‘ಸುವರ್ಣ ಸಂಪುಟ' (ಭಾಗ ೪೬) - ಜಿ.ವರದರಾಜ ರಾವ್

‘ಸುವರ್ಣ ಸಂಪುಟ' (ಭಾಗ ೪೬) - ಜಿ.ವರದರಾಜ ರಾವ್

‘ಸುವರ್ಣ ಸಂಪುಟ’ ಕೃತಿಯಿಂದ ಈ ವಾರ ನಾವು ಆಯ್ಕೆ ಮಾಡಿದ ಕವಿ ಜಿ.ವರದರಾಜ ರಾವ್. ಇವರ ಪೂರ್ಣ ಹೆಸರು ಗುಂಡಮರಾಜು ವರದರಾಜ ರಾವ್. ಹುಟ್ಟಿದ್ದು ಜನವರಿ ೩, ೧೯೧೮ರಂದು ಬೆಂಗಳೂರಿನಲ್ಲಿ. ಇವರು ಕಾವ್ಯ, ಶಿಶು ಸಾಹಿತ್ಯ, ವಿಮರ್ಶೆ, ಸಂಶೋಧನೆ, ವ್ಯಕ್ತಿ ಚಿತ್ರಣ ಮುಂತಾದ ಪ್ರಕಾರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇವರು ಮಹಾನ್ ವಿಧ್ವಾಂಸರೂ, ಉತ್ತಮ ಬರಹಗಾರರೂ ಆಗಿದ್ದರು. 

ವರದರಾಜ ಅವರ ವಿದ್ಯಾಭ್ಯಾಸವೆಲ್ಲಾ ಬಹುತೇಕ ಮೈಸೂರಿನಲ್ಲೇ ನಡೆಯಿತು. ವಿಜ್ಞಾನದ ವಿಷಯದಲ್ಲಿ ಅಭ್ಯಾಸ ಮಾಡಿದ್ದರಿಂದ ಅವರಿಗೆ ಬಿ ಎ ಕನ್ನಡ ಆನರ್ಸ್ ಮಾಡಲು ಆಗಿನ ನಿಯಮಾವಳಿಗಳ ಪ್ರಕಾರ ಅವಕಾಶವಿರಲಿಲ್ಲ. ಆದರೆ ಇವರ ಕನ್ನಡ ಬಿ ಎ ಓದುವ ಆಸೆಯನ್ನು ಮನಗಂಡ ಆಗಿನ ಖ್ಯಾತ ಸಾಹಿತಿಗಳಾದ ಬಿ.ಎಂ.ಶ್ರೀ, ಎ.ಆರ್.ಕೃಷ್ಣಶಾಸ್ತ್ರಿ, ಎಂ.ವಿ.ಸೀತಾರಾಮಯ್ಯ, ಎನ್.ಎಸ್.ಸುಬ್ಬರಾವ್ ಅವರ ಒತ್ತಾಯದ ಮೇರೆಗೆ ಮಹಾರಾಜ ಕಾಲೇಜಿನಲ್ಲಿ ಪ್ರವೇಶ ದೊರೆಯಿತು. ಬಿ ಎ ಆನರ್ಸ್ ನಂತರ ವರದರಾಜ ಅವರು ಎಂ.ಎ.ಪದವಿಯನ್ನೂ ಪಡೆದುಕೊಂಡರು. 

ನಂತರ ಇವರು ರಾಜ್ಯ ಸರಕಾರದ ಕನ್ನಡ ಭಾಷಾಂತರ ಕಚೇರಿಯಲ್ಲಿ ಕೆಲ ಕಾಲ ಉದ್ಯೋಗ ಮಾಡಿ ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲೂ ಉಪನ್ಯಾಸಕ  ವೃತ್ತಿ ಮಾಡಿ ನಿವೃತ್ತರಾದರು.

ಇವರು ಬರೆದ ‘ಪುರಂದರ ದಾಸರ ಕೀರ್ತನೆಗಳು' ಪ್ರಬಂಧಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಬಂದಾಗ ಇನ್ನಷ್ಟು ಹರಿದಾಸ ಸಾಹಿತ್ಯದಲ್ಲಿ ಇವರಿಗೆ ಒಲವು ಮೂಡಿತು. ಹರಿದಾಸ ಸಾಹಿತ್ಯದ ಕುರಿತಾಗಿ ಹಲವಾರು ಸಂಶೋಧನೆಗಳನ್ನು ನಡೆಸಿದರು. ಸೀತಾ ಪರಿತ್ಯಾಗ ಸಮಸ್ಯೆಗಳು, ಕರ್ಣನ ಬಗ್ಗೆ ‘ಕಲಿ ಕರ್ಣ', ಮಹಾಸತಿ ಕಸ್ತೂರಿ ಬಾ, ಕುಮಾರ ರಾಮನ ಬಗ್ಗೆ ‘ಕಮ್ಮಟ ಕೇಸರಿ' ಮೊದಲಾದ ಕೃತಿಗಳನ್ನು ರಚಿಸಿದರು. ‘ಕುಮಾರ ರಾಮನ ಸಾಂಗತ್ಯ' ಮಹಾ ಪ್ರಬಂಧಕ್ಕೆ ವರದರಾಜ ಇವರಿಗೆ ಡಾಕ್ಟರೇಟ್ ಪದವಿ ದೊರೆಯಿತು. 

ತೋರಣ, ವಿಜಯದಶಮಿ ಮತ್ತು ಪರಂಪರೆ ಎಂಬ ಕವನ ಸಂಕಲನಗಳು ಪ್ರಕಟವಾಗಿವೆ. ಓಬವ್ವ ಮತ್ತು ಸೆರೆಯಾಳು ಇವರ ನೀಳ್ಗವಿತೆಗಳು. ಓಬವ್ವ ಕವಿತೆಗೆ ಇವರಿಗೆ ಬಿ.ಎಂ,ಶ್ರೀ. ಜೊತೆಗೆ ಜಂಟಿಯಾಗಿ ರಜತ ಮಹೋತ್ಸವ ಚಿನ್ನದ ಪದಕ ಒಲಿದು ಬಂತು. ಮಕ್ಕಳಿಗಾಗಿ ಇವರು ತೊಟ್ಟಿಲು, ಬುಡುಬುಡುಕೆ, ಕಮ್ಮಟ ದುರ್ಗ ಎಂಬ ಶಿಶು ಸಾಹಿತ್ಯವನ್ನು ಬರೆದಿದ್ದಾರೆ. ವರದರಾಜರು ಹಲವಾರು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಬೈರನ್ ಕವಿಯ ‘ಪ್ರಿಸನರ್ಸ್ ಆಫ್ ಪಿಲಾನ್' ಕೃತಿಯನ್ನು ‘ಸೆರೆಯಾಳು' ಎಂಬ ಹೆಸರಿನಲ್ಲಿ ಭಾವಾನುವಾದ ಮಾಡಿದ್ದಾರೆ. 

ವರದರಾಜರು ನಿವೃತ್ತಿಯ ಬಳಿಕ ಮೈಸೂರಿಗೆ ಬಂದು ‘ಹರಿದಾಸ ಸಾಹಿತ್ಯ ಸಾರ', ‘ಪುರಂದರದಾಸರು', ‘ಹರಿಭಕ್ತಿ ವಾಹಿನಿ' ಮೊದಲಾದ ಮಹತ್ವದ ಕೃತಿಗಳನ್ನು ರಚನೆ ಮಾಡಿದರು. ಸ್ವಲ್ಪ ಸಮಯ ಯುಜಿಸಿಯಲ್ಲೂ ಉದ್ಯೋಗ ಮಾಡಿದರು. ವರದರಾಜ ರಾಯರು ನವೆಂಬರ್ ೧೩, ೧೯೮೭ರಂದು ನಿಧನಹೊಂದಿದರು.

ವರದರಾಜ ರಾವ್ ಅವರ ಒಂದು ಕವನ ‘ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟವಾಗಿದೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ. 

ಸೆರಗು

ಸೀರೆಗೆ ಬೇಕೇ ಸೆರಗು?

ಯಾತಕೆ ಈ ಸೋಗು?

ಇದ್ದರು ಇದ್ದಂತಿಲ್ಲ?

ಹೊದೆಯುವ ಹಂಬಲವೇ ಇಲ್ಲ !

 

ಹಿಂದಿನ ಕಾಲಕೆ ಬೇಕಿತ್ತು

ಮಾನದ ಕೇತನವೆನಿಸಿತ್ತು !

ಅಂದೋ ? ಗಂಭೀರದ ಸಂಕೇತ !

ಇಂದೋ? ಅದಕೆಲ್ಲಕು ಖೋತ !

 

ಅದೊ, ಹೆಣಗಾಡುತ್ತಿದೆ ಹೆಗಲಿನ ಮೇಲೆ

ಜಾರುತ್ತಿರುವುದೇ ನೂತನ ಲೀಲೆ !

ಗಾಳಿಗು ಅದಕೂ ಒಪ್ಪಂದ

ಚಣಚಣವೂ ಚಕ್ಕಂದ !

 

ಮೈಮುಚ್ಚುವುದಾದರು ಏನುಂಟು?

ಎಲ್ಲವು ತೆರೆದಿಟ್ಟಿಹ ಗಂಟು !

ರವಿಕೆಯ ಒಳಗುಟ್ಟು

ರಟ್ಟೋ ರಟ್ಟು !

 

ಬಣ್ಣ ಬಣ್ಣದ ಬೆಡಗು !

ಅದಕಾಗಿಯೇ ಇನ್ನೂ ಉಳಿದಿದೆ ಸೆರಗು!

***

(‘ಸುವರ್ಣ ಸಂಪುಟ’ ಕೃತಿಯ ಕೃಪೆಯಿಂದ ಸಂಗ್ರಹಿತ)