‘ಸುವರ್ಣ ಸಂಪುಟ' (ಭಾಗ ೩೩) - ಜೋ. ದೊಡ್ಡನಗೌಡ

‘ಸುವರ್ಣ ಸಂಪುಟ' (ಭಾಗ ೩೩) - ಜೋ. ದೊಡ್ಡನಗೌಡ

ಜೋಳದರಾಶಿ ಕೆ.ದೊಡ್ಡನಗೌಡ ಇವರನ್ನು ಸಾಹಿತ್ಯ ಲೋಕ ಜೋ.ದೊಡ್ಡನಗೌಡ ಎಂದೇ ಗುರುತಿಸುತ್ತದೆ. ಇವರು ನಾಟಕಕಾರರಾಗಿ, ಕವಿಗಳಾಗಿ, ನಾಡು ಕಂಡ ಶ್ರೇಷ್ಟ ಗಮಕಿಯಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಜೋಳದರಾಶಿ ಎಂಬ ಊರಿನಲ್ಲಿ ೨೭ ಜುಲೈ ೧೯೧೦ರಲ್ಲಿ ಜನಿಸಿದರು. ಇವರ ತಂದೆ ಪಂಪನಗೌಡರು ಹಾಗೂ ತಾಯಿ ರುದ್ರಮ್ಮನವರು. ದೊಡ್ಡನಗೌಡ ಅವರದ್ದು ಬಹಳ ದೊಡ್ದ ಭೂಮಾಲೀಕರ ಕುಟುಂಬವಾಗಿತ್ತು. ‘ಉಳುವವನೇ ಭೂಮಿಯ ಒಡೆಯ’ ಕಾನೂನು ಜಾರಿಯಾದ ಸಮಯದಲ್ಲಿ ಇವರ ಹಲವಾರು ಎಕರೆ ಭೂಮಿ ಕೈತಪ್ಪಿ ಹೋದರೂ, ಇವರು ಯಾವ ಚಿಂತೆಯನ್ನೇ ಮಾಡದೇ ತಮ್ಮ ಪಾಲಿಗೆ ಉಳಿದ ಭೂಮಿಯಲ್ಲೇ ತೃಪ್ತರಾಗಿದ್ದರು. ಇವರಿಗೆ ಆಸಕ್ತಿ ಇದ್ದದ್ದು ಕೃಷಿಯಲ್ಲಿ ಅಲ್ಲ. ಬದಲಾಗಿ ಕವನ ವಾಚನ, ನಾಟಕದಲ್ಲಿ ನಟನೆ, ಸಾಹಿತ್ಯದ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಇವರು ಹುಟ್ಟಿದ ಊರು ಕರ್ನಾಟಕ -ಆಂಧ್ರ ಗಡಿಯಲ್ಲಿದ್ದುದರಿಂದ ಇವರಿಗೆ ಸಹಜವಾಗಿಯೇ ತೆಲುಗು ಭಾಷೆ ಬರುತ್ತಿತ್ತು. ಈ ಕಾರಣದಿಂದ ಇವರು ತೆಲುಗು ಭಾಷೆಯಲ್ಲೂ ಕೆಲವು ಬರಹಗಳನ್ನು ಬರೆದರು.  ಶಾಲೆಯಲ್ಲಿ ಹೆಚ್ಚೇನೂ ಕಲಿಯಲಾಗದ ಇವರು, ಬದುಕಿನ ಪಾಠಶಾಲೆಯಲ್ಲಿ ಬಹಳ ಕಲಿತರು. ಬಾಲ್ಯದಿಂದಲೇ ನಾಟಕದ ಹುಚ್ಚು ಇವರನ್ನು ಬಸವೇಶ್ವರ, ಕನಕದಾಸ, ಸಂತ ಕಬೀರ, ನಾರದ, ಕೃಷ್ಣ ಮುಂತಾದ ಪಾತ್ರಗಳಲ್ಲಿ ನಟಿಸುವಂತೆ ಮಾಡಿತು. ಇವರ ಕಂಚಿನ ಕಂಠ ಸಹಜವಾಗಿಯೇ ಇವರನ್ನು ಹಾಡುಗಾರಿಕೆಯತ್ತ ಸೆಳೆಯಿತು. ಇದರಿಂದಾಗಿ ದೊಡ್ಡನಗೌಡರು ಕಾವ್ಯ ವಾಚನಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಒಮ್ಮೆ ಕುವೆಂಪು ಅವರ ಮನೆಯಲ್ಲಿ ನಡೆದ ಕಾವ್ಯ ವಾಚನದಲ್ಲಿ ಶ್ರೀ ರಾಮಾಯಣ ದರ್ಶನಂ ಇದರ ಶಬರಿಯ ಅಧ್ಯಾಯವನ್ನು ವಾಚಿಸಿ ದ ರಾ ಬೇಂದ್ರೆ, ಕೋ.ಚೆನ್ನಬಸಪ್ಪ ಮುಂತಾದ ಸಾಹಿತಿಗಳ ಮೆಚ್ಚುಗೆಯನ್ನು ಗಳಿಸಿದ್ದರು.

ಗಮಕ ಕಲೆಯೂ ಇವರಿಗೆ ಸಿದ್ದಿಸಿತ್ತು. ಇದರ ಜೊತೆಗೆ ಬರಹಗಾರರಾಗಿಯೂ ತಮ್ಮ ಛಾಪನ್ನು ಒತ್ತಿದ್ದಾರೆ ದೊಡ್ಡನಗೌಡರು. ರಸವರ್ಷ, ಯಾತ್ರಿಕ, ನಮ್ಮ ಹಂಪೆ, ಗೌಡತಿ ಬರಲಿಲ್ಲ, ರಾಮೇಶನ ವಚನಗಳು ಮುಂತಾದುವುಗಳು ಇವರ ಕಾವ್ಯ ಕೃತಿಗಳು. ಅಭಯ, ಸಾಯದವನ ಸಮಾಧಿ, ನೋಡ್ರವ್ವ ನಾಟಕ, ಕ್ರಾಂತಿ ಪುರುಷ, ಕನಕದಾಸ ಇವರ ಖ್ಯಾತ ನಾಟಕಗಳು. ‘ನಂದೇ ನಾನೋದಿದೆ' ಇವರ ಆತ್ಮ ಕಥೆ. 

ದೊಡ್ದನಗೌಡರದ್ದು ಬಹುಮುಖ ವ್ಯಕ್ತಿತ್ವ. ಕವಿತೆ, ಸಾಹಿತ್ಯ, ನಾಟಕದ ಜೊತೆಗೆ ಸಮಾಜಸೇವೆ, ಏಕೀಕರಣ ಚಳುವಳಿ, ಗ್ರಾಮ ಪಂಚಾಯತಿ ಅಧ್ಯಕ್ಷ ಹೀಗೆ ಹತ್ತಾರು ಬಗೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಇವರ ಸೇವೆಯನ್ನು ಗಮನಿಸಿ ‘ಗಮಕ ಕಲಾ ಪ್ರವೀಣ' ಬಿರುದು ಇವರಿಗೆ ದೊರೆತಿದೆ. ‘ಗಮಕ ಕಲಾನಿಧಿ' ಎಂಬುವುದು ದೊಡ್ದೇಗೌಡರಿಗೆ ನೀಡಿದ ಸದ್ಭಾವನಾ ಗ್ರಂಥ. ಕರ್ನಾಟಕ ಸಂಗೀತ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಇವರಿಗೆ ಸಂದಿವೆ. ೧೯೮೧ರಲ್ಲಿ ಬಳ್ಳಾರಿಯಲ್ಲಿ ಜರುಗಿದ ಮೂರನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಇವರು ವಹಿಸಿದ್ದರು. ಕಲಬುರ್ಗಿ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ಇವರಿಗೆ ದೊರೆತಿದೆ. ದೊಡ್ಡೇಗೌಡರು ೧೦ ಮೇ ೧೯೯೪ರಲ್ಲಿ ನಮ್ಮನ್ನು ಅಗಲಿದರು. ‘ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಒಂದು ಕವನ ಪ್ರಕಟವಾಗಿದೆ. ಅದನ್ನು ಈ ಕೆಳಗೆ ನೀಡಲಾಗಿದೆ. ಓದಿ, ಆಸ್ವಾದಿಸಿ..

ಜೋಳದ ಝೋಕ್

ಯಂಗಂತ ಹೇಳಲಿ ನಿನ್ನ ಪ್ರತಾಪ

ಜಗಜಗಿಸುವ ಜೋಳ ರಾಜ್ಯದ ಭೂಪ ॥ಪ॥

 

ಯಾರಿಗು ಅಂಜದೆ ನೆಟ್ಟಗೆ ನಿಂತಿ

ಮೋರೆಯಮ್ಯಾಕೆತ್ತಿ ತೂಗುತಲಿದ್ದಿ

ಮಾರುದ್ದ ಕೈಗಳ ಬೀಸುತಲಿದ್ದಿ

ಬೀರನ ತೆರನಂತೆ ಮೆರೆಯುತಲಿದ್ದಿ ॥೧॥

 

ಒಳ್ಳೆಯ ಮುತ್ತಿನ ಚೆಂಡಂತೆ ಮೋರಿ

ಬೆಳ್ಳಗೆ ಬೆಳಗುವ ಕಾಂತಿಯ ಬೀರಿ

ತೆಳ್ಳಗೆ ಹಸುರಿನ ಮೈಯದು ತೋರಿ

ಚೆಲುವಾದ ಕಳೆಯೇರಿ ವಲಿಯುವೆ ಭಾರಿ ॥೨॥

 

ನೆಲ್ಲಪ್ಪ ಗೋದೆಪ್ಪ ಮುಂತಾದೊರೆಲ್ಲ

ಬಲ್ಲಂತೆ ನಿನ್ನನು ಬೈದವರೆಲ್ಲ

ಹಲ್ಕಿರಿದಿಂದಿನ ಶರಣೆಂದರಲ್ಲ

ಭಲರೇ ನಿನ್ಸಮ ಲೋಕದೊಳಿಲ್ಲ ॥೩॥

 

ಒಂದಕ್ಕೆ ಹತ್ತಾಗಿ ನೂರಾಗಿ ಬೆಳೆವೆ

ನಂಬಿದೋರಿಗೆ ನಿನ್ನ ಜೀವವಕೊಡುವೆ

ತಿಂಬುಂಬ ಮನೆಯೆಂದು ಹೆಸರಿಗೆ ತರುವೆ

ನಂಬದ ಜನಕೆಲ್ಲ ಮಣ್ಣುಮುಕ್ಕಿಸುವೆ ॥೪॥

 

ಬಡವ ಬಲ್ಲಿದರೆಂಬ ಭೇದವನೀಗಿ

ಸಡಗರದೆಲ್ಲರ ಗೆಳೆಯನೀನಾಗಿ

ನಡೆಯಿಂದ ರಾಮೇಶಗೊಪ್ಪುವ ಮಗನಾಗಿ

ನಾಡಬೋನದ ಬೊಮ್ಮನೆನಿಸಿದೆ ತ್ಯಾಗಿ ॥೫॥

***

(‘ಸುವರ್ಣ ಸಂಪುಟ' ಕೃತಿಯಿಂದ ಸಂಗ್ರಹಿತ)