‘ಸುವರ್ಣ ಸಂಪುಟ' (ಭಾಗ ೫೩) - ಚಿದಂಬರ

‘ಸುವರ್ಣ ಸಂಪುಟ' (ಭಾಗ ೫೩) - ಚಿದಂಬರ

ಕಳೆದ ವಾರ ನಾವು ಪ್ರಕಟಿಸಿದ ಕೋ.ಚನ್ನಬಸಪ್ಪನವರ ಕವನವನ್ನು ಬಹಳಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ. ಈ ವಾರ ನಾವು 'ಚಿದಂಬರ' ಎಂದೇ ಖ್ಯಾತರಾಗಿದ್ದ ಚಿದಂಬರ ಕೃಷ್ಣ ರಾವ್ ದೀಕ್ಷಿತ್ ಅವರ ಕವನವೊಂದನ್ನು ಸಂಗ್ರಹಿಸಿ ಹಂಚಿಕೊಂಡಿದ್ದೇವೆ. ಚಿದಂಬರರ ಬಗ್ಗೆ ಎಲ್ಲೂ ಯಾವುದೇ ಸೂಕ್ತ ಮಾಹಿತಿಗಳು ದೊರೆಯುತ್ತಿಲ್ಲ. ಲಭ್ಯ ಅಲ್ಪ ಮಾಹಿತಿಗಳ ಪ್ರಕಾರ ಅವರು ಹುಟ್ಟಿದ್ದು ಜುಲೈ ೧೪, ೧೯೨೨ರಲ್ಲಿ ದೇವಿ ಹೊಸೂರು ಎಂಬ ಊರಿನಲ್ಲಿ. ಕರ್ನಾಟಕ ಕಾಲೇಜಿನಲ್ಲಿ ತಮ್ಮ ಎಂ.ಎ.ಪದವಿಯನ್ನು ಪೂರೈಸಿ ಉಪನ್ಯಾಸಕರಾಗಿದ್ದರು.

ಮುಂಬೆಳಗು, ಸೆರೆಯಾಳು ಇವರ ಕವನ ಸಂಕಲನಗಳು, ಪುತ್ರೋತ್ಸವ ಸಣ್ಣ ಕತೆಗಳ ಸಂಗ್ರಹ ಕೃತಿ. ಮುಂಬೈ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಇವರ ಬಗ್ಗೆ ಅಧಿಕ ಮಾಹಿತಿ (ಭಾವಚಿತ್ರ, ಬರಹಗಳ ಬಗ್ಗೆ) ಇದ್ದಲ್ಲಿ ಓದುಗರು ದಯಮಾಡಿ ತಿಳಿಸಬೇಕಾಗಿ ವಿನಂತಿ.  

‘ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟವಾದ ಇವರ ಏಕೈಕ ಕವನವನ್ನು ಸಂಗ್ರಹಿಸಿ ಇಲ್ಲಿ ಪ್ರಕಟಿಸಿದ್ದೇವೆ. ಓದಿ.

‘ಬುವಿಯೆ ತಾಯಿ, ಬಾನು ತಂದೆ !!’

ಬುವಿಯೆ ತಾಯಿ, ಬಾನು ತಂದೆ, ನಿಮಗೆ ವಂದನೆ !

ನಿಮ್ಮ ತೊಡೆಯ ಹಾಸಲಾಡಿ ಹಾಡಬಂದೆನೆ ॥ಪಲ್ಲ॥

ಇಳೆಯ ಒಡಲ ಬ್ರಹ್ಮವೆನಗೆ ರೂಪವಿತ್ತಿತೊ,

ಮುಗಿಲದೊರೆಯ ನೀಲಿಕೊಡೆಯು ನೆಳಲನಿತ್ತಿತೊ,

ಈ ಅನಂತ ತೊಟ್ಟಿಲೆನಗೆ ನಿದ್ದೆಕೊಟ್ಟಿತೊ,

ಬಿಸಿಲು, ಬೈಗು, ಮೋಡ, ಚುಕ್ಕೆ ಚಟ್ಟು ಕಟ್ಟಿತೊ.

೨.

ಹಾಲು ಮೆಯ್ಯ ಹಣ್ಣಿನಂಥ ಮೊಲೆಯ ಕುಡಿದೆನು

ನಿನ್ನ ಚಲುವ ಮುದ್ದು ಮೊಗವ ತುಟಿಗೆ ಹಿಡಿದೆನು

ಗೋಲು ತಿರೆಗೆ ಪಣವ ಹಚ್ಚಿ ನಡೆದೆ ನಡೆದೆನು

ಮುನ್ನು ಎಲ್ಲು ನಿಲವು ಇರದೆ ತೊಡೆಗೆ ಇಳಿದೆನು.

೩.

ಅಯ್ಯ ! ನೆಲಕೆ ಮಳೆಯನಿಳಿಸಿ ಸುಧೆಯ ಸುರಿದಿಹೆ

ಜೀವದೊಳಗೆ ಭಾವ ಮೊಳಿಸಿ ಬಗೆಯ ಕರೆದಿಹೆ

ಸೂರ್ಯ ಚಂದ್ರ ಕಣ್ಣ ತೆರೆದು ಬೆಳಕ ನೆರೆದಿಹೆ

ಏಳು ಬಣ್ಣ ರಸದ ಋಷಿಯ ಯೋಗ ಮೆರೆದಿಹೆ.

೪.

ವಿವಿಧ ಲೋಕಗಳಿಗೆ ಸಾಗಿ ನೋಡಲಿರುವೆನೆ

ನಾಕ - ಮರ್ತ್ಯ, ಯಕ್ಷ ಸೃಷ್ಟಿ ಎಲ್ಲ ಅಲೆವೆನೆ

ಬಾಳಿನುಸಿರು ಬಯಲ ತುಂಬಿ ಗಾಳಿ ತರುವೆನೆ

ಕಡಲ ಸೆರಗ ಎದೆಗೆ ಹೊಚ್ಚಿ ತೊಡೆಗೆ ಬರುವೆನೆ.

೫.

ಬಲ್ಲೆ ತಾಯಿ ನಿನ್ನ ಹಿರಿಮೆ, ನಲಿವು ಕೊಡಲಿದೆ

ಅಲ್ಲೊ ತಂದೆ, ನಿನ್ನ ಒಲುಮೆ ಎಲ್ಲಿ ಬಿಡಲಿದೆ?

ಕಂದನನ್ನು ನೆವುಳಿತೆವುಳಿ ಹರಸೆ, ‘ಮಂಗಳ'

ದನಿಯ ವೀಣೆ ಮಿಡಿಯಬಂತು, ಇಂಥ ಜೋಗುಳ !

 

ಬುವಿಯೆ ತಾಯಿ, ಬಾನು ತಂದೆ, ನಿಮಗೆ ವಂದನೆ !

ನಿಮ್ಮ ತೊಡೆಯ ಹಾಸಲಾಡಿ ಹಾಡಬಂದೆನೆ॥

(‘ಸುವರ್ಣ ಸಂಪುಟ' ಕೃತಿಯ ಕೃಪೆಯಿಂದ ಆಯ್ದ ಕವನ)