‘ಸುವರ್ಣ ಸಂಪುಟ' (ಭಾಗ -೫) - ಮಾಸ್ತಿ ವೆಂಕಟೇಶ ಅಯ್ಯಂಗಾರ್

‘ಸುವರ್ಣ ಸಂಪುಟ' (ಭಾಗ -೫) - ಮಾಸ್ತಿ ವೆಂಕಟೇಶ ಅಯ್ಯಂಗಾರ್

ಕಳೆದ ವಾರ ನಾವು ಡಿ.ವಿ.ಗುಂಡಪ್ಪನವರ ಎರಡು ಕವನಗಳನ್ನು 'ಸುವರ್ಣ ಸಂಪುಟ’ ಪುಸ್ತಕದಿಂದ ಆಯ್ದು ಪ್ರಕಟ ಮಾಡಿದ್ದೆವು. ಕೆಲವು ಓದುಗರು ಡಿವಿಜಿಯವರ ಇನ್ನೂ ಕೆಲವು ಕವನಗಳನ್ನು ಪ್ರಕಟಿಸಿ ಎಂದು ಪ್ರೀತಿಯಿಂದ ಒತ್ತಾಯಿಸಿದ್ದಾರೆ. ಹಳೆಯ ಖ್ಯಾತನಾಮ ಕವಿಗಳ ಅಪರೂಪದ ಕೆಲವು ಕವನಗಳು ಎಲ್ಲೂ ಓದಲು ಸಿಗುವುದಿಲ್ಲ. ಸಾಧ್ಯವಾದಷ್ಟು ಕವನಗಳನ್ನು ಪ್ರಕಟಿಸಿ ಎನ್ನುವುದು ಅವರ ಅಳಲು. ನಮಗೂ ಪ್ರಕಟಿಸಲು ಆಸೆಯಿದೆ. ಆದರೆ ಇನ್ನೂ ನೂರಾರು ಕವಿಗಳ ಕವನಗಳನ್ನು ಪ್ರಕಟಿಸಲು ಬಾಕಿ ಇರುವುದರಿಂದ, ಎಲ್ಲಾ ಕವಿಗಳ ಕವನಗಳ ಒಂದು ಸುತ್ತು ಮುಗಿದ ಬಳಿಕ ಮತ್ತೆ ಉಳಿದ ಕವನಗಳನ್ನು ಪ್ರಕಟಿಸುವ ಬಗ್ಗೆ ಯೋಚಿಸುತ್ತೇವೆ. 

ಈ ವಾರ ನಮ್ಮ ಆಯ್ಕೆಯ ಕವಿ ಮಾಸ್ತಿ ವೆಂಕಟೇಶ ಅಯ್ಯಂಗಾರ್. ಅವರ 'ಕೊಂಬು' ಎನ್ನುವ ಕವನವನ್ನು ಪ್ರಕಟಣೆಗೆ ಎತ್ತಿಕೊಂಡಿದ್ದೇವೆ. ಓದುವ ಸುಖ ನಿಮ್ಮದಾಗಲಿ. ಅದಕ್ಕೂ ಮೊದಲು ಮಾಸ್ತಿ ಅವರ ಕಿರು ಪರಿಚಯ ನಿಮಗಾಗಿ..

ಮಾಸ್ತಿ ವೆಂಕಟೇಶ ಅಯ್ಯಂಗಾರ್: 'ಮಾಸ್ತಿ' ಕನ್ನಡದ ಆಸ್ತಿ ಎನ್ನುವುದು ಸದಾ ಕಾಲ ಪ್ರಚಲಿತದಲ್ಲಿರುವ ನುಡಿ. ಕನ್ನಡ ನಾಡು ನುಡಿಗೆ ಇವರು ನೀಡಿದ ಕೊಡುಗೆ ಅಪಾರ. ಇವರು ಹುಟ್ಟಿದ್ದು ಜೂನ್ ೬, ೧೮೯೧ರಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಎಂಬ ಗ್ರಾಮದಲ್ಲಿ. ಒಂದು ಕಾಲದ ಶ್ರೀಮಂತ ಮನೆತನ, ಆದರೆ ಇವರು ಹುಟ್ಟಿದಾಗ ಬಡತನ. ವಿದ್ಯಾರ್ಜನೆಗಾಗಿ ವೆಂಕಟೇಶರು ವಾರಾನ್ನ ಮಾಡುತ್ತಾ ಕಲಿಯಬೇಕಾಯಿತು. ಎಷ್ಟೇ ಬಡತನವಿದ್ದರೂ ಇವರ ವಿದ್ಯೆಗೆ ಬಡತನವಿರಲಿಲ್ಲ. ಶಾಲೆಯಲ್ಲಿ ಒಂದನೇ ಸ್ಥಾನವನ್ನು ಯಾವತ್ತೂ ಬಿಟ್ಟುಕೊಡದೇ ಬಂಧುಗಳ ನೆರವಿನಿಂದ ಓದಿದರು. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದರು. ಬ್ರಿಟೀಷರ ಸಮಯದಲ್ಲಿ ಮೈಸೂರು ಸರಕಾರದಲ್ಲಿ ಜಿಲ್ಲಾಧಿಕಾರಿಯಾಗಿ (ಡೆಪ್ಯುಟಿ ಕಮೀಷನರ್) ನಿಯುಕ್ತಿ, ರೆವೆನ್ಯೂ ಕಮೀಷನರ್ ಆಗಿಯೂ ಕೆಲಸ ನಿರ್ವಹಣೆ. 

‘ಶ್ರೀನಿವಾಸ' ಎಂಬ ಕಾವ್ಯವಾಮದಲ್ಲಿ ಮಾಸ್ತಿಯವರು ಸಾಹಿತ್ಯ ರಚಿಸಿದ್ದಾರೆ. ಇವರು ಸಣ್ಣ ಕಥೆ, ವಿಮರ್ಶೆ, ಕಾದಂಬರಿ, ಕವನಗಳು, ನಾಟಕಗಳನ್ನು ರಚನೆ ಮಾಡಿದ್ದಾರೆ. ರಂಗನ ಮದುವೆ, ಮಾತುಗಾರ ರಾಮ (ಸಣ್ಣ ಕಥೆಗಳ ಸಂಗ್ರಹ), ಸುಬ್ಬಣ್ಣ, ಶೇಷಮ್ಮ (ನೀಳ್ಗತೆಗಳು), ಅರುಣ, ಭಿನ್ನಹ, ಸಂಕ್ರಾಂತಿ, ನವರಾತ್ರಿ ಇತ್ಯಾದಿ(ಕವನ ಸಂಕಲನಗಳು), ಯಶೋಧರಾ, ಕಾಕನಕೋಟೆ (ನಾಟಕಗಳು), ರವೀಂದ್ರನಾಥ ಠಾಗೋರ್ (ಜೀವನ ಕಥನ), ಚೆನ್ನ ಬಸವನಾಯಕ, ಚಿಕವೀರ ರಾಜೇಂದ್ರ(ಕಾದಂಬರಿ) ಇವರ ಆಯ್ದ ಬರಹಗಳು. 

೧೯೮೩ರಲ್ಲಿ ಇವರ ಚಿಕವೀರ ರಾಜೇಂದ್ರ ಎಂಬ ಕಾದಂಬರಿಗೆ ಜ್ಞಾನ ಪೀಠ ಪ್ರಶಸ್ತಿಯ ಗೌರವ, ೧೯೬೮ರಲ್ಲಿ ಸಣ್ಣ ಕಥೆಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ಡಿ.ಲಿಟ್ ಪದವಿಯ ಗೌರವ ದೊರೆತಿದೆ. ೧೯೨೯ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ‘ಶ್ರೀನಿವಾಸ' ಎಂಬ ಅಭಿನಂದನಾ ಗ್ರಂಥವನ್ನು ೧೯೭೨ರಲ್ಲಿ ಇವರಿಗೆ ಸಮರ್ಪಣೆ ಮಾಡಲಾಗಿದೆ. ಮಾಸ್ತಿಯವರು ತಮ್ಮ ೯೫ನೇ ವಯಸ್ಸಿನಲ್ಲಿ ಜೂನ್ ೬, ೧೯೮೬ರಲ್ಲಿ ಬೆಂಗಳೂರಿನಲ್ಲಿ ನಿಧನ ಹೊಂದಿದರು.

***

ಕೊಂಬು

ಅರಳು ಮಲ್ಲಿಗೆ, ಮಲ್ಲಿಗೆವಾಳು,

ಮಲ್ಲಿಗೇನಹಳ್ಳಿ ;

ಸಿರಸಿ, ಸಂಪಗೆ, ಕೂಡು ಮಲ್ಲಿಗೆ,

ಹುಲ್ಲೆಹಳ್ಳಿ, ಹರವು.

 

ಮೇಲು ಹುಲುವತಿ, ಕೀಳು ಹುಲುವತಿ,

ಮಾದಲ, ಮುತ್ತೋಣಿ ;

ಕಾಳಕುಂಟಿ, ತಾವರೆಕೆರೆ, ಹಿಪ್ಪಲ,

ಕೂದವಳ್ಳಿ, ಕೊಪ್ಪ.

 

ಸಿರಿಯೂರು, ಸಿರಿಯಂಗಳ, ಬೆಳವಲ,

ಸೊಗದವಾಣಿ, ತೆರವಿ ;

ಮರಳವಾಡಿ, ಮಧುಗಿರಿ, ಬನವಾಸಿ,

ಅಗಳಿ, ಅಮೃತೂರು.

 

ಬೆಳಧರ, ಬೆಳ್ಳಿಯ ಬಟ್ಟಲು, ಬೆಳವಿ,

ನೆಲಮಾವು, ಹಗರಿ,

ತಳಕು, ಬೆಳುಗೊಳ, ಕಿರಿಜಾಜಿಯೂರು,

ಬೆಳಿಗೆರೆ, ಹೆಬ್ಬಾಲೆ ;

 

ಪೂನಾಡು, ಸಿರಿವಾಸಿ, ಸಕ್ಕರೆ,

ನಿಶನ, ತಿಂಗಳೂರು;

ಮಾಣಿಕಧರ, ಮಂಜೇಶ್ವರ, ಕೋಗಿಲೆ,

ಎಸಳೂರು, ಕಳಸ.

 

ಏನು ಹೆಸರು ಇವು, ನಮ್ಮ ತಾತದಿರು

ನಾಡೊಳಿಟ್ಟ ಹೆಸರು ;

ಜೇನ ಸರಿಯವೊಲು ಇನಿದು, ಬಲ್ಲವರ

ಹಾಡಿನವೊಲು ಮೆಲಿತು.

 

ಕೇಳುವ ಕಿವಿ ನಲಿಯುತಲಿದೆ, ನುಡಿಯುವ

ನಾಲಿಗೆ ನಲಿಯುತಲಿದೆ;

ಬಾಳೆಂತಿರೆ ಹೆಸರಿಂತಾಯ್ತೆಂಬೆನೆ

ಸೋಲುತಲಿದು ನೆನಸು.

 

ನಾಡೊಳಂದೊಗೆದ ಸೊಗದರವಿಂದದ

ಮಾಧುರ ಮಕರಂದ

ಕೋಡಿಯಿಂದುದುರಿ ಹನಿ ಹರಳಾಯಿತು

ಮೋದವೀಯಲಿಂದು.

 

ಅಣ್ಣತಮ್ಮದಿರೆ, ಅಕ್ಕತಂಗಿಯರೆ,

ಹೇಳುವಿರೀ ಹೆಸರ ;

ಚೆನ್ನವಾಗಿಹುದು ಈಗಳು ಹೆಸರು ;

ಬಾಳು ಅಂತೆ ಇಹುದೇ?

 

ಚೆಲುವ ಹೆಸರುಗಳ ನುಡಿವ ನಾಲಗೆಯ 

ಬಾಳುವೆ ಬರಿದಾಯ್ತೇ,

ಕಳೆದುಕೊಂಡೆವೇ ಹಿರಿಮೆಯ ಚಂದ್ರನ

ಮೂಳವಾಯ್ತೆ ಬದುಕು.

 

ಬನ್ನಿ ಅಣ್ಣದಿರೆ ಬನ್ನಿ ತಮ್ಮದಿರೆ

ಬನ್ನಿ ಸೋದರಿಯರೆ ;

ಬನ್ನಿರಿ ಎಲ್ಲರು ಆಣೆ ಇಟ್ಟುಕೊಳ್ಳಿ

ಚೆನ್ನ ಮಾಡಿ ಬಾಳ.

 

ಹೆಸರಿನ ಚೆಲುವನು ನಾಡಿನ ಬದುಕಲಿ

ಮರಳಿ ಮೊಳೆಯಿಸಿರಿ;

ಒಸಗೆಯ ತನ್ನಿರಿ ತಾಯ್ನಾಡಿರವಿಗೆ,

ತರಿಸಿ ನಗೆಯ ಮೊಗಕೆ.

 

ದುಡಿಯುವೆವೆನ್ನಿರಿ ದುಡಿಯಿರಿ ಬನ್ನಿರಿ

ನಾಡಿಗೆ ನುಡಿಗಾಗಿ ;

ಕೂಡಿರಿ ಹಟವನು ಕೂಡಿ ಕೈಯಾಣೆಯ;

ಆಡುವ ನುಡಿ ನಡೆಸಿ.

 

ಕತ್ತಲು ಮುಚ್ಚಿಹ ಬಾಳಿರುಳಾಳಕೆ

ಆಸೆಯ ಚಂದ್ರನನು 

ಮತ್ತೆ ತನ್ನಿರಿ, ಬೆಳಕಲಿ ನಡೆಯಿರಿ;

ಹೇಸಿ ಸೋಂಬತನವ.

 

ಮುತ್ತು ಮಾಣಿಕವ ಜೋಳದ ತೆರದಲಿ

ಹರಿಯಿರಿ ನಾಡಿನಲಿ;

ಉತ್ತಮ ಚರಿತೆಯ ಚಿತ್ರಪತಾಕೆಯ

ಮೆರೆಯಿಸಿ ಬಾನಿನಲಿ.

 

ಕೃಪೆ: ‘ಸುವರ್ಣ ಸಂಪುಟ'