‘ಸುವರ್ಣ ಸಂಪುಟ' (ಭಾಗ ೫೭) - ಎಲ್ ಆರ್ ಹೆಗಡೆ
ಜಾನಪದ ಭೀಷ್ಮ, ನಡೆದಾಡುವ ಜಾನಪದ ವಿಶ್ವಕೋಶ ಎಂದು ಖ್ಯಾತಿ ಪಡೆದವರು ಎಲ್ ಆರ್ ಹೆಗಡೆ ಇವರು. ಇವರ ಪೂರ್ತಿ ಹೆಸರು ಡಾ. ಲಕ್ಷ್ಮೀನಾರಾಯಣ ರಾಮಕೃಷ್ಣ ಹೆಗಡೆ. ಇವರು ಜನಿಸಿದ್ದು ಜನವರಿ ೨, ೧೯೨೩ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆ ಎಂಬ ಗ್ರಾಮದಲ್ಲಿ. ರಾಮಕೃಷ್ಣ ಹೆಗಡೆ ಇವರ ತಂದೆ ಹಾಗೂ ಮಹಾಲಕ್ಷ್ಮಿ ಇವರ ತಾಯಿ. ಇವರ ಪ್ರಾಥಮಿಕ ಶಿಕ್ಷಣ ಹೊಲನಗದ್ದೆಯ ಶಾಲೆ, ಗುಡೇ ಅಂಗಡಿ ಹಾಗೂ ಕುಮಟಾದ ಗಿಬ್ ಪ್ರೌಢಶಾಲೆಯಲ್ಲಿ ನೆರವೇರಿತು. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿಯನ್ನು ಪೂರೈಸಿ, ನಂತರ ಮುಂಬೈ ವಿಶ್ವವಿದ್ಯಾನಿಲಯದಿಂದ ೧೯೪೬ರಲ್ಲಿ ಬಿ ಎ ಪದವಿಯನ್ನು ಪೂರ್ತಿಗೊಳಿಸಿದರು.
೧೯೪೯ರಲ್ಲಿ ಬಿ.ಟಿ.ಪರೀಕ್ಷೆಯಲ್ಲಿ ಉತ್ತೀರ್ಣರಾದರು. ೧೯೫೦ರಲ್ಲಿ ಪುಣೆ ವಿಶ್ವವಿದ್ಯಾನಿಲಯದಿಂದ ಎಂ ಎ ಪದವಿಯನ್ನು ಪಡೆದರು. ನಂತರ ‘ಕುಮಾರ ವ್ಯಾಸನ ಕಾವ್ಯ ಸೃಷ್ಟಿ' ವಿಷಯದಲ್ಲಿ ಪ್ರೌಢ ಪ್ರಬಂಧ ರಚಿಸಿ, ಕರ್ನಾಟಕ ವಿಶ್ವ ವಿದ್ಯಾನಿಲಯದಿಂದ ಪಿ ಹೆಚ್ ಡಿ ಪದವಿಯನ್ನು ಪಡೆದರು. ಕಾರವಾರದ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಇವರು ನಂತರದ ದಿನಗಳಲ್ಲಿ ಹೊನ್ನಾವರದ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು. ೧೯೫೧ರಲ್ಲಿ ಕುಮಟಾದ ಕೆನರಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೭೮ರಲ್ಲಿ ನಿವೃತ್ತಿ ಹೊಂದಿದರು.
ಇವರು ಉತ್ತಮ ಕವಿ ಹಾಗೂ ಕಥೆಗಾರರಾಗಿದ್ದರು. ೧೯೫೮ರಲ್ಲಿ ‘ಬಾಳ ದೀಪಾವಳಿ' ಎಂಬ ಕವನ ಸಂಕಲನ ಹಾಗೂ ೧೯೬೩ರಲ್ಲಿ ‘ಹಕ್ಕಿನರಸಣ್ಣನ ಕತೆಗಳು' ಎಂಬ ಕಥಾ ಸಂಕಲನವನ್ನು ಪ್ರಕಟಿಸಿದರು. ‘ಜನ್ನನ ಅಮೃತಮತಿ' ಎಂಬ ಸಾಹಿತ್ಯ ವಿಮರ್ಶೆ, ‘ರಾಘವಾಂಕನ ವಿಶ್ವಾಮಿತ್ರ' ಎಂಬ ಕನ್ನಡ ನವ್ಯ ವಿಮರ್ಶೆಗಳನ್ನು ರಚನೆ ಮಾಡಿದ್ದಾರೆ. ಜನಪದ ಸಾಹಿತ್ಯದಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದ ಎಲ್ ಆರ್ ಹೆಗಡೆಯವರು ೧೦ ಜನಪದ ಸಾಹಿತ್ಯ ಸಂಕಲನಗಳನ್ನು ಪ್ರಕಟಿಸಿದ್ದಾರೆ. ತಿಮ್ಮಕ್ಕನ ಪದಗಳು (೧೯೬೯), ಸುವ್ವೀ ಸುವ್ವಿ ಸುವ್ವಾಲೆ (೧೯೭೧), ಗುಮ್ಮನ ಪದಗಳು (೧೯೭೩), ಜೈನ ಭಾರತ ಕಥೆಗಳು, ಗೊಂಡರ ಪದಗಳು (೧೯೭೩), ಉತ್ತರ ಕನ್ನಡದ ಜನಪದ ಕಥೆಗಳು (೧೯೭೫), ಮಲೆನಾಡಿನ ಸೆರಗಿನ ಕಥೆಗಳು, ಹಾಡುಂಟೇ ನನ್ನ ಮಡಿಲಲ್ಲಿ (೧೯೭೬), ಕರ್ನಾಟಕ ಕರಾವಳಿಯ ಜನಪದ ಕಥೆಗಳು, ಉತ್ತರ ಕನ್ನಡದ ಗೊಂಡರು, ಉತ್ತರ ಕನ್ನಡದ ಸಿದ್ಧಿಯರು, ಲಂಕಾದಹನ, ಸಿದ್ಧಿಯರ ಕಥೆಗಳು (೧೯೭೮), ಗುಮಟೆಯ ಪದಗಳು, ಮುಕ್ರಿ ಮತ್ತು ಹೊಲೆಯರ ಪದಗಳು (೧೯೭೯) ಜನಪದ ಭಾರತ ಕಥೆಗಳು, ಕುಮರಿ ಮರಾಟಿಗರ ಕಥೆಗಳು (೧೯೮೧) ಮುಂತಾದ ಹಲವಾರು ಪ್ರಮುಖ ಕೃತಿಗಳನ್ನು ಇವರು ರಚಿಸಿದ್ದಾರೆ.
ಎಲ್ ಆರ್ ಹೆಗಡೆಯವರು ಹಲವಾರು ವೈದ್ಯ ಸಂಬಂಧಿ ಗ್ರಂಥಗಳನ್ನೂ ರಚಿಸಿದ್ದಾರೆ. ಅನುಭವ ಚಿಕಿತ್ಸೆ, ಆರೋಗ್ಯ ಧರ್ಮಪಾಲನೆ, ದನಗಳ ವೈದ್ಯ ರೂಢಿಯ ಚಿಕಿತ್ಸೆ, ಆರೋಗ್ಯವೇ ಭಾಗ್ಯ, ನಾಡ ಮದ್ದು, ಪಶುವೈದ್ಯ ರತ್ನಾಕರ, ಹೋಮಿಯೋಪಥಿ ಚಿಕಿತ್ಸೆ ಇತ್ಯಾದಿ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ೨೦೦೫ರಲ್ಲಿ ಎಲ್ ಆರ್ ಹೆಗಡೆ ಇವರು ನಿಧನ ಹೊಂದಿದರು.
‘ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಎರಡು ಕವನಗಳು ಪ್ರಕಟವಾಗಿವೆ. ರಂಪಣಿ ದೋಣಿ ಹಾಗೂ ಹೂವಿನ ಮಕ್ಕಳು. ನಾವು ಒಂದು ಕವನವನ್ನು ಇಲ್ಲಿ ಪ್ರಕಟಿಸಿದ್ದೇವೆ. ಓದಿ, ಅಭಿಪ್ರಾಯ ತಿಳಿಸಿ.
ಹೂವಿನ ಮಕ್ಕಳು
ಕುಣಿಯುತ್ತ ಮೈ ಮೈ ಥೈಥಕ ಥೈ ಥೈ
ಜಾತ್ರೆಯ ಸಮಯಕ್ಕೆ ಹಿಗ್ಗಿನ ಥೈ ಥೈ
ದೇವಿಯ ಸೇವೆಗೆ ಹೂವಿನ ಮಕ್ಕಳು
ಕುಣಿಯುತಲಿರುವರು ರೈತರ ಮಕ್ಕಳು.
ತಲೆಮೇಲೆ ಹೂವಿನ ಹಾರ ರುಮಾಲು
ಮೈಮೇಲೆ ಹೂಗಳ ಸರಗಳ ಶಾಲು
ಕುಸುಮಾಲೆ ಹೂಗಳ ಬಲೆ ಮೈಮೇಲೆ
ಗೋವೆ ಸಂಪಿಗೆಗಳ ತಲೆಗಳ ಮಾಲೆ.
ಕಾಲಿಗೆ ಕಿರುಗೆಜ್ಜೆ ಕೈಗೆ ಹೂಕೋಲು
ಹೆಜ್ಜೆಯ ಗತ್ತಿಗೆ ಕುಣಿವ ಕುಶಾಲು
ಕುಣಿಯುವ ಗತ್ತಿಲೆ ಗದ್ದೆಯನೂಳಿ
ಸುತ್ತಲು ತಿರುಗುತ ಕುಣಿಯುವರೋಳಿ.
ಬೀಜವ ಬಿತ್ತುವ ನಟನೆಯ ತಾಳಿ
ದುಡಿತದ ಧೃಢಮನದಿ ಕಳೆಯನು ಕೀಳಿ
ಬೆಳೆಯುವ ಪೈರನು ಕೋಲಲಿ ಸವರಿ
ರಾಸಿಯ ಹಾಕುವ ಕುಣಿತದಿ ಬೆವರಿ.
ಕೈಗಳೆರಡರಲು ಮೆದೆಗಳ ಹಿಡಿದು
ಥೈಥಕ ಥೈ ಥೈ ಬತ್ತವ ಬಡಿದು
ರೈತರ ಹೋರೆಯ ಕುಣಿತದ ನೋಟ
ಬಾಗುತಲೇಳುವ ಕುಣಿಯುವ ಮಾಟ.
ವನರಾಜ ಹೂಗಳ ಶೋಭೆಯ ಪಡೆದು
ತನಿಗಾಳಿ ಸುತ್ತಿಗೆ ಮೈಯೆಲ್ಲ ಮಣಿದು
ವನರಾಣಿ ಸೇವೆಗೆ ಫಲಗಳನಿಡಿದು
ಜನತಾಜನಾರ್ದನಗೆ ಮೈಯೆಲ್ಲ ದುಡಿದು.
ಭಾವುಕತನದಲಿ ಭಕ್ತಿಯಮಾಲೆ
ದೇವಕುಲದ ಮುಂದೆ ರೈತರ ಲೀಲೆ!
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)