‘ಸುವರ್ಣ ಸಂಪುಟ' (ಭಾಗ ೪೮) - ಸಂಗಮೇಶ ಹೊಸಮನಿ

‘ಸುವರ್ಣ ಸಂಪುಟ' (ಭಾಗ ೪೮) - ಸಂಗಮೇಶ ಹೊಸಮನಿ

ಸಂಗಮೇಶ ಹೊಸಮನಿಯವರು ‘ಶಿವ ಕವಿ ‘ಎಂದೇ ಹೆಸರಾದವರು. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಾಮವಾಡಗಿ ಗ್ರಾಮದವರು. ಇವರು ಗಾಂಧೀಜಿಯ ತತ್ವಗಳ ಅನುಯಾಯಿ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಕವಿ, ವಚನಕಾರ, ನಾಟಕ, ಸಂಪಾದಕ, ಸಂಘಟಕ, ಜಾನಪದ ಸಂಗ್ರಹಗಾರ, ಕಾದಂಬರಿ, ಕಥೆಗಾರರಾಗಿ ಹೀಗೆ ಸಾಹಿತ್ಯದ ವಿವಿಧ ಮಗ್ಗಲುಗಳನ್ನು ಸ್ಪಂದಿಸಿದ ಅವರ ಬದುಕು-ಬರಹ ಅನುಭಾವಗಳಿಂದ ಶ್ರೀಮಂತವಾಗಿದೆ. 

ಇವರ ಪೂರ್ಣ ಹೆಸರು ಸಂಗನ ಗೌಡ ಭೀಮನಗೌಡ ಹೊಸಮನಿ. ಇವರು ಜೂನ್ ೨೦, ೧೯೧೯ರಂದು ಜನಿಸಿದರು. ಇವರ ತಂದೆ ಭೀಮನಗೌಡ ಹಾಗೂ ತಾಯಿ ಗಂಗಮಾಳಮ್ಮ. ಹೊಸಮನಿಯವರದ್ದು ಪ್ರತಿಷ್ಟಿತ ಶರಣರ ಮನೆತನ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ರಾಮವಾಡಗಿಯ ಗಾವಟಿ ಶಾಲೆಯಲ್ಲಿ ಪೂರೈಸಿದರು. ಐದನೇ ತರಗತಿಯ ಬಳಿಕ ಹುನಗುಂದ ತಾಲೂಕಿನ ಹೀರೇಬಾದವಾಡಗಿ ಗ್ರಾಮದಲ್ಲಿ ಮೂಲ್ಕಿ ಶಿಕ್ಷಣವನ್ನು ಪಡೆದರು. ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ೩೫ ವರ್ಷ ದುಡಿದು ಎಲ್ಲಾ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು.

ಸಂಗಮೇಶರವರ ಪತ್ನಿ ಪಾರ್ವತಿ ದೇವಿ ಹಾಗೂ ಇವರ ಸುಪುತ್ರ ಅಶೋಕ. ಇವರದ್ದು ಮೂಲತಃ ಒಕ್ಕಲುತನದ ವೃತ್ತಿ. ಆದರೆ ಇವರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಅಪಾರ. ಗಾಂಧೀ ಗೀತೆಗಳು ಎಂಬ ಕವನ ಸಂಕಲನಕ್ಕೆ ರಾಜ್ಯ ಪ್ರಶಸ್ತಿ ದೊರೆತಿದೆ. ಮೊಗ್ಗು ಮಾಲೆ, ಹೂವು ಹಣ್ಣು, ಬೋಲ ಬೊಗರಿ, ಸಂಗಮನಾಥನ ವಚನಗಳು, ವಚನ ತೀರ್ಥ ಇವರ ಕೃತಿಗಳು. ‘ಶಿವನ ಸೊಮ್ಮು' ಇವರಿಗೆ ಅರ್ಪಿಸಿದ ಅಭಿನಂದನಾ ಗ್ರಂಥ. ಕನ್ನಡ ಸಾಹಿತ್ಯ ಲೋಕಕ್ಕೆ ಇಷ್ಟೆಲ್ಲಾ ಕೊಡುಗೆಗಳನ್ನು ನೀಡಿದ ಇವರ ಸರಿಯಾದ ಒಂದೇ ಒಂದು ಭಾವಚಿತ್ರ ಲಭ್ಯವಿಲ್ಲದೇ ಇರುವುದು ಮತ್ತು ಈಗಿನ ಸಾಹಿತಿಗಳಿಗೆ ಇವರ ಬಗ್ಗೆ ಹೆಚ್ಚೇನೂ ತಿಳಿಯದೇ ಇರುವುದೇ ಬೇಸರದ ಸಂಗತಿ. 

‘ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟವಾದ ಇವರ ಏಕೈಕ ಕವನವನ್ನು ಇಲ್ಲಿ ನೀಡಲಾಗಿದೆ. ಓದಿ ಅದರ ಸ್ವಾದವನ್ನು ಆಸ್ವಾದಿಸಿ.

ಹಕ್ಕಿಯಾಗಿ ಹಾರಬೇಕು

ಹಕ್ಕಿಯಾಗಿ ಹಾರಬೇಕು

ದೂರ ದೂರ ನಾವು !

ಸಿಕ್ಕಮರಕೆ ಕೂಡಬೇಕು

ಅಲ್ಲಿ ನಾವು ನೀವು !!

ಹೂವು ಮೆಚ್ಚಿ ನಲಿಯಬೇಕು,

ಕಾಯಿಕಚ್ಚಿ ಉಲಿಯಬೇಕು

ಹಣ್ಣಿಗಾಗಿ ಅಲೆಯಬೇಕು

ನಾವು ನೀವು !

ಸಿಕ್ಕಾಮರಕೆ ಇಳಿಯಬೇಕು

ತಳಿರಿನೊಳಗೆ ಕೂಗಬೇಕು

ಕುವ್ವು ಕುವ್ವು

ಗಗನದೊಡಲ ಕಂಪಿನಲ್ಲಿ

ರವಿಯ ಸಿರಿಯ ಸೊಂಪಿನಲ್ಲಿ

ರಜನಿರಾಜ ನಿಂಪಿನಲ್ಲಿ

ನಾವು ನೀವು !

ಗರಿಯಗೆದರಿ ಹಾರಬೇಕು,

ಸಾಲು ಸೇರಿ ತೂಗಬೇಕು

ಕುವ್ವು ಕುವ್ವು

೩.

ಅಗುಳು ಅರಸಿ ದಣಿಯಬೇಕು

ಗೂಡುಕಟ್ಟಿ ಕುಣಿಯಬೇಕು

ಗುಟುಕುಕೊಟ್ಟು ತಣಿಯಬೇಕು

ನಾವು ನೀವು

ರೆಂಬೆಯೊಂದರಲ್ಲಿ ಮಲಗಿ

ಕನಸುಕಂಡು ಕೂಗಬೇಕು,

ಕುವ್ವು ಕುವ್ವು.

೪.

ಕುರುಳು ಕೂಗಲೋಡಬೇಕು,

ಅರಚಿ ಕಿರುಚಿ ಕೂಡಬೇಕು

ದುರುಳರನ್ನು ದೂಡಬೇಕು

ನಾವು ನೀವು !

ಇರುಳೆನೆಲ್ಲ ಕಾಯಬೇಕು

ಮರಳಿ ಮತ್ತೆ ಕೂಗಬೇಕು

ಕುವ್ವು ಕುವ್ವು

೫.

ಹಕ್ಕಿಯಂತೆ ನಮ್ಮ ಭಾವ

ಹಕ್ಕಿಯಂತೆ ನಮ್ಮ ಜೀವ

ಹಕ್ಕಿಯಾಗಿ ನೋವು ಸಾವ

ಜಯಿಸಿ ನಾವು !

ಗರಿಯಗೆದರಿ ಹಾರಬೇಕು

ಸಾಲುಸೇರಿ ಕೂಗಬೇಕು

ಕುವ್ವು ಕುವ್ವು

***

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)