‘ಸುವರ್ಣ ಸಂಪುಟ' (ಭಾಗ ೩೫) - ಜ.ಚ.ನಿ.

‘ಸುವರ್ಣ ಸಂಪುಟ' (ಭಾಗ ೩೫) - ಜ.ಚ.ನಿ.

‘ಜಚನಿ' ಎಂದೇ ಖ್ಯಾತರಾಗಿದ್ದವರು ಸಾಹಿತಿ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ನಿಡುಮಾಮಿಡಿ ಇವರು. ಹುಟ್ಟಿದ್ದು ಅಕ್ಟೋಬರ್ ೨೦, ೧೯೦೯ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅಂಬಡಗಟ್ಟಿ ಎಂಬ ಗ್ರಾಮದಲ್ಲಿ. ಇವರ ಪೂರ್ವಾಶ್ರಮದ ಹೆಸರು ಚಂದ್ರಶೇಖರ ಎಂದಾಗಿತ್ತು. ಇವರ ತಂದೆ ಹಿರೇಮಠದ ದುಂಡಯ್ಯ ಮತ್ತು ತಾಯಿ ತಾಯವ್ವ. ಐದು ವರ್ಷದ ಬಾಲಕನಾಗಿದ್ದಾಗ ತಾಯಿಯನ್ನು ಕಳೆದುಕೊಂಡ ಬಳಿಕ ಚಂದ್ರಶೇಖರನ ಓದಿಗೆ ಬಹಳ ಅಡಚಣೆಯಾಯಿತು. ನಾಲ್ಕನೇ ತರಗತಿಯ ನಂತರ ಇವನು ಹಾನಗಲ್ಲ ಶಿವಕುಮಾರ ಸ್ವಾಮಿಗಳ ಉಪದೇಶದಂತೆ ಶಿವಮೊಗ್ಗದ ಶಿವಯೋಗ ಮಂದಿರಕ್ಕೆ ಸೇರಿದ.

ಚಂದ್ರಶೇಖರರು ಶಿವಯೋಗ ಮಂದಿರದಲ್ಲಿ ಆಸಕ್ತಿಯಿಂದ ೧೨ ವರ್ಷಗಳ ಕಾಲ ಅಧ್ಯಯನ ನಡೆಸಿ ಇಂಗ್ಲೀಷ್, ಕನ್ನಡ, ಸಂಸ್ಕೃತ ಭಾಷೆಯಲ್ಲಿ ಪ್ರವೀಣತೆ ಪಡೆದರು. ಆ ಸಮಯದಲ್ಲಿ ಶಿವಯೋಗ ಮಂದಿರದಲ್ಲಿ ಬೇರೆ ಬೇರೆ ಶಾಖಾ ಮಠಗಳ ಸ್ವಾಮಿಗಳಿಗೆ ತರಭೇತಿಯನ್ನು ನೀಡಲಾಗುತ್ತಿತ್ತು. ಆದರೆ ಚಂದ್ರಶೇಖರರ ಶರೀರ ದುರ್ಬಲವಾಗಿದ್ದುದರಿಂದ ಅವರಿಗೆ ಗ್ರಂಥಾಲಯವನ್ನು ನೋಡಿಕೊಳ್ಳುವ ಕೆಲಸ ನೀಡಲಾಯಿತು. ಶಿವಕುಮಾರ ಸ್ವಾಮಿಗಳು ‘ಸುಕುಮಾರ' ಎಂಬ ಕೈಬರಹದ ಪತ್ರಿಕೆಯನ್ನು ಹೊರತರುತ್ತಿದ್ದರು. ಈ ಪತ್ರಿಕೆಯ ಜವಾಬ್ದಾರಿ ಚಂದ್ರಶೇಖರರ ಮೇಲೆ ಬಿದ್ದಾಗ ಅವರಿಗೆ ಹಲವಾರು ವಿಷಯಗಳನ್ನು ಕಲಿಯುವ ಅವಕಾಶ ಸಿಕ್ಕಿತು.

ಭಾರತೀಯ ತತ್ವಚಿಂತನೆ, ವೀರಶೈವ ತತ್ವ ಚಿಂತನೆ, ಹಳೆಗನ್ನಡ ಸಾಹಿತ್ಯಾಧ್ಯಯನ, ಯೋಗ, ವೈದ್ಯ ಇತ್ಯಾದಿಗಳ ಬಗ್ಗೆ ಕಲಿತರು. ಆ ಸಮಯದಲ್ಲಿ ಇವರ ಆರೋಗ್ಯ ಹದಗೆಟ್ಟಿತು. ಬೆಳಗಾವಿಗೆ ತೆರಳಿ ಚಿಕಿತ್ಸೆ ಪಡೆದುಕೊಂಡ ಬಳಿಕ ಆರೋಗ್ಯ ಸುಧಾರಿಸಿತು. ಬೆಂಗಳೂರಿನ ಸರ್ಪಭೂಷಣ ಮಠದ ಮಹಾದೇವ ಸ್ವಾಮೀಜಿಯವರ ಬಳಿ ಇವರು ವೀರಶೈವ ತತ್ವ ಚಿಂತನೆ ಅಧ್ಯಯನ ನಡೆಸಿದರು. ಅಧ್ಯಯನ ನಡೆಸುತ್ತಿದ್ದ ಸಮಯದಲ್ಲೇ ಇವರಿಗೆ ಕೋಲಾರದ ಜಿಲ್ಲಾಧಿಕಾರಿ ಕಚೇರಿಯಿಂದ ಕರೆ ಬರುತ್ತದೆ. ನಿಡುಮಾಮಿಡಿ ಮಠದ ಧರ್ಮಗುರುವಿನ ಸ್ಥಾನಕ್ಕೆ ಇವರೇ ಸೂಕ್ತ ವ್ಯಕ್ತಿ ಎಂದು ನಿರ್ಧಾರ ಮಾಡಲಾಗುತ್ತದೆ. 

೧೯೩೯ ರ ಜೂನ್ ೧೨ರಂದು ಚಂದ್ರಶೇಖರ ಇವರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯಾದರು. ಆ ಸಮಯದಲ್ಲಿ ಮಠ ಬಹಳ ಶಿಥಿಲಾವಸ್ಥೆಯಲ್ಲಿತ್ತು. ಇವರು ಮಠದ ಬಗ್ಗೆ ಆಸ್ಥೆ ವಹಿಸಿ ಅದನ್ನು ಪುನರ್ ನಿರ್ಮಾಣ ಮಾಡಿದರು. ಈ ಕಾರ್ಯದಿಂದ ಅವರು ಬಹಳ ಜನಾನುರಾಗಿಯಾದರು. ಮಠದ ಕಾರ್ಯದ ಜೊತೆಗೆ ಹಲವಾರು ಸಾಹಿತ್ಯಕ ಕಾರ್ಯಗಳನ್ನೂ ನಡೆಸಿದರು. ಹಲವಾರು ಬರಹಗಳನ್ನು ಬರೆದರು. ಇವರ ನಾಲ್ಕು ದಶಕಗಳ ಸೇವೆಯ ಸಮಯದಲ್ಲಿ ಸುಮಾರು ೬೦೦೦ ಸಾವಿರಕ್ಕೂ ಅಧಿಕ ವಚನಗಳನ್ನು ರಚನೆ ಮಾಡಿದರು. ರಾಷ್ಟ್ರೀಯತೆ, ನಾಡುನುಡಿ, ತುರ್ತು ಪರಿಸ್ಥಿತಿ, ಕುಟುಂಬ ಯೋಜನೆ ಮುಂತಾದ ಹಲವಾರು ವಿಷಯಗಳ ಬಗ್ಗೆ ಇವರು ಲೇಖನ, ಕವನಗಳನ್ನು ಬರೆದಿದ್ದಾರೆ. 

ಜಚನಿ ಇವರು ನಾಲ್ಕು ನೂರಕ್ಕೂ ಅಧಿಕ ಕೃತಿಗಳನ್ನು ರಚನೆ ಮಾಡಿದ್ದಾರೆ. ಮಣಿಮಾಲೆ, ನಿರ್ವಚನ, ಚಾದಗೆ, ಮಿಡಿವಚನ, ಚನ್ನಚೇತನ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರ ಸಾಧನೆಯನ್ನು ಗಮನಿಸಿ ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದೆ. ಜಚನಿ ಇವರಿಗೆ ೧೯೬೭ರಲ್ಲಿ ‘ದಾಸೋಹ' ಹಾಗೂ ೧೯೭೧ರಲ್ಲಿ ‘ಜೀವನ ಸಿದ್ಧಿ' ಎಂಬ ಎರಡು ಗ್ರಂಥಗಳನ್ನು ಅಭಿಮಾನಿಗಳು ಗೌರವಪೂರ್ವಕವಾಗಿ ಅರ್ಪಿಸಿದ್ದಾರೆ. ಇವರು ೧೯೯೫ರ ನವೆಂಬರ್ ೫ರಂದು ನಿಧನ ಹೊಂದಿದರು.

‘ಸುವರ್ಣ ಸಂಪುಟ’ದಲ್ಲಿ ಪ್ರಕಟವಾಗಿರುವ ಏಕೈಕ ಕವನವನ್ನು ನಾವಿಲ್ಲಿ ಪ್ರಕಟ ಮಾಡುತ್ತಿದ್ದೇವೆ. ಓದಿ.. ಅಭಿಪ್ರಾಯ ತಿಳಿಸಿ.

ನೇಹ ನಾನಾಸ್ತಿ ಕಿಂಚನ

ಗಂಧವೆಲ್ಲ ನೀನಾಗಿರಲು

ಘ್ರಾಣಿಸುವುದೇನನ್ನು ನೀ ಹೇಳು ?

ರಸವೆಲ್ಲ ನೀನಾಗಿರಲು

ನಾನೇನ ರುಚಿಸಲಿ ನೀ ಸೊಲ್ಲು ?

ಚರಾಚರ ಚೆಲುವೆಲ್ಲ ನೀವೆ ;

ಚಕ್ಷುವಿನಿಂ ನಾನೇನ ನೋಡುವೆ ?

 

ಗಾಳಿಯೇ ನೀವಾಗಿ ಸೋಂಕಿರಲು

ಹೇಳಿ ಇನ್ನೇನು ಸೋಂಕಲಿ ನಾನು ?

ನೀವಿರೆ ನಾದಮಯವಾಗಿ

ನುಡಿಯಲಿ ನಾನಾರಿಗಾಗಿ ?

ನಿನ್ನುಳಿದು ನಾ ಮಾಳ್ಪುದೇನಿಲ್ಲಿ ?

ನೀನಲ್ಲದೆ ಬೇರಿಲ್ಲ ನಸು ಎಲ್ಲಿ !

 

ಇದು ಶ್ರುತ್ಯನುಭವಘೋಷಣ ;

‘ನೇಹ ನಾನಾಸ್ತಿ ಕಿಂಚನ ! ‘

***

(‘ಸುವರ್ಣ ಸಂಪುಟ' ಕೃತಿಯಿಂದ ಸಂಗ್ರಹಿತ)