‘ಸುವರ್ಣ ಸಂಪುಟ' (ಭಾಗ ೪೨) - ಪಾ.ವೆಂ. ಆಚಾರ್ಯ

‘ಸುವರ್ಣ ಸಂಪುಟ' (ಭಾಗ ೪೨) - ಪಾ.ವೆಂ. ಆಚಾರ್ಯ

‘ಲಾಂಗೂಲಾಚಾರ್ಯ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಪಾಡಿಗಾರು ವೆಂಕಟರಮಣಾಚಾರ್ಯ (ಪಾ.ವೆಂ. ಆಚಾರ್ಯ) ಜನಿಸಿದ್ದು ಉಡುಪಿಯಲ್ಲಿ ಫೆಬ್ರವರಿ ೧೫, ೧೯೧೫ರಲ್ಲಿ. ಬಡತನದ ಕಾರಣ ಹೆಚ್ಚಿಗೆ ಓದಲಾಗದೇ ಹತ್ತನೇ ತರಗತಿಗೇ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಕಾಯಿತು. ಜೀವನ ಸಾಗಿಸಲು ಸ್ವಲ್ಪ ಸಮಯ ಶಾಲೆಯಲ್ಲಿ ಅಧ್ಯಾಪಕರಾಗಿ, ಅಂಗಡಿಯಲ್ಲಿ ಲೆಕ್ಕಮಾಡುವುದು, ಮುದ್ರಣದ ಕೆಲಸ ಇತ್ಯಾದಿಗಳನ್ನು ಮಾಡಿದರು. ನಂತರ ಸ್ವಲ್ಪ ಸಮಯ ಆಗಿನ ಕಾಲದ ಪ್ರಸಿದ್ಧ ಪತ್ರಿಕೆ ‘ಅಂತರಂಗ' ದ ಉಪ ಸಂಪಾದಕರಾಗಿ ದುಡಿದರು.

ಸ್ವಲ್ಪ ಸಮಯ ಮದ್ರಾಸ್ (ಚೆನ್ನೈ)ನಲ್ಲಿ ಇದ್ದ ಇವರು ಹಿಂದಿರುಗಿ ಹುಬ್ಬಳ್ಳಿಗೆ ಹೋದರು. ಅಲ್ಲಿ ‘ಸಂಯುಕ್ತ ಕರ್ನಾಟಕ' ಪತ್ರಿಕೆಯ ಮುದ್ರಣಾಲಯದಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡಲು ಶುರು ಮಾಡಿದರು. ಪತ್ರಿಕೆಗೆ ಬರಹಗಳನ್ನು ಬರೆಯುವುದರಲ್ಲಿ ಆಸಕ್ತಿ ಇದ್ದ ಅವರು ಕರ್ಮವೀರ ಪತ್ರಿಕೆಗೆ ಹಲವಾರು ಲೇಖನಗಳನ್ನು ಬರೆದರು. ಈ ಲೇಖನಗಳನ್ನು ಗಮನಿಸಿದ ಆಡಳಿತ ವರ್ಗ ಇವರನ್ನು ಸಂಯುಕ್ತ ಕರ್ನಾಟಕದ ಸಹಾಯಕ ಸಂಪಾದಕರನ್ನಾಗಿ ನೇಮಿಸಿತು. ಆ ನಂತರ ಇವರು ಹಲವಾರು ವಿಮರ್ಶಾತ್ಮಕ ಬರಹಗಳನ್ನು ಬರೆದರು. ‘ಲಾಂಗೂಲಾಚಾರ್ಯ' ಎಂಬ ಕಾವ್ಯನಾಮದಿಂದ ಪಾವೆಂ ಬರೆಯುತ್ತಿದ್ದ ಲೇಖನಗಳು ಬಹಳ ಮೊನಚಾಗಿಯೂ, ವಿಡಂಬನಾತ್ಮಕವಾಗಿಯೂ ಇರುತ್ತಿದ್ದವು. 

‘ಸಂಯುಕ್ತ ಕರ್ನಾಟಕ' ವತಿಯಿಂದ ೧೯೫೯ರಲ್ಲಿ ‘ಕಸ್ತೂರಿ' ಎಂಬ ಕನ್ನಡ ಡೈಜೆಸ್ಟ್ (ಮಾಸ ಪತ್ರಿಕೆ) ಪ್ರಾರಂಭವಾದಾಗ ಪಾವೆಂ ಅವರಿಗೆ ಇದರ ಸಂಪಾದಕತ್ವವನ್ನು ವಹಿಸಲಾಯಿತು. ಮುಂದಿನ ನಿರಂತರ ೧೮ ವರ್ಷಗಳ ಕಾಲ ತಪಸ್ಸಿನಂತೆ ಪಾವೆಂ ‘ಕಸ್ತೂರಿ' ಪತ್ರಿಕೆಯನ್ನು ಯಾವುದೇ ಆಂಗ್ಲ ಪತ್ರಿಕೆಗೆ ಕಮ್ಮಿ ಇಲ್ಲದಂತೆ ರೂಪಿಸಿದರು. ಅಂತರ್ಜಾಲ ಇಲ್ಲದ ಆ ಸಮಯದಲ್ಲಿ ಕಸ್ತೂರಿಯಂತಹ ಪತ್ರಿಕೆಯನ್ನು ಪ್ರಕಟಿಸುವುದು ಎಷ್ಟು ಕಷ್ಟ ಎಂಬ ಸಂಗತಿ ಈಗಿನ ಕಾಲದವರಿಗೆ ತಿಳಿಯಲಿಕ್ಕಿಲ್ಲ. ಅಂದು ಪಾವೆಂ ಹಾಕಿ ಕೊಟ್ಟ ಭದ್ರ ಬುನಾದಿಯಿಂದಲೇ ಕಸ್ತೂರಿ ಈಗಲೂ ಪ್ರಕಟವಾಗುತ್ತಿದೆ. ಕಸ್ತೂರಿಯಲ್ಲಿ ವಿಭಿನ್ನತೆಯನ್ನು ತರಲು ತಾವೇ ‘ರಾಧಾಕೃಷ್ಣ, ವಿಚಾರಿ' ಮೊದಲಾದ ಹೆಸರಿನಿಂದ ಹಲವಾರು ಲೇಖನಗಳನ್ನು ಬರೆದರು. ಅಂದಿನ ಸಮಯದ ಕಸ್ತೂರಿಯನ್ನು ಗಮನಿಸಿದರೆ ನಿಮಗೆ ಒಂದೇ ಒಂದು ಕಾಗುಣಿತದ ದೋಷ ಕಂಡು ಬರಲಾರದು. ಹಾಗಿತ್ತು ಪಾವೆಂ ಅವರ ಸಂಪಾದಕತ್ವ.

ಪಾವೆಂ ಅವರು ಬರೆದದ್ದು ಬಹಳ, ಆದರೆ ಪುಸ್ತಕದ ರೂಪದಲ್ಲಿ ಹೊರಬಂದದ್ದು ಕಡಿಮೆ. ಇವರ ಮೊದಲ ಕಾವ್ಯ ‘ಉದ್ಗಾರ' ಜಯ ಕರ್ನಾಟಕ ಪತ್ರಿಕೆಯಲ್ಲಿ ೧೯೩೩ರಲ್ಲಿ ಪ್ರಕಟವಾಯಿತು. ಮಂಕುತಿಮ್ಮನ ಕಗ್ಗ ಮಾದರಿಯಲ್ಲಿ ‘ಪೆಂಗೋಪದೇಶ' ಎಂಬ ಪದ್ಯಗಳನ್ನು ರಚನೆ ಮಾಡಿದ್ದಾರೆ. ಪಾವೆಂ ಅವರ ಮೊದಲ ಕಥೆ ೧೯೩೫ರಲ್ಲಿ ‘ಮಧುವನ’ ಎಂಬ ಕಥಾ ಸಂಕಲನದಲ್ಲಿ ಪ್ರಕಟವಾಗಿದೆ. 

ಪಾವೆಂ ಅವರ ಕೆಲವು ಕೃತಿಗಳು: ಬಯ್ಯ ಮಲ್ಲಿಗೆ (ತುಳು ಕವನಗಳ ಸಂಗ್ರಹ), ರಶಿಯಾದ ರಾಜ್ಯ ಕ್ರಾಂತಿ, ಸ್ವತಂತ್ರ ಭಾರತ (ರಾಜಕೀಯ ವಿಶ್ಲೇಷಣೆ), ಸುಭಾಷಿತ ಚಮತ್ಕಾರ, ಪದಾರ್ಥ ಚಿಂತಾಮಣಿ ಇತ್ಯಾದಿ. ಪಾವೆಂ ಅವರಿಗೆ ೧೯೭೭ರಲ್ಲಿ ಪತ್ರಿಕೋದ್ಯಮದಲ್ಲಿನ ಸೇವೆಗಾಗಿ ಪಿ.ಆರ್. ರಾಮಯ್ಯ ಪ್ರಶಸ್ತಿ, ೧೯೯೨ರಲ್ಲಿ ಅಖಿಲ ಭಾರತದ ಮಟ್ಟದ ‘ಗೋಯೆಂಕಾ ಪ್ರಶಸ್ತಿ' ಹಾಗೂ ಇವರ ಮೊದಲ ಕವನ ಸಂಕಲ 'ನವ ನೀರದ' ಕ್ಕೆ ಮುಂಬಯಿ ಸರಕಾರದ ಪಾರಿತೋಷಕ ದೊರೆತಿದೆ. ೧೯೭೭ರಲ್ಲಿ ‘ಪಾವೆಂ-ಕಸ್ತೂರಿ' ಎಂಬ ಸದ್ಭಾವನಾ ಗ್ರಂಥವನ್ನು ಮೈಸೂರಿನಲ್ಲಿ ಅರ್ಪಿಸಲಾಗಿದೆ.  ೧೯೯೨ರ ಮೇ ೪ರಂದು ನಿಧನ ಹೊಂದಿದರು. 

‘ಸುವರ್ಣ ಸಂಪುಟ’ದಲ್ಲಿ ಪಾವೆಂ ಆಚಾರ್ಯರ ಮೂರು ಕವನಗಳಿವೆ. ಕವಿ-ವಿಜ್ಞಾನಿಗೆ, ನನ್ನ ಗೋರಿಯ ಮೇಲೆ ಹಾಗೂ ನುಸಿಗೆ. ನಾವು ಎರಡು ಕವನಗಳನ್ನು ಆಯ್ದು ಇಲ್ಲಿ ನೀಡಿದ್ದೇವೆ. 

ನನ್ನ ಗೋರಿಯ ಮೇಲೆ

ಇಲ್ಲೊಬ್ಬ ಕವಿಯಿದ್ದನವನ ಜೀವದ ಬಯಕೆ

ಕಾರ್ತವೀರ್ಯನ ತೆರದಿ ಕೈಯ ಸಾವಿರವೆತ್ತಿ

ನಿಲುಕದಿರುವೊಡವೆಗಳ ಕಡೆಗೆ ನೀಳ್ಕರಿಸುತ್ತೆ

ಪ್ರತಿಕೂಲದೈವಪರಶುವಿಗೆ ಕೈತುತ್ತಾಗಿ

ತೀರಿದುದು ; ಪ್ರಥಮ ಶರದುದಯದಲಿ ಮುಗಿಲೊಂದು

ನೀರಾಗಿ ಸುರಿವುದಕೆ ತಂಪು ಸಾಲದೆ, ಮತ್ತೆ

ನೇರಾಗಿ ಸುರಿವುದಕೆ ಭಾರ ಸಾಲದೆ, ಗಾಳಿ

ಆವಾವ ಕಡೆಗೆ ತೂರುವುದತ್ತ ಹಾರುತಲಿ,

ಒಂದರಿಂದೆರಡಾಗಿ ಹತ್ತಾಗಿ ನೂರಾಗಿ

ಚೂರಾಗಿ ಸಾರಿ ಹರಿಹಂಚಾಗಿ ಹೋಗುವಲು

ಅವನ ಜೀವನವಾಯ್ತು ; ಕೊನೆಗೊಂದು ದಿವಸದಲಿ,

ವಿಧಿಗೆ ತೋರಿಸಿದ ಕರ್ಪೂರದಾರತಿಯೆನಲು

ಅವನ ಬಾಳಾರಿತ್ತು ; ಗಂಧೈಕ ಶೇಷನಾ-

ಗುಳಿದನಾತನು ಬಳಿಕ ಕೆಲದಿನಂಗಳವರೆಗೆ

ಎದೆಯ ನೆರೆಯವರ ಮನವೆಂಬ ಮಾರುತಪಥದಿ-

ಕಡೆಗೆ ಮರವೆಯ ಕೊಳದ ತಳವ ಸೇರಿದನಾತ. 

***

ನುಸಿಗೆ

ಬಡ ಮುನಸಿಪಾಲಿಟಿಗೆ ಒಡಹುಟ್ಟಿದವ ನೀನು !

ನಿನ್ನ ಗಾನದ ಸಿರಿಗೆ ಕರುಬಿ, ನಾಚಿಕೆಗೊಂಡು

ಕಾಡಾಡಿಯಾಗಿ ತಲೆಮರೆಸಿಹುದು ಪಿಕವೊಂದು !

ನಾಗರಿಕ ನರನಾರಿವದನಕಮಲದ ಜೇನು

ಸವಿದು ಜೇಂಕರಿಸಿ ನಲಿವಾರಡಿಯೆ ನೀನೇನು ?

ನಿದ್ದೆವೆಣ್ಣಿನ ಕೈಯ ಬೀಣೆ ! ನಿನ್ನಯ ದನಿಯ

ಮಾಧುರಿಗೆ ಮಾನವನು ಮೈಮರೆತು ಮನದಣಿಯ

ತಾಳವಿಕ್ಕುವ ಭರಕೆ, ಸೂಕ್ಷ್ಮ ಜೀವಿಯೆ, ನೀನು

ನಜ್ಜುಗುಜ್ಜಾಗುವುದು ಇಹುದು -ಎಂತಹ ದುಗುಡ !

ಓ ನುಸಿಯೆ, ಪ್ರೇಮಗಾನದ ಸಸಿಯೆ, ಸಂತಸಿಯೆ !

ನಿನ್ನನರಿಯದೆ ಜರೆವ ಮಾನವನೆ ಕಡುಕಿವುಡ !

ಇದಕೊ ! ನಿನಗೆನ್ನ ನೆತ್ತರ ಕಾಣ್ಕೆ , ಹಸಿಬಿಸಿಯೆ !

ಬೇಡುವರ ರೇಡಿಯೋ ನೀನು ! ಬಡವರ ಬಂಧು !

ಹರಕುಗೋಡೆಯ ವಾಸಿ ! ನಿನಗೆ ನಮಿಸುವೆ ನಿಂದು !

***

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದದ್ದು)