‘ಸುವರ್ಣ ಸಂಪುಟ' (ಭಾಗ ೫೯) - ಕ. ವೆಂ. ರಾಜಗೋಪಾಲ

‘ಸುವರ್ಣ ಸಂಪುಟ' (ಭಾಗ ೫೯) - ಕ. ವೆಂ. ರಾಜಗೋಪಾಲ

ಕವಿ, ನಾಟಕಕಾರ, ನಿರ್ದೇಶಕ, ಪ್ರಾಧ್ಯಾಪಕರಾಗಿದ್ದು ‘ಕವೆಂರಾ’ ಎಂದು ಪ್ರಸಿದ್ಧಿಯಾಗಿದ್ದ ಕ.ವೆಂ. ರಾಜಗೋಪಾಲ ಇವರು ಈ ವಾರ ನಾವು ಆಯ್ದ ಕವಿ. ರಾಜಗೋಪಾಲ ಇವರು ನವೆಂಬರ್ ೧೦, ೧೯೨೪ರಂದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಾಂತಾಪುರ ಗ್ರಾಮದಲ್ಲಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರೈಸಿದರು. ನಂತರದ ಶಿಕ್ಷಣವನ್ನು ಮೈಸೂರಿನ ಮಹಾರಾಜ ಕಾಲೇಜು ಹಾಗೂ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಮುಗಿಸಿದರು. ಬೆಂಗಳೂರಿನ ಎಂಇಎಸ್ ಕಾಲೇಜು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದ ನೃತ್ಯ ಮತ್ತು ನಾಟಕ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಎಂಇಎಸ್ ಕಾಲೇಜಿನ ಪ್ರಾಂಶುಪಾಲರೂ ಆಗಿದ್ದರು. ಗೋಕಾಕ್ ಚಳುವಳಿಯ ಸಮಯದಲ್ಲಿ ಕನ್ನಡ ಚಳುವಳಿಯ ಪರವಾಗಿ ನಡೆಸಲಾಗುತ್ತಿದ್ದ ಚಟುವಟಿಕೆಗಳಿಗೆ ತಮ್ಮ ಕಾಲೇಜಿನಲ್ಲಿ ಅವಕಾಶ ಮಾಡಿಕೊಟ್ಟಿದ್ದರು.

ಕ ವೆಂ ರಾಜಗೋಪಾಲ ಇವರು ನವ್ಯ ಕಾಲದ ಸಮಯದಲ್ಲೂ, ಹಳೆಯ ಪರಂಪರೆಯ ಕಾವ್ಯ ಶೈಲಿಯತ್ತ ಆಕರ್ಷಿತರಾಗಿದ್ದರು. ಆದರೆ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಯಾವ ಸಲಹೆಯನ್ನಾದರೂ ಮುಕ್ತ ಮನಸ್ಸಿನಿಂದ ಸ್ವೀಕರಿಸಲು ತಯಾರಿದ್ದರು. ಈ ಕಾರಣದಿಂದಲೇ ರಾಜಗೋಪಾಲ ಇವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೈಯಾಡಿಸಿದ್ದರು. ಉತ್ತಮ ವಾಗ್ಮಿಯೂ ಆಗಿದ್ದರು. ಅಧ್ಯಾಪಕರಾಗಿದ್ದ ಸಮಯದಲ್ಲಿ ತಮ್ಮ ವಿದ್ಯಾರ್ಥಿಗಳಲ್ಲಿ ಅಡಗಿದ್ದ ಸುಪ್ತ ಪ್ರತಿಭೆಗಳನ್ನು ಹೊರತರುವಲ್ಲಿ ಶ್ರಮಿಸುತ್ತಿದ್ದರು. ಘಾಟಾನುಘಾಟಿ ಸಾಹಿತಿಗಳ ಒಡನಾಟವನ್ನೂ ಹೊಂದಿದ್ದರು.

‘ಅಂಜೂರ' ರಾಜಗೋಪಾಲ ಇವರ ಮೊದಲ ಕವನ ಸಂಕಲನ. ಈ ಕೃತಿಗೆ ಗೋಪಾಲಕೃಷ್ಣ ಅಡಿಗರು ಮುನ್ನುಡಿ ಬರೆದಿದ್ದರು. ಚಿ. ಶ್ರೀನಿವಾಸರಾಜು ಅವರು ೧೯೭೧ರಲ್ಲಿ ‘ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕನ್ನಡ ಸಂಘ' ಆರಂಭಿಸಿದಾಗ, ಸಂಘದ ಮೊದಲ ಪ್ರಕಟಣೆಯಾಗಿ ‘ನದಿಯ ಮೇಲಿನ ಗಾಳಿ' ಎಂಬ ರಾಜಗೋಪಾಲರ ಕವನ ಸಂಕಲನವನ್ನು ಹೊರತಂದಿತು. ಇವರ ಕೆಲವು ಕಥಾ ಸಂಕಲನಗಳು : ಎಣಿಸದ ಹಣ, ನಿಸರ್ಗದ ನೆನಪು, ಆಸೆಯ ಶಿಶು, ರಾಗ-ಜಯಂತಿ, ಅರ್ಧ ತೆರೆದ ಬಾಗಿಲು ಇತ್ಯಾದಿ. ಕವನ ಸಂಕಲನಗಳು : ಮೇ ತಿಂಗಳ ಅಬ್ಬರ, ಈ ನೆಲದ ಕರೆ ಇತ್ಯಾದಿ, ನಾಟಕಗಳು: ಅತ್ತೆಯ ಕಾಂಚಿ (ಅನುವಾದ), ಅನುಗ್ರಹ, ಮಾಯಾಕೋಲಾಹಲ ಇತ್ಯಾದಿ.

ರಾಜಗೋಪಾಲರು ಕೆಲವು ಸಂಶೋಧನಾ ಕೃತಿಗಳನ್ನೂ ರಚನೆ ಮಾಡಿದ್ದಾರೆ. ಅವುಗಳಲ್ಲಿ ಬೌದ್ಧ ಮತದಲ್ಲಿ ಯಕ್ಷಕಲೆ, ಒಕ್ಕಲಿಗರ ಆಚರಣೆಗಳು, ಗಂಗರ ಇತಿಹಾಸ ಪ್ರಮುಖವಾದವುಗಳು. ರೇಡಿಯೋದಲ್ಲಿ ನಾಟಕಗಳನ್ನು ನಡೆಸಿಕೊಡುವುದರ ಮೂಲಕ ಇವರು ಬಹಳ ಪ್ರಸಿದ್ಧಿಯನ್ನು ಪಡೆದಿದ್ದರು. ರಂಗಭೂಮಿಯಲ್ಲೂ ಹಲವಾರು ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಜನಪ್ರಿಯರಾಗಿದ್ದರು. ರಾಜಗೋಪಾಲ ಇವರು ತಮ್ಮ ೯೦ನೇ ವಯಸ್ಸಿನಲ್ಲಿ ಅಕ್ಟೋಬರ್ ೨೦, ೨೦೧೪ರಲ್ಲಿ ಬೆಂಗಳೂರಿನಲ್ಲಿ ನಿಧನ ಹೊಂದಿದರು.

‘ಸುವರ್ಣ ಸಂಪುಟ’ದಲ್ಲಿ ಇವರದೊಂದು ಪುಟ್ಟ ಕವನ ಪ್ರಕಟವಾಗಿದೆ. ಅದನ್ನು ಆಯ್ದು ಇಲ್ಲಿ ನೀಡಲಾಗಿದೆ. ಓದಿ…

ಹೂ ತುಂಬಿದ ಮರದ ನೆರಳು

ಹೂ ತುಂಬಿದ ಮರದ ನೆರಳು ಹೂವಿಗಿಂತ ಹಗುರ

ನೆಳಲ ಹೂತಳದಿಂದ ಹೆರಳ

ಹೂತನಕ ಬಹು ಸುಂದರ

ತೆರೆದ ಹೂಮನದ ಸಿಂಗಾರಕ್ಕೆ ಹೊಂಗನಸಿನ ಹಾರ

ಹೂವಿನ ಹೆಡೆಯಾಡುವ ನೆಳಲಿನ ನಗೆ ಹೂವಿನ ಸ್ವರ!

 

ನೆಳಲ ಸಂಭ್ರಮದುಸಿರ ಬಲೆಯೊಳಗೆ ಹೂವು ನೆಳಲು

ತಿಳಿನೀರಿನೆವೆಯ ನೆಳಲಲ್ಲಿ ಸೊಗದ-

ಕನಸಿನ ಪಚ್ಚೆ ಮರಳು

ನೆಳಲು ಹಸುರಾಗಿ ಕನಸು ಹೂವಾಗಿ ತೇಲಿ ಬರಲು

ತಳದ ಹೂಮರಳ ನೆಳಲಿನ ಮುಡಿಗೆ ನಗುವ ಬಂಗಾರದರಳು !

 

ಹೂ ಮುಡಿವ ಸಡಗರದ ನೆಳಲ ಮಣ್ಣಿನ ಬೆರಳು ಅರಳುತಿರಲು 

ಮಣ್ಣು ನೆಳಲಿನ ನಗೆಯ ತಾಯಿ ಕರುಳಿನ ಕರೆಯ

ಬಂಗಾರದರಳ ಕತೆಯನು ಕಟ್ಟಿ ಮುಡಿಯುತಿರಲು

ನೆಳಲು ಹಸಿರುಡಿಗೆಯಲಿ ನಿಂತು ಹಣ್ಣ ಬಯಸುತಿಹುದು !

(‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವನ)

Comments

Submitted by venkatesh Thu, 03/03/2022 - 08:26

'ನದಿಯಮೇಲಿನ ಗಾಳಿ ಕವನ ಸಂಕಲನ' ನನಗೆ ಪ್ರಿಯವಾದ ಕವಿತಾ ಸಂಗ್ರಹ. ಕ್ರೈಸ್ಟ್ ಕಾಲೇಜಿನಲ್ಲಿ ಶ್ರೀನಿವಾಸ್ ರಾಜು ರವರ  ಕ್ರೈಸ್ಟ್ ಕಾಲೇಜ್ ಕನ್ನಡ ಸಂಘವನ್ನು ಕಟ್ಟಿ ಬೆಳಸುವ  ಕಾರ್ಯದಲ್ಲಿ ಕೈಗೂಡಿಸಿ ದುಡಿದ ನನ್ನ ಅಣ್ಣ,  ಪ್ರೊ. ಎಚ್ ಆರ್.ರಾಮಕೃಷ್ಣ  ರಾವ್,  ರಾಜಗೋಪಾಲ್ ರ ಪ್ರಿಯರು. ಹಾಗಾಗಿ ನಮಗೂ ಮನೆಯಲ್ಲಿ ರಾಜಗೋಪಾಲರ ಪುಸ್ತಕಗಳು ಓದಲು ಸಿಕ್ಕವು. 

Submitted by venkatesh Fri, 04/08/2022 - 08:31

ಸಂಪದ ದಲ್ಲಿ ಒಂದು ವಿಷಯ ಹೇಳಬೇಕಿನ್ನಿಸುತ್ತದೆ. ಇಲ್ಲಿ ಬರೆದ ಲೇಖನಗಳ ಬಗ್ಗೆ ಒಂದು ಮಾತನ್ನೂ ಯಾರೂ ಹೇಳದಿರುವುದು. ಇದನ್ನು ತಾವು ಒತ್ತುಕೊಡಬೇಕು. ಮತ್ತು ಸಂಪಾದನೆ ಮಾಡಲು ಅವಕಾಶ ಕೊಡುವುದು ಆರೋಗ್ಯಕರ ಬಳವಣಿಗೆ. ಬೇರೆ ಇ-ಪತ್ರಿಕೆಗಳ ತರಹವಿಲ್ಲದ ವಿಶೇಷತೆ ಇಲ್ಲಿ ಕಾಣಸಿಗುತ್ತದೆ. ಆದರೆ ಒಂದು ಚಿಕ್ಕ ತಪ್ಪನ್ನೂ ಸರಿಪಡಿಸಲು ಆಗದೆ ಇದ್ದರೆ ಹೇಗೆ  ? ಅದನ್ನು ಗಮನಿಸುತ್ತೀರಿ ಎಂದು ಅಂದುಕೊಳ್ಳಲೇ ?

ಏಕೆಂದರೆ ಈಗ ಎಲ್ಲರೂ ಗೂಗಲ್ ಮಾಧ್ಯಮ ಬಳಸಿ ಬರೆವಣಿಗೆಯ ಕೆಲಸ ಮಾಡಿಕೊಳ್ಳುತ್ತಾರೆ. ಕನ್ನಡದಲ್ಲಿ ಬರೆಯುವುದು ಕೆಲವೇ ಜನರಿಗೆ ಮಾತ್ರ ಸಾಧ್ಯವಾಗುತ್ತಿದೆ. ಅದಕ್ಕಾಗಿ ನಿಮಗೆ ಮತ್ತೊಮ್ಮೆ ಬೇಡುವುದೇನೆಂದರೆ, ದಯಮಾಡಿ  ಒಮ್ಮೆ ತಪ್ಪುಗಳನ್ನು ಸರಿಪಡಿಸುವ ಪ್ರಕ್ರಿಯೆಗೆ ಒತ್ತುಕೊಡಿ. 

-ಎಚ್ಚಾರೆಲ್

Submitted by Ashwin Rao K P Fri, 04/08/2022 - 17:56

ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

ಮಾನ್ಯರೇ,

ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ನನ್ನ ಲೇಖನಕ್ಕೆ ನೀವು ಬರೆದ ಪೂರಕ ಮಾಹಿತಿಗೆ ಕೃತಜ್ಞತೆಗಳು. ಬರಹದಲ್ಲಿ ನನ್ನಿಂದ ಏನಾದರೂ ತಪ್ಪುಗಳಾಗಿದ್ದಲ್ಲಿ ತಾವು ಸ್ಪಷ್ಟವಾಗಿ ತಿಳಿಯಪಡಿಸಿದ್ದಲ್ಲಿ ಅದನ್ನು ಸರಿ ಪಡಿಸಲು ನಾನು ತಯಾರಿದ್ದೇನೆ. ದಯವಿಟ್ಟು ತಿಳಿಸಬೇಕಾಗಿ ವಿನಂತಿ. ವಂದನೆಗಳು

ಅಶ್ವಿನ್ ರಾವ್

Submitted by venkatesh Thu, 04/14/2022 - 20:15

ಸಂಪದದಲ್ಲಿ ಅತ್ಯುತ್ತಮ ಲೇಖನಗಳಲ್ಲಿ ಹಲವು ನಿಮ್ಮ ಲೇಖನಿಯಿಂದ ಬಂದವು. ಅವು ಚೆನ್ನಾಗಿ ಕಾಣಿಸಿಕೊಳ್ಳುತ್ತವೆ. ನಾನು ಹೇಳಬಯಸುವುದೆಂದರೆ, ಸಂಪಾದನೆ ಮಾಡಲು ಸ್ವಲ್ಪ ಅನುವುಮಾಡಿಕೊಡಿ, ಎಂದು. ಕೆಲವು ತಪ್ಪುಗಳು ನನ್ನಂತಹವರಿಂದ  ಆಗಬಹುದು. ಅವನ್ನು ಸರಿಪಡಿಸಲು ಸಾಧ್ಯವಾಗದೆ ಇದ್ದರೆ ಹೇಗೆ ? ಹಿಂದೆ ನಾನು ಬರೆದ ಲೇಖನದಲ್ಲಿ ಕೆಲವು ಪದಗಳನ್ನು ಸರಿಪಡಿಸಲು ನಾನು ನಸುಕು.ಡಾಟ್. ಕಾಂ ನ ಮುಖ್ಯಸ್ಥರಿಗೆ ತಿಳಿಸಿದಾಗ ಅವರು ಸರಿಪಡಿಸಿದರು. ದಯಮಾಡಿ, ಸಂಪಾದನೆಯ ಒಂದು ಗುಂಡಿ ಸ್ಥಾಪಿಸಿ.