‘ಸುವರ್ಣ ಸಂಪುಟ' (ಭಾಗ ೫೦-೫೧) ವೈ.ಎಸ್. ಲೂಯಿಸ್ ಮತ್ತು ಜಿ.ಗುಂಡಣ್ಣ

‘ಸುವರ್ಣ ಸಂಪುಟ' (ಭಾಗ ೫೦-೫೧) ವೈ.ಎಸ್. ಲೂಯಿಸ್ ಮತ್ತು ಜಿ.ಗುಂಡಣ್ಣ

ಈ ವಾರ ನಾವು ಸುವರ್ಣ ಸಂಪುಟ ಕೃತಿಯಿಂದ ಇಬ್ಬರು ಕವಿಗಳ ಕವನಗಳನ್ನು ಆಯ್ದುಕೊಂಡಿದ್ದೇವೆ. ಕಾರಣ ಏನೆಂದರೆ ಇವರಿಬ್ಬರ ಕವನಗಳು ಬಹಳ ಪುಟ್ಟದಾಗಿವೆ. ಕವಿದ್ವಯರ ಹೆಚ್ಚಿನ ಮಾಹಿತಿಯೂ ಲಭ್ಯವಿಲ್ಲ. ಆದರೂ ನಮಗೆ ದೊರೆತ ಮಾಹಿತಿಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇವೆ. ಈ ಕವಿಗಳ ಬಗ್ಗೆ ಅಧಿಕ ಮಾಹಿತಿ, ಭಾವಚಿತ್ರ ಲಭ್ಯತೆ ಇದ್ದರೆ ಓದುಗರು ನಮ್ಮ ಜೊತೆ ಹಂಚಿಕೊಳ್ಳಬಹುದಾಗಿದೆ.

ವೈ.ಎಸ್.ಲೂಯಿಸ್: ಇವರು ಹುಟ್ಟಿದ್ದು ಫೆಬ್ರವರಿ ೨೩, ೧೯೨೧ರಂದು ಕೋಲಾರದಲ್ಲಿ. ಇವರ ಪೂರ್ಣ ಹೆಸರು ಯೋಹಾನ ಶ್ರೀಮಂತ ಲೂಯಿಸ್. ಬನಾರಸ್ ವಿಶ್ವ ವಿದ್ಯಾನಿಲಯದಿಂದ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ೧೯೫೦ರಲ್ಲಿ ಚಿಕಾಗೋದಲ್ಲಿ ಎಂ.ಎಸ್.ಪದವಿ. ೧೯೭೦ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್. ಡಿ. ಪದವಿ. ಮೈಸೂರಿನ ಕೇಂದ್ರ ಆಹಾರ ಸಂಶೋಧನಾಲಯದಲ್ಲಿ ವಿಜ್ಞಾನಿಯಾಗಿ ಸೇವೆ. ಗಾನ ಲಹರಿ, ಸುಗಂಧ ದ್ರವ್ಯಗಳು ಮೊದಲಾದ ನಾಲ್ಕು ಕೃತಿಗಳನ್ನು ರಚನೆ ಮಾಡಿದ್ದಾರೆ.

ಸುವರ್ಣ ಸಂಪುಟದಲ್ಲಿ ಲಭ್ಯವಿರುವ ಲೂಯಿಸ್ ಅವರ ಏಕೈಕ ಕವನ ಇಲ್ಲಿದೆ:

ಪ್ರೇಮ ಚಕ್ಷುಸ್ಸು

ನೂರು ಮುಖ ನೆರೆದಲ್ಲಿ ಕಾಣಬಲ್ಲವು ಕಣ್ಣು

ನಿನ್ನೊಂದು ಸಿರಿಮೊಗದ ಕಡುಚೆಲುವನು ;

ನೂರು ದನಿ ಮೊರೆವಲ್ಲಿ ಕೇಳಬಲ್ಲುದು ಕಿವಿಯು

ನಿನ್ನೊಂದು ಕೊರಲಿನಾ ಇನಿದನಿಯನು

 

ನೂರು ಪದ ನಡೆವಲ್ಲಿ ತಿಳಿಯಬಲ್ಲೆನು ನಾನು

ಮುಂಬರುವ ನಿನ್ನಡಿಯ ಶಬ್ದವನ್ನು ;

ಇನಿಯ, ನೂರಾರು ಜನ ನೂಕಾಡುವೆಡೆಯಲ್ಲಿ 

ಅರಿಯಬಲ್ಲೆನು ನಿನ್ನ ಸ್ಪರ್ಶವನ್ನು !

***

ಜಿ. ಗುಂಡಣ್ಣ: ಎಪ್ರಿಲ್ ೮, ೧೯೨೨ರಂದು ಚಿತ್ರದುರ್ಗ ಜಿಲ್ಲೆಯ ಜಂಜರಗುಂಟೆಯಲ್ಲಿ ಜನನ. ಕನ್ನಡದಲ್ಲಿ ಎಂ.ಎ.ಪದವಿ ಪಡೆದು ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿದ್ದರು. ಶಿವಮೊಗ್ಗ ಸರಕಾರಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ. ವಾಣಿಯ ಕೃಪೆ, ಶಿಲ್ಪ ಗಂಗೋತ್ರಿ, ಕಾರ್ಯಕರ್ಪೂರ, ಜೈಮಿನಿಭಾರತ ಸಂಗ್ರಹ ಮುಂತಾದ ಹತ್ತು ಕೃತಿಗಳನ್ನು ರಚಿಸಿದ್ದಾರೆ.

'ಸುವರ್ಣ ಸಂಪುಟ' ದಲ್ಲಿ ಲಭ್ಯವಿರುವ ಜಿ.ಗುಂಡಣ್ಣ ಅವರ ಏಕೈಕ ಕವನ ಇಲ್ಲಿದೆ.

ಸ್ಪೂರ್ತಿ ದೇವಿಗೆ

ಬಯಕೆ ಬಾಯಾರಿ ನಿನ್ನನು ನಾನು ಕರೆದಾಗ

ಬಾರದಿಹೆ, ತೋರದಿಹೆ, ದೂರವೇ ಇರುವೆ.

ನನ್ನರಿವೆ ನನಗಿರದ ಆವುದೋ ಗಳಿಗೆಯಲಿ

ತಟ್ಟನೆನ್ನಯ ಬಳಿಗೆ ಬಂದು ನಗುವೆ !

 

ನಿನ್ನಾಟಕೊಮ್ಮೊಮ್ಮೆ ಮುನಿಸು ಬರುವುದು ನನಗೆ ;

ನಿನ್ನ ಕಂಡೊಡನೆಲ್ಲ ಕರಗಿ ಅಕ್ಕರೆಯಾಗಿ

ಸಕ್ಕರೆಯ ಸವಿಯಾಗಿ ಒಲುಮೆಗಿರಿಯೇರುವುದು ;

ನಾನರಿಯದೆಯೆ ನನ್ನ ಬಯಕೆ ತೀರುವುದು !

 

ನಾನು ಕಾಮಿಸಿದಾಗ ನೀನು ಮೊಗವನೆ ತೋರೆ ;

ಮೃಣ್ಮಯದ ಭೋಗಕ್ಕೆ ಒಳಗಾಗದಿರುವೆ !

ನನಗರಿಯದಿರುವಂತೆಯೇ ಚಿನ್ಮಯದ ಪ್ರೇಮವನು

ಸುರಿಸುರಿದು ಬರುತಿರುವೆ ಕರುಣೆಯೊಲವೆ !

 

ನೀಂ ನಿತ್ಯ ಪರಿಶುದ್ಧೆ, ಸರ್ವಮಂಗಳೆ, ಜನನಿ ;

ನಾಂ ಬರಿಯ ಹಸುಗೂಸು, ಕಡುಪಾಪಿ, ಕಾಮಿ.

***

(‘ಸುವರ್ಣ ಸಂಪುಟ'ಕೃತಿಯಿಂದ ಆಯ್ದದ್ದು)