‘ಸುವರ್ಣ ಸಂಪುಟ' (ಭಾಗ ೩೦) - ವಿ.ಕೃ.ಗೋಕಾಕ

‘ಸುವರ್ಣ ಸಂಪುಟ' (ಭಾಗ ೩೦) - ವಿ.ಕೃ.ಗೋಕಾಕ

ಈ ವಾರ ನಾವು ‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವಿ, ಕಾದಂಬರಿಕಾರ, ಜ್ಞಾನಪೀಠ ಪುರಸ್ಕೃತರೂ ಆದ ವಿನಾಯಕ ಕೃಷ್ಣ ಗೋಕಾಕ (ವಿ.ಕೃ.ಗೋಕಾಕ). ಇವರು ರಚಿಸಿದ ೧೪ ಕವನಗಳು ಈ ಸಂಪುಟದಲ್ಲಿವೆ. ಕೆಲವು ಕವನಗಳು ಬಹು ದೀರ್ಘವಾಗಿವೆ. ಅವರ ಕವನಗಳ ಶೀರ್ಷಿಕೆಗಳು ಈ ರೀತಿ ಇವೆ. ಭಾವಗೀತೆ, ಸ್ಯಾನ್ ಫ್ರಾನ್ಸಿಸ್ಕೋ, ಚಂದ್ರಗ್ರಹಣ, ರಾಮಲಿಂಗ ದೇವಾಲಯ, ಅಚ್ಚ, ಬಾಳ ದೇಗುಲದಲ್ಲಿ, ಬಣ್ಣದೊಳಗಿಂದ, ಎಲೆಯಿಲ್ಲದ ಮರ, ವೈದ್ಯವಿದ್ಯಾಲಯ, ಡಿಜಿನಿ ಲ್ಯಾಂಡ್ (ಡಿಸ್ನಿ ಲ್ಯಾಂಡ್), ಬಹುರತ್ನಾ ವಸುಂಧರಾ, ಯು.ಎನ್.ಓ., ನೌಕಾಯಂತ್ರ, ನವೋದಯ. ಇಲ್ಲಿ ಇವರ ಎರಡು ಕವನಗಳನ್ನು ಹಂಚಿಕೊಳ್ಳಲಾಗಿದೆ. ಮೊದಲಿಗೆ ಕವಿ ಪರಿಚಯ. 

ವಿ.ಕೃ.ಗೋಕಾಕ: ಕನ್ನಡದ ಹೆಸರಾಂತ ಕವಿ, ಪಂಡಿತ, ಉಪನ್ಯಾಸಕರಾಗಿದ್ದ ವಿನಾಯಕ ಕೃಷ್ಣ ಗೋಕಾಕರು ೯ ಆಗಸ್ಟ್ ೧೯೦೯ರಲ್ಲಿ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಜನಿಸಿದರು. ಇವರ ತಂದೆ ಕೃಷ್ಣರಾಯರು ಹಾಗೂ ತಾಯಿ ಸುಂದರಮ್ಮನವರು. ಇವರ ತಂದೆ ವಕೀಲರಾಗಿದ್ದರು. ವಿನಾಯಕರ ವಿದ್ಯಾಭ್ಯಾಸವು ಧಾರವಾಡದಲ್ಲಿ ನಡೆಯಿತು. ಧಾರವಾಡದಲ್ಲಿ ಕಲಿಯುತ್ತಿರುವ ಸಂದರ್ಭದಲ್ಲಿ ಇವರಿಗೆ ಖ್ಯಾತ ಕವಿ ದ. ರಾ. ಬೇಂದ್ರೆಯವರ ಸಾಂಗತ್ಯ ದೊರೆಯಿತು. ಇದರಿಂದಾಗಿ ಇವರಲ್ಲಿನ ಕವಿ ಜಾಗೃತನಾದ. ಬೇಂದ್ರೆಯವರೇ ತನ್ನ ಕಾವ್ಯ ಗುರು ಹಾಗೂ ಮಾರ್ಗದರ್ಶಕರು ಎಂದು ಗೋಕಾಕರು ಹೇಳಿಕೊಂಡಿದ್ದಾರೆ. ‘ವಿನಾಯಕ' ಇವರ ಕಾವ್ಯನಾಮವೂ ಹೌದು.

ಇಂಗ್ಲೀಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಗೋಕಾಕರು ಪುಣೆಯ ಸಿ.ಎಸ್.ಪಿ. ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಇವರ ವಿದ್ವತ್ ಪ್ರತಿಭೆಯನ್ನು ಗಮನಿಸಿದ ಕಾಲೇಜಿನ ಆಡಳಿತ ಮಂಡಳಿ ಇವರನ್ನು ಹೆಚ್ಚಿನ ವಿದ್ಯಾರ್ಜನೆಗಾಗಿ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಿತು. ಅಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಅಭ್ಯಾಸ ಮಾಡಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಹೀಗೆ ಆಂಗ್ಲ ಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪ್ರಥಮ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾದರು. 

ಇಂಗ್ಲೆಂಡ್ ನಿಂದ ಮರಳಿ ಬಂದ ಇವರಿಗೆ ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿನ ಪ್ರಾಂಶುಪಾಲ ಹುದ್ದೆ ದೊರೆಯಿತು. ನಂತರದ ದಿನಗಳಲ್ಲಿ ಇವರು ಪುಣೆ, ಕೊಲ್ಲಾಪುರ, ಧಾರವಾಡ ಮುಂತಾದೆಡೆಯ ಕಾಲೇಜುಗಳಲ್ಲಿ ಕೆಲಸ ಮಾಡಿ, ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ನಿವೃತ್ತರಾದರು. ಜಪಾನ್, ಅಮೇರಿಕ, ಇಂಗ್ಲೆಂಡ್, ಬೆಲ್ಜಿಯಂ ಮೊದಲಾದ ದೇಶಗಳಿಗೆ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಹೋಗಿ ಬಂದಿದ್ದರು. 

ವಿನಾಯಕ ಗೋಕಾಕರು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯ ಮೇಲೆ ಉತ್ತಮ ಪ್ರಭುತ್ವವನ್ನು ಹೊಂದಿದ್ದ ಕಾರಣ ಎರಡೂ ಭಾಷೆಗಳಲ್ಲಿ ಬರಹಗಳನ್ನು ರಚಿಸಿದ್ದಾರೆ. ಇವರ ಮೊದಲ ಕೃತಿ ‘ಕಲೋಪಾಸಕರು'. ಇವರ ಇಂಗ್ಲೆಂಡ್ ನ ಸಮುದ್ರಯಾನದ ಅನುಭವದ ಬಗ್ಗೆ ಬರೆದ ಕೃತಿಗಳು ‘ಸಮುದ್ರ ಗೀತೆಗಳು' ಹಾಗೂ ‘ಸಮುದ್ರದಾಚೆಯಿಂದ’. ಇವರ ಪ್ರಕಟಿತ ಕಾದಂಬರಿಗಳು ಹಲವಾರು. ಇವುಗಳಲ್ಲಿ ಸಮರಸವೇ ಜೀವನ, ಇಜ್ಜೋಡು, ಏರಿಳಿತ, ಸಮುದ್ರಯಾನ, ನಿರ್ವಹಣ ನರಹರಿ ಪ್ರಮುಖವಾದವುಗಳು. 

ಇವರು ರಚಿಸಿದ ಮಹಾ ಕಾವ್ಯ ‘ಭಾರತ ಸಿಂಧು ರಶ್ಮಿ'. ಈ ಕಾವ್ಯಕ್ಕಾಗಿ ಜ್ಞಾನಪೀಠ ಪುರಸ್ಕಾರ ಇವರಿಗೆ ದೊರೆತಿದೆ. ಕಲೋಪಾಸಕ, ಪಯಣ , ಸಮುದ್ರ ಗೀತೆಗಳು, ಉಗಮ, ಬಾಳದೇಗುಲದಲ್ಲಿ, ಸಮರಸವೇ ಜೀವನ ಇತ್ಯಾದಿ ಕವನ ಸಂಕಲನಗಳು ಪ್ರಕಟವಾಗಿವೆ. ಇವರು ಹಲವಾರು ಸಾಹಿತ್ಯ ವಿಮರ್ಶೆ ಹಾಗೂ ಪ್ರವಾಸ ಕಥನಗಳನ್ನೂ ಬರೆದಿದ್ದಾರೆ. 

೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಲವಾರು ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪ್ರಶಸ್ತಿಗಳು, ಕೇಂದ್ರ ಸರಕಾರ ಕೊಡಮಾಡುವ ಪದ್ಮಶ್ರೀ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಇವರಿಗೆ ದೊರೆತಿವೆ. ಕನ್ನಡ ಭಾಷೆಯ ಉಳಿವಿಗಾಗಿ ಇವರು ನೀಡಿದ ವರದಿಯು 'ಗೋಕಾಕ್ ವರದಿ' ಎಂದು ಖ್ಯಾತವಾಗಿದೆ ಹಾಗೂ ಅದನ್ನು ಅನುಷ್ಟಾನಕ್ಕೆ ತರಬೇಕೆಂದು ನಡೆದ ಚಳುವಳಿ ‘ಗೋಕಾಕ್ ಚಳುವಳಿ' ಎಂದು ಹೆಸರುವಾಸಿಯಾಗಿದೆ. ವಿ.ಕೃ.ಗೋಕಾಕರು ೧೯೯೨ರ ಎಪ್ರಿಲ್ ೨೮ರಂದು ಮುಂಬಯಿಯಲ್ಲಿ ನಿಧನ ಹೊಂದಿದರು. 

ಗೋಕಾಕರ ಆಯ್ದ ಎರಡು ಕವನಗಳು:

ಭಾವಗೀತೆ

ಇಲ್ಲೆ ಇರು, ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು ;

ನೇಹಕೆಂದು ನಲುಮೆಗೊಂದು ಗುರುತನಿರಿಸಿ ಬರುವೆನು.

 

ಹೋದಮೇಲೆ ಸುತ್ತಬೇಕು ಏಳು ಕೋಟೆ ದ್ವಾರವು !

ಹಾದಿಯಲ್ಲಿ ತೀರದಂಥ ದುಃಖವಿಹುದಪಾರವು !

ಸಾಧಿಸುತ್ತ ಜಯಿಸುವದೇ ಬಾಳುವದರ ಸಾರವು!

 

ಇಲ್ಲಿ ಕೊನರದಂಥ ನೋವು, ಫಲಿಸದಂಥ ಯಾತನೆ ;

ಇಲ್ಲಿ ನಿತ್ಯ ಕೊಳೆಯುತಿಹುದು ನನ್ನ ಜೀವ ಚೇತನೆ !

ಇನ್ನು ಮೊಳ್ ಗಿಸಿದರೆ ಮೊಳಗಿಸುವೆನು ಅದರ ಮಾತನೆ !

 

ನವಗ್ರಹಗಳ ನಾಡ ದಾಟಿ ಮಿಗಿಲ ಗಡಿ ಮೀರಿಯೂ

ದಿಕ್ಕು ತಪ್ಪುತಲೆವ ತಾರೆಗಳಿಗೆ ದಾರಿ ತೋರಿಯೂ 

ಕತ್ತಲಿದ್ದ ತಾಣದಲ್ಲಿ ಎದೆಯ ಬೆಳಕ ಬೀರಿಯೂ !

 

ಗಾನದುನ್ಮಾದವೇರಿ ನಡೆದ ರಾಜಭೃಂಗವು,

ದೇವಕನ್ನಿಕೆಯರು ನುಡಿಸುವಂಥ ಮೃದು ಮೃದಂಗವು-

ಇದಕು ಹಿರಿದು ಎದೆಯಲಿರುವ ಭಾವನಾತರಂಗವು !

 

ಕೋಟಿ ವರುಷದಾಚೆ ಜನಿಸಿದಂಥ ಜೀವದಾಸೆಯು

ತೀರಬಹುದು, ಹಿಂಗಬಹುದು ಅಂದಿನಾ ಪಿಪಾಸೆಯು !

ಇಂದೆ ರುಚಿಕರವಾಗಬಹುದು ನನ್ನ ದೈವರೇಷೆಯು !

***

ಬಣ್ಣದೊಳಗಿಂದ

ಬಣ್ಣದೊಳಗಿಂದ, ಬಯಕೆಯೊಳಗಿಂದ,

ಒಳಿತಿನೊಳಗಿಂದ, ಕೆಡಕಿನೊಳಗಿಂದ,

ಚಂದ್ರಿಕಾತಲ್ಪ ನಿದ್ರೆಯೊಳಗಿಂದ,

ಬಿಸಿಲ ಬೇಗೆಯಾ ಮುದ್ರೆಯೊಳಗಿಂದ,

ಬಿಡಿಸಿಕೊಂಡು ಬಾ,

ಬಿಡಿಸಲೆನ್ನ ಬಾ,

ಬಾ, ಬಾ, ಬಾ,

ಓ ನೀರದ ಬಾ !

ತಮವು ತೋಡಿದಾ ನರಕದೊಳಗಿಂದ,

ರಜವು ಹೂಡಿದಾ ರಣಾಂಗಣದಿಂದ,

ಸತ್ತ್ವ ರಚಿಸಿದಾ ಸ್ವರ್ಗದೊಳಗಿಂದ ;

ನಿರ್ಗುಣಗಳ ನಿರ್ವಯಲ ಸೆರೆಯಿಂದ,

ಗುಣಗಣಂಗಳಾ ಮುಚ್ಚುಮರೆಯಿಂದ ;

ರೂಪದಿಂದ್ರಜಾಲಗಳ ಹೊರೆಯಿಂದ ,

ರೂಪವಿಲ್ಲದಾ ಶೂನ್ಯದೊರೆಯಿಂದ;

ಜಡದ ವಾದಜಂಜಡದ ಜಡೆಯಿಂದ,

ಏಕಮೇವ ಚೈತನ್ಯದೆಡೆಯಿಂದ;

ಸಾರ್ವಭೌಮ ಮರ್ತ್ಯತೆಯ ಮುಡಿಯಿಂದ,

ಕೈವಲ್ಯದ ಅಮರತೆಯ ಅಡಿಯಿಂದ,

ಅರ್ಧಮರ್ಧ ದರ್ಶನದ ಗುಡಿಯಿಂದ;

ಬಿಡಿಸಿಕೊಂಡು ಬಾ,

ಬಿಡಿಸಲೆನ್ನ ಬಾ,

ಬಾ, ಬಾ, ಬಾ,

ಓ ನೀರದ, ಬಾ !

***

(‘ಸುವರ್ಣ ಸಂಪುಟ’ ಕೃತಿಯ ಕೃಪೆಯಿಂದ ಸಂಗ್ರಹಿತ)