‘ಸುವರ್ಣ ಸಂಪುಟ' (ಭಾಗ ೩೭) - ವಾಲಿ ಗಂಗಪ್ಪ

‘ಸುವರ್ಣ ಸಂಪುಟ' (ಭಾಗ ೩೭) - ವಾಲಿ ಗಂಗಪ್ಪ

‘ಸಾರಜ್ಞ' ಎಂಬ ಕಾವ್ಯ ನಾಮಾಂಕಿತ ಕವಿಯಾದ ವಾಲಿ ಗಂಗಪ್ಪ ಅವರನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆರಿಸಿಕೊಂಡಿದ್ದೇವೆ. ಸಾಹಿತ್ಯದಲ್ಲಿ ಬಹಳಷ್ಟು ಸಾಧನೆ ಮಾಡಿದ ವಾಲಿ ಗಂಗಪ್ಪನವರ ಹೆಸರು ಅದು ಹೇಗೆ ನೇಪಥ್ಯಕ್ಕೆ ಸರಿದು ಹೋಯಿತೋ ಎಂದು ಅಚ್ಚರಿಗೊಳಗಾಗಿರುವೆ. ಏಕೆಂದರೆ ಇವರು ಬರೆದ ಬರಹಗಳು ಅನೇಕ. ಹುಡುಕಾಡಲು ಹೋದರೆ ಇವರದೊಂದು ಭಾವಚಿತ್ರವೂ ಸರಿಯಾಗಿ ಸಿಗುವುದಿಲ್ಲ. ನಮಗೆ ಸಿಕ್ಕ ಮಾಹಿತಿಗಳನ್ನು ಕ್ರೋಢೀಕರಿಸಿ ಪುಟ್ಟ ಪರಿಚಯ ಇಲ್ಲಿದೆ.

ವಾಲಿ ಗಂಗಪ್ಪ: ಇವರನ್ನು ಸುಪ್ರಭಾತ ಕವಿ ಎಂದೂ ಕರೆಯುತ್ತಿದ್ದರು. ಮೂಲತಃ ವಿಜಯಪುರ (ಬಿಜಾಪುರ) ದವರಾದ ಇವರ ಕುಟುಂಬ ನೆಲೆನಿಂತದ್ದು ಹುಬ್ಬಳ್ಳಿಯಲ್ಲಿ. ಇವರ ಮನೆತನಕ್ಕೆ ವಾಲಿ ಎಂಬ ಅಡ್ದ ಹೆಸರು ಬರಲು ಕಾರಣವೆಂದರೆ ಇವರ ಪೂರ್ವಿಕರು ತಾಡವೋಲೆ ಬರೆಯುವ ಕಾಯಕವನ್ನು ಮಾಡುತ್ತಿದ್ದರು. ಕ್ರಮೇಣ ವೋಲೆ ಎಂಬ ಪದ ವಾಲಿ ಎಂದು ಬಳಕೆಯಾಗಿ ಇವರಿಗೆ 'ವಾಲಿ' ಎಂಬ ಅಡ್ಡ ಹೆಸರು ಖಾಯಂ ಆಯಿತು. ಗಿಡಮೂಲಿಕೆಯ ವ್ಯಾಪಾರ ಮಾಡುತ್ತಿದ್ದ ವೀರಪ್ಪ ಹಾಗೂ ಗಂಗಮ್ಮ ದಂಪತಿಗಳ ಪುತ್ರರಾಗಿ ಮಾರ್ಚ್ ೨೦, ೧೯೧೨ ರಂದು ಧಾರವಾಡದಲ್ಲಿ ಗಂಗಪ್ಪನವರು ಜನಿಸಿದರು. ಗಂಗಪ್ಪನವರಿಗೆ ಬಾಲ್ಯದಿಂದಲೂ ನಾಟಕದಲ್ಲಿ ಆಸಕ್ತಿ. ಹಾಗೆಯೇ ಸಂಗೀತ ಹಾಗೂ ತತ್ವಪದಗಳ ಬಗ್ಗೆ ಕುತೂಹಲ ಇವರಿಗೆ ಬಾಲ್ಯದಿಂದಲೇ ಮೂಡಿತ್ತು. ಇವರು ಉತ್ತಮ ಹಾಡುಗಾರರಾಗಿದ್ದರು.

ಮೂರನೇ ತರಗತಿಯಲ್ಲಿ ಕಲಿಯುತ್ತಿರುವಾಗ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಗಂಗಪ್ಪನವರು ಶಾಲೆಯನ್ನು ತ್ಯಜಿಸಬೇಕಾಯಿತು. ತಂದೆಯವರು ನಡೆಸುತ್ತಿದ್ದ ವ್ಯಾಪಾರದಲ್ಲಿ ಕೈಜೋಡಿಸಿದರು. ಕಲಿಯುವ ಆಸೆ ಬಹಳಷ್ಟಿದ್ದರೂ ತನ್ನ ಮಗನಿಗೆ ಕಲಿಸಲಾಗಲಿಲ್ಲವೆಂದು ಗಂಗಪ್ಪನವರ ತಂದೆ ಯಾವಾಗಲೂ ದುಃಖ ತೋಡಿಕೊಳ್ಳುತ್ತಿದ್ದರಂತೆ. ಗಂಗಪ್ಪನವರಿಗಾಗಿ ಹಳಗನ್ನಡ ಕಾವ್ಯ ಪುಸ್ತಕಗಳು ಹಾಗೂ ಕಿಟ್ಟೆಲ್ ನಿಘಂಟನ್ನು ತಂದು ಕೊಟ್ಟಿದ್ದರು. ಈ ಪುಸ್ತಕಗಳ ಮೂಲಕ ಸ್ವಯಂ ಅಭ್ಯಾಸ ಮಾಡಿ ಗಂಗಪ್ಪನವರು ಹಲವಾರು ಕೃತಿಗಳನ್ನು ರಚನೆ ಮಾಡಿದರು.

ರುದ್ರಮ್ಮನವರನ್ನು ವಿವಾಹವಾದ ಗಂಗಪ್ಪನವರಿಗೆ ನಾಲ್ಕು ಮಂದಿ ಮಕ್ಕಳು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಿದ್ದಾರೆ. ಸರಳ ಸಜ್ಜನಿಕೆಯ ಗಂಗಪ್ಪನವರಿಗೆ ಸರಿಯಾದ ಜೋಡಿ ರುದ್ರಮ್ಮನವರು. ಪತಿಯ ಕಡಿಮೆ ಆದಾಯ ಹಾಗೂ ಸಾಹಿತ್ಯದ ಒಲವನ್ನು ತೂಗಿಸಿಕೊಂಡು ಹೋಗುತ್ತಿದ್ದರು. 

ಗಂಗಪ್ಪನವರು ಹಲವಾರು ಸುಪ್ರಭಾತ ಗೀತೆಗಳನ್ನು ರಚನೆ ಮಾಡಿದ ಕಾರಣ ಇವರಿಗೆ ‘ಸುಪ್ರಭಾತ ಕವಿ’ ಎಂದೂ ಕರೆಯುತ್ತಿದ್ದರು. ಇವರು ಭಾವಗೀತೆ, ಸಾನೆಟ್ಟು, ತ್ರಿಪದಿ, ಷಟ್ಪದಿ, ಅನುವಾದ, ಕಂದಪದ್ಯ, ರಗಳೆ ಮುಂತಾದ ವಿವಿಧ ಪ್ರಕಾರಗಳಲ್ಲಿ ತಮ್ಮ ಸಾಹಿತ್ಯ ರಚನೆ ಮಾಡಿದ್ದಾರೆ. ಇವರ ಪ್ರಮುಖ ಕೃತಿಗಳು - ಕಲ್ಯಾಣಕ್ರಾಂತಿ, ಚಂದ್ರಮಾಯೆ, ಕಾವ್ಯ ಕಿನ್ನರಿ ಇತ್ಯಾದಿ. ಗಂಗಪ್ಪನವರು ೧೯೯೬ರಲ್ಲಿ ನಿಧನ ಹೊಂದಿದರು.

ಸುವರ್ಣ ಸಂಪುಟ ಕೃತಿಯಲ್ಲಿ ಗಂಗಪ್ಪ ವಾಲಿಯವರ ಪ್ರಕಟವಾದ ಏಕೈಕ ಕವನ:

ಸಾರಜ್ಞನ ನುಡಿಗಳು

ಋಣವ ಹೊರುವುದಕ್ಕಿಂತ

ಹೆಣವ ಹೊರುವುದು ಲೇಸು

ಋಣವ ಹೊತ್ತವನು ಯಮನು ಕರೆಯುವ ಮುನ್ನ

ಹೆಣವಾಗಿ ಬಿಡುವ ಸಾರಜ್ಞ.

 

ಸಾಲವಿದ್ದವ ಲೆಂಬ

ಕೂಳು ಕುಳ್ಳಿಗು ಕೀಳು

ಸಾಲವನು ಹರಿದ ಮರುದಿನದ ಒಣ ರೊಟ್ಟಿ

ಹಾಲ ಕೆನೆಯುಕ್ಕು ಸಾರಜ್ಞ.

 

ದುಡಿಮೆಯೆಂಬುವ ಹೊನ್ನ 

ಕೊಡವೆ ಕೈಯೊಳಗಿರಲು 

ಕಡಬಡ್ಡಿಯವರ ಮಂಗ ಮಲಕಿಗೆ ಸಿಗುವ 

ಗೊಡವೆಯೇತಕ್ಕೆ? ಸಾರಜ್ಞ.

 

ಅಗ್ಗದಾ ಮುಖಸ್ತುತಿಗೆ

ಹಿಗ್ಗದವ ಕಡು ಜಾಣ

ಹಿಗ್ಗದಗೆ ಮುಂದೆ ಹೆಗ್ಗುರಿಯ ಹಾದಿಯಲಿ

ನೆಗ್ಗಲಿಯ ಮುಳ್ಳು ಸಾರಜ್ಞ.

 

ಆ ರಾಜ್ಯ ಕರ್ತರಿಗೆ

ಮೂರು ಹಾದಿಯ ಮಣ್ಣು

ತೂರಿದೆವು ಆಗ ! ಯಾರಿಂಗೆ ತೂರುವದು

ಸ್ವಾರಾಜ್ಯದಲ್ಲಿ ? ಸಾರಜ್ಞ

 

ಅತ್ತೆ ಸರಸತಿಯಾಗಿ

ಮತ್ತೆ ಸಿರಿ ಸೊಸೆಯಾಗಿ

ಹತ್ತು ಬೆರಳುಗಳು ತೊತ್ತಾದರೆಲ್ಲರಿಗು

ಹೆತ್ತುಪ್ಪ ಕಡುಬು ಸಾರಜ್ಞ.

 

ಇರಲೊಂದು ಮನೆಯಾಗಿ 

ಸುರಿಯಲಂಬಲಿಯಾಗಿ

ಹೊರಲರಿವೆಯಾಗಿ ಅರಿವಿರಾ ಬಾದರದು

ವರ ರಾಜ್ಯವೆಂಬೆ ಸಾರಜ್ಞ.

 

ಹಿಡಿಯರಳು ಮುಕ್ಕಲ್ಕೆ

ಇಡಿ ಬಣವೆ ಸುಡುವವರ

ಒಡಲ ಸಡಗರಕೆ ಬಹುಜನರ ಹಿತವೆಲ್ಲ

ಹುಡಿಗೊಡದಿರಲಿ ಸಾರಜ್ಞ.

 

ಹಸಿದುಂಡ ರಸಭೋಜ್ಯ

ಹೊಸರಕ್ತವಾಗುವುದು

ಒಸೆದೋದಿದೋದು ಹಸಿಯ ಗೋಡೆಗೆ ಹರಳ

ಎಸೆದಂತೆ ನಿಜದಿ ಸಾರಜ್ಞ.

 

ಗುಟ್ಟನ್ನು ಹೃದಯದೊಳ-

ಗಿಟ್ಟು ದುಡಿವವ ಜಾಣ;

ಪಿಟ್ಟೆಂದರೆಲ್ಲ ಗುಟ್ಟು ರಟ್ಟಾದೀತು,

ಗುಟ್ಟೆದೆಯ ಕಸುವು ಸಾರಜ್ಞ.

***

(ಸುವರ್ಣ ಸಂಪುಟ ಕೃತಿಯಿಂದ ಆಯ್ದ ಕವನ)