‘ಸುವರ್ಣ ಸಂಪುಟ' (ಭಾಗ ೪೧) - ಕೆ.ಎಸ್.ನರಸಿಂಹಸ್ವಾಮಿ
‘ಮಲ್ಲಿಗೆ ಕವಿ' ಎಂದೇ ಖ್ಯಾತರಾಗಿದ್ದ ಕೆ.ಎಸ್.ನರಸಿಂಹಸ್ವಾಮಿಯವರು ಜನವರಿ ೨೬, ೧೯೧೫ರಲ್ಲಿ ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು. ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ ಇವರ ಪೂರ್ಣ ಹೆಸರು. ಮೈಸೂರಿನಲ್ಲಿ ಇಂಟರ್ ಮೀಡಿಯೆಟ್ ಶಿಕ್ಷಣವನ್ನು ಪೂರೈಸಿ, ಸರಕಾರಿ ಸೇವೆ (೧೯೩೭)ಗೆ ಸೇರಿದ್ದರು. ‘ಮೈಸೂರು ಮಲ್ಲಿಗೆ' ಕವನ ಸಂಕಲನ ಇವರಿಗೆ ಬಹಳ ಖ್ಯಾತಿಯನ್ನು ತಂದುಕೊಟ್ಟ ಕೃತಿ. ಈ ಕೃತಿಯ ಕಾರಣದಿಂದಲೇ ಅವರು ‘ಪ್ರೇಮ ಕವಿ’, 'ಮಲ್ಲಿಗೆ ಕವಿ' ಎನಿಸಿಕೊಂಡರು.
ಮೈಸೂರು ಮಲ್ಲಿಗೆ ಕೃತಿ ಚಲನಚಿತ್ರ ರೂಪದಲ್ಲೂ ಬಂದಿದೆ. ಈ ಕಾರಣದಿಂದ ಇವರು ಇನ್ನಷ್ಟು ಪ್ರಸಿದ್ಧಿಯನ್ನು ಪಡೆದರು. ಈಗಲೂ ಇವರ ‘ರಾಯರು ಬಂದರು ಮಾವನ ಮನೆಗೆ...' ಕವನ ಎಲ್ಲರ ಬಾಯಲ್ಲಿ ಕುಣಿದಾಡುತ್ತದೆ. ಕೆ.ಎಸ್.ನ ಅವರ ‘ಮೈಸೂರು ಮಲ್ಲಿಗೆ' ಕೃತಿಗೆ ದೇವರಾಜ ಬಹದ್ದೂರ್ ಬಹುಮಾನ (೧೯೪೨), ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಪ್ರಶಸ್ತಿ (೧೯೭೦) ಲಭಿಸಿದೆ.
ಕೆ.ಎಸ್.ನ ಅವರ ಸುಮಾರು ೧೭ ಕವನ ಸಂಕಲನಗಳು ಪ್ರಕಟವಾಗಿವೆ. ಇವುಗಳ ಪ್ರಮುಖ ವಿಷಯ ಪ್ರೇಮವೇ ಆಗಿದೆ. ೧೯೪೨ರಲ್ಲಿ ಮೈಸೂರು ಮಲ್ಲಿಗೆ ಬಿಡುಗಡೆಯಾದರೆ ನಂತರ ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ತೆರೆದ ಬಾಗಿಲು, ಶಿಲಾಲತೆ, ದುಂಡು ಮಲ್ಲಿಗೆ, ನವಿಲ ದನಿ, ಸಂಜೆ ಹಾಡು, ಎದೆ ತುಂಬಾ ನಕ್ಷತ್ರ, ಮಲ್ಲಿಗೆಯ ಮಾಲೆ, ದೀಪ ಸಾಲಿನ ನಡುವೆ ಇತ್ಯಾದಿಗಳು ಪ್ರಕಟವಾದವು. ಮಾರಿಯ ಕಲ್ಲು, ದಮಯಂತಿ, ಉಪವನ ಇವರ ಗದ್ಯ ಬರಹಗಳು. ಗಾಂಧೀಜಿ ಕುರಿತ ಬರಹಗಳ ಅನುವಾದವಾದ ಮೋಹನಮಾಲೆ, ನನ್ನ ಕನಸಿನ ಭಾರತ ಪ್ರಕಟವಾಗಿವೆ.
ಕೆ.ಎಸ್.ನ ಅವರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಪ್ರಮುಖವಾದವುಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ತೆರೆದ ಬಾಗಿಲು), ಉತ್ತಮ ಗೀತೆ ರಚನೆಗೆ ರಾಷ್ಟ್ರಪತಿ ಪ್ರಶಸ್ತಿ, ಬೆಂಗಳೂರು ವಿವಿಯಿಂದ ಗೌರವ ಡಿ ಲಿಟ್ ಪುರಸ್ಕಾರ, ಮಾಸ್ತಿ ಹಾಗೂ ಪಂಪ ಪ್ರಶಸ್ತಿಗಳು, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಫೆಲೋಶಿಪ್, ಗೊರೂರು ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ. ೧೯೯೦ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರಿಗೆ ದೊರೆತಿದೆ. ಇವರು ಡಿಸೆಂಬರ್ ೨೭, ೨೦೦೩ರಂದು ತಮ್ಮ ೮೮ ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.
‘ಸುವರ್ಣ ಸಂಪುಟ’ ಕೃತಿಯಲ್ಲಿ ಇವರ ೮ ಕವನಗಳು ಪ್ರಕಟವಾಗಿವೆ. ಗೃಹಲಕ್ಷ್ಮಿ, ಪ್ರಶ್ನೆಗೆ ಉತ್ತರ, ಸ್ವಪ್ನ ಸುಂದರಿ, ತುಂಗಭದ್ರೆ, ನಿರೀಕ್ಷೆ, ಉಂಗುರ, ತರುಣ ಮಿತ್ರನಿಗೆ, ಮುಗಿಲ ದನಿ. ಇವುಗಳಲ್ಲಿ ಎರಡು ಕವನಗಳನ್ನು ನಾವು ಆರಿಸಿ ಇಲ್ಲಿ ಪ್ರಕಟ ಮಾಡಿದ್ದೇವೆ. ಓದುವ ಸ್ವಾದ ನಿಮ್ಮದಾಗಲಿ. ಎಂದಿನಂತೆ ಪ್ರತಿಕ್ರಿಯೆಗಳು ಬರಲಿ…
ಗೃಹಲಕ್ಷ್ಮಿ
ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ ;
ಹೊಳೆಯ ಸುಳಿಗಳಿಗಿಂತ ಆಳ ಕಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ
ಕಪ್ಪು ಗುರುಳನು ಬೆನ್ನ ಮೇಲೆಲ್ಲ ಹರಡಿದರೆ
ದೂರದಲಿ ಗಿರಿಯ ಮೇಲೆ
ಇಳಿದಂತೆ ಇರುಳ ಮಾಲೆ.
ಕರೆದಾಗ ತೌರುಮನೆ - ನೆನೆದಾಗ ನನ್ನ ಮನೆ-
ಹಳ್ಳಿಯೆರಡರ ಮುದ್ದು ಬಳ್ಳಿಯವಳು.
ಮುಚ್ಚು ಮರೆಯಿಲ್ಲದೆಯೆ ಅಚ್ಚ ಮಲ್ಲಿಗೆಯಂತೆ
ಅರಳುತಿಹುದವಳ ಬದುಕು.
ಬಂಗಾರ ದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂಥ ಹುಡುಗಿ
ನನ್ನೊಡವೆ, ನನ್ನ ಬೆಡಗಿ.
ಹಸುರು ಸೀರೆಯನುಟ್ಟು, ಕೆಂಪು ಬಳೆಗಳ ತೊಟ್ಟು
ತುಂಬುದನಿಯಲಿ ಕರೆವಳೆನ್ನ ಚೆಲುವೆ ;
ಹಣೆಯನಾಳುವುದವಳ ಕುಂಕುಮದ ನಿಡುಬಟ್ಟು
ಲಕ್ಷ್ಮಿಯವಳೆನ್ನ ಮನೆಗೆ.
ನಮಗಿದುವೆ ಸೊಗಸು ಬದುಕಿನ ಬಣ್ಣಗಳ ಸಂತೆ
ನಮಗಿಲ್ಲ ನೂರು ಚಿಂತೆ;
ನಾವು ಗಂಧರ್ವರಂತೆ.
ತೆಂಗು ಗರಿಗಳ ಮೇಲೆ ತುಂಬು ಚಂದಿರ ಬಂದು
ಬೆಳ್ಳಿ ಹಸುಗಳ ಹಾಲು ಕರೆಯುವಂದು
ಅಂಗಳದ ನಡುವೆ ಬೃಂದಾವನದ ಬಳಿ ನಿಂದು
ಹಾಡುವೆವು ಸಿರಿಯ ಕಂಡು.
ತಾರೆಗಳ ಮೀಟುವೆವು, ಚಂದಿರನ ದಾಟುವೆವು
ಒಲುವೆಯೊಳಗೊಂದು ನಾವು ;
ನಮಗಿಲ್ಲ ನೋವು, ಸಾವು.
***
ಸ್ವಪ್ನ ಸುಂದರಿ
ಕೋಟಿ ಕನಸುಗಳಿಂದ ಥಳಥಳಿಪ ತಾರೆಯಲಿ
ಸ್ವಪ್ನ ಸುಂದರಿ ಜಗವನಾಳುತಿಹಳು ;
ಇರುಳೆಂಬ ಕತ್ತಲೆಯ ಕಡಲು ತುಂಬಿದ ಮೇಲೆ
ಚಂದಿರನ ಹರಿಗೋಲ ಮೀಟಿ ಬಹಳು.
ಪಾಳು ದೇಗುಲದಲ್ಲಿ ಪವಡಿಸಿಹ ಭಿಕ್ಷುಕನ
ಕಣ್ಣ ಮುಂಗಡೆ ಹೊನ್ನ ಸುರಿದು ಬಹಳು,
ಚೆಲ್ಲಿ ಸೂಸುವ ಸಿರಿಯಲಿಳೆಯೊಣ್ಮ ಮಲಗಿರಲು
ಸರ್ಪ ದರ್ಶನವಿತ್ತು ಕುಣಿದು ಬಹಳು.
ರವಿ ಬಂದರೇಕಿಂತು ಓಡುವಳೊ ಚೆಲುವೆ, ಕಾಣೆ !
ಹಗಲಿನಲಿ ಮೌನದಲಿ ಮಲಗಿರುವುದವಳ ವೀಣೆ ;
ಜಗದ ಜೀವನಯಂತ್ರ ನಡೆಯುತಿಹುದೆಂದಿನಂತೆ,-
ಅವಳಾಟಪಾಟಗಳು ಮಳೆಬಿಲ್ಲ ಬೇಟದಂತೆ.
***
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದದ್ದು)