‘ಸುವರ್ಣ ಸಂಪುಟ' (ಭಾಗ ೩೧) - ಗೋವಿಂದಮೂರ್ತಿ ದೇಸಾಯಿ

ಜಿ.ದೇಸಾಯಿ ಎಂದೇ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿರುವ ಗೋವಿಂದಮೂರ್ತಿ ದೇಸಾಯಿ ಇವರ ಕವನಗಳನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದುಕೊಂಡಿದ್ದೇವೆ. ಇವರು ಹುಟ್ಟಿದ್ದು ಧಾರವಾಡ ಜಿಲ್ಲೆಯ (ಈಗ ಗದಗ) ಶಿರಹಟ್ಟಿಯಲ್ಲಿ. ಇವರ ಜನ್ಮ ದಿನದ ಕುರಿತಾಗಿ ಕೆಲವು ಗೊಂದಲಗಳಿವೆ. ಎಪ್ರಿಲ್ ೫, ೧೯೨೭ ಎಂದು ಒಂದೆಡೆ ನಮೂದಾಗಿದ್ದರೆ, ಈ ಕೃತಿಯಲ್ಲಿ ಸೆಪ್ಟೆಂಬರ್ ೯, ೧೯೨೬ ಎಂದಿದೆ. ಇವರ ತಂದೆ ದಾಸಪ್ಪ ನಾಯಕ ದೇಸಾಯಿ ಹಾಗೂ ತಾಯಿ ಯಮುನಾ ಬಾಯಿ.
ದೇಸಾಯಿಯವರು ತಮ್ಮ ಸೋದರ ಮಾವನ ಮನೆಯಲ್ಲಿದ್ದು ಮೆಟ್ರಿಕ್ ತನಕ ವಿದ್ಯಾಭ್ಯಾಸ ಮಾಡಿದರು. ನಂತರ ಅವರ ತಂದೆಯ ಅಕಾಲ ನಿಧನದ ಕಾರಣದಿಂದ ಅವರಿಗೆ ಮುಂದಕ್ಕೆ ಓದಲು ಸಾಧ್ಯವಾಗಲಿಲ್ಲ. ಮನೆಯಲ್ಲಿ ತಂಗಿ ತಮ್ಮಂದಿರ ಜವಾಬ್ದಾರಿ ಇದ್ದುದರಿಂದ ಇಂಪೀರಿಯಲ್ ಬ್ಯಾಂಕಿನಲ್ಲಿ ನೌಕರಿಗೆ ಸೇರುತ್ತಾರೆ. ಮುಂದಿನ ದಿನಗಳಲ್ಲಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಾ ಓದಿ ಬಿಎ ಪದವಿಯನ್ನು ಪಡೆದು ಕೊಳ್ಳುತ್ತಾರೆ. ಆ ಸಮಯದಲ್ಲಿ ಇಂಪೀರಿಯಲ್ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಗಿ ಬದಲಾಗುತ್ತದೆ. ಇವರಿಗೆ ಅಧಿಕಾರಿಯಾಗಿ ಭಡ್ತಿ ದೊರೆಯುತ್ತದೆ.
ಇವರ ಬರಹದ ವೈಶಿಷ್ಟ್ಯತೆ ಎಂದರೆ ಚಾರಿತ್ರಿಕ ಘಟನೆಗಳನ್ನು ಬಳಸಿಕೊಂಡು ರೋಚಕವಾಗಿ ಕಥೆ ಬರೆಯುತ್ತಿದ್ದ ಪರಿ. ಇವರ ಹಲವಾರು ಸಣ್ಣ ಕಥೆಗಳು ಸುಧಾ, ಮಯೂರ, ಪ್ರಜಾವಾಣಿ, ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡವು. “ಶಿಲಾಮುಖ, ರುಧಿರಾರತಿ, ಸಂಸ್ಥಾನಿಕರು, ಠಾಕೂರ ಮಹಾರಾಜ, ಸಿದ್ಧಪ್ಪ ಹೊಸಮನಿ, ಬ್ಯಾಂಕಿಂಗ್ ಜಗತ್ತಿನ ವ್ಯವಹಾರವನ್ನು ತಿಳಿಸುವ ಕೃತಿ ‘ಬ್ಯಾಂಕಿಂಗ್', ಬಾಪೂಜಿಯ ಬದುಕು, ಚಾಲುಕ್ಯ ಚಕ್ರೇಶ್ವರ, ಚೈತನ್ಯ ಚರಿತಾಮೃತ” ಇವು ದೇಸಾಯಿಯವರ ಪ್ರಮುಖ ಕೃತಿಗಳು.
ಜಿ.ದೇಸಾಯಿಯವರಿಗೆ ಸಾಹಿತ್ಯ ಪ್ರತಿಷ್ಟಾನ, ಬೆಳಗಾವಿ ಇವರು ‘ಸಿರಿಗನ್ನಡ’ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಈ ಲೇಖಕ, ಕವಿಯ ಅಪರೂಪದ ಎರಡು ಕವನಗಳು ಸುವರ್ಣ ಸಂಪುಟ ಕೃತಿಯಲ್ಲಿವೆ. ಅವುಗಳನ್ನು ನಿಮಗಾಗಿ ಸಂಗ್ರಹಿಸಿ ನೀಡುತ್ತಿದ್ದೇವೆ. ಗೋವಿಂದಮೂರ್ತಿ ದೇಸಾಯಿಯವರು ಡಿಸೆಂಬರ್ ೧೫, ೨೦೧೧ರಲ್ಲಿ ನಿಧನ ಹೊಂದಿದರು.
ಜಿ.ದೇಸಾಯಿಯವರ ಎರಡು ಕವನಗಳು:
ತಾನೆ ಹರಿಯ ಮುರಲಿ
ಮುರಲಿ ಮೋಹನನ ಮುದ್ದು ಮೆಲ್ಲುತಿರೆ ಗೋವಿಗೆಂಥ ನೋವು
ನೀಡಬಾರದೆ ನೋಡಲಾರದೆ ಅವಳಿಗೆಂದೆ ಸಾವು.
ಕನಸು ಕಾಣತಿಹಳದೊ ಕೃಷ್ಣ ತಾ ಹೋದ ದೂರ ದೂರ
ಅಲ್ಲಿ ಆಟವಿದೆ ಸೊಬಗಿನೂಟವಿದೆ ತಿರುಗಿ ಬೇಗ ಬಾರ.
ಇವಳ ಹಳಿವಂತೆ ಅಳಿವ ತರುವಂತೆ ಮತ್ತೆ ವೇಣಿಗಾನ
"ಬೇಡವಾದರಿನ್ನೇಕೆ ಬದುಕುವದು ಬರೆದೆ ಹರಿಗೆ ಕರುಣ",
ಗೋಪಿ ನಿದ್ದೆಯಲಿ ಎದ್ದು ನಡೆದಳದೊ ಸಾವಿನಲ್ಲಿ ತೇಲಿ
ಎಚ್ಚರಾಗಿರಲು ಬೆಚ್ಚಿ ನೋಡಿದಳು ತಾನೆ ಹರಿಯ ಮುರಲಿ !
***
ಟಾರು ಬೀದಿಯ ಮೇಲೆ ಕಾರ್ಗಾಲ
ಒಣಗಿದೆಣ್ಣೆಯ ಮೇಲೆ
ಹನಿಬಿದ್ದು ಉರಿಯೆದ್ದು ಜ್ವಾಲೆ !
ಕಾರ್ಗಾಲ ತನ್ನೊಡನೆ ತಂದಿರುವ ಮಾಯೆ
ಇಂದ್ರ ಚಾಪವ ಮುರಿದು ಮಾಡಿರುವ
ಲೋಕಗಳೇನೊ ಎನಿಸುವ ಹಲವು ವರ್ಣಛಾಯೆ
ತಾರಕೆಗೆ ಬಣ್ಣಗಳ ತುಂಬಿ ಬಂಗಾರದಲಿ
ಬಿಗಿದು ಬೀದಿಯ ಮೇಲೆ ಬಿಟ್ಟರಾರು?
ಊಹೆಗೇ ಬಣ್ಣವನು ಬರೆದು ಚಿತ್ರಿಸಿದಂತೆ
ಒಂದೆ ಚಿತ್ರದಿ ವರ್ಣ ನೂರು ನೂರು.
ಟಾರು ಬೀದಿಯ ಮೇಲೆ ಕಾರ್ಗಾಲ
ಕಣ್ತೆರೆದು ರಂಗು ರಂಗಿನ ಎಲೆಯ ಬಿಚ್ಚಿದಂತೆ
ದೇವಲೋಕದ ಸೋಗೆ ಮೈದುಂಬಿ ಕುಣಿಯಿತೆ
ಅಲ್ಲಲ್ಲಿ ನವಿಲುಗರಿ ಉದುರುವಂತೆ?
ರಾಜವೀಧಿಯ ಸುಪ್ತ ಸ್ವರ್ಣಸ್ವಪ್ನಗಳಿಂದು
ಹತ್ತು ಬಣ್ಣವ ಹೊತ್ತು ಅರಳಿದಂತೆ
ಎದೆಯ ಮಸೆತಕೆ ಹರಿದ ಸರದ ಪದಕಗಳೇನು
ಯಕ್ಷನಭಿಸಾರಿಕೆಯು ಇರುಳು ನಡೆದಂತೆ.
ಯಾವ ರಾಸಾಯನಿಕ ನೆಸಕವೇನೋ ಕಾಣೆ ಸ್ವರ್ಣ-
ಪರ್ಣಕು ಜೀವ ಪಡೆವ ಚಿಂತೆ.
***
(ಸುವರ್ಣ ಸಂಪುಟ ಕೃತಿಯಿಂದ ಸಂಗ್ರಹಿತ)