‘ಸುವರ್ಣ ಸಂಪುಟ' (ಭಾಗ ೩೮) - ಎಸ್.ವಿ.ಪರಮೇಶ್ವರ ಭಟ್ಟ

‘ಸುವರ್ಣ ಸಂಪುಟ' (ಭಾಗ ೩೮) - ಎಸ್.ವಿ.ಪರಮೇಶ್ವರ ಭಟ್ಟ

ಸದಾಶಿವರಾವ್ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟ ಎಂಬುವುದು ಇವರ ಪೂರ್ಣ ಹೆಸರು. ಪರಮೇಶ್ವರ ಭಟ್ಟರು ಫೆಬ್ರವರಿ ೮, ೧೯೧೪ರಂದು ಶಿವಮೊಗ್ಗ ಜಿಲ್ಲೆಯ ಮಾಳೂರಿನಲ್ಲಿ ಜನಿಸಿದರು. ಇವರ ತಂದೆ ಸದಾಶಿವರಾವ್ ಹಾಗೂ ತಾಯಿ ಲಕ್ಷ್ಮಮ್ಮ. ಇವರಿಗೆ ಸಣ್ಣ ವಯಸ್ಸಿನಲ್ಲೇ ನಾಟಕ, ಓದು, ಯಕ್ಷಗಾನದಲ್ಲಿ ಆಸಕ್ತಿ ಇತ್ತು. ಹೆತ್ತವರ ಪ್ರೋತ್ಸಾಹವೂ ಲಭಿಸಿದ್ದರಿಂದ ಚಿಕ್ಕ ವಯಸ್ಸಿನಲ್ಲೇ ಬಾಲಕೃಷ್ಣ, ಉತ್ತರೆ ಮುಂತಾದ ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿದ್ದರು. 

ಶಾಲಾ ದಿನಗಳಲ್ಲಿ ಗುರುಗಳಾದ ಕಮಗೋಡು ನರಸಿಂಹ ಶಾಸ್ತ್ರಿಗಳು ಹಾಗೂ ಕಾಲೇಜು ಸಮಯದಲ್ಲಿ ಎ.ಆರ್.ಕೃಷ್ಣ ಶಾಸ್ತ್ರಿಗಳು, ವಿ.ಸೀತಾರಾಮಯ್ಯ, ಡಿ.ವಿ.ಶೇಷಗಿರಿರಾಯರು ಇವರಲ್ಲಿನ ಪ್ರತಿಭೆಯನ್ನು ಗುರುತಿಸಿ ಅದನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪರಮೇಶ್ವರ ಭಟ್ಟರು ಬಿ.ಎ. ಪದವಿಯನ್ನು ಓದುತ್ತಿರುವಾಗ ಎಚ್.ಎಂ.ಶಂಕರನಾರಾಯಣ ರಾಯರು ಹಾಗೂ ಜಿ.ವೆಂಕಟಸುಬ್ಬಯ್ಯನವರು ಇವರ ಸಹಪಾಠಿಗಳಾಗಿದ್ದರು. ಬಿ.ಎಂ.ಶ್ರೀಗಳು ಗುರುಗಳಾಗಿದ್ದರು. ಮುಂದೆ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವ ಸಂದರ್ಭದಲ್ಲಿ ತೀ.ನಂ.ಶ್ರೀ. ಇವರು ಗುರುಗಳಾಗಿದ್ದರು. ಇವರೆಲ್ಲರ ಗರಡಿಯಲ್ಲಿ ಪಳಗಿದ ಪರಮೇಶ್ವರ ಭಟ್ಟರು ಉತ್ತಮ ವಿದ್ವತ್ ಮತ್ತು ಅನುಭವವನ್ನು ಪಡೆದುಕೊಂಡರು. ಕುವೆಂಪು ಹಾಗೂ ನಾ.ಕಸ್ತೂರಿಯವರ ಜೊತೆಗೂ ಇವರ ಒಡನಾಟವಿತ್ತು.

ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದು ಕನ್ನಡ ಪ್ರಾಧ್ಯಾಪಕರಾಗಿ ಮೈಸೂರಿನ ಮಹಾರಾಣಿ ಕಾಲೇಜು, ಶಿವಮೊಗ್ಗೆಯ ಕಾಲೇಜು, ಮೈಸೂರಿನ ಮಹಾರಾಜಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ಮೈಸೂರು ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಮಂಗಳೂರಿನಲ್ಲಿ ವಿಶ್ವ ವಿದ್ಯಾನಿಲಯವು ಪ್ರಾರಂಭವಾದಾಗ ಅಲ್ಲಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ನಿರ್ದೇಶಕರಾಗಿ ನೇಮಕಗೊಂಡರು. ಮಂಗಳೂರು ವಿವಿ ಗೆ ‘ಮಂಗಳ ಗಂಗೋತ್ರಿ’ ಎಂದು ನಾಮಕರಣ ಮಾಡಿದ ಖ್ಯಾತಿ ಪರಮೇಶ್ವರ ಭಟ್ಟರಿಗೆ ಸಲ್ಲುತ್ತದೆ. ೧೯೭೪ರಲ್ಲಿ ನಿವೃತ್ತರಾದ ಇವರು ತಮ್ಮ ಸಾಹಿತ್ಯಕ ಚಟುವಟಿಕೆಗಳನ್ನು ಮುಂದುವರೆಸಿದರು. ಇವರು ಉತ್ತಮ ವಾಗ್ಮಿಯೂ ಆಗಿದ್ದರು. 

ಪರಮೇಶ್ವರ ಭಟ್ಟರು ನವೋದಯ ಕಾಲದ ಉನ್ನತ ವಿಧ್ವಾಂಸ ಬರಹಗಾರರು. ಇವರು ಕವಿತೆಗಳು, ಭಾವಗೀತೆ, ವಚನಗಳು, ಮುಕ್ತಕ ಮೊದಲಾದ ಪ್ರಕಾರಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದರು. ರಾಗಿಣಿ, ಗಗನ ಚುಕ್ಕಿ, ಅಂಚೆಯ ಪೆಟ್ಟಿಗೆ, ಕೃಷ್ಣ ಮೇಘ, ಸಂಜೆ ಮಲ್ಲಿಗೆ ಇವರ ಕೆಲವು ಕವನ ಸಂಕಲನಗಳು. ಮಾಚಯ್ಯ, ಜಹನಾರಾ ನೀಳ್ಗವನಗಳು. ಚಂದ್ರವಿಧಿ, ಇಂದ್ರಛಾಪಾ, ತುಂಬೆ ಹೂವು, ಚಿತ್ರಕಥೆ ಇವುಗಳು ಮುಕ್ತಕಗಳ ಸಂಗ್ರಹ. ಉಪ್ಪುಕಡಲು, ಪಾಮರ, ಉಂಬರ ಎಂಬ ವಚನ ಸಂಕಲನಗಳ ರಚನೆ ಮಾಡಿದ್ದಾರೆ.

‘ಕನ್ನಡದ ಕಾಳಿದಾಸ' ಎಂದು ಹೆಸರುವಾಸಿಯಾಗಿದ್ದ ಪರಮೇಶ್ವರ ಭಟ್ಟರು ಸಾವಿರಾರು ವಚನಗಳನ್ನು ಬರೆದಿದ್ದಾರೆ. ಕನ್ನಡ ಕಾಳಿದಾಸ ಸಂಪುಟ, ಕನ್ನಡ ಬುದ್ಧ ಚರಿತೆ, ಕನ್ನಡ ಗೀತಾ ಗೋವಿಂದ ಮೊದಲಾದುವುಗಳು ಇವರ ಅನುವಾದಿತ ಕೃತಿಗಳು. ಮುದ್ದಣ್ಣನ ಶ್ರೀರಾಮ ಪಟ್ಟಾಭಿಷೇಕಂ ಹಾಗೂ ಅದ್ಭುತ ರಾಮಾಯಣ ಇವರ ಸಂಪಾದನಾ ಗ್ರಂಥಗಳು. ರಸಋಷಿ ಕುವೆಂಪು ಇವರು ಬರೆದ ವಿಮರ್ಶಾ ಕೃತಿ. ಇವರಿಗೆ ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ದೊರೆತಿವೆ. ಚಾವುಂಡರಾಯ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳು ಲಬಿಸಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಇವರು ವಹಿಸಿದ್ದರು. ಅಕ್ಟೋಬರ್ ೨೭, ೨೦೦೦ರಲ್ಲಿ ಇವರು ನಿಧನ ಹೊಂದಿದರು.

'ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಎರಡು ಕವನಗಳು ಪ್ರಕಟವಾಗಿವೆ. ದೀಪ ಹಚ್ಚಾ ಹಾಗೂ ಒಂದು ರಾತ್ರೆ. ಇವುಗಳಲ್ಲಿ ಒಂದು ಕವನ ಇಲ್ಲಿ ನೀಡಲಾಗಿದೆ.

ದೀಪ ಹಚ್ಚಾ !

ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ

ನೀ ಬಂದು ನಿಂದಿಲ್ಲಿ

ದೀಪ ಹಚ್ಚಾ.

 

ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು

ಮನೆಯೆಲ್ಲ ಹೊಳೆದಂತೆ

ದೀಪ ಹಚ್ಚಾ. 

 

ಬಾಳ ಮುಂಬೆಳಗುರಿದು ಹಗರಣದ ಬೈಗಿಳಿದು

ಕಪ್ಪೇರಿ ಬಂದಿತು

ದೀಪ ಹಚ್ಚಾ. 

 

ಕರಿಗೆಜ್ಜೆ ಕುಣಿಸುತ್ತ ಕಣ್ಣೀರ ಮಿಡಿಯುತ್ತ

ಇರುಳಾಕೆ ಬಂದಳು

ದೀಪ ಹಚ್ಚಾ. 

 

ಕಾಲರಾಯನ ಗಾಲಿ ಕತ್ಲಲ್ಲೆ ತಿರುಗಲಿ

ನನ್ನೆದೆಗೆ ನಿನ್ನೊಲವ

ದೀಪ ಹಚ್ಚಾ. 

 

ದೇಹದ ಗೂಡಲಿ ನಿನ್ನೊಲವು ಮೂಡಲಿ

ಜಗವೆಲ್ಲ ನೋಡಲಿ

ದೀಪ ಹಚ್ಚಾ. 

 

ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ

ನನ್ನ ಮನದಂಗಳದಿ

ದೀಪ ಹಚ್ಚಾ. 

 

ಬೆಲ್ಲದಂತೆಲ್ಲ ಬಗೆ ಕರಗುತಲಿಹುದೊಳಗೆ

ನಿನ್ನನೆ ಬೇಡುವೆ

ದೀಪ ಹಚ್ಚಾ. 

 

ದೀಪಿಲ್ಲ ಧೂಪಿಲ್ಲ ಝಳಝಳವಿನಿಸಿಲ್ಲ

ಕಳಕಳವಾಯ್ತಲ್ಲ

ದೀಪ ಹಚ್ಚಾ. 

 

ಮಿಂಚಿಗೆ ಕಾರ್ಮುಗಿಲು ಮಿರುಗದೆ ಹೊನ್ನಾಗಿ

ನಾನೂ ಹೊನ್ನಾದೇನು

ದೀಪ ಹಚ್ಚಾ. 

 

ಹಳೆಬಾಳು ಸತ್ತಿತ್ತು ಕೊಳೆಬಾಳು ಸುಟ್ಟಿತ್ತು

ಹೊಸಬಾಳು ಹುಟ್ಟಿತ್ತು.

ದೀಪ ಹಚ್ಚಾ. 

 

ದಿನದಿನದ ಲೋಕಾನುಭವದೊಳೆದೆಯನು ತುಂಬಿ

ಜೀವನವನನುಗೊಳಿಸಿ

ದೀಪ ಹಚ್ಚಾ. 

 

ಸಾವಿನ ಒಳಸಂಚು ಮಾಯದ ಕಣ್ಮಿಂಚು

ನಿನ್ನೆದುರು ನಂದಿತು

ದೀಪ ಹಚ್ಚಾ. 

ಪ್ರೀತಿಯ ರತಿಗೆ ನೀ ಬೆಳಕಿನ ಆರತಿ

ಬೆಳಗಿನ ಕಲ್ಲಾರತಿ

ದೀಪ ಹಚ್ಚಾ. 

 

ಮೋಹದ ಮತಿಗೆ ನೀ ಸುಟ್ಟು ತೋರುವ ದೀಪ

ಸುಜ್ಞಾನ ಪ್ರದೀಪ

ದೀಪ ಹಚ್ಚಾ. 

 

ಜ್ಯೋತಿ ಸ್ವರೂಪಪನೆ ಸ್ವಯಂ ಪ್ರಕಾಶನೆ

ತೇಜೋರೂಪನೆ

ದೀಪ ಹಚ್ಚಾ. 

 

ವಿಶ್ವಮೋಹಿತಚರಣ ವಿವಿಧವಿಶ್ವಾಭರಣ

ಆನಂದದ ಕಿರಣ

ದೀಪ ಹಚ್ಚಾ. 

 

ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ

ಸೋತ ಉಲಿ ಏಳಲಿ

ದೀಪ ಹಚ್ಚಾ. 

 

ಭವದಂಧಕಾರದಿ ಎನ್ನ ಸಂಸಾರದಿ

ನಿಂದೀಪ ಬೆಳಗಲಿ

ದೀಪ ಹಚ್ಚಾ. 

 

ನನ್ನಂತರಂಗದಿ ನಂದದೆ ನಿಂದೀಪ

ನಂದಾದೀಪಾಗಿರಲಿ

ದೀಪ ಹಚ್ಚಾ. 

***

(ಸುವರ್ಣ ಸಂಪುಟ ಕೃತಿಯಿಂದ ಆಯ್ದ ಕವನ) 

 

Comments

Submitted by addoor Fri, 10/22/2021 - 11:53

ಇವರು "ಎಸ್ವಿಪೀ" ಎಂದೇ ಜನಪ್ರಿಯರು. ಕನ್ನಡದ ಪ್ರೊಫೆಸರ್ ಆಗಿದ್ದ ಇವರ ಶಿಷ್ಯವೃಂದ ದೊಡ್ಡದು. ತಮ್ಮ ಶಿಷ್ಯರನ್ನು ಮನೆಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಇವರಿಂದ ಶಿಷ್ಯರಿಗೆ ಪ್ರೀತಿಯ ಧಾರೆ. ಅದರಿಂದಾಗಿ ಶಿಷ್ಯರಿಗೆ ಇವರ ಬಗ್ಗೆ ಅಪಾರ ಅಭಿಮಾನ. ಮಂಗಳೂರಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದಾಗ ಹಾಗೂ ನಿವೃತ್ತಿಯ ನಂತರ ಮಂಗಳೂರನ್ನು ತಮ್ಮ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವನ್ನಾಗಿಸಿ, ಕನ್ನಡಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಮರೆಯಲಾಗದು.

ಅವರ ಪುಸ್ತಕ ಪರಿಚಾರಿಕೆ ಹೇಗಿತ್ತೆಂದರೆ, ಮಂಗಳೂರಿನ ಬಿರುಬಿಸಿಲಿನಲ್ಲಿ ರಸ್ತೆಗಳಲ್ಲಿ ನಡೆಯುವಾಗಲೂ ಪುಸ್ತಕಗಳು ತುಂಬಿದ ತಮ್ಮ ಹೆಗಲುಚೀಲದಿಂದ ಅವನ್ನು ತೆಗೆದು, ಆಸಕ್ತರಿಗೆ ಕೊಟ್ಟು ಮಾರಾಟ ಮಾಡುತ್ತಿದ್ದರು.

ಕನ್ನಡ ಪುಸ್ತಕ ಪ್ರಕಟಣೆ ಅವರ ದೊಡ್ಡ ಗೀಳು. ತಮ್ಮ ಪುಸ್ತಕಗಳ ಪ್ರಕಟಣೆಗೆ ಮಾತ್ರವಲ್ಲ, ತಮ್ಮ ಶಿಷ್ಯರ ಹಾಗೂ ಸಹೋದ್ಯೋಗಿಗಳ ಪುಸ್ತಕ ಪ್ರಕಟಣೆಗೂ ಶ್ರಮಿಸುತ್ತಿದ್ದ ದೊಡ್ಡ ಮನಸ್ಸು ಅವರದು. ಅವರು ಸಾಲ ಮಾಡಿ ಪುಸ್ತಕ ಪ್ರಕಟಿಸಿದ್ದೂ ಇದೆ!

ಇಲ್ಲಿರುವ "ದೀಪ ಹಚ್ಚಾ!" ಕವನದಲ್ಲಿ ಅವರ ಪದಗಳ ಲಾಸ್ಯ, ಸುಲಲಿತ ವಿನ್ಯಾಸ ಹಾಗೂ ಅರ್ಥ ವಿಸ್ತಾರ ಗಮನಿಸಿ. ಈಗೀಗ ಕವನ ಬರೆಯುವವರು ಇದರಿಂದ ಕಲಿಯಬೇಕಾದ್ದು ಬಹಳಷ್ಟಿದೆ, ಅಲ್ಲವೇ?

Submitted by Ashwin Rao K P Fri, 10/22/2021 - 16:22

ಸೊಗಸಾದ ಪೂರಕ ಮಾಹಿತಿ

ಎಸ್.ವಿ.ಪರಮೇಶ್ವರ ಭಟ್ಟ ಅಥವಾ 'ಎಸ್ವೀಪಿ' ಬಗ್ಗೆ ತಾವು ನೀಡಿದ ಪೂರಕ ಮಾಹಿತಿಗಾಗಿ ಧನ್ಯವಾದಗಳು. ನಿಮ್ಮ ಮಾಹಿತಿಯಿಂದ ನನ್ನ ಲೇಖನಕ್ಕೆ ಬಲ ಬಂದಂತಾಗಿದೆ.