‘ಸುವರ್ಣ ಸಂಪುಟ' (ಭಾಗ ೪೯) - ಯಲ್ಲಟ್ಟಿ. ಬ.ಗಿ.

‘ಸುವರ್ಣ ಸಂಪುಟ' (ಭಾಗ ೪೯) - ಯಲ್ಲಟ್ಟಿ. ಬ.ಗಿ.

ಬಸವರಾಜ ಗಿರಿಮಲ್ಲಪ್ಪ ಯಲ್ಲಟ್ಟಿಯವರು ಬ.ಗಿ.ಯಲ್ಲಟ್ಟಿ ಎಂದೇ ಖ್ಯಾತನಾಮರು. ಬನಹಟ್ಟಿ ಇವರ ಹುಟ್ಟೂರು. ಗಿರಿಮಲ್ಲಪ್ಪ ಇವರ ತಂದೆ. ಬಾಲ್ಯದಲ್ಲೇ ತಮ್ಮ ತಂದೆ ತಾಯಿಯರನ್ನು ಕಳೆದುಕೊಂಡ ಗಿರಿಮಲ್ಲಪ್ಪನವರು ಚಿಕ್ಕಮ್ಮನ ಕೈಗೂಸಾಗಿಯೇ ಬೆಳೆದು ದೊಡ್ಡವರಾದರು. ಕೈಮಗ್ಗದ ಸೀರೆಗಳನ್ನು ತಯಾರಿಸುವಲ್ಲಿ ಇವರದ್ದು ಎತ್ತಿದ ಕೈ. ಇವರು ತಯಾರಿಸಿದ ಸೀರೆಗಳು ಬನಹಟ್ಟಿಯಲ್ಲಿನ ಜವುಳಿ ಉದ್ಯಮಕ್ಕೆ ಹೊಸ ಮೆರುಗು ತಂದುಕೊಟ್ಟವು. 

ಗಿರಿಮಲ್ಲಪ್ಪ ಮತ್ತು ವೀರ ಸಂಗವ್ವ ದಂಪತಿಗಳ ಪುತ್ರರಾಗಿ ಮಾರ್ಚ್ ೧೦, ೧೯೨೧ರಂದು ಜನ್ಮ ತಾಳಿದರು. ಬನಹಟ್ಟಿಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಂಡ ಇವರು ಅಂದಿನ ಮುಲ್ಕಿ ಶಿಕ್ಷಣ ಮುಗಿಸಿದ್ದಿದ್ದರೆ ಪ್ರಾಥಮಿಕ ಶಾಲಾ ಶಿಕ್ಷಕರಾಗಬಹುದಿತ್ತು. ಆದರೆ ಮನೆಯ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಸಹೋದರರಲ್ಲಿ ಕಲಹವಾಗುತ್ತಲೇ ಇತ್ತು. ತಮ್ಮ ಶಿಕ್ಷಣದ ಹಂಬಲವನ್ನು ಹತ್ತಿಕ್ಕಲಾಗದೇ ತಂದೆಯವರ ಅನುಮತಿಯನ್ನು ಪಡೆದುಕೊಂಡು ಶಿಕ್ಷಣವನ್ನು ಮುಂದುವರೆಸುತ್ತಾರೆ. ಸಾಂಗ್ಲಿಯ ವೆಲಿಂಗ್ಟನ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಳ್ಳುತ್ತಾರೆ. ಆ ಸಮಯ ಖ್ಯಾತ ಸಾಹಿತಿ ವಿ.ಕೃ.ಗೋಕಾಕ್ ಅವರು ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಯಲ್ಲಟ್ಟಿಯವರು ಸ್ವಾತಂತ್ರ್ಯ ಸಂಗ್ರಾಮದಲ್ಲೂ ಪಾಲ್ಗೊಂಡು ಜೈಲುವಾಸವನ್ನು ಅನುಭವಿಸಿದ್ದರು.

ರಬಕವಿಯ ಪ್ರೌಢಶಾಲೆಯಲ್ಲೂ, ಶ್ರೀ ಶರಣಬಸವೇಶ್ವರ ಆರ್ಟ್ಸ್ ಕಾಲೇಜಿನಲ್ಲೂ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಾರೆ. ‘ನನ್ನ ಹಾಡು' ಯಲ್ಲಟ್ಟಿಯವರ ಮೊದಲ ಕವನ ಸಂಕಲನ. ರಸಿಕ ಪಕ್ಷಿ, ಅಗ್ನಿ ದೀಕ್ಷೆ ಇವರ ಇತರ ಕವನ ಸಂಕಲನಗಳು. 

ಯಲ್ಲಟ್ಟಿಯವರ ಒಂದು ಕವನ ‘ಸುವರ್ಣ ಸಂಪುಟ’ದಲ್ಲಿ ಪ್ರಕಟವಾಗಿದೆ. ಅದನ್ನು ಸಂಗ್ರಹಿಸಿ ಈ ಕೆಳಗೆ ನೀಡಲಾಗಿದೆ. ಓದುವಿರಾಗಿ…

ಸೊಸೆಯ ಮೊರೆ !

೧.

“ಚಾಂಡಾಲಿ, ನೀನೆಲ್ಲಿ ನನಗಾಗಿ ಕುಳಿತಿದ್ದೆ 

ನನ್ನ ಸೌಭಾಗ್ಯವನು ಅಳಿಸಿಬಿಟ್ಟೆ,

ಎಂಥ ಕರಿಗಾಲೇನೊ-ನೀ ಬಂದ ತಿಂಗಳಲೆ

ನನ್ನ ಐಸಿರಿಯನ್ನೆ ತುಳಿದು ಬಿಟ್ಟೆ ! “

೨.

ಹೀಗುಂಟು ದಿನಬೆಳಗಾಗು ಮಂಗಳಾರತಿ ನನಗೆ

ಕಾಲಿರಿಸಿದಾಗಿಂದ ಅತ್ತೆಮನೆಗೆ ;

ಪತಿಯಿದ್ದು ಗತಿಹೀನಳಾಗಿರುವೆ ದುರ್ದೈವಿ"

ಬೆನ್ನು ಕಟ್ಟುವರಾರು ಇನ್ನು ನನಗೆ ?

೩.

ಸೊಸೆಯಾಗಿ ಹೊಸದಾಗಿ ಹೋದೊಂದೆ ತಿಂಗಳಲಿ

ಮಾವನೊಯ್ದಿತು ಸಾವು ಕದ್ದು ಬಂದು ;

ಕಾಗೆ ಕುಳಿತಾಕ್ಷಣಕೆ ಟೊಂಕೆ ಮುರಿದಂತಾಗಿ

ನನ್ನ ಕಾಲ್ಗುಣವೆ ಕೆಟ್ಟಾಯಿತಂದು !

೪.

ಮನೆ ನೋಡಿಕೊಳುವಂಥ ಮಾನವನಿಲ್ಲಾಗಿರಲು

ಅತ್ತೆ ಮನೆಗೆಲ್ಲ ಸರ್ವಾಧಿಕಾರಿ !

ತಾಯ ಮಾತಿಗೆ ಒಂದು ತುಟಿ ಎರಡು ಮಾಡದೆಯೆ

ಹೂಂಗೊಡುವದೆನ್ನವರಿಗೊಂದೆ ದಾರಿ !

೫.

ತಿಂದುಂಡು ತಣ್ಣಗಿದ್ದರೆ ಸಾಕು ನನ್ನತ್ತೆ

ತಿಳಿಸಿ ಹೇಳುತ ತಾಕು ತಪ್ಪಿದಲ್ಲಿ ;

ಹಚ್ಚಲಾರೆನು ಇಡಲು ಈಚೆ ಕಡ್ಡಿಯನಾಚೆ

ಸರಿಗಟ್ಟಿಕೊಳ್ಳಲಾರೆ ಕೆಲಸದಲ್ಲಿ !

೬.

ಗಂಡನೊಡನೆನಗಿಲ್ಲ ಸವಿಮಾತು ಸಹಕಾರ

ಹಡೆದವರ ಮನೆ ಬಿಟ್ಟು ಬರುವದೇಕೊ!

ಗಂಡ ಸವಿಯಾಗಿರಲು ತನ್ನ ಹೆಂಡತಿಯೊಡನೆ

ಅಯ್ಯೋ ತಳಮಳ ಕುದಿತ ಅತ್ತೆಗೇಕೋ !

೭.

ತವರುಮನೆಗೊಂದೆರಡು ದಿನ ಹೋದರೇನಲ್ಲಿ

ಅಣ್ಣನರಸಿಗೆ ದಾಸಿಯಾಗಬೇಕು ;

ಬೆನ್ನು ಕಟ್ಟುವ ತಾಯಿ ಬಯಲಾದ ತವರಿನಲಿ

ಮನೆ ಮಗಳದೇನಾಟ ನಡೆಯಬೇಕು !

೮. 

ಕೊಟ್ಟ ಮೇಲೊಮ್ಮೆ ಹೆಣ್ಣಿಗೆ ಹುಟ್ಟುಮನೆಯಲ್ಲಿ

ಇಲ್ಲ ಸುಖಸೌಲಭ್ಯದಾವ ಹಕ್ಕು !

ತುತ್ತು ಕೂಳಿಗು ಅತ್ತೆಯವರ ಅಪ್ಪಣೆ ಬೇಕು.

ಎಲ್ಲಿ ಹೋದರು ಏನು? ಯಾರು ದಿಕ್ಕು?

೯.

ಮನೆಯ ನ್ಯಾಯಾಲಯದಿ ಹುಟ್ಟು ಅಪರಾಧಿ ಸೊಸೆ

ಎಷ್ಟು ಶಿರಸಾವಹಿಸಿ ನಡೆದರೇನು?

ತಪ್ಪದತ್ತೆಯ ಕಾಟ ಸೆರೆಯಾಳಿನಂತಾಗಿ

ಒಂಟಿಗಾಲಿಯ ಮೇಲೆ ನಿಂತರೇನು !

೧೦.

ಇನ್ನೇಸು ದಿವಸ ಈ ರೀತಿ ತೆಗೆಯಲಿ ನಾನು

ಸುಟ್ಟು ಬರಲೀ ಹಾಳು ಹೆಣ್ಣಿ ಜನ್ಮ !

ಮಣ್ಣಗೂಡುವವರೆಗೆ ಹೆಣ್ಣಿಗೆಲ್ಲಿಯ ಸೌಖ್ಯ ?

ಸಣ್ಣಾಗಿ ಸವೆಯುವದೆ ಅವಳ ಕರ್ಮ !

***

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)