‘ಸುವರ್ಣ ಸಂಪುಟ' (ಭಾಗ ೪೩) - ಕಯ್ಯಾರ ಕಿಞ್ಞಣ್ಣ ರೈ
ಗಡಿನಾಡು ಕಾಸರಗೋಡಿನ ಪೆರಡಾಲ ಎಂಬ ಊರಿನಲ್ಲಿ ಜೂನ್ ೮, ೧೯೧೫ರಲ್ಲಿ ಜನಿಸಿದ ಕಯ್ಯಾರ ಕಿಞ್ಞಣ್ಣ ರೈ ಇವರು ಕರ್ನಾಟಕ ಏಕೀಕರಣದ ಚಳುವಳಿಯ ರೂವಾರಿ ಎಂದೇ ಹೆಸರಾದವರು. ಕವಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಲೇಖಕರಾಗಿ, ಅಧ್ಯಾಪಕರಾಗಿ, ಪತ್ರಕರ್ತರಾಗಿ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಇವರು ನಡೆಸಿದ ಹೋರಾಟಗಳು ಅನೇಕ. ಸ್ವಾತಂತ್ರ್ಯ ಹೋರಾಟಗಾರರಾಗಿಯೂ ಇವರು ಭಾರತ ಮಾತೆಯ ಸೇವೆ ಮಾಡಿದ್ದಾರೆ.
ಇವರ ತಂದೆ ದುಗ್ಗಪ್ಪ ರೈ ಹಾಗೂ ತಾಯಿ ದೈಯಕ್ಕ. ಕಯ್ಯಾರರ ಮನೆ ಮಾತು ತುಳು. ಈ ಕಾರಣದಿಂದಾಗಿ ಅವರು ತುಳು ಭಾಷೆಯಲ್ಲೂ ಹಲವಾರು ಬರಹಗಳನ್ನು ಬರೆದಿದ್ದಾರೆ. ಕಯ್ಯಾರರು ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ವಿದ್ವಾನ್ ಪದವಿಯನ್ನು ಪಡೆದ ಬಳಿಕ ಬಿ.ಎ.ಪದವಿಯನ್ನು ಪಡೆದು ಅಧ್ಯಾಪಕರಾದರು. ನಂತರ ಎಂ.ಎ.ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. ಕಾಸರಗೋಡಿನ ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಪ್ರಭಾತ, ರಾಷ್ಟ್ರಬಂಧು, ಸ್ವದೇಶಾಭಿಮಾನಿ ಎಂಬ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದರು. ಇವರು ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ ಮೊದಲಾದ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಒಂದು ತುಳು ಕವನ ಸಂಕಲನವೂ ಪ್ರಕಟವಾಗಿದೆ. ಇವರು ಕಾರ್ನಾಡ್ ಸದಾಶಿವ ರಾವ್, ಎ.ಬಿ.ಶೆಟ್ಟಿ ಇವರ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಕುರಿತ ಮೂರು ಗ್ರಂಥಗಳನ್ನು ಬರೆದಿದ್ದಾರೆ. ಪಂಚಮಿ ಮತ್ತು ಆಶಾನ್ ರ ಖಂಡಕಾವ್ಯಗಳು ಇವರ ಅನುವಾದ ಕೃತಿಗಳು. ಮಕ್ಕಳಿಗಾಗಿ 'ಪದ್ಯಮಂಜರಿ' ಕವನ ಸಂಕಲನವನ್ನು ರಚಿಸಿದ್ದಾರೆ. ‘ದುಡಿತವೇ ನನ್ನ ದೇವರು' ಇದು ಕಯ್ಯಾರರ ಆತ್ಮಕಥನ. ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳ ಸಂಖ್ಯೆ ಐದು ಸಾವಿರಕ್ಕೂ ಅಧಿಕ.
೨೦೧೪ರಲ್ಲಿ ಕಯ್ಯಾರರಿಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇವರಿಗೆ ೧೯೬೯ರಲ್ಲಿ ಶ್ರೇಷ್ಟ ಅಧ್ಯಾಪಕ ರಾಷ್ಟ್ರ ಪ್ರಶಸ್ತಿ, ೧೯೬೯ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ೧೯೮೫ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೦೫ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ೨೦೦೬ರಲ್ಲಿ ಹಂಪಿ ವಿಶ್ವವಿದ್ಯಾನಿಲಯದಿಂದ ‘ನಾಡೋಜ' ಪ್ರಶಸ್ತಿ ಹಾಗೂ ಕರ್ನಾಟಕ ಸರಕಾರದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿಗಳು ಲಭಿಸಿವೆ.
ಇವರ ಜನ್ಮ ಶತಮಾನೋತ್ಸವದ ಸಮಯದಲ್ಲಿ ಇವರಿಗೆ ಪಂಪ ಪ್ರಶಸ್ತಿ ನೀಡಲಾಗಿತ್ತು. ೧೯೯೭ರಲ್ಲಿ ಮಂಗಳೂರಿನಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಕಯ್ಯಾರರು ವಹಿಸಿದ್ದರು. ಇವರು ಆಗಸ್ಟ್ ೯, ೨೦೧೫ರಂದು ನಿಧನ ಹೊಂದಿದರು.
‘ಸುವರ್ಣ ಸಂಪುಟ’ ಕೃತಿಯಲ್ಲಿ ಕಯ್ಯಾರ ಕಿಞ್ಞಣ್ಣ ರೈ ಇವರ ಒಂದು ಕವನ ಪ್ರಕಟವಾಗಿದೆ. ಅದನ್ನು ನಿಮ್ಮ ಓದಿಗಾಗಿ ಸಂಗ್ರಹಿಸಿ ಪ್ರಕಟ ಮಾಡುತ್ತಿದ್ದೇವೆ. ಓದಿ.
ಹೊಸ ಹಾಡು
೧
ನವಭಾವ-ನವಜೀವ-ನವಶಕ್ತಿ ತುಂಬಿಸುವ
ಹಾಡೊಮ್ಮೆ ಹಾಡಬೇಕು ;
ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ
ವೀರಧ್ವನಿಯೇರಬೇಕು ;
ಜಾತಿ-ಕುಲ-ಮತ-ಧರ್ಮಪಾಶಗಳ ಕಡಿದೊಗೆದು
ಎದೆಹಿಗ್ಗಿ ಹಾಡಬೇಕು ;
ಯುಗಯುಗಗಳಾಚೆಯಲಿ ಲೋಕಲೋಕಾಂತದಲಿ -
ಆ ಹಾಡು ಗುಡುಗಬೇಕು ;
೨
ಉನ್ನತೋನ್ನತ ಘನಹಿಮಾದ್ರಿ ಶಿಖರವನೇರಿ
ಹಾಡಲ್ಲಿ ಹಾಡಬೇಕು ;
ಹಾಡುನುಡಿಗುಂಡುಗಳು ಹಾರಿ ದಶದಿಕ್ಕಿನಲ್ಲಿ
ಭಯವ ಬೆನ್ನಟ್ಟಬೇಕು ;
ಗಂಡೆದೆಯ ಗರ್ಜನೆಗೆ ಮೂಹತ್ತು ಮೂರ್ಕೋಟಿ
ಕಲಕಂಠ ಬೆರೆಸಬೇಕು ;
ಭೂಮ್ಯಂತರಾಳದಲಿ ನಭಚಕ್ರ ಗೋಳದಲಿ-
ಮಾರ್ದನಿಗಳೇಳಬೇಕು.
೩
ಜಡನಿದ್ರೆ ಸಿಡಿದೆದ್ದ ವೀರಾಟ್ಟಹಾಸದಲಿ
ಬಾನು ಭುವಿ ಬೆಳಗಬೇಕು ;
ನಡೆನುಡಿಗಳೆಡೆಯಲ್ಲಿ, ಪದತಾಳ ಗತಿಯಲ್ಲಿ
ಕ್ರಾಂತಿಕಿಡಿ ಕೆರಳಬೇಕು ;
ಅಳಿದುಳಿದ ಭವ್ಯತೆಯ ರುದ್ರಶಿಖೆಯಜ್ಜ್ವಲಿಸೆ
ಹಾಡು ತಿದಿಯೊತ್ತಬೇಕು ;
ದಿವಸ ದಿವಸಗಳಿಂದ ಮನದಿ ಮರುಗತಲಿದ್ದೆ-
ಹಾಡಿಂತು ಹಾಡಬೇಕು.
೪
ಎನ್ನ ಪಾಡಿಗೆ ದುಃಖ ತಾಯಿಗಿದು ಹಿರಿಮರುಕ.
ನಾನಿದನು ಸಹಿಸಲೆಂತು?
ಎನ್ನ ಕೃತಿಯಪಮಾನ ದೇವಿಗಿದೆ ದುಮ್ಮಾನ,
ನಾನಿದನು ನೋಡಲೆಂತು?
ಜಯ ಜನನಿ ! ಶಿರವೆತ್ತಿ ವೀರಭರವಸೆಯಿಂದ
ಹೊಸ ಹಾಡ ಕೇಳಿ ನೋಡು !
ಇದೊ ಮೊದಲು, ಮುನ್ನಿಲ್ಲ-ಮುಗಿದುದಂದಿನ ಪಾಡು,
ಹೊಸತಿಂದು ಹೊಸತು ಹಾಡು !
***
(‘ಸುವರ್ಣ ಸಂಪುಟ' ಕೃತಿಯ ಕೃಪೆಯಿಂದ ಸಂಗ್ರಹಿತ)