‘ಸುವರ್ಣ ಸಂಪುಟ' (ಭಾಗ ೪೫) - ರಾಮಚಂದ್ರ ಕೊಟ್ಟಲಗಿ

ಸುವರ್ಣ ಸಂಪುಟ ಕೃತಿಯಿಂದ ನಾವು ಈ ವಾರ ಆಯ್ದ ಕವಿ ರಾಮಚಂದ್ರ ಕೊಟ್ಟಲಗಿ. ಇವರು ನವೋದಯ ಕಾಲದ ಪ್ರಮುಖ ಕವಿ ಹಾಗೂ ಕಾದಂಬರಿಕಾರರು. ರಾಮಚಂದ್ರ ಕೊಟ್ಟಲಗಿ ಇವರು ಮೇ ೧೬, ೧೯೧೮ರಂದು ಬಿಜಾಪುರ (ಈಗಿನ ವಿಜಯಪುರ) ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಜನಿಸಿದರು. ಇವರ ಹೆತ್ತವರ ಬಗ್ಗೆ ಹಾಗೂ ವಿದ್ಯಾಭ್ಯಾಸದ ಕುರಿತಾದ ವಿವರಗಳು ಎಲ್ಲೂ ದೊರೆಯುತ್ತಿಲ್ಲ. ಇವರು ಅಧ್ಯಾಪನಾ ವೃತ್ತಿಯನ್ನು ಮಾಡುತ್ತಿದ್ದರು ಎಂಬ ಬಗ್ಗೆ ಉಲ್ಲೇಖಗಳಿವೆ.
‘ದೀಪ ನಿರ್ವಾಣ' ಇವರ ಮೊದಲ ಕಾದಂಬರಿ. ‘ದೀಪ ಹತ್ತಿತು' ಅದರ ಎರಡನೇ ಭಾಗ. ಈ ಕಾದಂಬರಿಯಲ್ಲಿ ಉತ್ತರ ಕರ್ನಾಟಕದ ಬ್ರಾಹ್ಮಣ ಕುಟುಂಬದ ಮೂರು ತಲೆಮಾರಿನ ಬದುಕಿನ ಅನಾವರಣ ಮಾಡಿದ್ದಾರೆ. ಈ ಕಾದಂಬರಿಗಳನ್ನು ಕೊಟ್ಟಲಗಿ ಅವರ ಸಹೋದರಿ ಮರಾಠಿ ಭಾಷೆಗೆ ಅನುವಾದ ಮಾಡಿದ್ದಾರೆ. ಬಹುತೇಕ ಬರಹಗಾರರಂತೆ ಕೊಟ್ಟಲಗಿಯವರು ತಮ್ಮ ಬರವಣಿಗೆಯನ್ನು ಕವನಗಳಿಂದಲೇ ಪ್ರಾರಂಭಿಸಿದ್ದರು. ‘ಪಿಪಾಸೆ' ಇವರ ಮೊದಲ ಕವನ ಸಂಕಲನ. ‘ಫಾತಿಮಾ’ ಇವರ ಎರಡನೇ ಕವನ ಸಂಕಲನ. ಗೀಚುಗೆರೆ ಹಾಗೂ ಚೈತ್ರ ಪಲ್ಲವ ಇವರ ಎರಡು ಕಥಾ ಸಂಕಲನಗಳು. ಕೊಟ್ಟಲಗಿಯವರ ಕೆಲವು ಬರಹಗಳು ಪು.ಲ. ದೇಶಪಾಂಡೆಯವರಿಂದ ಮರಾಠಿ ಭಾಷೆಗೆ ಅನುವಾದಗೊಂಡಿದೆ. ಕೊಟ್ಟಲಗಿಯವರಿಗೆ ಕನ್ನಡ, ಮರಾಠಿ ಹಾಗೂ ಆಂಗ್ಲ ಭಾಷೆಯಲ್ಲಿ ಬಹಳ ಹಿಡಿತವಿತ್ತು. ಇವರು ನೇರ, ನಿಷ್ಟುರವಾದಿಯಾಗಿದ್ದುದರಿಂದ ಹಲವರ ಮುನಿಸನ್ನು ಕಟ್ಟಿಕೊಂಡಿದ್ದರು. ಕನ್ನಡ ವಾರಪತ್ರಿಕೆಯೊಂದರ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ವಿಲಾಪಿಕಾ, ವೈನಿ ಸತ್ತಾಗ ನಾನ್ಯಾ ಅತ್ತಾಗ, ನಾನು ಬಾಳ್ಯಾ ಜೋಶಿ ಇವುಗಳು ಇವರ ಕಾದಂಬರಿಗಳು. ಇವರ ಪ್ರಥಮ ಕವನ ಸಂಕಲನ ‘ಪಿಪಾಸೆ' ಮತ್ತು ಕಥಾ ಸಂಕಲನ ‘ಗೀಚುಗೆರೆ' ಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇವರು ಸೆಪ್ಟೆಂಬರ್ ೨೦, ೧೯೭೫ರಂದು ನಿಧನರಾದರು.
ಸುವರ್ಣ ಸಂಪುಟದಲ್ಲಿ ರಾಮಚಂದ್ರ ಕೊಟ್ಟಲಗಿಯವರ ಮೂರು ಕವನಗಳು ಪ್ರಕಟವಾಗಿವೆ. ‘ನಿಃಶ್ವಾಸ', ಲೀಲೆ, ಸುಖ-ದುಃಖ ಇವುಗಳಿಂದ ನಾವು ಎರಡು ಕವನಗಳನ್ನು ಆಯ್ದು ಪ್ರಕಟಿಸಿದ್ದೇವೆ. ಓದಿ, ಅಭಿಪ್ರಾಯ ತಿಳಿಸಿ. ಹಾಗೆಯೇ ಕೊಟ್ಟಲಗಿಯವರ ಬಗ್ಗೆ ಅಧಿಕ ಮಾಹಿತಿ ಇದ್ದವರು ಪ್ರತಿಕ್ರಿಯೆ ವಿಭಾಗದಲ್ಲಿ ಬರೆದು ತಿಳಿಸಿದರೆ ಉತ್ತಮ.
ಲೀಲೆ
ಬೆಳ್ಳಿ ಚೊಗಚಿಯ ಚಂದ್ರ ಮುಗಿಲ ಮಂಟಪದಲ್ಲಿ
ತಾರೆಗಳ ಬಳಗದಲಿ ರಂಜಿಸಲು ॥
ಗಂಧವಾಹಕನಿಂದು ಕುಸುಮವತಿಯರನೆಲ್ಲ
ಚಂದಿರನ ಸ್ವಾಗತಕೆ ಬಳುಕಿಸಿರಲು ॥
ಮುಗಿಲ ಮಾನಸದಲ್ಲಿ ರಾಜಹಂಸಗಳಂತೆ
ತಿಳಿಮೋಡಗಳು ಮೆಲನೆ ತೇಲುತಿರಲು ॥
ಮೇದಿನಿಗೆ ಮೊದಲಾಗಿ ಹುಲ್ಲಿಗೂ ಕಡೆಯಾಗಿ
ಎದೆದುಂಬಿ ಹಿಡಿಸದಲೆ ನಗುತಲಿರಲು ॥
ಹೊಚ್ಚ ಹೊಸ ಪಲ್ಲವದ ಬೆಚ್ಚನೆಯ ಮನೆಯಲ್ಲಿ
ಈ ಪಕ್ಷಿ ದಂಪತಿಗದೆಂಥ ನಿದ್ರೆ ॥
ಮೈ ಕೊರೆವ ಮಾಗಿಯೂ ಮಧುಮಾಸವಾಗಿರಲು
ನಲ್ಲೆ- ನಲ್ಲರಿಗಾರ ಯೋಗ ಮುದ್ರೆ ॥
ತಂಗದಿರ ಹೊಳೆದಾಗ ಗಾಳಿಯಲೆ ಸುಳಿದಾಗ
ಜೀವ ಕುಮುದಿನಿ ಮೆಲ್ಲನರಳುತಿತ್ತು ॥
ಯಾರ ಲೀಲೆಯ ಕನಸು ಎಂಬ ಭಾವನೆ ಮೂಡಿ
ನಸುಗುಂದಿ ಕಳೆ ಹೀನವಾಗುತ್ತಿತ್ತು ॥
ಎಲೆ ಗಾಳಿ ! ಉಡುಗಣವೆ ! ಪಕ್ಷಿ ದಂಪದಿಗಳೇ
ಅರಳಿದಿರಿ ನೀವಾರ ಕನಸದಾಗಿ ॥
ಒಂದು ಕ್ಷಣವಾದರೂ ಕನಸುಗಳ ಕನಸಿಗನೆ !
ಮೂಡಿ ಬಾ ! ಎಳೆ ಬಿದಿಗೆ ಚಂದ್ರನಾಗಿ !!
***
ಸುಖ -ದುಃಖ
ಒಮ್ಮೆ ಸುಖದ ಗಳಿಗೆ ಬಂದು
ಪ್ರೀತಿಯಿಂದ ಬಳಿಗೆ ನಿಂದು
ಅಂಗಲಾಚಿ ಬೇಡಿತೆನ್ನ
ಮಡದಿಯಾಗಿ ವರಿಸು ಎಂದು.
ಸುಖದ ಓಂ ಭವತಿ ಕೇಳಿ
ದುಃಖ ಕ್ರುದ್ಧ ಮುದ್ರೆ ತಾಳಿ
ಕೂಗಿತೊದರಿ ‘ಎಲಾ ಚೌಡಿ,
ಇವರು ಕಟ್ಟಬೇಕೆ ತಾಳಿ?’
“ನೀನು ಅವಳು ಅಕ್ಕತಂಗಿ
ಒಂದೆ ಗಿಡದ ಎರಡು ಟೊಂಗಿ
ಭೇದ ಭಾವ ಮಾಡಬೇಡಿ"
ಮೆಲ್ಲನೆಂದೆ ಉಗುಳು ನುಂಗಿ.
ಗೆಣೆಯ, ನಿನ್ನ ಗಂಟು ಹಾಕಿ
ಬ್ರಹ್ಮ ಬರೆದ ವಿಧಿಯ ಲೇಖಿ
ಮರೆತೆಯೇನು ಇಷ್ಟರಲ್ಲಿ
ಮೊದಲು ತೀರಲೆನ್ನ ಬಾಕಿ.
ಸುಖದ ರಟ್ಟೆ ಹಿಡಿದು ನೂಕಿ
ಬಾಗಿಲಿಕ್ಕಿ ಅಗಣಿ ಹಾಕಿ
ಗದರಿ ಹೇಳಿತೆನಗೆ ದುಃಖ
“ಬೇಡ ಬೇರೆ ಹೆಂಣ ಷೋಕಿ"
***
(ಕೃಪೆ: ‘ಸುವರ್ಣ ಸಂಪುಟ' ಕೃತಿಯಿಂದ ಸಂಗ್ರಹಿತ ಕವನಗಳು)