‘ಸುವರ್ಣ ಸಂಪುಟ' (ಭಾಗ ೨) -ಪಂಜೆ ಮಂಗೇಶರಾಯರ ಕವನ

‘ಸುವರ್ಣ ಸಂಪುಟ' (ಭಾಗ ೨) -ಪಂಜೆ ಮಂಗೇಶರಾಯರ ಕವನ

ಕಳೆದ ವಾರ ಸಂಪದದಲ್ಲಿ ಪ್ರಾರಂಭಿಸಿರುವ ‘ಸುವರ್ಣ ಸಂಪುಟ' ಪುಸ್ತಕದಿಂದ ಆಯ್ದ ಕವನಗಳ ಪ್ರಕಟಣೆಗೆ ಓದುಗರಿಂದ ಬಹಳ ಬೆಂಬಲ ವ್ಯಕ್ತವಾಗಿದೆ. ಹಿಂದಿನ ಖ್ಯಾತ ಕವಿಗಳ ಕವನಗಳ ಓದುವ ಖುಷಿ ಒಂದೆಡೆಯಾದರೆ, ಅವರು ಬರೆಯುತ್ತಿದ್ದ ಕವನಗಳ ರೀತಿ, ವಿಷಯ, ರಚನೆಗಳ ಬಗ್ಗೆ ಈಗಿನ ಕಿರಿಯ ಕವಿಗಳು ತಿಳಿದುಕೊಳ್ಳುವುದು ಬಹಳಷ್ಟಿದೆ ಎನ್ನುವುದು ಹಲವರ ಅಭಿಮತ. ಈಗಿನ ಬಹುತೇಕ ಕವಿಗಳು ತಾವು ಬರೆದದ್ದೇ ಕವನವೆಂದು ತಿಳಿದುಕೊಂಡಿದ್ದಾರೆ. ಈ ಸಂಪುಟದಲ್ಲಿರುವ ಕವನಗಳನ್ನು ಓದಿಕೊಂಡ ಬಳಿಕವಾದರೂ ಅವರು ತಮ್ಮ ಅನಿಸಿಕೆಯನ್ನು ಬದಲಾಯಿಸಿಯಾರು ಎಂದು ಓರ್ವರ ಅಭಿಪ್ರಾಯ. 

ಈ ವಾರ ಖ್ಯಾತ ಕವಿ ಪಂಜೆ ಮಂಗೇಶರಾಯರ ‘ಹುತ್ತರಿ ಹಾಡು' ಕವನವನ್ನು ಆಯ್ದುಕೊಂಡಿದ್ದೇವೆ. ಎಂದಿನಂತೆ ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತವಿದೆ.

ಹುತ್ತರಿ ಹಾಡು

ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ?

ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ?

ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?

ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ?

 

ಅಲ್ಲೆ ಆ ಕಡೆ ನೋಡಲಾ!

ಅಲ್ಲೆ ಕೊಡಗರ ನಾಡಲಾ!

ಅಲ್ಲೆ ಕೊಡಗರ ಬೀಡಲಾ!

 

ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು?

ಕವಣೆ ತಿರಿ ಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು?

ಸವರಿ ಆನೆಯ ಸೊಂಡಿಲಲಿ ರಣಕೊಂಬನಾರ್ ಭೋರ್ಗರೆದರೋ?

ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ?

 

ಅವರೆ ಸೋಲ್ ಸಾವರಿಯರು!

ಅವರೆ ಕಡುಗಲಿ ಗರಿಯರು!

ಅವರೆ ಕೊಡಗಿನ ಹಿರಿಯರು!

 

ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದೊಲ್,

ಹೆಮ್ಮೆಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗದೊಲ್

ಬೊಮ್ಮಗಿರಿಯಿಂ ಪುಷ್ಪಗಿರಿಪರ್ಯಂತ ಬೆಳದೀ ದೇಶವು

ಧರ್ಮದಾನದ ಕಟ್ಟುಕಟ್ಟಳೆ ರೀತಿನೀತಿಯ ಕೋಶವು!

 

ನಮ್ಮ ಕೊಡಗಿದು ಜಮ್ಮದು;

ಜಮ್ಮ ಕೊಡಗಿದು ನಮ್ಮದು;

ನಮ್ಮೊಡಲ್ ಬಿಡಲಮ್ಮದು!

 

ಇದು ಅಗಸ್ತ್ಯನ ತಪದ ಮನೆ, ಕಾವೇರಿ ತಾಯ ತವರ್ಮನೆ,

ಕದನಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದಿರವರ್ಮನೆ!

ಇದಕೊ ! ಚೆಂಗಾಳ್ವರಸರಾಡಂಬರವು ಕುಣಿದ ಶ್ರೀರಂಗವು!

ಇದೊ! ಇದೊ! ಇಲ್ಲುರುಳ್ದ ಹಾಲೇರಿಯರ ಬಲಗಿರಿ ಶೃಂಗವು!

 

ವಿಧಿಯ ಮಾಟದ ಕೊಡಗಿದು!

ಮೊದಲೆ ನಮ್ಮದು, ಕಡೆಗಿದು!

ಕದಲದೆಮ್ಮನು ; ಬೆಡಗಿದು!

 

ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ ?

ಸುಮ್ಮನಿತ್ತರೋ ದಟ್ಟಿ ಕುಪ್ಪಸ ! ಹಾಡು ಹುತ್ತರಿಗೇಳಿರಿ?

ಚಿಮ್ಮಿ ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ !

ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!

 

ನೆಮ್ಮದಿಯನಿದು ತಾಳಲಿ !

ಅಮ್ಮೆಯಾ ಬಲ ತೋಳಲಿ

ನಮ್ಮ ಕೊಡಗಿದು ಬಾಳಲಿ!

***

ಪಂಜೆ ಮಂಗೇಶರಾಯರು (ಕವಿ ಶಿಷ್ಯ) ೨೨-೦೨-೧೮೭೪ ರಿಂದ ೨೫-೧೦-೧೯೩೭: ಬಂಟವಾಳ. ಬಿ.ಎ.ಎಲ್. ಟಿ. ಪದವೀಧರರು. ಕನ್ನಡ ಪ್ರಾಧ್ಯಾಪಕರಾಗಿ, ಶಾಲಾ ಅಧ್ಯಾಪಕರಾಗಿ, ಶಾಲಾ ಇನ್ಸ್ ಪೆಕ್ಟರ್ ಆಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರಮಿಸಿ ಅನೇಕ ಸುಧಾರಣೆಗಳನ್ನು ತಂದರು. ಮಕ್ಕಳಿಗಾಗಿ ಹಲವು ಪದ್ಯಗಳು ಮತ್ತು ಕತೆಗಳನ್ನೂ ಪಠ್ಯಪುಸ್ತಕಗಳನ್ನೂ ರಚಿಸಿದರು. ‘ಬಾಲ ಸಾಹಿತ್ಯ ಮಂಡಲ'ವನ್ನು ಸ್ಥಾಪಿಸಿದರು. ೧೯೩೪ರಲ್ಲಿ ರಾಯಚೂರಿನಲ್ಲಿ ನಡೆದ ೨೦ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರ ಕೃತಿಗಳೆಲ್ಲ ಅಡಕವಾದ ಮೂರು ಸಂಪುಟಗಳಲ್ಲಿ ಓರಿಯೆಂಟಲ್ ಲಾಂಗ್ ಮನ್ಸ್ ಕಂಪೆನಿಯವರಿಂದ ಪ್ರಕಟವಾಗಿದೆ.

ಮಾಹಿತಿ ಕೃಪೆ: ಸುವರ್ಣ ಸಂಪದ