‘ಸುವರ್ಣ ಸಂಪುಟ' (ಭಾಗ ೪೪) - ಅರ್ಚಕ ವೆಂಕಟೇಶ್

‘ಸುವರ್ಣ ಸಂಪುಟ' (ಭಾಗ ೪೪) - ಅರ್ಚಕ ವೆಂಕಟೇಶ್

ಸುವರ್ಣ ಸಂಪುಟ ಕೃತಿಯಿಂದ ಈ ವಾರ ನಾವು ಆಯ್ದುಕೊಂಡ ಕವಿ ಅರ್ಚಕ ವೆಂಕಟೇಶ್. ಇವರ ಪೂರ್ವಜರು ಅರ್ಚಕ ವೃತ್ತಿಯನ್ನು ಮಾಡುತ್ತಿದ್ದುದರಿಂದ ಇವರ ಹೆಸರಿಗೆ ಈ ‘ಅರ್ಚಕ' ಪದ ಅನ್ವರ್ಥನಾಮವಾಗಿ ಸೇರಿಕೊಂಡಿದೆ. ವೆಂಕಟೇಶರು ಉತ್ತಮ ವಾಗ್ಮಿಯೂ, ಸಾಹಿತಿಯೂ ಹಾಗೂ ಪತ್ರಕರ್ತರೂ ಆಗಿದ್ದರು. ಇವರು ಜುಲೈ ೫, ೧೯೧೬ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರ ತಂದೆ ಗೋಪಾಲಕೃಷ್ಣಾಚಾರ್ಯ ಹಾಗು ತಾಯಿ ರಾಧಾ ಬಾಯಿ. ಇವರ ವಿದ್ಯಾಭ್ಯಾಸವೆಲ್ಲ ಹಾವೇರಿ ಜಿಲ್ಲೆಯ ಹತ್ತಿ ಮತ್ತೂರು, ಹಾನಗಲ್ ತಾಲೂಕಿನ ಆಲದಕಟ್ಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ನಡೆಯಿತು. 

ವಿದ್ಯಾರ್ಥಿ ದೆಸೆಯಲ್ಲೇ ವೆಂಕಟೇಶರಿಗೆ ಸಾಹಿತ್ಯದ ಬಗ್ಗೆ ಒಲವು ಬೆಳೆಯಿತು. ಕೈಬರಹದ ಪತ್ರಿಕೆ ‘ನನ್ನ ನುಡಿ' ಇದನ್ನು ಹೊರತಂದರು. ಬಿ.ಶಿವಮೂರ್ತಿ ಶಾಸ್ತ್ರಿಗಳ ‘ಶರಣ ಸಾಹಿತ್ಯ' ಹಾಗೂ ‘ಸ್ವತಂತ್ರ ಕರ್ನಾಟಕ' ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಅಲ್ಪಕಾಲ ಹೆಚ್ ಎ ಎಲ್ ಕಾರ್ಖಾನೆಯಲ್ಲೂ ಕೆಲಸ ಮಾಡಿದರು. ನಂತರ ಎಸ್.ಕೃಷ್ಣಶರ್ಮರ ‘ವಿಶ್ವ ಕರ್ನಾಟಕ' ಪತ್ರಿಕೆಗೆ ಸೇರಿ ಸುಮಾರು ಹದಿನೈದು ವರ್ಷ ಕೆಲಸ ಮಾಡಿದರು. ಆ ಪತ್ರಿಕೆಯನ್ನು ಬಿಡುವ ಸಮಯದಲ್ಲಿ ಇವರು ಪತ್ರಿಕೆಯ ಸಂಪಾದಕರಾಗಿದ್ದರು. ಮುಂದೆ ‘ಸಂಯುಕ್ತ ಕರ್ನಾಟಕ' ಪತ್ರಿಕೆಯನ್ನು ಸೇರಿದ ಇವರು ನಿವೃತ್ತಿ ಹೊಂದುವವರೆಗೆ ಅದರಲ್ಲೇ ದುಡಿದರು. 

ವೆಂಕಟೇಶರು ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ತಮ್ಮ ಬರಹಗಳನ್ನು ರಚಿಸಿದ್ದಾರೆ. ಮಕ್ಕಳ ಸಾಹಿತ್ಯ, ಕವನ, ಕಾದಂಬರಿ, ನಾಟಕ, ಕಥೆ ಹೀಗೆ ಬಹಳಷ್ಟು ವಿಷಯಗಳಲ್ಲಿ ಕೈಯಾಡಿಸಿದ್ದಾರೆ. ವೆಂಕಟೇಶರು ದಿಲ್ಲಿ ಚಲೋ, ರವಿಶಂಕರ, ಅಸ್ಥಿಪಂಜರ ಮೊದಲಾದ ಕಾದಂಬರಿಗಳನ್ನು, ಧೃವ ನಕ್ಷತ್ರ, ಜೀವನ ಸಂಗ್ರಾಮ ಎಂಬ ಕಥಾ ಸಂಕಲನಗಳನ್ನು ರಚಿಸಿದ್ದಾರೆ. ಪೂರ್ಣ ಚಂದ್ರ, ಶಬ್ದ ಶಿಲ್ಪ, ಶಿಲಾಪಕ್ಷಿ, ಸಂಧ್ಯಾರಾಗ ಮೊದಲಾದುವುಗಳು ಇವರ ಕವನ ಸಂಕಲನಗಳು. ಮೀರ್ ಸಾದಿಕ್, ಪಂಗನಾಮ, ಬ್ಲಾಕ್ ಮಾರ್ಕೆಟ್ ಇವುಗಳು ವೆಂಕಟೇಶರ ನಾಟಕಗಳು. ಮಕ್ಕಳಿಗಾಗಿ ಇವರು ಭಾತೃಪ್ರೇಮ, ಪಾನಕ ಕೋಸಂಬರಿ, ಹರಿದ ಚಂದ್ರ, ಪ್ರಹ್ಲಾದನ ಪಾಣಿಪತ್ತು, ಸಾವನ ದುರ್ಗ, ಜಯವಿಜಯ ಮೊದಲಾದ ನಾಟಕಗಳನ್ನು ರಚನೆ ಮಾಡಿದ್ದಾರೆ. ಹಾಗೆಯೇ ರಾಮನ ಕಥೆ, ಸುಭಾಷ್ ಚಂದ್ರ ಭೋಸ್, ಮದನ ಮೋಹನ ಮಾಳವೀಯ ಮೊದಲಾದ ಮಕ್ಕಳ ಕೃತಿಗಳನ್ನೂ ಬರೆದಿದ್ದಾರೆ.

ಇವರು ಡಿಸೆಂಬರ್ ೨೦, ೧೯೯೭ರಂದು ನಿಧನ ಹೊಂದಿದರು. ಇವರ ಒಂದು ಕವನವನ್ನು ಸುವರ್ಣ ಸಂಪುಟದಿಂದ ಆಯ್ದು ಪ್ರಕಟಿಸಲಾಗಿದೆ.

ಯಾಂವ ನನ್ನ ಕೇಳಾಂವ?

ಯಾಂವ ನನ್ನ ಕೇಳಾಂವ?

ಯಾಂವ ಯಾಂವ ಯಾಂವ ಯಾಂವ

ಯಾಂವ ನನ್ನ ಕೇಳಾಂವ? ॥ಪ॥

 

ಮನಸಿಗೆ ಬಂದರ ಬರಿಯಾಂವ

ಮನಸಿಗೆ ಬಂದರ ಹಾಡಾಂವ -ನನ

ಮನಸಿಗೆ ಬಂದರ ಕುಣಿಯಾಂವ

ಯಾಂವ ನನ್ನ ಕೇಳಾಂವ ? ॥ಅ.ಪ.॥

 

ಗಾಳಿ ಸುಂಯ್ ಸುಂಯ್ ಅನ್ತಿರವಲ್ದು

ಬೆಳಕು ತಂಕೈ ಚಾಚಿರವಲ್ದು

ಹಾಳು ಕತ್ತಲಿ ಇನ್ನೂ ಮಬ್ಬಿನಾಗ

ತೂಗಾಡ್ತಿದ್ದರ ತೂಗಾಡ್ತಿರಲಿ

ಯಾಂವ ನನ್ನ ಕೇಳಾಂವ? ॥೧॥

 

ತೊಟ್ಟಿಲ ಕೂಸು ಆಡತಿರಲಿ

ತಾಯಿ ಜೋಗುಳ ಹಾಡತಿರಲಿ

ಹಕ್ಕಿದನಿಗೆ ದನಿಗೂಡಿಸಿದರು

ನಾಯಾಕ ನನ್ಹಾಡ ಹಾಡಲಿ?

ಯಾಂವ ನನ್ನ ಕೇಳಾಂವ ! ॥೨॥

 

ತುಂಬಿ ಹೂವಿಗೆ ಮುತ್ತಿಡುತಿರಲಿ

ಸವಿದುಟಿ ಜೇನ ಕುಡಿಯುತ್ತಿರಲಿ

ಹುಂಬನ್ಹಂಗ ಮೈಯ್ಯಮರೆತು

ಗುಂಯ್ ಗುಂಯ್ ಗುಂಯ್ ಗುಂಯ್ ಅನ್ನುತ್ತಿರಲಿ

ಯಾಂವ ನನ್ನ ಕೇಳಾಂವ? ॥೩॥

 

ಹೆಣ್ಣು ಗಂಡು ಕೂಡಿಕೊಂಡು

ಸಣ್ಣಗೂಡ ಕಟ್ಟಿಕೊಂಡು

ತಮ್ಮ ಬಾಳು ಶಾಶ್ವತವೆಂದು

ಹಾಡುತಿದ್ದರ ಹಾಡತಿರಲಿ

ಯಾಂವ ನನ್ನ ಕೇಳಾಂವ? ॥೪॥

 

ಬರುವುದು ಬರಲಿ ಬಿಡುವುದು ಬಿಡಲಿ

ನ್ಯಾನ್ಯಾಕ್ಯೋಚನೆ ಮಾಡಲಿ?

ಪರಮನ ಕರುಣೆಯು ಕರಗತವಾಗುತ

ಬಾಳು ನಂದನವಾಗಲಿ

ಆಗ ನಾನು ಹಾಡಾಂವ

ಆಗ ನಾನು ಬಾರಿಯಾಂವ

ಆಗ ನಾನು ಕುಣಿಯಾಂವ ॥೫॥

 

ಯಾಂವ ನನ್ನ ಕೇಳಾಂವ

ಯಾಂವ ಯಾಂವ ಯಾಂವ ಯಾಂವ

ಯಾಂವ ನನ್ನ ಕೇಳಾಂವ? ॥ಪ॥

***

(‘ಸುವರ್ಣ ಸಂಪುಟ’ ಕೃತಿಯಿಂದ ಸಂಗ್ರಹಿತ)