‘ಸುವರ್ಣ ಸಂಪುಟ' (ಭಾಗ ೪) -ಡಿ.ವಿ.ಗುಂಡಪ್ಪ

‘ಸುವರ್ಣ ಸಂಪುಟ' (ಭಾಗ ೪) -ಡಿ.ವಿ.ಗುಂಡಪ್ಪ

ಸುವರ್ಣ ಸಂಪುಟ ಪುಸ್ತಕದಿಂದ ಈ ಬಾರಿ ನಾವು ಖ್ಯಾತ ಕವಿ, ವಿಮರ್ಶಕ ಡಿ.ವಿ.ಗುಂಡಪ್ಪ (ಡಿ.ವಿ.ಜಿ) ಅವರ ಎರಡು ಕವನಗಳನ್ನು ಆಯ್ದುಕೊಂಡಿದ್ದೇವೆ. ಕಳೆದ ವಾರ ಪ್ರಕಟಿಸಿದ ಸ.ಪ.ಗಾಂವಕರ ಅವರ ಕವನ ಬಹಳಷ್ಟು ಮಂದಿಗೆ ಮೆಚ್ಚುಗೆಯಾಗಿದೆ. ಅವರ ಬೇರೆ ಕವನಗಳಿದ್ದರೆ ಪ್ರಕಟಿಸಿ ಎಂದು ಕೇಳಿದ್ದಾರೆ. ಆದರೆ ನಮ್ಮಲ್ಲಿ ಬೇರೆ ಕವನಗಳ ಸಂಗ್ರಹವಿಲ್ಲ. ಓದುಗರಲ್ಲಿ ಯಾರ ಬಳಿಯಾದರೂ ಸ.ಪ. ಅವರ ಕವನಗಳು ಲಭ್ಯವಿದ್ದಲ್ಲಿ ದಯವಿಟ್ಟು ಪ್ರತಿಕ್ರಿಯಿಸಿ.

ಡಿ.ವಿ.ಗುಂಡಪ್ಪ ಇವರ ಪುಟ್ಟ ಪರಿಚಯ: ಡಾ.ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (೧೮೮೭-೧೯೭೫) ಎಂಬುವುದು ಡಿ.ವಿ.ಜಿಯವರ ಪೂರ್ಣ ಹೆಸರು. ಇವರು ಕನ್ನಡದ ಖ್ಯಾತ ಕವಿಗಳು ಮತ್ತು ವಿಮರ್ಶಕರು. ಪತ್ರಿಕೋದ್ಯಮ ಹಾಗೂ ರಾಜ್ಯಶಾಸ್ತ್ರಗಳಲ್ಲಿ ಅಭಿರುಚಿಯನ್ನು ಹೊಂದಿ ಆ ರಂಗದಲ್ಲಿ ಕೆಲಸ ಮಾಡಿದವರು. ೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಬೆಂಗಳೂರಿನಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಸ್ಥಾಪಿಸಿದರು. 

ಹುಟ್ಟಿದ್ದು ೧೭ ಮಾರ್ಚ್ ೧೮೮೭ರಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ . ಇವರ ಪತ್ನಿ ಭಾಗೀರತಮ್ಮ. ‘ಸೂರ್ಯೋದಯ ಪ್ರಕಾಶಿಕ' ಪತ್ರಿಕೆಯಲ್ಲಿ ಬಾತ್ಮೀದಾರರಾಗಿ ಸೇವೆ ಸಲ್ಲಿಸಿದರು. ಡಿವಿಜಿಯವರು ಹೆಸರುವಾಸಿಯಾದದ್ದು ‘ಮಂಕುತಿಮ್ಮನ ಕಗ್ಗ' ಹಾಗೂ ‘ಮರುಳ ಮುನಿಯನ ಕಗ್ಗ' ಬರಹದಿಂದ. ಹಲವಾರು ಕವನ ಸಂಕಲನ, ಪ್ರಬಂಧ ಹಾಗೂ ನಾಟಕಗಳನ್ನು ರಚಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಮಾತ್ರವಲ್ಲ, ಆಂಗ್ಲ ಭಾಷೆಯಲ್ಲೂ ಬರಹಗಳನ್ನು ಬರೆದಿದ್ದಾರೆ. 

೧೯೬೭ರಲ್ಲಿ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಭಾರತ ಸರಕಾರದಿಂದ ಪದ್ಮಭೂಷಣ ಗೌರವ ಹಾಗೂ ಭಾರತೀಯ ಅಂಚೆ ಇಲಾಖೆಯು ಇವರ ಸ್ಮರಣಾರ್ಥ ೧೯೮೮ರಲ್ಲಿ ಅಂಚೆಚೀಟಿಯನ್ನು ಬಿಡುಗಡೆ ಮಾಡಿದೆ.

ಇವರು ೧೯೭೫, ಅಕ್ಟೋಬರ್ ೭ರಂದು ತಮ್ಮ ೮೮ ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ಆದರೆ ಕನ್ನಡ ಸಾಹಿತ್ಯ ಲೋಕಕ್ಕೆ ಇವರು ನೀಡಿದ ಕೊಡುಗೆಗಳು ಸದಾ ಸ್ಮರಣೀಯವಾಗಿ ಉಳಿದಿವೆ.

ಡಿವಿ.ಜಿಯವರ ಕವನ -೧

ವನಸುಮ (ಅಠಾಣ ರಾಗ- ರೂಪಕ ತಾಳ)

ವನಸುಮದೊಲೆನ್ನ ಜೀ

ವನವು ವಿಕಸಿಸುವಂತೆ

ಮನವನನುಗೊಳಿಸು ಗುರುವೇ -ಹೇ ದೇವ ॥ಪ॥

 

ಜನಕೆ ಸಂತಸವೀವ 

ಘನನು ನಾನೆಂದೆಂಬ

ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ ॥ಅ.ಪ.॥

 

ಕಾನನದಿ ಮಲ್ಲಿಗೆಯು

ಮೌನದಿಂ ಬಿರಿದು ನಿಜ

ಸೌರಭವ ಸೂಸಿ ನಲವಿಂ

ತಾನೆಲೆಯ ಪಿಂತಿರ್ದು

ದೀನತೆಯ ತೋರಿ ಅಭಿ

ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ

 

ಉಪಕಾರಿ ನಾನು ಎ

ನ್ನು ಪಕೃತಿಯು ಜಗದೆಂಬ

ವಿಪರೀತ ಮತಿಯನುಳಿದು

ವಿಫುಲಾಶ್ರಯವನೀವ

ಸುಫಲ ಸುಮ ಭರಿತ ಪಾ

ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು

***

ಕವನ ೨

ವಿವೇಕಾನಂದಸ್ವಾಮಿ

ಪುಣ್ಯಭೂಮಿಯೆ, ನಿನ್ನ ಪುಣ್ಯಗಂಧವನಖಿಲ

ಭುವನದೊಳ್ ಪಸರಿಸುತ ನಲಿವುದೆಂದು।

ಆರ್ಯಕುಲಜರೆ, ನಿಮ್ಮ ನಿಜಧರ್ಮದೀಪಮಂ

ಮರಳಿ ಬೆಳಗಿಸಿ ಗುರುತೆವಡೆವುದೆಂದು |

ವೇದಜನನಿಯೆ, ನಿನ್ನ ದಿವ್ಯಗಾನವ ಕೇಳೆ

ಜಗವೆಲ್ಲ ತಲೆವಾಗಿ ಬರುವುದೆಂದು।

ವೇದಾಂತಕೇಸರಿಯೆ, ನಿದ್ರೆಯಂ ತೊರೆದು ನೀಂ

ಗುಹೆಯಿಂದ ಪೊರಮಟ್ಟು ಮರೆಯುದೆಂದು॥

 

ಇಂತು ನಿಜ ಜನಪದವನೆಳ್ವ ರಂಗೊಳಿಸುತನಿಶಂ।

ಭರತಮಾತೆಯ ಜೈತ್ರಯಾತ್ರೆಯೊಳ್ ಪ್ರಮುಖನೆನಿಸಿ।

ವಿಬುಧವಂದಿತನಾಗಿ ಲೋಕಸಂಮಾನ್ಯನಾಗಿ।

ಶ್ರೀ ವಿವೇಕಾನಂದನೆಸೆದನೆಂದು॥

***

ಸಂಗ್ರಹ : ಸುವರ್ಣ ಸಂಪುಟ

ಚಿತ್ರ ಕೃಪೆ: ಅಂತರ್ಜಾಲ ತಾಣ