‘ಸುವರ್ಣ ಸಂಪುಟ' (ಭಾಗ ೬೧) - ಎಂ. ಅಕಬರ ಅಲಿ

‘ಸುವರ್ಣ ಸಂಪುಟ' (ಭಾಗ ೬೧) - ಎಂ. ಅಕಬರ ಅಲಿ

ಈ ವಾರ ನಾವು 'ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವಿ ಡಾ.ಎಂ. ಅಕಬರ ಅಲಿ ಇವರು. ಇವರು ನವೋದಯ ಕಾಲದ ಖ್ಯಾತ ಚುಟುಕು ಕವಿ ಎಂದು ಹೆಸರಾದವರು. ಇವರು ಮಾರ್ಚ್ ೩, ೧೯೨೫ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಎಂಬ ಊರಿನಲ್ಲಿ ಜನಿಸಿದರು. ಇವರ ತಂದೆ ಅಪ್ಪಾ ಸಾಹೇಬ ಹಾಗೂ ತಾಯಿ ಅಮೀರಬಿ. 

ಅಕಬರ ಅಲಿ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಉಳ್ಳಾಗಡ್ಡಿ ಖಾನಾಪುರದಲ್ಲಿ ಉರ್ದು ಮಾಧ್ಯಮದಲ್ಲಿ ಪೂರೈಸಿದರು. ನಂತರ ೫ ನೇ ತರಗತಿಗೆ ಬೆಳಗಾವಿಯ ಜಿ ಎ ಪ್ರೌಢ ಶಾಲೆಗೆ ಸೇರಿದರು. ಇಲ್ಲಿ ಅವರು ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿಯ ತನಕ ಓದಿದರು. ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿ ಎ (ಆನರ್ಸ್) ಪದವಿಯನ್ನು ಪಡೆದು, ಪುಣೆಯ ವಿಶ್ವ ವಿದ್ಯಾನಿಲಯದಲ್ಲಿ ಎಂ ಎ ಪದವಿಯನ್ನು ಗಳಿಸಿದರು. ಅಧ್ಯಯನ ವಿಭಾಗದಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದ ಅಲಿಯವರು ೧೯೮೩ರಲ್ಲಿ ‘ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯ ಸತ್ವ’ ಎಂಬ ಮಹಾ ಪ್ರಬಂಧವನ್ನು ಮಂಡಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿ ಎಚ್ ಡಿ ಪದವಿಯನ್ನು ಪಡೆದರು. 

ಕಾರವಾರದ ಶಾಲೆಯೊಂದರಲ್ಲಿ ಶಿಕ್ಷಕರಾಗುವ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಅಲಿಯವರು ನಂತರ ಮೈಸೂರು ವಿವಿಯ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಅಕಬರ ಅಲಿ ಅವರು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪ್ರವರ್ತಕ ಸಂಘದ ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾಗಿ, ಜಿಲ್ಲಾ ಸಾಹಿತ್ಯ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದವರು. ರಾಜ್ಯ ಪಠ್ಯ ಪುಸ್ತಕ ನಿರ್ದೇಶನಾಲಯದ ಕಿರಿಯರ ವಿಶ್ವಕೋಶವಾದ ‘ಜ್ಞಾನ ಗಂಗೋತ್ರಿ'ಯ ಎಂಟನೆಯ ಸಂಪುಟದ ಸಂಪಾದಕ ಮಂಡಳಿಯ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡಮಿ ಸದಸ್ಯರಾಗಿ (೧೯೮೧-೮೩) ರಲ್ಲಿ ಸೇವೆ ಸಲ್ಲಿಸಿದ್ದಾರೆ.

ಅಕಬರ ಅಲಿ ಇವರು ೧೫ ಕ್ಕೂ ಅಧಿಕ ಕೃತಿಗಳನ್ನು ರಚನೆ ಮಾಡಿದ್ದಾರೆ. ಇವರು ‘ವಿಷ ಸಿಂಧು (೧೯೫೧), ಅನ್ನ, ನವಚೇತನ (೧೯೬೧), ಸುಮನಸೌರಭ (೧೯೬೫), ಗಂಧಕೇಶ್ವರ (೧೯೭೨), ತಮಸಾ ನದಿ ಎಡಬಲದಿ (ಸಮಗ್ರ) ಹಾಗೂ ಅಕಬರ ಅಲಿಯವರ ಚುಟುಕಗಳು (೧೯೮೯) ಎಂಬ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ‘ನಿರೀಕ್ಷೆಯಲ್ಲಿ’ ಎಂಬ ಕಾದಂಬರಿಯನ್ನು ಇವರು ೧೯೪೨ರಲ್ಲಿ ರಚನೆ ಮಾಡಿದ್ದಾರೆ. ‘ಒಂದು ರೋಚಕ ಪಯಣ’ ಇದು ಇವರ ಕಿರು ಆತ್ಮ ವೃತ್ತಾಂತ.

ಅಕಬರ ಅಲಿಯವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ‘ಸುಮನ ಸೌರಭ’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ (೧೯೬೭), ಹುಬ್ಬಳ್ಳಿಯ ಜಗದ್ಗುರು ಮೂರು ಸಾವಿರ ಮಠದಿಂದ ಬಹುಮಾನ, ೧೯೮೪ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಿವಿಜಿ ಮುಕ್ತಕ ಪ್ರಶಸ್ತಿ, ೧೯೮೪ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ. ಇವರು ೧೯೮೯ರಲ್ಲಿ ಒಂದು ಅವಧಿಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ೨೦೧೧ರಲ್ಲಿ ಸಂಕೇಶ್ವರದಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರು ತಮ್ಮ ೯೨ನೇಯ ವಯಸ್ಸಿನಲ್ಲಿ ಮೈಸೂರಿನಲ್ಲಿ (ಫೆಬ್ರವರಿ ೨೧, ೨೦೧೬) ನಿಧನ ಹೊಂದಿದರು.

‘ಸುವರ್ಣ ಸಂಪುಟ' ದಲ್ಲಿ ಇವರ ಎರಡು ಕವನಗಳು ಪ್ರಕಟವಾಗಿವೆ. ಗಾಳಿ ಮರ ಮತ್ತು ಗಿರಿಯಲ್ಲಿ ಹೂಬಿಸಿಲು. ನಾವು ಇವರ ಒಂದು ಕವನವನ್ನು ಆಯ್ದು ಪ್ರಕಟ ಮಾಡಿದ್ದೇವೆ. ಓದಿ ಪ್ರತಿಕ್ರಿಯೆ ನೀಡಲು ಮರೆಯದಿರಿ.

ಗಾಳಿಮರ

೧.

ಢರ್ರೆಂದು ಡುರುಕಿಯ ಹೊಡೆದು ಕಾಲು ಕೆದರಿ,

ಟಣ್ಣನೇ ಪುಟಿನೆಗೆದು ಮೈಮೇಲೆ ಹಾರಿ,

ಸಿಕ್ಕುಸಿಕ್ಕುದನೆಲ್ಲ ಸಿಗಿದುಹಾಕುವೆನೆಂದು

ಭರಭರಾಟಿಲಿ ಹೊರಟ ತುಂಟ ಗೂಳಿ,

ಈ ಕಡಲ ಗಾಳಿ !

ಅದ ಕಂಡು ಬಲು ಬೆದರಿ

ಮೈಯ ಮುದರಿ,

ಬಿದ್ದು ಕೊಂಡಿರಲಿತ್ತ ಬಡಪಾಯಿ ಭೂಮಿ

‘ತನಗಿನ್ನು ಗತಿಯಾರು?’ ಎಂದು ಹೌಹಾರಿ !

ಮೈದೋರಿದದು ಮಧ್ಯೆ ಈ ವೃಕ್ಷ ವೀರ,

ಅಭಯಂಕರ !

೨.

ನಗುವಿರದ ಬಿಗುವಿರದ

ಅಳುವಿರದ ಅಳುಕಿರದ

ಹೂವು-ಹಣ್ಣುಗಳಿರದ

ಈ ಅಸಾಮಾನ್ಯ ಮರ

ಸ್ಥಿತಪ್ರಜ್ಞನ ತೆರ !

ನೆಲದಿ ಕಾಲೂರಿದರು

ಮುಗಿಲ ಮುದ್ದಿಡುವಂಥ ನಿಲವು-ನೇರ !

ರೋಮ -ರೋಮಾಂಚನದಿ ನಿಶಾನಿಯ ಹೆಸರ !

ಪುರುಷಾಮೃಗದ ಪಾಲಿನ ಕೋಟ್ಯಾಂತರ ಲಿಂಗದ ವಿಸರ !

೩.

ಬೀಸುಗಾಳಿಯ ಹೊಳೆಗೆ ಒಡ್ಡಕಟ್ಟಲು ಬಯಸಿ 

ಸಹಸ್ರಬಾಹುವದೆನಿಸಿ ತೋಳ ಬೀಸಿ,

ಧೃತಿಗೆಡದೆ ನಿಂತಿಹುದು ಏಕಾಂಗವೀರ !

ಅದಕೆಂದೆ ಜನ ಕರೆದಿತೇನೋ ಇದನು

ಗಾಳಿ-ಮರ !

ಅಥವಾ ಬಗೆದಿತೊ ತಾನು

ಬಡಿದಿದೆಯೆಂದು ಗಾಳಿ - ಗರ ?!

೪.

ಅಂತು ಏನೇ ಇರಲಿ;

ಇದು ಖಚಿತ, ನೆನಪಿರಲಿ ;

ಹತ್ತರೊಳಗೊಂದಾಣಿ ಮುತ್ತು ಈ ಕಡಲತೀರದ ಮರ !

ಮರವಲ್ಲ ; ಅ-ಮರ !

ಅಮರ!

('ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)