ಉಂಟು.
ಮಾತು ಬಲ್ಲುದು ಎಲ್ಲ ಮೌನ ಮನಸಿನ ಸೊಲ್ಲ
ಕೂತಿರುವುದದಕಾಗಿ ಜನುಮ ತೆತ್ತು
ಮಾತು ಮಾತಿಗು ಮನವ ಕುಣಿಸಿ ಮಣಿಸುವ ಜಾಣು
ಮಾತಿಗಲ್ಲದೆ ಮತ್ತೆ ಏತಕುಂಟು.
ಮನಸುಗಳು ಎಷ್ಟುಂಟೊ ಅಷ್ಟು ಮಾತುಗಳುಂಟು
ಮನಸು ಮಾತಿಗು ಹೀಗೆ ಬಿಡದ ಗಂಟು
ಮನಸು ಮೇಣದ ಬತ್ತಿ ಮಾತು ಜ್ಯೋತಿಯ ಹೊತ್ತಿ
ಮನೆಯ ಬೆಳಗುವದಿಂತು ಸ್ನೇಹ ತಾನಂಟಿ.
ಒಳಗಿದ್ದ ಮನಸದುವೆ ಹೊರಬರಲು ಮಾತಾಯ್ತು
ಮಾತಿನಲ್ಲಿಗೆ ಬಂತು ಬೇರೆ ಅಸ್ತಿತ್ವ
ಕತ್ತಲೆಯ ಗುಹೆಯಲ್ಲಿ ತನ್ನದೇ ಮನೆಯಲ್ಲಿ
ಮನಮಥಿಸೆ ಹೊರ ಬಂತು ಶಬ್ದತತ್ವ.
ಕೈಸನ್ನೆ ಕಣ್ಸನ್ನೆ ಮನದ ಸಂಕೇತಕ್ಕೆ
ಮೈಸನ್ನೆ ಎಲ್ಲವೂ ಸಾಲದಾಗಿ
ಕಾತರದಿ ಮನನೊಂದು ಬಳಲುತಿರೆ ಖತಿಗೊಂಡು
ಮಾತು ಬಂದಿತು ಮನದ ರೂಪವಾಗಿ.
ಜನುಮ ಜನುಮಾಂತರದಿ ಮೌನ ಬೆನ್ನಟ್ಟಿ ಬರೆ
ಅರಳದೆಯೆ ಉಳಿದಿತ್ತು ಮನದ ಮೊಗ್ಗು
ಮನವೆ ಮನುಜನ ಜನ್ಮ ತಾಳಿ ತಾ ಕಣ್ಣು ತೆರೆ
ಮನ ಮಾತು ಸೃಷ್ಟಿಸಿತು. ಜೀವನಕೆ ಹಿಗ್ಗು !
ತನ್ನ ಪ್ರಕೃತಿಗೆ ಒಪ್ಪಿ ಪುರುಷನಿಂದಿರೆ ಅಪ್ಪಿ
ಮನಕುಮುದೆ ನಾಚಿದಳು ಜರಿದು ಸರಿದು
ನನ್ನ ದೇನಿಹುದಿಲ್ಲಿ ಎಲ್ಲ ನಲ್ಲನದೆಂದು
ಸನ್ನಿಧಿಯ ಸೇರಿದಳು ಮೌನದಲಿ ನಡೆದು.
***
(‘ಸುವರ್ಣ ಸಂಪುಟ' ಕೃತಿಯಿಂದ ಸಂಗ್ರಹಿತ)