‘ಸುವರ್ಣ ಸಂಪುಟ' (ಭಾಗ ೩೪) - ಜಯದೇವಿ ತಾಯಿ ಲಿಗಾಡೆ

‘ಸುವರ್ಣ ಸಂಪುಟ' (ಭಾಗ ೩೪) - ಜಯದೇವಿ ತಾಯಿ ಲಿಗಾಡೆ

ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮರಾಠಿ ಹೆಣ್ಣು ಮಗಳೇ ಜಯದೇವಿ ತಾಯಿ ಲಿಗಾಡೆ. ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವಯತ್ರಿ ಜಯದೇವಿ ತಾಯಿ ಲಿಗಾಡೆ ಇವರು. ಇವರ ಬಗ್ಗೆ ಈಗಾಗಲೇ ಸಂಪದದಲ್ಲಿ (ಜೂನ್ ೨೩, ೨೦೨೧) ವಿವರವಾಗಿ ಲೇಖನ ಪ್ರಕಟವಾಗಿದೆ. ಇವರ ಬಗ್ಗೆ ಮತ್ತಷ್ಟು ತಿಳಿಯಲು ಬಯಸುವವರು ಆ ಲೇಖನವನ್ನು ಓದಬಹುದು. 

ಇಲ್ಲಿ ಜಯದೇವಿ ತಾಯಿ ಲಿಗಾಡೆಯವರ ಸಾಹಿತ್ಯ ಚಟುವಟಿಕೆಗಳ ಬಗ್ಗೆ ಮಾತ್ರ ಸ್ವಲ್ಪ ಮಾಹಿತಿ ಹಂಚಿಕೊಳ್ಳುವೆ. ಸ್ತ್ರೀ ಶಿಕ್ಷಣಕ್ಕೆ ಒತ್ತು ನೀಡಿದ ಜಯದೇವಿಯವರು ಹಲವಾರು ಕೃತಿಗಳನ್ನು ರಚನೆ ಮಾಡಿದ್ದಾರೆ. ಇವರು ಸೊಲ್ಲಾಪುರದಲ್ಲಿ ಜೂನ್ ೨೩, ೧೯೧೨ರಲ್ಲಿ ಜನಿಸಿದರು. ಇವರ ಮೂಲ ಮರಾಠಿಯಾದರೂ ಕನ್ನಡದ ಏಕೀಕರಣಕ್ಕಾಗಿ ದುಡಿದರು. ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕೆಂದು ಇವರ ಮಹದಾಸೆಯಾಗಿತ್ತು. ಇವರು ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ  ಸಾಹಿತ್ಯ ರಚನೆ ಮಾಡಿದ್ದಾರೆ.

ಇವರ ಕನ್ನಡ ಕೃತಿಗಳು : ಜಯಗೀತೆ, ತಾಯಿಯ ಪದಗಳು, ಶ್ರೀ ಸಿದ್ಧರಾಮ ಪುರಾಣ, ತಾರಕ ತಂಬೂರಿ, ಬಂದೇವು ಕಲ್ಯಾಣಕೆ, ಸಾವಿರದ ಪದಗಳು ಹಾಗೂ ಅರುವಿನಾಗರದಲ್ಲಿ. ಮರಾಠಿ ಭಾಷೆಯಲ್ಲೂ ೭ ಕೃತಿಗಳನ್ನು ರಚನೆ ಮಾಡಿದ್ದಾರೆ. ಜಯಗೀತೆ ಕವನ ಸಂಕಲನದಲ್ಲಿ ಸುಮಾರು ೪೦ ಸುಮಧುರ ಗೀತೆಗಳನ್ನು ರಚನೆ ಮಾಡಿದ್ದಾರೆ. ಇವರು ಜುಲೈ ೨೫, ೧೯೮೬ರಲ್ಲಿ ನಿಧನ ಹೊಂದಿದರು.

ಸುವರ್ಣ ಸಂಪುಟದಲ್ಲಿ ಜಯದೇವಿ ತಾಯಿ ಲಿಗಾಡೆ ಇವರ ಒಂದು ಕವನ ಪ್ರಕಟವಾಗಿದೆ. ಅದನ್ನು ನಿಮಗಾಗಿ ಸಂಗ್ರಹಿಸಿ ಇಲ್ಲಿ ನೀಡಿದ್ದೇವೆ. ಓದುವ ಸಂತಸ ನಿಮ್ಮದಾಗಲಿ…

ಬಯಕೆ

ಸೊನ್ನಲಿಗೆಯ ಸಿದ್ಧನ 

ಕಲ್ಯಾಣ ಬಸವನ

ಶೃಂಗೇರಿ ಶಂಕರನ

ಬುದ್ಧಮಹಾವೀರರ

ಬರುವಿಕೆ ಬಯಕೆಯನು

ಬಯಸೇನ, ಬಯಕೆಯನು ಬದುಕುದಕೆ.

 

ಬರುವಿರಿ ಇನ್ನೊಮ್ಮೆ

ಎಂಬುತ ನಂಬುತ

ದೂಡುವೆ ದೋಣಿಯ

ತೆರೆಯೇನ? ಬಂಡೇನ?

ತಡೆಯದು ನನ್ನೇನು

ತಡೆಯೇನು? ಬಾಳುವೆ ಕಡಲಾಗ-

 

ನೂಕುವೆ ನೌಕೆಯ

ಬೇಕೇನ ನನಗೇನ

ಕೂಡುವೆ ನಿಮ್ಮನ್ನ

ಅಂಜೇನು ಸಾವೀಗು

ಸಾವೇನು ನಿಮ್ಮ ಉಡಿಯೇನು?

ಸಾವೇನ ಬೇರೇನ? ಸಾವೇನ ನನ್ನ ತವರೇನ?

***

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)