‘ಸುವರ್ಣ ಸಂಪುಟ' (ಭಾಗ ೩೯-೪೦) - ಎಂ. ರಾಮರಾವ್ ಹಾಗೂ ಎಸ್.ವೆಂಕಟರಾಜ

‘ಸುವರ್ಣ ಸಂಪುಟ' (ಭಾಗ ೩೯-೪೦) - ಎಂ. ರಾಮರಾವ್ ಹಾಗೂ ಎಸ್.ವೆಂಕಟರಾಜ

ಈ ವಾರ ನಾವು ‘ಸುವರ್ಣ ಸಂಪುಟ’ ಕೃತಿಯಿಂದ ಎರಡು ಸಾಹಿತಿಗಳ ಕವನಗಳನ್ನು ಆಯ್ದು ಕೊಂಡಿದ್ದೇವೆ. ನಾವು ಆಯ್ದ ಕವಿಗಳು ಪ್ರೊ.ಎಂ. ರಾಮರಾವ್ ಹಾಗೂ ಎಸ್.ವೆಂಕಟರಾಜ ಇವರು. ನಾವು ಈ ವಾರ ಎರಡು ಕವಿಗಳನ್ನು ಆಯ್ದುಕೊಂಡದ್ದಕ್ಕೆ ಕಾರಣವಿದೆ. ಎಂ. ರಾಮರಾವ್ ಅವರ ಒಂದೇ ಒಂದು ಪುಟ್ಟ ಕವನ ಪ್ರಕಟವಾಗಿದೆ ಹಾಗೂ ಅವರ ಬಗ್ಗೆ ಅಧಿಕ ಮಾಹಿತಿಗಳು ದೊರೆಯುತ್ತಿಲ್ಲ. ಈ ಕಾರಣದಿಂದ ಅವರ ಜೊತೆ ಎಸ್. ವೆಂಕಟರಾಜ ಅವರ ಕವನವನ್ನೂ ಆಯ್ದುಕೊಳ್ಳಲಾಗಿದೆ.

ಪ್ರೊ. ಎಂ. ರಾಮರಾವ್: ಇವರು ಇಂಗ್ಲಿಷ್ ನಲ್ಲಿ ಎಂ.ಎ.ಪದವಿಯನ್ನು ಗಳಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲಿಷ್ - ಕನ್ನಡ ನಿಘಂಟು ಪರಿಷ್ಕರಣದ ಪ್ರಧಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಇವರ ಮುಖ್ಯ ಕೃತಿಗಳೆಂದರೆ ಸೈಲಾಸ್ ಮಾರ್ನರ್, ಪಾದಯಾತ್ರೆ, ನಮ್ಮ ಅರಣ್ಯ ಯಾತ್ರೆ, ನನ್ನ ಕನಸಿನ ದೋಣಿ, ಹರ ಪಾರ್ವತಿ ಇತ್ಯಾದಿ. ಇವರ ಗೌರವಾರ್ಥ ‘ಎಂ. ರಾಮರಾವ್ ನೂರರ ನೆನಪು’ ಎಂಬ ಸಂಕಲನವನ್ನು ಸಂಪಾದನೆ ಮಾಡಿದ್ದಾರೆ ಆರ್. ಇಂದಿರಾ, ಆರ್. ಪೂರ್ಣಿಮಾ ಹಾಗೂ ಆರ್.ಪ್ರತಿಭಾ ಇವರು. ರಾಮರಾವ್ ಬರೆದ ಒಂದು ಪುಟ್ಟ ಕವನ ಇಲ್ಲಿದೆ.

ಹಳ್ಳದ ಸೆದೆಗಳು

ಹಳ್ಳದ ಬದುವಿನ ಮುಳ್ಳಿನ ಪೊದೆಗಳು

ಹಾಡಿಹವೆಲರಿನಲಿ,

ತಂಪೊಳು ಚಲಿಸುವ ಇಂಪಿ ಅಲೆಗಳ  

ಸುಂದರ ಸನಿಯದಲಿ    

 

ಒಲಿದೆನ್ನೆದೆಯೊಳು ದನಿಗೈದಿಹವಿವು

ಮೆಲ್ಲನೆ ಮಂದರದಿ

ಕವಿಗಳ ಪದಗಳು ಹೊಗಳದ ಸೆದೆಗಳು

ಹೃದಯ ಮಂದಿರದಿ.   

***

ಎಸ್.ವೆಂಕಟರಾಜ: ಸಾಂತ್ಯಾರು ವೆಂಕಟರಾಜ ಇವರು ಜೂನ್ ೨೪, ೧೯೧೪ರಲ್ಲಿ ಉಡುಪಿಯಲ್ಲಿ ಜನಿಸಿದರು. ಉಡುಪಿಯ ಗಾಂಧಿ ಎಂದೇ ಖ್ಯಾತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಸಾಂತ್ಯಾರು ಅನಂತಪದ್ಮನಾಭ ಭಟ್ಟರು ಇವರ ತಂದೆ. ‘ಕವಿರಾಜ ಹಂಸ' ಎಂಬ ಬಿರುದಾಂಕಿತ ಇವರು ಕನ್ನಡದ ಪ್ರಮುಖ ಕವಿ, ಕಥೆಗಾರರಲ್ಲಿ ಒಬ್ಬರು. ಆಕಾಶಗಂಗೆ (೧೯೪೫) ಹಾಗೂ ಸಪ್ತ ಸಾಗರ (೧೯೪೭) ಇವರ ಪ್ರಕಟಿತ ಕಥಾ ಸಂಕಲನಗಳು. ಅವರ ಹಲವಾರು ಕಥೆಗಳು ಇನ್ನೂ ಅಪ್ರಕಟಿತ ರೂಪದಲ್ಲಿವೆ. ಹಲವಾರು ಕಥೆಗಳನ್ನು ಅವರು ತಮ್ಮದೇ ಸಂಪಾದಕತ್ವದ ‘ವೀರಭೂಮಿ' ಮಾಸ ಪತ್ರಿಕೆಯಲ್ಲಿ ಪ್ರಕಟಿಸಿದ್ದರು.  

ವೆಂಕಟರಾಜರು ಮದರಾಸು ವಿಶ್ವವಿದ್ಯಾನಿಲಯದಿಂದ ಸಂಸ್ಕೃತ ಹಾಗೂ ಕನ್ನಡದಲ್ಲಿ ವಿದ್ವಾನ್ ಪದವಿಯನ್ನು ಪಡೆದಿದ್ದರು. ಇವರು ಮಂಗಳೂರು, ಉಡುಪಿ, ಕುಂದಾಪುರಗಳಲ್ಲಿ ಶಾಲಾ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಸಾಂತ್ಯಾರು, ಬೈರಂಪಳ್ಳಿ, ಬೆಳ್ಳರ್ಪಾಡಿ ಗ್ರಾಮಗಳ ಪಟೇಲರಾಗಿದ್ದರು. ಇವರ ‘ಮಾನಸಗಂಗೆ’ ಕವನ ಸಂಕಲನಕ್ಕೆ ರಾಜ್ಯ ಪ್ರಶಸ್ತಿ ದೊರೆತಿದೆ. ಇವರು ೭ ಕವನ ಸಂಕಲನ, ೩ ಕಾದಂಬರಿ, ೮ ನಾಟಕಗಳು, ೫೪ ಕಥೆಗಳು ಹಾಗೂ ಹಲವಾರು ಸಂಪಾದಕೀಯ ಬರಹಗಳು, ಲಲಿತ ಪ್ರಬಂಧಗಳು, ಅಂಕಣ ಬರಹಗಳನ್ನು ಬರೆದಿದ್ದಾರೆ. ವೆಂಕಟರಾಜರು ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಧೈರ್ಯದಿಂದ ಲೇಖನಗಳನ್ನು ಬರೆದು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ‘ವೀರಭೂಮಿ' ಪತ್ರಿಕೆಯನ್ನು ಇವರು ಸುಮಾರು ೭ ವರ್ಷಗಳ ಕಾಲ ನಡೆಸಿದ್ದರು. ಇವರು ೧೯೮೮ರಲ್ಲಿ ನಿಧನ ಹೊಂದಿದರು.

ಎಸ್.ವೆಂಕಟರಾಜ ಇವರ ಒಂದು ಕವನ ಸುವರ್ಣ ಸಂಪುಟ ಕೃತಿಯಲ್ಲಿ ಪ್ರಕಟವಾಗಿದೆ. ಅದನ್ನು ಇಲ್ಲಿ ಸಂಗ್ರಹಿಸಿ ನೀಡಲಾಗಿದೆ. ಓದಿಕೊದಿಕೊಳ್ಳಿರಿ…

ಬೆಳಕಿಗಾಗಿ

ಬಿದ್ದಿತ್ತು ದಾರಿಯಲಿ ಬಿಸಿಲು !

ನಿದ್ದೆಬಾರದ ಹಸುಳೆ ಕೈನೀಡಿ ಮೇಲ್ಮುಸುಕ-

ನೊದ್ದು ನೋಡುವ ರೀತಿ

ಬಿದ್ದಿತ್ತು ದಾರಿಯಲಿ ಬಿಸಿಲು !

 

ಮುಗ್ಧತೆಯ ಮೋಹದಲಿ ಕಲೆತು ಕತ್ತಲ ಕುಂತಿ

ಹೆತ್ತು ಕೈ ಬಿಟ್ಟಿರುವ ಕೂಸು

ಸದ್ದಿಲ್ಲದೊಮ್ಮೊಮ್ಮೆ ನೆರಳ ಬೆರಳನು ತೂರಿ

ಸಂತೈಸುತಿರುವ ಹೆಣ್ಮನಸು !

 

ಮುದ್ದಿಟ್ಟು ಮಮತೆಯಲಿ ತಳಿರೆಲೆಯ ತೊಟ್ಟಿಲಲಿ

ತೂಗುತಿಹ ತರುಲತೆಯ ಸೊಗಸು

ಶುದ್ಧತೆಗೆ ತೆರವಿತ್ತು ಸರಿವ ಹಿನ್ನಲೆಯಾಗಿ

ಜಗುಳಿಹುದು ಜಗದ ಕಣ್ಕನಸು !

 

ಸದ್ದುಳಿದು ಮೆಲ್ಮೆಲನೆ ಬಂದು ಮುಂಜಾವದಲಿ

ಯಾರೊ ಬರೆದಿಹ ರಂಗವಲ್ಲಿ

ಎದ್ದು ನೋಡಲು ಜಗತಿ ಮೂಕ ಬ್ರಹ್ಮಾಂಡದಲಿ 

ಹೊದ್ದಿತ್ತು ಬೆಳ್ಳನ್ನ ಬಳ್ಳಿ !

 

ಉದ್ದಗಲದಾಕಾಶವಿಳಿದು ಭೂಮಿಗೆ ಚಂಚು

ತೂರಿರುವ ಚೆಲುವು ಮಿಂಚುಳ್ಳಿ 

ನಿದ್ದೆಯಲಿ ಬಿಗಿದಂತರಾತ್ಮ ಜಾಡ್ಯವನುಳಿದು

ಚೈತನ್ಯಕಡರಿಹುದು ನುಸುಳಿ !

ಬಿದ್ದಿತ್ತು ದಾರಿಯ ಬಿಸಿಲು.

ತುಂಬಿತ್ತು ಗಂಭೀರ ಮೌನ !

ಕದ್ದ ಸೊತ್ತನು ಹಂಚಿಕೊಳಲು ಕಾದಿಹ ಕಳ್ಳ

ಜನರ ಗುಟ್ಟಿನ ಕಾರ್ಯಸ್ಥಾನ-

ಅಂತಿತ್ತು ಸಂಜೆಯ ವಿಧಾನ !

 

ಕಾಲನಲ್ಲಲ್ಲಿ ಕರಿನೆರಳ ಮಸಿಯೊಳಗದ್ದಿ

ಬರೆದ ಕಲ್ಪದ ಚರಮಗೀತ

ಮೇಲೆ ಮೊಗವೆತ್ತಿ ನರಿ ನಾಯಿ ನಿಚ್ಚಳವಾಗಿ

ನೀಡುತಿಹ ನರಕ ಸಂಗೀತ !

 

ಶೀಲತೆಯನೊರಸಿಯಶ್ಲೀಲ ನಿರ್ಮಾಣದಲಿ

ಪಾಲುಗೊಂಡಿಹ ಮನೋವಿಕಾರ

ಹಾಲು ಸವಿಯಕ್ಕರೆಯ ಸಕ್ಕರೆಗೆ ಮುಸುಳುತಿಹ

ದುರ್ವಿಷಯ ದುಃಖಾಂಧಕಾರ !

 

ತುಂಬಿತ್ತು ಗಂಭೀರ ಮೌನ !

ಬೆಣ್ಣೆಯಾಸೆಗೆ ಕಣ್ಣುಮುಚ್ಚಿ ಕರ್ರನೆ ಬೆಕ್ಕು

ಕಾದುಕುಳಿತಿರುವ ಕಾರ್ಪಣ್ಯ-

ಅಂತಿತ್ತು ಕತ್ತಲ ವಿಧಾನ !

***

ಚಿತ್ರ ೧. ಎಂ. ರಾಮರಾವ್, ಚಿತ್ರ ೨. ಎಸ್. ವೆಂಕಟರಾಜ

(ಸುವರ್ಣ ಸಂಪುಟ ಕೃತಿಯಿಂದ ಆಯ್ದ ಕವನ)